CARTOSAT-3 ಮತ್ತು 13 ಯುಎಸ್ ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಕಾರ್ಟೊಸ್ಯಾಟ್-3 ದೊಡ್ಡ ಪ್ರಮಾಣದ ನಗರ ಯೋಜನೆ, ಗ್ರಾಮೀಣ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ಭೂ ಬಳಕೆ ಮತ್ತು ಭೂ ವ್ಯಾಪ್ತಿಗಾಗಿ ಬಳಕೆದಾರರ ಹೆಚ್ಚಿದ ಬೇಡಿಕೆಗಳನ್ನು ಸರಿದೂಗಿಸಲು ಸಹಾಯ ಮಾಡಲಿದೆ.

CARTOSAT-3 ಮತ್ತು 13 ಯುಎಸ್ ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

Wednesday November 27, 2019,

2 min Read

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಭೂವೀಕ್ಷಣಾ​ ಉಪಗ್ರಹವಾದ ಕಾರ್ಟೊಸ್ಯಾಟ್-3 ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.


ಮೋಡ ಕವಿದ ವಾತವಾರಣದೊಂದಿಗೆ, 44.4 ಮೀಟರ್ ಎತ್ತರದ ಪಿಎಸ್‌ಎಲ್‌ವಿ ಸಿ 47 ರಾಕೆಟ್ ಈ ಬಾಹ್ಯಾಕಾಶ ನಿಲ್ದಾಣದ ಎರಡನೇ ಉಡಾವಣಾ ಪ್ಯಾಡ್‌ನಿಂದ ಬೆಳಿಗ್ಗೆ 9.28 ಕ್ಕೆ ಉಡಾವಣೆಗೊಂಡಿದೆ.


ಇಲ್ಲಿಯವರೆಗೆ ನಿರ್ಮಿಸಲಾದ ಭಾರತದ ಅತ್ಯಂತ ಸಂಕೀರ್ಣ ಮತ್ತು ಸುಧಾರಿತ ಅರ್ಥ್ ಇಮೇಜಿಂಗ್ ಉಪಗ್ರಹವಾದ ಕಾರ್ಟೊಸ್ಯಾಟ್-3 ಅನ್ನು ಉಡಾವಣೆ ಮಾಡಿದ ನಂತರ 17 ನಿಮಿಷ 46 ಸೆಕೆಂಡುಗಳಲ್ಲಿ ಕಕ್ಷೆಯನ್ನು ಸೇರಿತು. ಚಂದ್ರಯಾನ-2 ರ ನಂತರದ ತಕ್ಷಣದ ಮಿಷನ್ ಇದಾಗಿದೆ. ಸೆಪ್ಟೆಂಬರ್ 7 ರಂದು, ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವಾಗ ಲ್ಯಾಂಡರ್ ಅಪಘಾತಕ್ಕೀಡಾಗಿತ್ತು.


ಯುಎಸ್ ನಿಂದ ಬಂದ ಎಲ್ಲಾ 13 ನ್ಯಾನೊ ಉಪಗ್ರಹಗಳು ಉಡಾವಣೆಯಾದ 26 ನಿಮಿಷ 56 ಸೆಕೆಂಡುಗಳಲ್ಲಿ ತಮ್ಮ ತಮ್ಮ ನಿಗದಿತ ಕಕ್ಷೆಗಳಿಗೆ ಸೇರಿವೆ ಎಂದು ಇಸ್ರೋ ತಿಳಿಸಿದೆ.


ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್​ ಉಪಗ್ರಹವನ್ನು ನಿಖರವಾಗಿ ಅಪೇಕ್ಷಿತ ಕಕ್ಷೆಗೆ ಸೇರಿದ ನಂತರ ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತು ಇತರ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದ್ದಾರೆ.


ನಂತರ, ಮಿಷನ್ ನಿಯಂತ್ರಣ ಕೇಂದ್ರದಿಂದ ಮಾತನಾಡಿದ ಶಿವನ್, "ಪಿಎಸ್ಎಲ್ವಿ-ಸಿ 47 ಕಾರ್ಟೊಸ್ಯಾಟ್-3 ಮತ್ತು 13 ಗ್ರಾಹಕ ಉಪಗ್ರಹಗಳನ್ನು ನಿಖರವಾಗಿ 509 ಕಿಲೋಮೀಟರ್ ಅಪೇಕ್ಷಿತ ಕಕ್ಷೆಯಲ್ಲಿ ಯಶಸ್ವಿಯಾಗಿ ತಲುಪಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿದರು.


"ಕಾರ್ಟೊಸ್ಯಾಟ್-3 ಭಾರತದ ಅತ್ಯುನ್ನತ ರೆಸಲ್ಯೂಶನ್ ಸಿವಿಲಿಯನ್ ಉಪಗ್ರಹವಾಗಿದೆ, ಮತ್ತು ಇಸ್ರೋ ಇದುವರೆಗೆ ನಿರ್ಮಿಸಿರುವ ಅತ್ಯಂತ ಸಂಕೀರ್ಣ ಮತ್ತು ಸುಧಾರಿತ ಭೂ ವೀಕ್ಷಣಾ ಉಪಗ್ರಹವಾಗಿದೆ" ಎಂದು ಅವರು ಹೇಳಿದರು.


ಪಿಎಸ್‌ಎಲ್‌ವಿ ಸಿ 47 (ಚಿತ್ರಕೃಪೆ: ಇಸ್ರೋ)


ಉಪಗ್ರಹ ಮತ್ತು ಉಡಾವಣಾ ವಾಹನಗಳ ಹಿಂದಿರುವ ತಂಡಗಳನ್ನು ಅವರು ಅಭಿನಂದಿಸಿದರು, ಜೊತೆಗೆ ವಿವಿಧ ವಿಮರ್ಶೆ ತಂಡಗಳು ಮತ್ತು ಮಿಷನ್‌ನಲ್ಲಿ ತೊಡಗಿರುವ ಉದ್ಯಮ ಪಾಲುದಾರರನ್ನು ಕೂಡ ಅಭಿನಂದಿಸಿದರು.


ಭವಿಷ್ಯದ ಯೋಜನೆಯ ಬಗ್ಗೆ ಕೇಳಿದಾಗ, ಇಸ್ರೋ ಮುಖ್ಯಸ್ಥರು "ನಮ್ಮ ಕೈಗಳು ಕೆಲಸಗಳಿಂದ ತುಂಬಿವೆ," 13 ಕಾರ್ಯಾಚರಣೆಗಳನ್ನು ಮಾರ್ಚ್ 2020 ರವರೆಗೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.


"ಅವುಗಳಲ್ಲಿ ಆರು ಉಡಾವಣಾ ವಾಹನದ ಕೆಲಸಗಳು ಮತ್ತು ಏಳು ಉಪಗ್ರಹ ಕಾರ್ಯಾಚರಣೆಗಳಿವೆ" ಎಂದು ಹೇಳಿದರು.


ಹಿಂದಿನ ಮಿಷನ್ ಚಂದ್ರಯಾನ್ -2 ಅಪೇಕ್ಷಿತ ಫಲಿತಾಂಶವನ್ನು ನೀಡದ ಕಾರಣ ಇಸ್ರೊ ತಂಡವು ಇನ್ನು ಶಕ್ತಿಯುತವಾಗಿದೆ ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ. ಅಲ್ಲದೆ ಪ್ರತಿ ಕಾರ್ಯಾಚರಣೆಯು ಭರ್ಜರಿ ಯಶಸ್ಸನ್ನು ಗಳಿಸುತ್ತದೆ ಎಂದು ಶಿವನ್ ಹೇಳಿದ್ದಾರೆ.


ಒಟ್ಟಾರೆ 1,625 ಕೆಜಿ ದ್ರವ್ಯರಾಶಿಯೊಂದಿಗೆ, ಕಾರ್ಟೊಸ್ಯಾಟ್-3 ದೊಡ್ಡ ಪ್ರಮಾಣದ ನಗರ ಯೋಜನೆ, ಗ್ರಾಮೀಣ ಸಂಪನ್ಮೂಲ ಮತ್ತು ಮೂಲಸೌಕರ್ಯ ಅಭಿವೃದ್ಧಿ, ಕರಾವಳಿ ಭೂ ಬಳಕೆ ಮತ್ತು ಭೂ ವ್ಯಾಪ್ತಿಗಾಗಿ ಬಳಕೆದಾರರ ಹೆಚ್ಚಿದ ಬೇಡಿಕೆಗಳನ್ನು ಸರಿದೂಗಿಸಲು ಸಹಾಯ ಮಾಡಲಿದೆ.


ಇದು ಮಿಲಿಟರಿ ಉದ್ದೇಶಗಳಿಗೂ ನೆರವಾಗಲಿದೆ.


ಪಿಎಸ್‌ಎಲ್‌ವಿ-ಸಿ 47 'ಎಕ್ಸ್‌ಎಲ್' ಕಾನ್ಫಿಗರೇಶನ್‌ನಲ್ಲಿ ಪಿಎಸ್‌ಎಲ್‌ವಿಯ 21 ನೇ ಹಾರಾಟವಾಗಿದೆ (6 ಘನ ಸ್ಟ್ರಾಪ್-ಆನ್ ಮೋಟರ್‌ಗಳೊಂದಿಗೆ).


ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ನೊಂದಿಗೆ ವಾಣಿಜ್ಯ ವ್ಯವಸ್ಥೆಯ ಭಾಗವಾಗಿ ಯುಎಸ್ನಿಂದ 13 ವಾಣಿಜ್ಯ ನ್ಯಾನೊ-ಉಪಗ್ರಹಗಳನ್ನು ಸಾಗಿಸಲಾಗುತ್ತಿದೆ.


13 ವಾಣಿಜ್ಯ ನ್ಯಾನೊ ಉಪಗ್ರಹಗಳು ಫ್ಲೋಕ್-4 ಪಿ ಆಗಿದ್ದು, ಅವುಗಳಲ್ಲಿ 12 ಉಪಗ್ರಹಗಳು, ಭೂಮಿಯ ವೀಕ್ಷಣೆಯ ಉದ್ದೇಶ ಹೊಂದಿದ್ದರೆ, ಉಳಿದೊಂದು ಉಪಗ್ರಹ ಮೆಶ್ಬೆಡ್ ಸಂವಹನದ ಪರೀಕ್ಷೆಯ ಉದ್ದೇಶಹೊಂದಿದೆ.


ಇದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 74 ನೇ ಉಡಾವಣಾಯಾಗಿದೆ ಎಂದು ಇಸ್ರೋ ಹೇಳಿದೆ. ಪಿಎಸ್‌ಎಲ್‌ವಿಯ 49 ನೇ ಕಾರ್ಯಾಚರಣೆಯಾಗಿದ್ದು, ಪಿಎಸ್‌ಎಲ್‌ವಿ-ಎಕ್ಸ್‌ಎಲ್ ರೂಪಾಂತರದ 21 ನೇ ಕಾರ್ಯಾಚರಣೆಯಾಗಿದೆ.


CARTOSAT-3, ಕಾರ್ಟೊಸ್ಯಾಟ್ ಸರಣಿಯಲ್ಲಿ ಒಂಬತ್ತನೇಯದಾಗಿದೆ ಮತ್ತು ಇಂದಿನ ಉಡಾವಣೆಯು 2019 ರಲ್ಲಿ ಇಸ್ರೊದ ಐದನೆಯ ಉಡಾವಣೆಯಾಗಿದೆ.