ಗಿಡ ಹಾಳಾಯಿತು ಎಂಬ ಬೇಜಾರಿನಲ್ಲಿದ್ದ 6ರ ಪೋರನಿಗೆ ಹೊಸ ಸಸಿಗಳನ್ನು ನೀಡಿದ ಚಿರಿ ಯೋಜನೆ

ಎರ್ನಾಕುಲಂನ 6 ನೇ ತರಗತಿ ವಿದ್ಯಾರ್ಥಿ ಪವನ್ ನಾಶ್‌ ತನ್ನ ನೆಲ್ಲಿಕಾಯಿ ಗಿಡವನ್ನು ಕಳೆದುಕೊಂಡ ನಂತರ ವಿದ್ಯಾರ್ಥಿ ಪೊಲೀಸ್ ಕೆಡೆಟ್‌ಗಳ (ಎಸ್‌ಪಿಸಿ) ಚಿರಿ ಯೋಜನೆಯಿಂದ ಒಂಬತ್ತು ಹೊಸ ಸಸಿಗಳನ್ನು ಪಡೆದಿದ್ದಾನೆ.

ಗಿಡ ಹಾಳಾಯಿತು ಎಂಬ ಬೇಜಾರಿನಲ್ಲಿದ್ದ 6ರ ಪೋರನಿಗೆ ಹೊಸ ಸಸಿಗಳನ್ನು ನೀಡಿದ ಚಿರಿ ಯೋಜನೆ

Saturday August 29, 2020,

2 min Read

ನಾವೊಂದು ಗಿಡ ನೆಟ್ಟು ಬೆಳೆಸುವುದು, ಅದು ಹಣ್ಣುಬಿಡುವವರೆಗೂ ಕಾಯುವುದು ಎಷ್ಟೊಂದು ಹಿತವಾಗಿರುತ್ತದೆ ಅಲ್ಲವೆ, ಅದರಲ್ಲೂ 12 ರಂತಹ ಚಿಕ್ಕ ವಯಸ್ಸಿನವರಿಗಂತೂ ಅದು ಸೋಜಿಗವೆ ಸರಿ. ಕೇರಳದ ಎರ್ನಾಕುಲಂನ ಪವನ್‌ ನಾಶ್‌ ಎಂಬ 6 ನೇ ತರಗತಿಯ ವಿದ್ಯಾರ್ಥಿ ಕಳೆದೆರೆಡು ವರ್ಷಗಳಿಂದ ತನ್ನ ಮನೆಯ ಮುಂದೆ ನೆಲ್ಲಿಕಾಯಿ ಗಿಡವನ್ನು ಬೆಳೆಸುತ್ತಿದ್ದಾನೆ.


ಒಂಬತ್ತು ಸಸಿಗಳನ್ನು ಪಡೆದ ಪವನ್‌ ನಾಶ್‌ (ಚಿತ್ರಕೃಪೆ: ದಿ ನ್ಯೂಸ್‌ ಮಿನಿಟ್)‌


ಇತ್ತೀಚೆಗೆ ಮನೆಗೆ ಮರಳುತ್ತಿರಬೇಕಾದರೆ ದಾರಿಯಲ್ಲಿ ತನ್ನ ಗಿಡವನ್ನು ಕತ್ತರಿಸಿ ಒಗೆದದ್ದು ಆ ಹುಡುಗನಿಗೆ ಕಾಣಿಸಿತು. ಇಬ್ಬರು ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿದ್ದಾರೆಂದು ವರದಿಯಾಗಿದೆ.


ಈ ಘಟಣೆಯ ನಂತರ ಪವನ್‌ ತನ್ನ ತಾಯಿಯಾದ ದಿವ್ಯಾ ಅವರ ಫೋನಿನಿಂದ ರಾಜ್ಯದ ವಿದ್ಯಾರ್ಥಿ ಕೆಡೆಟ್‌ ನಡೆಸುತ್ತಿರುವ ದೂರವಾಣಿ ಸಮಾಲೋಚನಾ ಉಪಕ್ರಮವಾದ ಚಿರಿ ಪ್ರಾಜೆಕ್ಟ್‌ (ಎಂದರೆ ನಗುವ ಮುಖ)ಗೆ ಫೋನ್‌ ಮಾಡಿ ತನ್ನ ಸಮಸ್ಯೆಯನ್ನು ತೋಡಿಕೊಂಡನು.


ಪವನನ ತಾಯಿಯ ಪ್ರಕಾರ ಅವನ ಹಿರಿಯ ಅಕ್ಕನ ಶಿಕ್ಷಕರೊಬ್ಬರು ವಿದ್ಯಾರ್ಥಿ ಪೊಲೀಸ್‌ ಕೆಡೆಟ್‌ನಲ್ಲಿದ್ದು, ಅವರು ಪೊಲೀಸ್‌ ಸಮವಸ್ತ್ರದಲ್ಲಿರುವ ಚಿತ್ರ ಅವರ ವಾಟ್ಸ್ಯಾಪ್‌ ಪ್ರೊಫೈಲ್‌ನಲ್ಲಿದೆ.


“ಪವನ್‌ ಗೆ ಇದು ಮೊದಲೆ ತಿಳಿದಿತ್ತು, ಆ ಘಟನೆಯ ನಂತರ ಸೋಮವಾರ ಆಟವಾಡುತ್ತೇನೆಂದು ನನ್ನಿಂದ ಮೊಬೈಲ್‌ ಪಡೆದನು. ಆದರೆ ಅವನು ಆಟವಾಡದೆ ಆ ಶಿಕ್ಷಕರಿಗೆ ಫೋನ್‌ ಮಾಡಿದ್ದಾನೆ, ಈ ಶಿಕ್ಷಕರು ಪೊಲೀಸ್‌ ಅಧಿಕಾರಿಯಿರಬೇಕೆಂದು ಭಾವಿಸಿ ಅವರು ಸಹಾಯ ಮಾಡಬಲ್ಲರು ಎಂಬ ಬಯಕೆಯಿಂದ ಅವನು ಹಾಗೆ ಮಾಡಿದ್ದನು. ಇದು ನಮಗೆ ಆಮೇಲೆ ಗೊತ್ತಾಯಿತು. ಆ ಶಿಕ್ಷಕರೆ ಚಿರಿ ಸಹಾಯವಾಣಿಯ ಸಂಖ್ಯೆ ನೀಡಿದರು. ಆಗ ಅವರಿಗೆ ಫೋನ್‌ ಮಾಡಿ ತನ್ನ ತೊಂದರೆಯನ್ನು ತಿಳಿಸಿದ್ದಾನೆ,” ಎಂದು ದಿವ್ಯಾ ದಿ ನ್ಯೂಸ್‌ ಮಿನಿಟ್ ಗೆ ಹೇಳಿದರು.


ಈ ಸಮಸ್ಯೆಯನ್ನು ಚಿರಿಯ ಉನ್ನತ ಅಧಿಕಾರಿಗಳು ಗಮನಿಸಿ, ನಂತರ ಇನ್ಸ್ಪೆಕ್ಟರ್‌ ಜನರಲ್‌ ಆಪ್‌ ಪೊಲೀಸ್‌ ಮತ್ತು ಚಿರಿಯ ನೋಡಲ್‌ ಅಧಿಕಾರಿಯಾಗಿರುವ ಪಿ. ವಿಜಯನ್‌ ಸಸಿಗಳನ್ನು ಮಗುವಿಗೆ ನೀಡುವಂತೆ ಹೇಳಿದರು.


ಮುಂದಿನ ದಿನ ಪವನ್‌ ಮತ್ತು ಅವನ ಕುಟುಂಬದೆದುರು ನೆಲ್ಲಿಕಾಯಿ, ಹುಣಸೆ ಮತ್ತು ಪೇರಲೆಯ 9 ಸಸಿಗಳೊಂದಿಗೆ ನಿಂತ ಅಧಿಕಾರಿಗಳನ್ನು ಕಂಡು ಆಶ್ಚರ್ಯಗೊಂಡರು.


ಇನ್ಸಪೆಕ್ಟರ್‌ ಜನರಲ್‌ ಪಿ ವಿಜಯನ್‌ 150 ದಿನಗಳಿಗೂ ಹೆಚ್ಚು ಕಾಲ ಮನೆಯಲ್ಲೆ ಇದ್ದು, ಗೆಳೆಯರೊಂದಿಗೆ ಹೊರಗೆ ಹೋಗಿ ಆಟವಾಡದೆ ಇರುವುದರಿಂದ ಬಹುತೇಕ ಮಕ್ಕಳು ಬೇಜಾರಿನಲ್ಲಿದ್ದಾರೆ. ಅದರ ನಡುವೆ ಮಕ್ಕಳು ಹೆಚ್ಚಾಗಿ ಮೊಬೈಲ್‌ ಬಳಸುತ್ತಿರುವುದರ ಬಗ್ಗೆ ದೂರು ನೀಡುತಿದ್ದಾರೆ ಎಂದರು


"ಮಕ್ಕಳು ಸಹಾಯಕ್ಕಾಗಿ ಕರೆ ಮಾಡುತ್ತಿದ್ದಾರೆ ಮತ್ತು ಪೋಷಕರ ನಡುವಿನ ಜಗಳದಿಂದ ಹಿಡಿದು ಆಟದ ಮೈದಾನದ ಕೊರತೆಯವರೆಗೆ ವಿವಿಧ ವಿಷಯಗಳ ಬಗ್ಗೆ ದೂರುಗಳನ್ನು ನೀಡುತ್ತಿದ್ದಾರೆ. 80 ಕ್ಕೂ ಹೆಚ್ಚು ಮನಶ್ಶಾಸ್ತ್ರಜ್ಞರು ಮತ್ತು ಮನೋವೈದ್ಯರು ಸಮಾಲೋಚಿಸಲು ಸ್ವಯಂಪ್ರೇರಣೆಯಿಂದ ಬೆಂಬಲವನ್ನು ನೀಡಿದ್ದಾರೆ. ಮಕ್ಕಳ ಅವಶ್ಯಕತೆಗಳನ್ನು ಪೂರೈಸಲು ಸ್ವಯಂಸೇವಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಘಟಕಗಳನ್ನು ನಾವು ರಚಿಸಿದ್ದೇವೆ,” ಎಂದು ಇನ್ಸ್‌ಪೆಕ್ಟರ್ ವಿಜಯನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಪವನ್ ತನ್ನ ಹೊಸ ಸಸಿಗಳ ಮೇಲೆ ಕಣ್ಣಿಡಲು ಕೊಚ್ಚಿ ಮೂಲದ ಸ್ಮಾರ್ಟ್ ಗಾರ್ಡ್ ಎಂಬ ಕಂಪನಿಯಿಂದ ಸಿಸಿಟಿವಿ ಕ್ಯಾಮೆರಾವನ್ನು ಪಡೆದಿರುವುದು ವಿಶೇಷ.