ಇಎಸ್ಐ ಆಸ್ಪತ್ರೆಯಲ್ಲಿ ಆನ್ಲೈನ್ ಅಪಾಯಿಂಟ್ಮೆಂಟ್ ಸೇವೆ
ಉಷಾ ಹರೀಶ್
ಬಿಡುವಿಲ್ಲದ ಹಾಗೂ ಒತ್ತಡದ ಕೆಲಸಗಳ ನಡುವೆ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗದ ಕಾರ್ಮಿಕ ವರ್ಗಕ್ಕೆ ತಮಗೆ ಅನುಕೂಲವಾದ ಸಮಯದಲ್ಲಿ ಸುಲಭವಾಗಿ ವೈದ್ಯರನ್ನು ಸಂಪರ್ಕಿಸಲು ಇಎಸ್ಐಸಿ ಆಸ್ಪತ್ರೆಗಳು ಮುಂದಾಗಿದೆ.
ಸಾಮಾನ್ಯವಾಗಿ ಕಾರ್ಮಿಕರು ಭಾನುವಾರಗಳಲ್ಲಿ ಮಾತ್ರ ರಜೆಯ ಸೌಲಭ್ಯಗಳನ್ನು ಹೊಂದಿರುತ್ತಾರೆ. ಖಾಸಗಿ ಕಂಪನಿಗಳು, ಕಾರ್ಖಾನೆಗಳಲ್ಲಿ ಕೆಲ ಬಾರಿ ಭಾನುವಾರವೂ ರಜೆ ಲಭ್ಯವಿರುವುದಿಲ್ಲ. ಇಂಥವರಿಗೆ ಆರೋಗ್ಯ ಕೈಕೊಟ್ಟರೆ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣಕೊಟ್ಟು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇಂಥವರಿಗಾಗಿ ಸರ್ಕಾರ ಇಎಸ್ಐ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದೆ. ಆದರೆ ಅಲ್ಲಿಗೆ ಬರುವ ಕಾರ್ಮಿಕವರ್ಗದವರಿಗೆ ಚಿಕಿತ್ಸೆಗಾಗಿ ತಾಸುಗಟ್ಟಲೆ ಸರದಿಯಲ್ಲಿ ನಿಂತು ಕಾಯುಬೇಕು. ಈ ಸಮಸ್ಯೆಗೆ ಪರಿಹಾರ ಒದಗಿಸಲು ಇಎಸ್ಐಸಿ ಆಸ್ಪತ್ರೆಗಳಲ್ಲೂ ಆನ್ಲೈನ್ ಅಪಾಯಿಂಟ್ಮೆಂಟ್ ಸೇವೆ ಜಾರಿಗೊಳಿಸಲಾಗಿದೆ.
ಆನ್ಲೈನ್ ಅಪಾಯಿಂಟ್ಮೆಂಟ್ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಇತ್ತು. ಈ ಸೇವೆಯನ್ನು ಈಗ ಇಎಸ್ಐಸಿ ಆಸ್ಪತ್ರೆಗಳಲ್ಲೂ ಆರಂಭವಾಗಿದೆ. ಇದರಿಂದ ಯಾವಾಗಲೂ ತಮ್ಮ ಕೆಲಸದಲ್ಲಿ ನಿರತರಾಗಿ ಸಮಯದ ಅಭಾವ ಹೊಂದಿರುವ ಕಾರ್ಮಿಕರಿಗೆ ತಮಗೆ ಅನುಕೂಲವಾದ ಸಮಯದಲ್ಲಿ ಸುಲಭವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ.
ನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನಿತ್ಯ ಸಾವಿರಾರು ರೋಗಿಗಳು ಆಗಮಿಸುತ್ತಾರೆ. ಇದರಿಂದ ರೋಗಿಗಳು ಸರದಿಯಲ್ಲಿ ನಿಂತು ಕಾಯುವುದು ಅನಿವಾರ್ಯ. ಇದಕ್ಕೆ ಪರಿಹಾರವಾಗಿ ಕೇಂದ್ರ ಸರಕಾರದಿಂದ ‘ಇ-ಆಸ್ಪತ್ರೆ’ ಪೋರ್ಟಲ್ http://www.esic.nic.in ಆನ್ಲೈನ್ ನೋಂದಣಿ ವ್ಯವಸ್ಥೆಗೆ ಚಾಲನೆ ದೊರೆತಿದೆ.
ಪಡೆಯುವ ವಿಧಾನ
ರೋಗಿಗಳು http://www.esic.nic.in ಲಾಗ್ ಇನ್ ಆಗಿ ತಮಗೆ ಹತ್ತಿರವಾದ ಇಎಸ್ಐಸಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಸ್ಕ್ರೀನ್ನಲ್ಲಿ ಕಾಣಿಸುವ ವೈದ್ಯರ ಪಟ್ಟಿಯಲ್ಲಿ ತಮಗಿರುವ ಕಾಯಿಲೆಗೆ ಸಂಬಂಧಪಟ್ಟಂತೆ ಸೂಕ್ತ ವೈದ್ಯರನ್ನು ಹಾಗೂ ಚಿಕಿತ್ಸೆಗೆ ಆಗಮಿಸುವ ದಿನಾಂಕ - ಸಮಯವನ್ನು ಆಯ್ಕೆ ಮಾಡಿಕೊಂಡು ನಂತರ ತಮ್ಮ ಹೆಸರು, ಇಎಸ್ಐಸಿ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ದಾಖಲಿಸಬೇಕು. ವಿವರ ಪರಿಶೀಲನೆಯಾಗಿ ರಿಜಿಸ್ಟರ್ ಆಗಿರುವ ಬಗ್ಗೆ ಮೊಬೈಲ್ಗೆ ಎಸ್ಎಂಎಸ್ ಬರುತ್ತದೆ. ಆ ಎಸ್ಎಂಎಸ್ನಲ್ಲಿ ಇರುವ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋದರೆ ಸಾಕು.
ಈ ಪೋರ್ಟಲ್ನಲ್ಲಿ ಆಸ್ಪತ್ರೆಯ ಸಂಪೂರ್ಣ ಮಾಹಿತಿ
ಈ ಸೇವೆಯಲ್ಲಿ ಕೇವಲ ಅಪಾಯಿಂಟ್ ಮೆಂಟ್ ಮಾತ್ರವಲ್ಲ, ಆಸ್ಪತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಯು ಲಭ್ಯವಿರುತ್ತದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯ ಸೇವೆ ಹಾಗೂ ಸೌಲಭ್ಯಗಳು, ವೈದ್ಯರು ಮತ್ತು ಚಿಕಿತ್ಸೆಯ ಮಾಹಿತಿ ದೊರೆಯಲಿದೆ. ಈ ನೂತನ ವೆಬ್ಸೈಟ್ನಲ್ಲಿ ದೇಶದ ಎಲ್ಲಾ 36 ಇಎಸ್ಐಸಿ ಆಸ್ಪತ್ರೆಗಳ ಮಾಹಿತಿ ಲಭ್ಯವಾಗಲಿದೆ.
ದಿನವೊಂದಕ್ಕೆ 20 ಮಂದಿಗೆ ಈ ಸೇವೆ
ಆರಂಭದಲ್ಲಿ ಈ ಆನ್ಲೈನ್ ಅಪಾಯಿಂಟ್ನ್ನು 20 ಮಂದಿಗೆ ಸೀಮಿತಗೊಳಿಸಲಾಗಿದೆ. ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.
ಬೆಂಗಳೂರಿನ ರಾಜಾಜಿನಗರ ಮತ್ತು ಪೀಣ್ಯ ಸೇರಿದಂತೆ ರಾಜ್ಯದಲ್ಲಿ ಒಟ್ಟು ಒಂಬತ್ತು ಇಎಸ್ಐಸಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ಒಂದರಲ್ಲೇ 16 ಲಕ್ಷ ಇಎಸ್ಐಸಿ ಕಾರ್ಡುದಾರರಿದ್ದಾರೆ. ರಾಜಾಜಿನಗರ ಇಎಸ್ಐ ಆಸ್ಪತ್ರೆ ಒಂದರಲ್ಲೇ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಮಂದಿ ಹೊರ ರೋಗಿಗಳಾಗಿ ಹಾಗೂ 400-450 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.