ಭಾರತೀಯ ವಾಯು ಸೇನೆಯ ಹೊಸ ರಫೇಲ್‌ ವಿಮಾನವನ್ನು ಮುನ್ನಡೆಸಲಿರುವ ಮಹಿಳಾ ಪೈಲೆಟ್‌

ಭಾರತೀಯ ವಾಯು ಸೇನೆಯಲ್ಲಿ 10 ಮಹಿಳಾ ಪೈಲೆಟ್‌ಗಳಿದ್ದು, 18 ಮಹಿಳಾ ನ್ಯಾವಿಗೇಟರ್‌ಗಳಿದ್ದಾರೆ. ವಾಯುಸೇನೆಯಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳು ಸೇವೆ ಮಾಡುತ್ತಿದ್ದಾರೆ.

ಭಾರತೀಯ ವಾಯು ಸೇನೆಯ ಹೊಸ ರಫೇಲ್‌ ವಿಮಾನವನ್ನು ಮುನ್ನಡೆಸಲಿರುವ ಮಹಿಳಾ ಪೈಲೆಟ್‌

Tuesday September 22, 2020,

2 min Read

ನೂತನವಾಗಿ ಸೇರ್ಪಡೆಯಾಗಿರುವ ರಫೇಲ್‌ ಯುದ್ಧ ವಿಮಾನಗಳ ಹಾರಾಟ ನಡೆಸಲಿರುವ ‘ಗೋಲ್ಡನ್‌ ಆ್ಯರೋಸ್‌ ಸ್ಕಾಡ್ರಾನ್‌ʼಗೆ ಶೀಘ್ರದಲ್ಲೆ ಭಾರತೀಯ ವಾಯು ಸೇನೆಯ ಮಹಿಳಾ ಪೈಲೆಟ್‌ ಒಬ್ಬರು ಸೇರ್ಪಡೆಯಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.


ರಫೇಲ್‌ ವಿಮಾನ ಹಾರಿಸುವುದಕ್ಕಾಗಿ ಮಹಿಳಾ ಪೈಲೆಟ್‌ಗೆ ತರಬೇತಿ ನೀಡಲಾಗುತ್ತಿದೆ ಎಂದು ಅದು ತಿಳಿಸಿದೆ.


ಮಿಗ್‌-21 ಯುದ್ಧ ವಿಮಾನ ಹಾರಿಸಿ ಅನುಭವವಿರುವ ಇವರನ್ನು ಆಂತರಿಕ ಪ್ರಕ್ರಿಯೆ ಮುಖಾಂತರ ನೇಮಿಸಲಾಗಿದೆ.


ಪ್ರಸ್ತುತ, ಭಾರತೀಯ ವಾಯು ಸೇನೆಯಲ್ಲಿ 10 ಮಹಿಳಾ ಪೈಲೆಟ್‌ಗಳಿದ್ದು, 18 ಮಹಿಳಾ ನ್ಯಾವಿಗೇಟರ್‌ಗಳಿದ್ದಾರೆ. ವಾಯುಸೇನೆಯಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳು ಸೇವೆ ಮಾಡುತ್ತಿದ್ದಾರೆ.

ಕಳೆದ ವಾರ, ರಕ್ಷಣಾ ರಾಜ್ಯ ಸಚಿವರಾದ ಶ್ರೀಪಾದ್‌ ನಾಯಕ್ ಸಂಸತ್ತಿನಲ್ಲಿ ಮಹಿಳಾ ಫೈಟರ್ ಪೈಲಟ್‌ಗಳನ್ನು ಆಯಕಟ್ಟಿನ ಅಗತ್ಯತೆಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ಐಎಎಫ್‌ನಲ್ಲಿ ಸೇರಿಸಿಕೊಳ್ಳಲಾಗಿದೆ ಮತ್ತು ನಿಯೋಜಿಸಲಾಗಿದೆ ಎಂದು ಹೇಳಿದರು.


ಕಳೆದ ವರ್ಷ ಸೆಪ್ಟೆಂಬರ್ 10 ರಂದು ಐಎಎಫ್‌ನ ಗೋಲ್ಡನ್ ಆ್ಯರೋಸ್‌ ಸ್ಕಾಡ್ರಾನ್‌ ಅನ್ನು ಪುನರುತ್ಥಾನಗೊಳಿಸಲಾಯಿತು. ಸ್ಕ್ವಾಡ್ರನ್ ಅನ್ನು ಮೂಲತಃ ಅಕ್ಟೋಬರ್ 1, 1951 ರಂದು ಅಂಬಾಲಾದ ವಾಯುಪಡೆಯ ನಿಲ್ದಾಣದಲ್ಲಿ ಬೆಳೆಸಲಾಯಿತು. ಸ್ಕ್ವಾಡ್ರನ್ ಹಲವು ಪ್ರಥಮಗಳಿಗೆ ಖ್ಯಾತಿಯಾಗಿದೆ; 1955 ರಲ್ಲಿ ಇದು ಮೊದಲ ಜೆಟ್ ಯುದ್ಧ ವಿಮಾನ ಡಿ ಹ್ಯಾವಿಲ್ಯಾಂಡ್ ವ್ಯಾಂಪೈರ್ ಅನ್ನು ಹೊಂದಿತ್ತು.


ಸೆಪ್ಟೆಂಬರ್ 10 ರಂದು ಅಂಬಾಲಾ ವಾಯುಪಡೆಯ ನೆಲೆಯಲ್ಲಿ ಐದು ಫ್ರೆಂಚ್ ನಿರ್ಮಿತ ಮಲ್ಟಿರೋಲ್ ರಫೇಲ್‌ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರಿಸಲಾಯಿತು.


ಇಲ್ಲಿಯವರೆಗೆ ಹತ್ತು ರಫೇಲ್‌ ಯುದ್ಧ ವಿಮಾನಗಳನ್ನು ಭಾರತಕ್ಕೆ ತಲುಪಿಸಲಾಗಿದೆ ಮತ್ತು ಅವುಗಳಲ್ಲಿ ಐದು ಐಎಎಫ್ ಪೈಲಟ್‌ಗಳಿಗೆ ತರಬೇತಿ ನೀಡಲು ಫ್ರಾನ್ಸ್‌ನಲ್ಲಿಯೇ ಉಳಿದುಕೊಂಡಿವೆ. ಎಲ್ಲಾ 36 ವಿಮಾನಗಳ ವಿತರಣೆಯನ್ನು 2021 ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.


ಎರಡನೇ ಸುತ್ತಿನ ನಾಲ್ಕರಿಂದ ಐದು ರಫೇಲ್‌ ಯುದ್ಧ ವಿಮಾನಗಳು ನವೆಂಬರ್ ವೇಳೆಗೆ ಭಾರತಕ್ಕೆ ಬರುವ ಸಾಧ್ಯತೆಯಿದೆ.


ಭಾರತವು ಫ್ರಾನ್ಸ್‌ನೊಂದಿಗೆ 59,000 ಕೋಟಿ ರೂ. ವೆಚ್ಚದಲ್ಲಿ 36 ವಿಮಾನಗಳನ್ನು ಪಡೆಯುವ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ನಾಲ್ಕು ವರ್ಷಗಳ ನಂತರ ಐದು ರಫೇಲ್‌ ಯುದ್ಧ ವಿಮಾನಗಳ ಮೊದಲ ಬ್ಯಾಚ್ ಜುಲೈ 29 ರಂದು ಭಾರತಕ್ಕೆ ಆಗಮಿಸಿತು.