ಬೆಂಗಳೂರಿನಲ್ಲಿ ಭಾರಿ ಸದ್ದು: ಭೂಕಂಪನವಲ್ಲವೆಂದ ವಿಪತ್ತು ನಿರ್ವಹಣಾ ಮಂಡಳಿ

ಬೆಂಗಳೂರಿನ ಪೂರ್ವ ಭಾಗದಲ್ಲಿ ಮಧ್ಯಾಹ್ನ ಸುಮಾರು 1:20 ಕ್ಕೆ ಭಾರಿ ಸದ್ದು ಕೇಳಿಸಿದ್ದು, ಜನತೆ ಆತಂಕಕ್ಕೊಳಗಾಗಿದ್ದಾರೆ.

ಬೆಂಗಳೂರಿನಲ್ಲಿ ಭಾರಿ ಸದ್ದು: ಭೂಕಂಪನವಲ್ಲವೆಂದ ವಿಪತ್ತು ನಿರ್ವಹಣಾ ಮಂಡಳಿ

Wednesday May 20, 2020,

1 min Read

ಇಂದು ಮಧ್ಯಾಹ್ನ ಸುಮಾರು 1:20 ಕ್ಕೆ ಬೆಂಗಳೂರಿನ ಹಲವೆಡೆ ಭಾರಿ ಸದ್ದು ಕೇಳಿಸಿದ್ದು, ಜನರಲ್ಲಿ ಆತಂಕಕ್ಕೆಡೆ ಮಾಡಿದೆ. ಹಲವರಿಗೆ ಮೊದಲು ಭಾರಿ ಸದ್ದು ಕೇಳಿಸಿದ್ದು, ನಂತರ ಕಂಪನದ ಅನುಭವವಾಗಿದೆ.


ಬೆಂಗಳೂರು ನಗರದ ವಿಮಾನ ನಿಲ್ದಾಣ, ಕೋರಮಂಗಲ, ವೈಟ್‌ಫೀಲ್ಡ್‌, ಸರ್ಜಾಪುರ, ಎಲೆಕ್ಟ್ರಾನಿಕ್‌ ಸಿಟಿ, ಇಂದಿರಾ ನಗರ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಇನ್ನೂ ಹಲವೆಡೆ ಸದ್ದು ಕೇಳಿಸಿದ್ದು, ನಂತರ ಕಂಪನದ ಅನುಭವ ಉಂಟಾಗಿದೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಉಲ್ಲೇಖಿಸಿದ್ದಾರೆ.



ಘಟನೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ನಿರ್ದೇಶಕರಾದ ಶ್ರೀನಿವಾಸರೆಡ್ಡಿಯವರು,

“ಬೆಂಗಳೂರು ನಗರ ಪ್ರದೇಶದಲ್ಲಿ ಯಾವುದೇ ಭೂಕಂಪನ/ಭೂಮಿ ನಡುಗಿದ ಬಗ್ಗೆ ವರದಿಯಾದ ಮಾಹಿತಿಯು ಭೂಕಂಪನಕ್ಕೆ ಸಂಭಂದಿಸಿರುವುದಿಲ್ಲ ಹಾಗೂ ಭೂಕಂಪನ ಚಟುವಟಿಕೆಯು ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ವ್ಯಾಪಕವಾಗಿರುತ್ತದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಭೂಕಂಪನಮಾಪನ ಕೇಂದ್ರಗಳಲ್ಲಿ ಈ ಬಗ್ಗೆ ದಾಖಲಾಗಿರುವುದಿಲ್ಲ,” ಎಂದು ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಮೂಲಗಳು ಇದು ಫೈಟರ್‌ ಜೆಟ್‌ನ ವೇಗದ ಹಾರಾಟದಿಂದ ಉಂಟಾಗುವ ‘ಸೋನಿಕ್‌ ಬೂಮ್‌ʼ ಶಬ್ದವಿರಬಹುದು ಎಂದು ಶಂಕಿಸಿವೆ. ಯಾವುದೇ ವಸ್ತುವು ಶಬ್ದದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಿದಾಗ ಸೋನಿಕ್‌ ಬೂಮ್‌ ಶಬ್ದ ಉಂಟಾಗುತ್ತದೆ. ಆದರೆ ಈ ಬಗ್ಗೆ ವಾಯುಪಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.


ಹಲವು ಜನರು ಘಟನೆಯನ್ನು ವಿವರಿಸಲು ಸಾಮಾಜಿಕ ಮಾಧ್ಯಮದ ಮೊರೆ ಹೋದ ಕಾರಣ ಟ್ವಿಟರ್‌ನಲ್ಲಿ #ಬೆಂಗಳೂರು ಟ್ರೆಂಡಿಂಗ್‌ ಆಗಿದೆ.

ಬೆಂಗಳೂರಿನ ಪೋಲಿಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಮಾತನಾಡಿ ನಗರದ ಯಾವುದೇ ಭಾಗದಲ್ಲೂ ಹಾನಿಯಾಗಿರುವ ಬಗ್ಗೆ ಮಾಹಿತಿಯಾಗಲಿ ಅಥವಾ ಪೋಲಿಸ್‌ ಸಹಾಯವಾಣಿ 100 ಕ್ಕೆ ಯಾವುದೇ ಕರೆಗಳಾಗಲಿ ಬಂದಿಲ್ಲ. ಯಾವುದಾದರೂ ವಿಮಾನ ಹಾರಾಟ ನಡೆಸುತ್ತಲಿತ್ತೆ ಎಂದು ನಾವು ವಾಯುಪಡೆಯ ನಿಯಂತ್ರಣಾ ಕೊಠಡಿಯನ್ನು ಸಂಪರ್ಕಿಸಿದ್ದೇವೆ, ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದರು.