ಹೊಟೇಲ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ವ್ಯಕ್ತಿಯೊಬ್ಬ ತಾನೇ ಹೊಟೇಲ್ ಕಟ್ಟಿದ ಸಾಹಸಗಾಥೆ

ನಾರಾಯಣ ಟಿ ಪೂಜಾರಿಯವರದು ವಿಶಿಷ್ಟವಾದ ಕಥೆ. ಅವರು ಮುಂಬಯಿಗೆ ಹೋಗುತ್ತಾರೆ, ಅಲ್ಲಿ ಕ್ಯಾಂಟೀನ್‌ನಲ್ಲಿ ಪಾತ್ರೆ ತೊಳಯುವುವಂತಹ ಯಾವ್ಯಾವುದೋ ಕೆಲಸ ಮಾಡುತ್ತಾರೆ. ಆದರೆ, ಇವತ್ತು ಅವರು 3 ನಗರಗಳಲ್ಲಿ 15 ಶಾಖೆಗಳಿರುವ ಶಿವಸಾಗರ ಹೊಟೆಲ್‌ ಚೈನ್‌ ಒಂದರ ಮಾಲೀಕರು. ಇಲ್ಲಿದೆ ಅವರ ಬದುಕಿನ ಪಯಣ.

ಹೊಟೇಲ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ವ್ಯಕ್ತಿಯೊಬ್ಬ ತಾನೇ ಹೊಟೇಲ್ ಕಟ್ಟಿದ ಸಾಹಸಗಾಥೆ

Wednesday April 29, 2020,

4 min Read

ಸಮಸ್ಯೆಯನ್ನು ಬಗೆಹರಿಸುವ ಶಕ್ತಿಯಿದ್ದರೆ ಸಾಕು ಸಮಸ್ಯೆಯ ವಿಶಾಲತೆ ಅಡ್ಡಿಯಾಗುವುದಿಲ್ಲ ಎಂಬ ಒಂದು ಮಾತಿನಂತೆ ಕರ್ನಾಟಕದವರಾದ ನಾರಾಯಣ ಟಿ ಪೂಜಾರಿಯವರ ಕಥೆಯು ದೃಢನಿಶ್ಚಯವಿದ್ದರೆ ಸಾಕು ಅಂದುಕೊಂಡಿದ್ದೆಲ್ಲವನ್ನು ಸಾಧಿಸಬಹುದೆಂದು ತೋರಿಸಿ ಕೊಡುತ್ತದೆ.


ನಾರಾಯಣರವರು ಉಡುಪಿ ಜಿಲ್ಲೆಯ ಗುಜ್ಜಾಡಿ ಎಂಬ ಸಣ್ಣ ಹಳ್ಳಿಯ ಬಡ ಕುಟುಂಬದಿಂದ ಬಂದವರು. ಅವರು ತಮ್ಮ 13 ನೇ ವಯಸ್ಸಿನಲ್ಲಿ ಜೀವನ ಕಟ್ಟಿಕೊಳ್ಳಲೆಂದು ಮುಂಬಯಿ ನಗರಕ್ಕೆ ಬರುತ್ತಾರೆ. ಅವರು ಕ್ಯಾಂಟೀನ್‌ನಲ್ಲಿ ತಟ್ಟೆ ತೊಳೆಯುವುದರಿಂದ ಹಿಡಿದು ಎಲ್ಲ ತರಹದ ಕೆಲಸವನ್ನು ಮಾಡುತ್ತಾ, ರಾತ್ರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ನಾರಾಯಣ ಟಿ ಪೂಜಾರಿ, ಶಿವ ಸಾಗರ ಹೊಟೆಲ್‌ನ ಮಾಲೀಕರು


ಶುರುವಾಗಿದ್ದು ಹೀಗೆ

ಅದು 1980 ಮತ್ತು 1990ರ ಸಮಯ. ಇಡ್ಲಿ, ಪಾವ್‌ ಭಾಜಿ ಮತ್ತು ದೋಸೆಯಂತಹ ತಿಂಡಿಗಳು ಜನಮಣ್ಣನೆ ಗಳಿಸುತ್ತಿದ್ದ ಕಾಲವದು. ಈ ವ್ಯವಹಾರದಲ್ಲಿ ಹಲವಾರು ಜನರು ಇಲ್ಲದಿರುವುದನ್ನು ನಾರಾಯಣರವರು ಗಮನಿಸಿದರು.


ಅವರು ಅದರ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿ, ಹೊಟೆಲ್‌ ಉದ್ಯೋಗದಲ್ಲಿ ಪ್ರವೇಶಿಸುವುದು ಉತ್ತಮವೆಂದು ಭಾವಿಸಿದರು. ಅವರ ಹತ್ತಿರ ದುಡ್ಡಿರಲಿಲ್ಲ, ಆದರೆ ಹೂಡಿಕೆ ಮಾಡಲು ಒಬ್ಬರು ಸಿದ್ಧರಿದ್ದರು.


1990 ರಲ್ಲಿ 40 ಲಕ್ಷ ಬಂಡವಾಳದೊಂದಿಗೆ ಮುಂಬಯಿಯ ಚರ್ಚ್‌ಗೇಟ್‌ ಪ್ರದೇಶದಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ನಾರಾಯಣರವರು ಶಿವ ಸಾಗರ ಹೊಟೆಲ್‌ ಅನ್ನು ಸ್ಥಾಪಿಸಿದರು. ಪ್ರಾರಂಭವಾದ ಒಂದು ವರ್ಷದಲ್ಲೆ ಪಾಲುದಾರರು ವ್ಯವಹಾರದಿಂದ ಹೊರ ನಡೆದರು. ತಮ್ಮ ಶ್ರಮದಿಂದ ನಾರಾಯಣರು ಶಿವ ಸಾಗರದ ಮ್ಯಾನೆಜರ್‌ ಸ್ಥಾನದಿಂದ ಭಾಗಿಧಾರರಾಗಿ ನಂತರ ಮಾಲೀಕರಾಗಿ ಯಶಸ್ಸಿನ ಮೆಟ್ಟಿಲನ್ನೆರಿದರು.


ನೋಡ ನೋಡುತ್ತಿದ್ದಂತೆ ಶಿವ ಸಾಗರ ಮುಂಬಯಿಯ ಆಹಾರ ಪ್ರಿಯರ ನೆಚ್ಚಿನ ತಾಣವಾಯಿತು. ಪ್ರಸ್ತುತ ಅದು ವಾರ್ಷಿಕವಾಗಿ 75 ಕೋಟಿ ರೂ. ವಹಿವಾಟನ್ನು ನಡೆಸುವಷ್ಟು ದೊಡ್ಡದಾಗಿ ಬೆಳೆದಿದೆ.


“ಆ ದಿನಗಳೇ ಬೇರೆ,” ಎಂದು ನೆನಸಿಕೊಳ್ಳುತ್ತಾರೆ ನಾರಾಯಣರವರು. ಈಗಿನಂತೆ ಆಗ ಪೈಪೋಟಿ ಇರಲಿಲ್ಲ. ಆದರೆ ಗ್ರಾಹಕರನ್ನು ಆಕರ್ಷಿಸಲು ತುಂಬಾ ಶ್ರಮ ವ್ಯಯಿಸಬೇಕಾಗಿತ್ತು. “ನಾವು ಹಲವು ಬದಲಾವಣೆಗಳನ್ನು ಮಾಡಿ, ಈಗಾಗಲೇ ಮಾರುಕಟ್ಟೆಯಲ್ಲಿ ಸಿಗುವ ತಿಂಡಿಗಳಿಗಿಂತ ಬೇರೆ ತರಹದ ತಿಂಡಿಗಳನ್ನು ನೀಡತೊಡಗಿದವು. ದೋಸೆಯಲ್ಲಿ ಹಲವು ವಿಧಗಳನ್ನು ಪರಿಚಯಿಸಿ, ಭಾರತೀಯ ಪಿಜ್ಜಾವನ್ನು ಮೆನು ಕಾರ್ಡ್‌ನಲ್ಲಿ ಸೇರಿಸಿದೆವು,” ಎನ್ನುತ್ತಾರೆ ನಾರಾಯಣ.


ಇತರ ಎಲ್ಲ ಉಡುಪಿ ಹೊಟೇಲ್‌ಗಳು 7 ಅಥವಾ 8 ಕ್ಕೆ ಮುಚ್ಚಿದರೆ, ಶಿವ ಸಾಗರ ರಾತ್ರಿ 2 ಗಂಟೆಯವರೆಗೂ ತೆರೆದಿರುತ್ತಿತ್ತು ಮತ್ತು ಈ ಕಾರಣಗಳಿಂದ ಯುವಜನತೆಯ ನಡುವೆ ಪ್ರಸಿದ್ಧಿ ಪಡೆಯಿತು.


ಆಗಿನ ಕಾಲದ ಮಾರ್ಕೆಟಿಂಗ್‌ ತಂತ್ರಗಳು

ಇಂಟರ್ನೆಟ್‌ ಇಲ್ಲದ ಕಾಲದಲ್ಲಿ ಅವರು ಹೇಗೆ ಮಾರ್ಕೆಟಿಂಗ್‌ ತಂತ್ರಗಳನ್ನು ರೂಪಿಸುತ್ತಿದ್ದರೆಂದು ನೆನಪಿಸಿಕೊಳ್ಳುತ್ತಾ ನಾರಾಯಣ ತಾವು ದಕ್ಷಿಣ ಮುಂಬಯಿಯ ಹಲವಾರು ಚಿತ್ರಮಂದಿರಗಳೊಂದಿಗೆ ಹಣವಿಲ್ಲದ ವಿನಿಮಯದ ಆಧಾರದಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದರು ಎನ್ನುತ್ತಾರೆ. ೬ ತಿಂಗಳ ಜಾಹೀರಾತಿಗಾಗಿ 1 ಲಕ್ಷ ರೂ, ಮೌಲ್ಯದ ಆಹಾರ ಪದಾರ್ಥಗಳ ಆರ್ಡರ್‌ ಅನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.


ಸ್ಟೀಲ್‌ ತಟ್ಟೆಗಳ ಬಳಕೆಯನ್ನು ನಿಲ್ಲಿಸಿದ ಅವರು, ಯುಎಸ್‌ನಿಂದ ಆಮದು ಮಾಡಿದ ಕೊರೆಲ್ಲೆ ತಟ್ಟೆಗಳನ್ನು ಉಪಹಾರ ಗೃಹದಲ್ಲಿ ಬಳಸಲಾರಂಭಿಸಿದರು ಮತ್ತು ಮಧ್ಯವನ್ನು ಮಾರಲಾರಂಭಿಸಿದರು.


ಮಗಳು ನಿಕಿತಾ ಪೂಜಾರಿಯೊಂದಿಗೆ ನಾರಾಯಣ ಟಿ ಪೂಜಾರಿ


ಎರಡನೇ ಪೀಳಿಗೆಯ ಉದ್ಯಮಿ

ಬಿ.ಟೆಕ್‌ ಮುಗಿಸಿದ ನಂತರ ನಾರಾಯಣರವರ ಮಗಳು ನಿಕಿತಾ 2017 ರಲ್ಲಿ ವ್ಯವಹಾರದಲ್ಲಿ ಜೊತೆಯಾದರು. ಅವರ ಸೇರ್ಪಡೆ ಶಿವ ಸಾಗರ ಹೊಟೆಲ್‌ ನ ವಿಸ್ತರಣೆಯಾಗುವಾಗಲೇ ಆಯಿತು.


“ನಾನು ಸೇರಿದಾಗ ನಾವು ಅದಾಗಲೇ ಫಿಶ್‌ ಎನ್‌ ಬೈಟ್‌ ಎಂಬ ಕರಾವಳಿ ಶೈಲಿಯ ಉಪಹಾರ ಗೃಹವನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭಿಸಿದ್ದೇವು. ಅದು ಪೂರ್ತಿಯಾಗಿ ಹೊಸದಾಗಿದ್ದರಿಂದ ಎಲ್ಲವನ್ನೂ ಮೊದಲಿನಿಂದಲೇ ಕಟ್ಟಬೇಕಾಗಿತ್ತು,” ಎನ್ನುತ್ತಾರೆ ನಿಕಿತಾ.


ಫಿಶ್‌ ಎನ್‌ ಬೈಟ್‌ ನಡೆಯಲಿಲ್ಲ. ಅದರಲ್ಲಿ ತುಂಬಾ ಹಣ ಹೂಡಿದ್ದೆವು, ಆದರೆ ಬೇಕಾದಷ್ಟು ಆದಾಯವನ್ನು ಅದು ಗಳಿಸಿಲಿಲ್ಲ. ಒಂದು ವರ್ಷದಲ್ಲೆ, ಅಂದರೆ 2018 ರಲ್ಲಿ ಅದನ್ನು ಮುಚ್ಚಬೇಕಾಯಿತು ಎಂದೆನ್ನುತ್ತಾರೆ ನಿಕಿತಾ.


ರೆಸ್ಟೋರೆಂಟ್‌ ಜೊತೆಗೆ ಬಾರ್‌ ಅಥವಾ ಸಾಮಾನ್ಯ ಭೋಜನಾಲಯಗಳ ಪರಿಕಲ್ಪನೆಗಳು ಫೈನ್‌ ಡೈನಿಂಗ್‌ಗಿಂತ ಚೆನ್ನಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ನಮಗೆ ಆಗ ಅರ್ಥವಾಯಿತು ಎನ್ನುತ್ತಾರೆ ನಿಕಿತಾ.


ಫಿಶ್‌ ಎನ್‌ ಬೈಟ್‌ ನ ರೂಪವನ್ನು ಚೂರು ಬದಲಿಸಿ, ಬಟರ್‌ಫ್ಲೈ ಹೈ ಎಂಬ ಹೆಸರಿನಲ್ಲಿ ಉತ್ತಮ ದರ್ಜೆಯ ರೆಸ್ಟೋರೆಂಟ್‌ ಅನ್ನು ಸ್ಥಾಪಿಸಿದರು. “ಅಲ್ಲಿನ ಮೆನುವನ್ನು ಬದಲಿಸಲು ಹೋಗಲಿಲ್ಲ, ಏಕೆಂದರೆ ನಮ್ಮ ಚೈನ್‌ನ ಮೂಲಕ್ಕೆ ಧಕ್ಕೆ ತರುವುದು ನಮಗೆ ಬೇಕಿರಲಿಲ್ಲ,” ಎಂದರು ನಿಕಿತಾ. ಈ ಉಪಾಯವು ವ್ಯಾಪಾರದಲ್ಲಿ ಹೆಚ್ಚಳವನ್ನುಂಟು ಮಾಡಿತು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರಲಾರಂಭಿಸಿದರು.


ನಿಕಿತಾ ದಿ ಬಿಗ್‌ ಸ್ಮಾಲ್‌ ಕೆಫೆ ಬಾರ್‌ ಎಂಬ ಮತ್ತೊಂದು ಶಾಖೆಯನ್ನು ತೆರೆದರು. ಇದರ ಗುರಿ ಶ್ರೇಣಿ 2 ಮತ್ತು 3 ರ ನಗರಗಳಿಗೆ ಪ್ರವೇಶಿಸುವುದಾಗಿತ್ತು.


“ನಾವು ‘ಆರ್ಡರ್‌ ಬಿಗ್‌ & ಪೇ ಲೆಸ್‌ʼ ಎಂಬ ಪರಿಕಲ್ಪನೆಯನ್ನು ತಂದೆವು. ಇದರರ್ಥ ನೀವು ಹೆಚ್ಚು ಆರ್ಡರ್‌ ಮಾಡಿದಷ್ಟು ಕಡಿಮೆ ಬಿಲ್‌ ಪಾವತಿಸುವುದು. ಇದು ಸಂಸ್ಥೆಗಳನ್ನು ಆಕರ್ಷಿಸಿತು. ಇದರಡಿಯಲ್ಲಿ ಇನ್ನೂ ಹಲವಾರು ಕೊಡುಗೆಗಳನ್ನು ನೀಡುತ್ತೇವೆ,” ಎನ್ನುತ್ತಾರೆ ನಿಕಿತಾ.



ಮಾರುಕಟ್ಟೆಯ ಸವಾಲುಗಳು

ನಾರಾಯಣ ಅವರು ಹೇಳುವಂತೆ ಹಲವರು ತಮ್ಮ ಬ್ರ್ಯಾಂಡ್‌ ಹೆಸರನ್ನು ನಕಲಿಸಿ, ಶಿವ ಹೋಂ ಸಾಗರ ಅಥವಾ ಶ್ರೀ ಶಿವ ಸಾಗರ ಎಂಬಂತಹ ಹೆಸರಿನಲ್ಲಿ ರೆಸ್ಟೋರೆಂಟ್‌ಗಳನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಹೀಗೆ ತಮ್ಮ ಬ್ರ್ಯಾಂಡ್‌ನ ಹೆಸರನ್ನು ಬೇರೆಯವರು ಬಳಸದಂತೆ ತಡೆಯಲು ಅವರು ಉಚ್ಛ ನ್ಯಾಯಾಲಯದಿಂದ ಆದೇಶವನ್ನು ತಂದಿದ್ದಾರೆ.


ಪ್ರಸ್ತುತ ಶಿವ ಸಾಗರ ಮುಂಬಯಿ, ಪುಣೆ ಮತ್ತು ಮಂಗಳೂರಿನಲ್ಲಿ 15 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಬಟರ್‌ಫ್ಲೈ ಹೈ ಹಾಗೂ ದಿ ಬಿಗ್‌ ಸ್ಮಾಲ್‌ ಕೆಫೆ ಬಾರ್‌ ತಲಾ ಒಂದೊಂದು ಶಾಖೆಗಳನ್ನು ಹೊಂದಿವೆ. ಅದಲ್ಲದೇ ಈ ಸಂಸ್ಥೆಯಲ್ಲಿ 1,300 ನೌಕರರು ಕೆಲಸ ಮಾಡುತ್ತಿದ್ದಾರೆ.


ವಿಸ್ತರಣೆ ಮತ್ತು ವಿವಿಧತೆಗಳ ನಡುವೆ, ನಾರಾಯಣ ರವರು ಹೇಗೆ ಗುಣಮಟ್ಟವನ್ನು, ನೈರ್ಮಲ್ಯವನ್ನು ಕಾಯ್ದುಕೊಳ್ಳುತ್ತಾರೆ?


“ನೈರ್ಮಲ್ಯದ ಬಗ್ಗೆ ನಾನು ತುಂಬಾ ಕಟ್ಟುನಿಟ್ಟಾಗಿದ್ದೇನೆ. ಕೆಲವೊಂದು ಬಾರಿ ನಾನು ಯಾರಿಗೂ ತಿಳಿಸದೆ ರೆಸ್ಟೋರೆಂಟ್‌ ಗಳಿಗೆ ದಿಢೀರ್‌ ಭೇಟಿ ನೀಡಿ ಶೌಚಾಲಯವನ್ನು, ಅಡುಗೆ ಮನೆಯನ್ನು ಪರಿಶೀಲಿಸುತ್ತೇನೆ.”


ಕಿರಾಣಿ ಸಾಮಾನುಗಳನ್ನು ಮತ್ತು ತರಕಾರಿಗಳನ್ನು ಸ್ಥಳೀಯ ವರ್ತಕರಿಂದ ಖರೀದಿಸಲಾಗುತ್ತದೆ. ಗುಣಮಟ್ಟ ಮತ್ತು ನೈರ್ಮಲ್ಯದ ಪರಿಶೀಲನೆಗಾಗಿ ಶಿವ ಸಾಗರ ಕಾರ್ಪೋರೆಟ್‌ ಭಟ್ಟರನ್ನು ನೇಮಿಸಿಕೊಂಡಿದೆ. ವ್ಯವಹಾರಕ್ಕೆ ಹೊಸದಾಗಿ ಸೇರಿಕೊಳ್ಳುವವರಿಗೆಲ್ಲರಿಗೂ ಜವಾಬ್ದಾರಿ ನೀಡುವ ಮೊದಲು ತರಬೇತಿ ನೀಡಲಾಗುತ್ತದೆ.


ಆಹಾರ ಮತ್ತು ರೆಸ್ಟೋರೆಂಟ್‌ ಉದ್ಯಮವು ಈಗ ತುಂಬಾ ಕಿಕ್ಕಿರಿದಿದೆ. “ಇಲ್ಲಿ ಬದುಕುಳಿಯಬೇಕೆಂದರೆ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ನಿಮ್ಮನ್ನು ನೀವು ಅನ್ವೇಷಿಸಿಕೊಳ್ಳುತ್ತಿರಬೇಕು. ಶಿವ ಸಾಗರದ ವಿಶಿಷ್ಟ ಆಕರ್ಷಣೆಗಳೆಂದರೆ ಉತ್ತಮ ಆಹಾರ, ಉತ್ತಮವಾದ ನೈರ್ಮಲ್ಯ ವ್ಯವಸ್ಥೆ ಮತ್ತು ಉತ್ತಮ ವಾತಾವರಣ,” ಎನ್ನುತ್ತಾರೆ ನಾರಾಯಣ.


ತಂದೆ ಮಗಳಿಬ್ಬರು ಒಬ್ಬರಿಂದೊಬ್ಬರು ಕಲಿಯುತ್ತಾರೆ ಎಂದೆನ್ನುತ್ತಾರೆ. ನಿಕಿತಾ ಶ್ರಮ, ನೌಕರರನ್ನು ನಿರ್ವಹಿಸುವುದು ಮತ್ತು ಮಾರಾಟದ ಪರಿಶೀಲನೆಯನ್ನು ತಮ್ಮ ತಂದೆಯಿಂದ ಕಲೆತಿದ್ದೆನೆಂದು ಹೇಳುತ್ತಾರೆ.


ಆನ್‌ಲೈನ್‌ ಮಾರ್ಕೆಟಿಂಗ್‌ನಲ್ಲಿ ಸಿಕ್ಕ ಯಶಸ್ಸು ಮತ್ತು ಬ್ರ್ಯಾಂಡ್‌ನ ಮೌಲ್ಯವನ್ನು ಹೆಚ್ಚಿಸಿದ್ದು ತಮ್ಮ ಮಗಳೆನ್ನುತ್ತಾರೆ ನಾರಾಯಣ. “ಮೊದಮೊದಲು 2 ಲಕ್ಷ ಮಾರ್ಕೆಟಿಂಗ್‌ಗಾಗಿ ತೆಗೆದಿಡಿ ಎಂದು ನನ್ನ ಮಗಳು ಹೇಳಿದಾಗ, ನಾನು ಏಕೆ ಎಂದು ಯೋಚಿಸುತ್ತಿದ್ದೆ? ಆದರೆ ಜನ ಯಾವುದೇ ರೆಸ್ಟೋರೆಂಟ್‌ ಗೆ ಹೋಗುವ ಮುಂಚೆ, ಜೊಮ್ಯಾಟೋ ತರಹದ ಆಪ್‌ ಗಳಲ್ಲಿ ರೇಟಿಂಗ್‌ ನೋಡುತ್ತಾರೆಂದು ಈಗ ಗೊತ್ತಾಯಿತು.”


ಮುಂದಿನ ದಾರಿ

ಮೂರು ದಶಕಕ್ಕೂ ಹೆಚ್ಚು ಕಾಲ ಉದ್ಯಮದಲ್ಲಿದ್ದರೂ ಶಿವ ಸಾಗರ ಮೂರು ನಗರಗಳನ್ನು ಬಿಟ್ಟು ಬೇರೆಲ್ಲೂ ಶಾಖೆ ಹೊಂದಿಲ್ಲ.


“ನಮ್ಮೆಲ್ಲ ಶಾಖೆಗಳಿಗೂ ನಾವೇ ಹಣ ಹೂಡಿದ್ದೇವೆ. ವಿಸ್ತರಿಸಲು ಇರುವ ಒಂದೇ ಮಾರ್ಗವೆಂದರೆ ಬಂಡವಾಳ ಹೂಡುವುದು. ವಿಸ್ತರಣೆಯ ಪ್ರಕ್ರಿಯೆಯನ್ನು ಸರಾಗಗೊಳಿಸುವಂತೆ ನಾವು ತಂಡಗಳನ್ನು ರಚಿಸುತ್ತಿದ್ದೇವೆ,” ಎಂದು ವಿವರಿಸುತ್ತಾರೆ ನಿಕಿತಾ. ಅಲ್ಲದೇ ಪ್ರಾಂಚೈಸ್‌ಗಳನ್ನು ಕೊಡುವ ಯಾವುದೇ ಯೋಚನೆಗಳಿಲ್ಲವೆನ್ನುತ್ತಾರೆ.

“ಪ್ರಸ್ತುತ ಸಿಬ್ಬಂದಿಗಳಲ್ಲಿ 50 ಪ್ರತಿಶತದಷ್ಟು ಜನರು ತಮ್ಮೂರಿಗೆ ಹೋಗಿದ್ದಾರೆ. ಅದು ನಮ್ಮ ಉದ್ಯಮಕ್ಕೆ ಭಾರೀ ಹೊಡೆತವನ್ನು ನೀಡಿದೆ. ಆದರೆ ಒಳ್ಳೆಯ ಸಮಯ ಬರಲಿ ಎಂದು ಎಲ್ಲರೂ ಆಶಿಸುತ್ತಿದ್ದೇವೆ,” ಎನ್ನುತ್ತಾರೆ ನಾರಾಯಣ.