500 ಕ್ಕೂ ಹೆಚ್ಚು ನೆರೆ ಸಂತ್ರಸ್ತರಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸಿ ಮಾನವೀಯತೆ ಮೆರೆದ ಭಾರತೀಯ ಕಂದಾಯ ಸೇವಾ ಅಧಿಕಾರಿ
ಪದ್ಮಾಪಾಣಿ ಬೋರ ಎಂಬುವವರಿಂದ ಆಯೋಜಿಸಲ್ಪಟ್ಟಿದ್ದ ಆರೋಗ್ಯ ಶಿಬಿರದಲ್ಲಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರೂ ಸೇರಿದಂತೆ 500 ಕ್ಕೂ ಹೆಚ್ಚು ನೆರೆ ಸಂತ್ರಸ್ತರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಕೇವಲ ಉಚಿತ ಆರೋಗ್ಯ ತಪಾಸಣೆ ಮಾತ್ರವಲ್ಲದೇ ಉಚಿತ ಔಷಧಿ, ಸಾಬೂನು ಹಾಗೂ ಸ್ಯಾನಿಟೈಸರ್ಗಳಂತ ವಸ್ತುಗಳನ್ನು ನೀಡಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಯಿತು.
ಪ್ರತಿ ವರ್ಷವೂ ಉಂಟಾಗುವ ಭಾರಿ ಮಳೆಗೆ ಅಸ್ಸಾಂ ಭೀಕರ ಪ್ರವಾಹವನ್ನು ಎದುರಿಸುತ್ತಲೇ ಬಂದಿದೆ. ಈ ವರ್ಷವೂ ಸಹಾ ಬ್ರಹ್ಮಪುತ್ರ ನದಿ ಉಕ್ಕಿ ಹರಿದ ಹಿನ್ನಲೆಯಲ್ಲಿ ಭಾರಿ ಪ್ರವಾಹ ಉಂಟಾಗಿ ರಾಜ್ಯದ ಅರಣ್ಯಭಾಗ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ನದಿ ದಂಡೆಯ ಜನರು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದು, ಈಗ ಅವರ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ.
ರಾಜ್ಯ ಇದೀಗ ಸಹಜ ಸ್ಥಿತಿಗೆ ತಲುಪಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಹಲವು ಖಾಸಗಿ ಸಂಘಸಂಸ್ಥೆಗಳು ಸಹಾಯಕ್ಕೆ ಮುಂದಾಗಿವೆ.
ಪ್ರವಾಹ ಪೀಡಿತ ಹಲವರಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸುವ ಮಹತ್ತರ ನಿರ್ಧಾರದ ಮುಂದಾಳತ್ವ ವಹಿಸಿದ್ದು ಗುವಾಹಟಿ ಮೂಲದ ಭಾರತೀಯ ಕಂದಾಯ ಸೇವಾ (ಐ ಆರ್ ಎಸ್) ಅಧಿಕಾರಿ ಪದ್ಮಾಪಾಣಿ ಬೋರ.
ಪದ್ಮಪಾಣಿ ಅವರು ಕಾಮ್ರೂಪ್ನ ಹಜೋ ಎಂಬ ದೂರದ ಹಳ್ಳಿಯಲ್ಲಿ ಬೃಹತ್ ಪ್ರಮಾಣದ ಆರೋಗ್ಯ ಶಿಬಿರವನ್ನು ಆಯೋಜಿಸಿ ಉಚಿತ ವೈದ್ಯಕೀಯ ಸೇವೆ ಹಾಗೂ ಔಷಧಿ ಪೂರೈಕೆಗಾಗಿ ತಮ್ಮ ಸಂಬಳವನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಆಯೋಜಿಸಲಾಗಿದ್ದ ಶಿಬಿರದಲ್ಲಿ ನೆರೆಹಾವಳಿಗೆ ತುತ್ತಾದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ 567 ಜನರು ಪಾಲ್ಗೊಂಡಿದ್ದರು. ಇವರಲ್ಲಿ ಅನೇಕರು ಗಾಯಳುಗಳಾಗಿದ್ದರೆ, ಇನ್ನೂ ಕೆಲವರು ಗಂಭೀರ ಕಾಯಿಲೆಗಳಿಗೆ ತುತ್ತಾಗಿದ್ದಾರೆಂದು ವರದಿಯೊಂದು ತಿಳಿಸಿದೆ.
ಶಿಬಿರ ಕೇವಲ ವೈದ್ಯಕೀಯ ತಪಾಸಣೆಗೆ ಮಾತ್ರ ಮೀಸಲಾಗದೆ ರೋಗಿಗಳಿಗೆ ತುರ್ತು ಔಷಧಿಗಳನ್ನ ಉಚಿತವಾಗಿ ವಿತರಿಸಿತು. ಸೋಪ್, ಸ್ಯಾನಿಟೈಸರ್ ಮತ್ತು ಇತರ ನೈರ್ಮಲ್ಯತೆ ಕಾಪಾಡುವಂತಹ ಮೂಲಭೂತ ಅವಶ್ಯಕ ವಸ್ತುಗಳನ್ನು ಪೂರೈಸಿತು. ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ಯುವತಿಯರು ಮತ್ತು ಮಹಿಳೆಯರಿಗೆ ಮೂಲಭೂತವಾಗಿ ಅವಶ್ಯವಿರುವ ಸ್ಯಾನಿಟೈಸರನ್ನೂ ಕೂಡ ವಿತರಿಸಿತು.
ಆರೋಗ್ಯ ಶಿಬಿರದ ಆಯೋಜಕರಾದ ಪದ್ಮಪಾಣಿ ರವರು ಎಫರ್ಟ್ಸ್ ಫಾರ್ ಗುಡ್ ಗೆ ಮಾತನಾಡುತ್ತಾ ಹೀಗೆ ಹೇಳಿದರು,
“ದೂರದ ಹಳ್ಳಿ ಶಾಲೆಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ. ಅಲ್ಲಿನ ವಿದ್ಯಾರ್ಥಿಗಳ ಪೌಷ್ಠಿಕಾಂಶದ ಮಟ್ಟವು ಶೋಚನೀಯ ಮಟ್ಟದಲ್ಲಿ ಕಡಿಮೆಯಾಗಿದೆ. ಮುಂದಿನ ಮೂರು ತಿಂಗಳಲ್ಲಿ, ಈ ದೀನದಲಿತ ಮಕ್ಕಳ ಆರೋಗ್ಯ ಮತ್ತು ಪೋಷಣೆಯನ್ನು ಸುಧಾರಿಸುವತ್ತ ಗಮನ ಹರಿಸಲು ನಾವು ಕಾಳಜಿವಹಿಸುತ್ತೇವೆ.”
ಪದ್ಮಪಾಣಿಯವರ ಈ ರೀತಿಯ ಸಮಾಜಸೇವೆ ಇದೇ ಮೊದಲೇನಲ್ಲ. ಈಗಾಗಲೇ ತಮ್ಮ ಪತ್ನಿ ಮೃದುಸ್ಮಿತಾ ದಾಸ್ ರವರು ಆರಂಭಿಸಿರುವ ಶ್ರೀಜನಸೋಮ್ ಟ್ರಸ್ಟ್ ಮೂಲಕ ಕಳೆದ ಆರು ವರ್ಷಗಳಿಂದ ಕಲೆ, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಬೆಳಕು ಚೆಲ್ಲುತ್ತಾ, ಕಡುಬಡತನದಲ್ಲಿ ಮೆರಿಟ್ ಪಡೆದ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾ ಶಿಕ್ಷಣವನ್ನೂ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
“ನನ್ನ ಹೆಂಡತಿ ಮೂಲತಃ ಶಾಸ್ತ್ರೀಯ ನರ್ತಕಿ. ನಾವಿಬ್ಬರೂ ಅಸ್ಸಾಮಿಗಳಾಗಿದ್ದು, ಅಸ್ಸಾಮಿ ಪರಂಪರೆಯ ಬಗ್ಗೆ ಗೌರವವನ್ನು ಬೆಳೆಸುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಈ ಆಧುನಿಕ ಕಾಲದಲ್ಲಿ ಹಲವು ಸಂಗೀತ, ನೃತ್ಯ ಮತ್ತು ಜಾನಪದ ಕಲೆಗಳು ಕಣ್ಮರೆಯಾಗುತ್ತಿವೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ನಾವು ಕಾಪಾಡಿಕೊಳ್ಳಬೇಕು” ಎಂದು ಹೇಳಿದ ಪದ್ಮಾಪಾಣಿಯವರು ಅಸ್ಸಾಮಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿಕೊಳ್ಳುವಂತಹ ವಿಶೇಷ ಪ್ರಯತ್ನಗಳನ್ನು ಟ್ರಸ್ಟ್ ಮಾಡುತ್ತಾ ಬಂದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.