ಕೋಲ್ಕತ್ತಾದ ಬಡವರಿಗೆ ಪ್ರತಿನಿತ್ಯ 7,000 ಬಿಸಿ ರೊಟ್ಟಿಗಳನ್ನು ವಿತರಿಸುತ್ತಿರುವ ಎನ್‌ಜಿಓ
ಕೋಲ್ಕತ್ತಾದ ಅಪ್ನಿ ರೋಟಿ ಸಂಸ್ಥೆಯು ನಗರದಲ್ಲಿರುವ 2,000 ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಪೂರೈಸುತ್ತಿದ್ದು, ಶೀಘ್ರದಲ್ಲೇ ತಮ್ಮ ಸೇವೆಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸುವ ಬಯಕೆಯನ್ನು ಹೊಂದಿದೆ.
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ(ಎಫ್‌ಎಓ) ಬಾರತದಲ್ಲಿ ಅಂದಾಜು 200 ದಶಲಕ್ಷ ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ದೇಶವು ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ಮುಂದುವರೆಯುತ್ತಿದ್ದರೂ ಸಹ ಹಲವರಿಗೆ ದೈನಂದಿನ ಊಟವು ದೂರದ ಮಾತಾಗಿಯೇ ಉಳಿದಿದೆ.
ದೇಶದಲ್ಲಿರುವ ಬಡತನವೇ ಅಪೌಷ್ಟಿಕತೆ ಮತ್ತು ಕುಂಟಿತ ಬೆಳವಣಿಗೆಗೆ ಕಾರಣವಾಗುವ ಮುಖ್ಯ ಅಂಶವಾಗಿದೆ. ಆಹಾರ ಪೂರೈಕೆಯ ಸರಪಳಿಯ ನಿರ್ವಹಣೆಯಲ್ಲಿ ಹೆಚ್ಚಿನ ಅಸಮರ್ಥತೆ ಮತ್ತು ಅದರ ನಂತರ ಉಂಟಾಗುವ ವ್ಯರ್ಥವನ್ನು ಕಡಿತಗೊಳಿಸಲು ಸಾಧ್ಯವಾಗುತ್ತಿಲ್ಲ.
ಒಂದು ಅಂದಾಜಿನ ಪ್ರಕಾರ ಶೇಕಡಾ 40 ರಷ್ಟು ತರಕಾರಿಗಳು ಮತ್ತು 30 ರಷ್ಟು ಧಾನ್ಯಗಳು ಗ್ರಾಹಕ ಮಾರುಕಟ್ಟೆಯನ್ನು ತಲುಪದೇ ದಾರಿಯಲ್ಲಿಯೇ ಚೆಲ್ಲಿಹೋಗುತ್ತಿವೆ.
ಆದರೆ ಕೋಲ್ಕತ್ತಾದ ಅಪ್ನಿ ರೋಟಿ ಎನ್‌ಜಿಓನಲ್ಲಿರುವ ಸಹೃದಯರು ಬಡವರಿಗೆ ಬಿಸಿ ರೊಟ್ಟಿಯ ಜತೆ ತುಪ್ಪ ಮತ್ತು ಉಪ್ಪಿನಕಾಯಿ ವಿತರಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಸೇವೆಯನ್ನು ವಿಕಾಸ್ ಅಗರ್ವಾಲ್‌ರವರು ಆರಂಭಿಸಿದ್ದು, ಸಂಸ್ಥೆಯು ವ್ಯಾನ್ ಮೂಲಕ ಸಂಚರಿಸಿ ಸುಮಾರು 2,000 ಜನರಿಗೆ 7,000 ರೊಟ್ಟಿಗಳನ್ನು ವಿತರಿಸುವ ಕೆಲಸ ಮಾಡುತ್ತಿದೆ. ವ್ಯಾನ್‌ನಲ್ಲಿ ಸ್ವಯಂ ಚಾಲಿತ ರೊಟ್ಟಿ ತಯಾರಿಸುವ ಯಂತ್ರವನ್ನು ಅಳವಡಿಸಲಾಗಿದ್ದು ಇದು ಪ್ರತಿ ಗಂಟೆಗೆ 1,000 ರೊಟ್ಟಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.
ರೆಸ್ಟೋರೆಂಟ್‌ಗಳಲ್ಲಿ ಮಿಕ್ಕುಳಿದ ಆಹಾರಗಳನ್ನು ಅಗತ್ಯವಿರುವವರಿಗೆ ವಿತರಿಸುವ ಎನ್‌ಜಿಓಗಳು ಇವೆಯಾದರೂ, ತಯಾರಿಸಿದ ತಾಜಾ ಆಹಾರವನ್ನು ವಿತರಿಸುವ ಯಾವುದೇ ಹೋಟೆಲ್‌ಗಳು ಇಲ್ಲ. ತಮ್ಮ ಉಪಕ್ರಮದ ಕುರಿತು ವಿಕಾಸ್‌ರವರು ದಿ ಲಾಜಿಕಲ್ ಇಂಡಿಯನ್‌ಗೆ ಹೀಗೆ ಹೇಳುತ್ತಾರೆ, ಬಡವರಿಗೆ ಆರೋಗ್ಯಕರ ಮತ್ತು ಪೌಷ್ಠಿಕಾಂಶಯುಕ್ತ ಆಹಾರವನ್ನು ಪೂರೈಸುವ ಉದ್ದೇಶದಿಂದ ಅಪ್ನಿ ರೋಟಿಯನ್ನು ಈ ವರ್ಷದ ಜನೇವರಿಯಲ್ಲಿ ಆರಂಭಿಸಲಾಯಿತು.
ರೊಟ್ಟಿ ಜತೆ ಕೆಲವೊಮ್ಮೆ ಸಿಹಿಗಳನ್ನೂ ಸಹ ಈ ಎನ್‌ಜಿಓ ನೀಡುತ್ತದೆ. ವಿಕಾಸ್‌ರವರು ಪ್ರಸ್ತುತ ಈ ಉಪಕ್ರಮಕ್ಕೆ ತಮ್ಮ ಸ್ವಂತ ಹಣವನ್ನೇ ಬಳಸಿಕೊಳ್ಳುತ್ತಿದ್ದಾರೆ
“ವ್ಯಾನ್ ವಾರದಲ್ಲಿ ಒಂದು ದಿನ ಮಾತ್ರ ರಜೆ ತೆಗೆದುಕೊಳ್ಳುತ್ತದೆ ಮತ್ತು ಉಳಿದ ದಿನಗಳಲ್ಲಿ ಬೆಳಿಗ್ಗೆ 10:30ರಿಂದ ಆರಂಭಿಸಿ ಸಂಜೆ 7:30ರವರೆಗೆ ಸೇವೆ ಸಲ್ಲಿಸುತ್ತದೆ” ಎಂದು ಅವರು ಹೇಳುತ್ತಾರೆ
ಅಪ್ನಿ ರೋಟಿಯ ಜಾಲವನ್ನು ವೃದ್ಧಿಸಲು 'ಅಪ್ನಿ ರೋಟಿ ಸ್ಕ್ವಾಡ್’ ಎನ್ನುವ ವಾಟ್ಸಪ್ ಗ್ರೂಪ್ ಸಹ ರಚಿಸಲಾಗಿದೆ. ಈ ಗ್ರೂಪ್‌ನ ಮೂಲಕ, ವ್ಯಾನ್ ಎಲ್ಲಿ ರೊಟ್ಟಿ ವಿತರಿಸಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಗುತ್ತದೆ ಇದರಿಂದ ಸ್ವಯಂ ಸೇವಕರಾಗಬಯಸುವವರು ಇದರಲ್ಲಿ ಸೇರಿಕೊಳ್ಳಬಹುದು. ವರದಿ ಒನ್ ಇಂಡಿಯಾ.
ನಗರದ ಕೊಳಗೇರಿಗಳ ವ್ಯಾಪ್ತಿಯನ್ನು ತಲುಪಲು, ಈ ತಂಡವು ನಗರದ ಕಡು ಬಡವರಿರುವ ಪ್ರದೇಶವನ್ನು ಗುರಿಯಾಗಿಟ್ಟುಕೊಂಡಿದೆ. ವಿಕಾಸ್‌ರವರು ಇನ್ನೂ ಹೆಚ್ಚು ವ್ಯಾನ್ ಖರೀದಿಸಲು ಧನ ಸಹಾಯವನ್ನು ಎದುರುನೋಡುತ್ತಿದ್ದಾರೆ ಮತ್ತು ಈ ಕೆಲಸವನ್ನು ಬಿಹಾರ್, ಜಾರ್ಖಂಡ್ ಮತ್ತು ಓರಿಸ್ಸಾಗಳಿಗೆ ವಿಸ್ತರಿಸುವ ಬಯಕೆ ಹೊಂದಿದ್ದಾರೆ.