ಗಣೇಶ ಚತುರ್ಥಿಗೆ ಗ್ರೀನ್ ಉತ್ಸವದ ಹಸಿರು ಪರಿಹಾರ
ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸುವ ಸಂಸ್ಥೆಯಾದ ಗ್ರೀನ್ ಉತ್ಸವ ಮಣ್ಣಿನ ಗಣೇಶನ ಮೂರ್ತಿಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಾ ಕುಂಬಾರರಿಗೂ ಆರ್ಥಿಕ ಬೆಂಬಲ ಒದಗಿಸುತ್ತಿದೆ.
ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಆದರೆ ಆ ಗಣೇಶನ ಹಬ್ಬವಾದ ಗಣೇಶ ಚತುರ್ಥಿಯಲ್ಲಿ ಪಿಒಪಿ ಗಣೇಶನ ಮೂರ್ತಿಗಳಿಂದ ಪರಿಸರದ ಮೇಲಾಗುತ್ತಿರುವ ವಿಘ್ನ ಇನ್ನೂ ತಪ್ಪಿಲ್ಲ.
ಗಣೇಶ ವಿಸರ್ಜನೆಯ ನಂತರ ಕೆರೆಗಳು ಗಣೇಶನ ಪಿಒಪಿ ಮೂರ್ತಿಗಳು ಮತ್ತು ಪೂಜೆಯ ತ್ಯಾಜ್ಯದಿಂದ ತುಂಬಿ ಅಪಾರ ಪ್ರಮಾಣದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದು ಕಳೆದ ಹಲವು ವರ್ಷಗಳಿಂದ ನಾವು ನೋಡಿಕೊಂಡು ಬಂದಿರುವ ದೃಶ್ಯವಾಗಿದೆ.
ಈ ಸಮಸ್ಯೆಗೆ ಪರಿಸರ ಸ್ನೇಹಿ ಪರಿಹಾರ ಅರಸುತ್ತಾ ಹೋದ ಗ್ರೀನ್ ಉತ್ಸವದ ಸಂಸ್ಥಾಪಕಿ ರಿಶಿತಾ ಶರ್ಮಾಗೆ ಸಿಕ್ಕ ಉತ್ತರವೇ, ಮಣ್ಣಿನಿಂದ ಮಾಡಿದ, ರಾಸಾಯನಿಕ ಬಣ್ಣ ರಹಿತವಾದ ಗಣೇಶನ ಮೂರ್ತಿ.
“ನಾವೆಲ್ಲರೂ ಮನೆಯಲ್ಲಿ ಉತ್ತಮವಾಗಿ ಗಣೇಶನ ಪೂಜೆ ಮಾಡುತ್ತೇವೆ, ಆದರೆ ಅತಿ ಕೆಟ್ಟದಾಗಿ ಗಣೇಶನನ್ನು ವಿಸರ್ಜನೆ ಮಾಡಿ ಪರಿಸರ ಹಾನಿಗೆ ಕಾರಣರಾಗುತ್ತಿದ್ದೇವೆ,” ಎನ್ನುವ ರಿಶಿತಾ ಈ ಸಮಸ್ಯೆಗೆ ಪರಿಹಾರವೆಂಬಂತೆ ಮಣ್ಣಿನಿಂದ ಮಾಡಿದ ಬಣ್ಣರಹಿತ ಗಣೇಶನ ಮೂರ್ತಿಯ ಬಳಕೆಯನ್ನು ಪ್ರೇರೆಪಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸ್ಥಳೀಯ ಕುಂಬಾರರನ್ನು ಒಡಗೂಡಿಸಿಕೊಂಡು ಅವರಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿ ಪರಿಸರಕ್ಕೂ ಹಾಗೂ ಕುಂಬಾರರಿಗೂ ಏಕಕಾಲದಲ್ಲಿ ನೆರವಾಗುತ್ತಿದ್ದಾರೆ.
60 ಕ್ಕೂ ಹೆಚ್ಚು ಮೂರ್ತಿಗಳಿಗೆ ಈಗಾಗಲೇ ಆರ್ಡರ್ ಬಂದಿದ್ದು ಮೂರ್ತಿಯ ಕೆಲಸಗಳು ಭರದಿಂದ ಸಾಗಿದೆ. ಜೊತೆಗೆ ಮನೆಯಲ್ಲೆ ಗಣೇಶ ಮೂರ್ತಿ ತಯಾರಿಸುವ ಆನ್‌ಲೈನ್ ಕಾರ್ಯಗಾರಕ್ಕೂ ಇವರು ಚಾಲನೆ ನೀಡಿದ್ದಾರೆ. ಅಲ್ಲಿ ಕುಂಬಾರರು ಮೂರ್ತಿ ಮಾಡುವುದನ್ನು ಕಲಿಸುತ್ತಾರೆ, ಇದು ಅವರಿಗೆ ಹೆಚ್ಚಿನ ದುಡಿಮೆಗೆ ನೆರವಾಗುತ್ತಿದೆ.
“ಎಲ್ಲರೂ ಒಂದು ದಿನ ಮಣ್ಣಿಗೆ ಮರಳಬೇಕು. ಗಣೇಶನ ಮೂರ್ತಿಗಳು ವಿಸರ್ಜನೆಯಾಗುತ್ತವೆ. ಆದರೆ ಪಿಒಪಿ ಮೂರ್ತಿಗಳು ಮಣ್ಣಿಗೆ ಮರಳುವುದಿಲ್ಲ. ಆದ್ದರಿಂದ ಬಣ್ಣ ರಹಿತ, ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳು ಪರಿಸರಸ್ನೇಹಿ ಪರ್ಯಾಯಗಳಾಗಿವೆ,” ಎನ್ನುತ್ತಾರೆ ರಿಶಿತಾ.
ಸುಸ್ಥಿರ ಜೀವನದತ್ತ ರಿಶಿತಾ ಪಯಣ
ಅದು 2014 ರ ಸಮಯ, ಅದಾಗಲೇ ರಿಶಿತಾ ಅವರು ಅಮೇರಿಕದ ಐಟಿ ಕೆಲಸ ತೊರೆದು ಬೆಂಗಳೂರಿಗೆ ಮರಳಿದ್ದರು. ತ್ಯಾಜ್ಯ ನಿರ್ವಹಣೆಯೆಡೆಗೆ ಆಸಕ್ತಿ ಬೆಳೆಸಿಕೊಂಡ ಅವರು ಶೂನ್ಯ ತ್ಯಾಜ್ಯ ಜೀವನ ಶೈಲಿಯನ್ನು ರೂಢಿಸಿಕೊಳ್ಳತೊಡಗಿದರು.
“ನಾನು ಶಾಪಿಂಗ್ ಮಾಡಲು ನನ್ನದೆ ಆದ ಕೈ-ಚೀಲ ತೆಗೆದುಕೊಂಡು ಹೋಗುತ್ತೇನೆ. ತರಕಾರಿ ತ್ಯಾಜ್ಯವನ್ನು ಎಸೆಯದೆ ಗೊಬ್ಬರ ಮಾಡುತ್ತೇನೆ. ಪ್ಲಾಸ್ಟಿಕ್ ಡಬ್ಬಿಗಳ ಬದಲಿಗೆ ಸ್ಟೀಲ್ ಡಬ್ಬಿಗಳನ್ನು ಬಳಸುತ್ತ ನನ್ನಿಂದ ಸಾಧ್ಯವಾದಷ್ಟು ತ್ಯಾಜ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ,” ಎಂದೆನ್ನುತ್ತಾರೆ ರಿಶಿತಾ.
ರಿಶಿತಾ ಹೇಳುವ ಪ್ರಕಾರ ಒಂದು ಪಾರ್ಟಿಯು ಬಳಸಿ ಬಿಸಾಡುವ ಕನಿಷ್ಠ 300 ಪ್ಲಾಸ್ಟಿಕ್ ವಸ್ತುಗಳ ತ್ಯಾಜ್ಯ ಸೃಷ್ಠಿಗೆ ಕಾರಣವಾಗುತ್ತದೆ. ಇದನ್ನು ಹೇಗೆ ಕಡಿಮೆ ಮಾಡಬೇಕೆಂದು ಯೋಚಿಸಿದಾಗ ಸ್ನೇಹಿತೆ ಲಕ್ಷ್ಮೀ ಶಂಕರನ್ ಜತೆ ಸೇರಿ ಶುರುವಾದದ್ದೇ ರೆಂಟ್-ಎ-ಕಟ್ಲೇರಿ.
ಇದು ಕಾರ್ಯಕ್ರಮಗಳಿಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಸ್ಟೀಲ್ ಪಾತ್ರೆಗಳನ್ನು ಅತಿ ಕಡಿಮೆ ಬೆಲೆಗೆ ಬಾಡಿಗೆಗೆ ನೀಡುವಂತಹ ವಿಶೇಷವಾದ ಪ್ರಯತ್ನವಾಗಿದೆ.
ಇಲ್ಲಿಯವರೆಗೂ ಸೃಷ್ಟಿಯಾಗಬಹುದಿದ್ದ 2.5 ಲಕ್ಷ ಬಳಸಿ ಬಿಸಾಡುವ ಪ್ಲಾಸ್ಟಿಕ್ ಪಾತ್ರೆಗಳ ತ್ಯಾಜ್ಯವನ್ನು ಈ ಉಪಕ್ರಮ ತಡೆದಿದೆ ಎಂಬುದು ಹೇಗೆ ಚಿಕ್ಕ ಬದಲಾವಣೆಗಳು ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಇನ್ನೂ ಈ ಕಾರ್ಯಕ್ರಮಗಳಲ್ಲಿ ಅಲಂಕಾರಕ್ಕಾಗಿ ಬಳಸುವ ವಸ್ತುಗಳೆಲ್ಲವೂ ಪ್ಲಾಸ್ಟಿಕ್‌ಮಯವೇ. ಹುಟ್ಟಿದ ಹಬ್ಬ, ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಬಳಸಲಾಗುವ ಬಲೂನ್‌ಗಳು ಪರಿಸರಕ್ಕೆ ಭಾರೀ ತೊಂದರೆಯನ್ನು ನೀಡುವುದಲ್ಲದೆ ಹಲವು ಪ್ರಾಣಿಗಳ ಸಾವಿಗೆ ಕಾರಣವಾಗುತ್ತವೆ ಎನ್ನುತ್ತಾರೆ ರಿಶಿತಾ. ಇವುಗಳಿಗೆ ಪರಿಸರಸ್ನೇಹಿ ಪರಿಹಾರ ಒದಗಿಸಲು ಶುರುವಾದದ್ದೇ ಗ್ರೀನ್ ಉತ್ಸವ. ಇದರಲ್ಲಿ ಮರುಬಳಕೆ ಮಾಡಬಹುದಾದಂತಹ ಕೈಯಿಂದ ತಯಾರಿಸಲಾದ ಅಲಂಕಾರಿಕ ವಸ್ತುಗಳನ್ನು ಬಾಡಿಗೆ ನೀಡಲಾಗುತ್ತದೆ. ಕಾರ್ಯಕ್ರಮದ ನಂತರ ಅವುಗಳನ್ನು ಎಸೆಯದೆ ಇನ್ನೊಂದು ಕಾರ್ಯಕ್ರಮಕ್ಕೆ ಬಳಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಇಷ್ಟೇ ಅಲ್ಲದೆ ರಿಶಿತಾ ಹಲವು ಸುಸ್ಥಿರ ಅಭ್ಯಾಸಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಮಕ್ಕಳಿಗೆ ತ್ಯಾಜ್ಯ ನಿರ್ವಹಣೆ, ಸುಸ್ಥಿರ ಅಭ್ಯಾಸಗಳನ್ನು ಪರಿಚಯ ಮಾಡಿಸುವಂತಹ ಗ್ರೀನ್ ಲಿಟಲ್ ಚ್ಯಾಂಪ್ಸ್ ಎಂಬ ವಿಶೇಷ ಆನ್‌ಲೈನ್ ಕಾರ್ಯಗಾರವನ್ನು ಆಯೋಜಿಸಿದ್ದರು. ಮನೆಯಲ್ಲಿ ಮೈಕ್ರೋಗ್ರೀನ್ಸ್‌ಗಳನ್ನು ಹೇಗೆ ಬೆಳೆಯಬೇಕೆಂಬ ಕಾರ್ಯಗಾರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.