Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ನಿರಾಶ್ರಿತ ಮಕ್ಕಳ ಬಾಳಿಗೆ ಭರವಸೆಯ ಬೆಳಕಿನ 'ಸ್ಪರ್ಶ'

ಶಿಕ್ಷಣದಿಂದ ವಂಚಿತರಾದ ಸಾವಿರಾರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಆಶ್ರಯದಾತ 'ಸ್ಪರ್ಶ ಟ್ರಸ್ಟ್' 2005 ರಿಂದ ಸತತವಾಗಿ ಇಲ್ಲಿಯವರೆಗೂ ನಿರಾಶ್ರಿತ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣ, ಆಹಾರ ಹಾಗೂ ವಸತಿ ನೀಡಿ ಸ್ಪರ್ಶ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ.

ನಿರಾಶ್ರಿತ ಮಕ್ಕಳ ಬಾಳಿಗೆ ಭರವಸೆಯ ಬೆಳಕಿನ 'ಸ್ಪರ್ಶ'

Thursday November 14, 2019 , 5 min Read

ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು ಎಂಬ ಮಾತೊಂದಿದೆ, ಆದರೆ ಇಂದು ಪೋಷಕರ ಅಸಹಾಯಕತೆಯಿಂದಾಗಿ ಲಕ್ಷಾಂತರ ಮಕ್ಕಳು ಮೂಲಸೌಕರ್ಯಗಳಿಂದ ವಂಚಿತರಾಗಿ, ಬೀದಿ ಬೀದಿಯಲ್ಲಿ ಚಿಂದಿ ಆಯುತ್ತಾ, ಚಿಕ್ಕ ಪುಟ್ಟ ಕೆಲಸ ಮಾಡುತ್ತಾ ಅಥವಾ ಬಿಕ್ಷೆ ಬೇಡುತ್ತಾ ದಿನದ ಮೂರು ಹೊತ್ತಿನ ಕೂಳಿಗಾಗಿ ಶ್ರಮಿಸುತ್ತಿದ್ದಾರೆ. ನಾವೆಲ್ಲಾದರು ತಿರುಗಾಡುವಾಗ ಅನಾಥ ಮಕ್ಕಳು ಕಂಡು ಬಂದರೆ ಕರುಳು ಚುರ್ ಎನ್ನುತ್ತದೆ, ಅವರಿಗೆ‌ ಒಂದಷ್ಟು ಹಣ ಅಥವಾ ಊಟ, ಬಟ್ಟೆ ನೀಡಿ ನಮ್ಮ‌ ಜವಬ್ದಾರಿ ಮುಗಿಯಿತು ಅಂಥ ಸುಮ್ಮನಾಗಿಬಿಡುತ್ತೇವೆ. ಆದರೆ, ಆ ಮಕ್ಕಳ ಉಜ್ವಲ‌ ಭವಿಷ್ಯದತ್ತ ನಾವು ಕೊಂಚ ಯೋಚಿಸಿದರೆ ಹೇಗಿರುತ್ತದೆ?


ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಸಂಪೂರ್ಣ ಜವಾಬ್ದಾರಿ ತಂದೆ-ತಾಯಿಯಂದಿರದ್ದು, ಆದರೆ ಕಿತ್ತು ತಿನ್ನುವ ಬಡತನದಿಂದಾಗಿ ಮಕ್ಕಳ ಬಾಲ್ಯ ಕೇವಲ ಮೂರು ಕಾಸು ಸಂಪಾದಿಸುವಿಕೆಗೆ ಮೀಸಲಾದರೆ ಎಷ್ಟು ಸರಿ. ಈ ನಿಟ್ಟಿನಲ್ಲಿ ಸರ್ಕಾರ, ಹಲವು ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ನೂರಾರು ಟ್ರಸ್ಟ್ ಹಾಗೂ ಸ್ವಯಂ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿವೆ. ಇಂತಹ ಟ್ರಸ್ಟ್‌ಗಳಲ್ಲಿ‌ ಒಂದಾದ 'ಸ್ಪರ್ಶ' ಮೂಲತಃ ಬೆಂಗಳೂರಿನ ಸಂಸ್ಥೆ. ಯುವಮನಸ್ಸುಗಳಿಗೆ ಅರ್ಹ ಶಿಕ್ಷಣ ಪೂರೈಸುತ್ತಾ, ಅವರ ಹಕ್ಕು ಬಾದ್ಯತೆಗಳನ್ನು ಪಡೆಯುವಲ್ಲಿ ಹಾಗೂ ಅವರ ರಕ್ಷಣೆ ಹಾಗೂ ಅಭಿವೃದ್ಧಿಯ ಉದ್ದೇಶದೊಂದಿದೆ ಆರ್, ಗೋಪಿನಾಥ್ ಎಂಬುವವರು ತಮ್ಮ ಪತ್ನಿ ಚಿತ್ರ ಹಾಗೂ ಸ್ನೇಹಿತ ಡಿ, ಎಸ್ ಕೃಷ್ಣರವರ ಸಹಾಯಹಸ್ತದೊಂದಿಗೆ 2005 ರಲ್ಲಿ ಆರಂಭಸಿದ ಸ್ಪರ್ಶ ಟ್ರಸ್ಟ್ ಇಂದಿನವರೆಗೂ ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಶ್ರಮಿಸುತ್ತಾ ಬಂದಿದೆ.


ಬೀದಿ ಮಕ್ಕಳ ಸಂಪೂರ್ಣ ಅಭಿವೃದ್ಧಿಯತ್ತ ನಿಗಾ ವಹಿಸಿರುವ ಸ್ಪರ್ಶ ಈಗಾಗಲೇ 'ಶಿಕ್ಷಣ ಮಿತ್ರ' 'ಮಕ್ಕಳ ಮಿತ್ರ' 'ಚಿಣ್ಣರ ತಂಗುದಾಣ' 'ನಿಸರ್ಗಧಾಮ' 'ಆಪ್ತಮಿತ್ರ' ಹೀಗೆ ನಾನಾ ಹೆಸರುಗಳುಳ್ಳ ಹಲವಾರು ಕೇಂದ್ರಗಳು ವಿವಿಧ ಬಗೆಯ ಉದ್ದೇಶಗಳೊಂದಿಗೆ ಸ್ಥಾಪಿಸಿದ್ದು ಸ್ಪರ್ಶ ಟ್ರಸ್ಟ ಸಾವಿರಾರು ಮಕ್ಕಳ ಉಜ್ವಲ ಭವಿಷ್ಯಕ್ಕೆ ಭರವಸೆಯ ಬೆಳಕಾಗಿದೆ ಎನ್ನಬಹುದು.


ಸಂಸ್ಥಾಪಕ ಆರ್. ಗೋಪಿನಾಥ್ ಹೇಳುವಂತೆ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿದ ನಂತರ, ಪ್ರಸ್ತುತ‌ ಇರುವ ಏಳು ಸ್ಪರ್ಶಾ ಸೌಲಭ್ಯ ಕೇಂದ್ರಗಳಿಗೆ ಅವರನ್ನು ಕರೆತರುವುದು ಮೊದಲ ಹೆಜ್ಜೆಯಾಗಿದೆ. ನಗರಾದ್ಯಂತ ಏಳು ಸಂಪರ್ಕ ಕೇಂದ್ರಗಳಿದ್ದು, ಮಕ್ಕಳನ್ನು ಆರರಿಂದ ಎಂಟು ತಿಂಗಳವರೆಗೆ ಸೇತುವೆ ಶಾಲೆಗೆ ದಾಖಲಿಸಲಾಗುತ್ತದೆ, ಅಲ್ಲಿ ಅವರು ತಮ್ಮ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವೈಯಕ್ತಿಕ ಶಿಕ್ಷಣವನ್ನು ಪಡೆಯುತ್ತಾರೆ. ಆದರೆ, ಮಕ್ಕಳನ್ನು ಪೋಷಕರಿಂದ ಕರೆತರುವುದು ದೊಡ್ಡ ಸವಾಲಾಗಿದೆ, ಏಕೆಂದರೆ ಬಹುತೇಕ ಅಸಹಾಕ ತಂದೆ-ತಾಯಂದಿರು ಮಕ್ಕಳ ಆದಾಯದ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗಾಗಿ, ಅವರನ್ನು ಕಳುಹಿಸಲು ಪೋಷಕರು ನಿರಾಕರಿಸುತ್ತಾರೆ. ಅವರಲ್ಲಿ ಮಕ್ಕಳ ಭವಿಷ್ಯದ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಿ ಅವರ ಮನವೊಲಿಸುವಲ್ಲಿ ನಾವು ಪ್ರಯತ್ನಿಸುತ್ತೇವೆ" ಎನ್ನುತ್ತಾರೆ.


ಸ್ಪರ್ಶ ಸಂಸ್ಥೆಯ ಸಂಸ್ಥಾಪಕರಾದ ಆರ್. ಗೋಪಿನಾಥ್


ಸೇತುವೆ ಶಾಲೆಯಲ್ಲಿ ಔಪಚಾರಿಕ ಶಿಕ್ಷಣ ನೀಡಿದ ನಂತರ ಅವರನ್ನು ಅವರ ಪೋಷಕರ ಬಳಿ ಬಿಡಲಾಗುತ್ತದೆ. ಒಂದು ವೇಳೆ, ಪೋಷಕರು ಮಕ್ಕಳಿಗೆ ಮುಂದಿನ‌ಹಂತದ ಶಿಕ್ಷಣ ಕೊಡಿಸುವಲ್ಲಿ ವಿಫಲರಾದರೆ ಅವರನ್ನು ತಾವೇ ಸರ್ಕಾರಿ ಶಾಲೆ, ಹಾಸ್ಟೆಲ್ ಹಾಗೂ ಶಿಶುಪಾಲನ ಸಂಸ್ಥೆಗಳಿಗೆ ನೊಂದಾಯಿಸಲಾಗುತ್ತದೆ ಅಥವಾ ಅವರನ್ನು ಸ್ಪರ್ಶ ಸೌಲಭ್ಯ ಕೇಂದ್ರಗಳಲ್ಲಿ ಸೇರಿಸಲಾಗುತ್ತದೆ.


‘ಸ್ಪರ್ಶʼಕ್ಕೆ ಪ್ರತೀ ವರ್ಷ ಕನಿಷ್ಠ 300 ಮಕ್ಕಳು ಸೇರ್ಪಡೆಯಾಗುತ್ತಾರೆ. ಅಲ್ಲದೇ 16 ವರ್ಷ ಮೇಲ್ಪಟ್ಟ ಯುವಕರಿಗೆ ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ವೃತ್ತಿಪರ ತರಬೇತಿಗಳನ್ನು ಕೈಗೊಳ್ಳಲಾಗುತ್ತದೆ. ಸ್ಪರ್ಶ ಕೇಂದ್ರಗಳು ಸಂಪೂರ್ಣ ಗ್ರಂಥಾಲಯವಾಗಿದ್ದು ಮಕ್ಕಳ ಜ್ಞಾನಾರ್ಜನೆಗಾಗಿ ಉಪಯುಕ್ತವಾಗಿದೆ. ಸಮುದಾಯ ಮಟ್ಟಗಳಲ್ಲಿ ಸಣ್ಣ ಶಾಲೆಗಳಿದ್ದು, ಪೋಷಕರಿಂದ ದೂರವಾಗದೇ ಮಕ್ಕಳು ದಿನನಿತ್ಯ ಶಿಕ್ಷಣ ಪಡೆಯಬಹುದಾಗಿದೆ.


ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಸ್ಪರ್ಶ ಸಂಸ್ಥೆಯ ಮಕ್ಕಳು (ಚಿತ್ರಕೃಪೆ: ನವೀನ)


'ಸ್ಪರ್ಶ'ದ ಹಿಂದಿನ ಕಥೆ

ಸಂಸ್ಥಾಪಕರಾದ ಗೋಪಿನಾಥ್ ಮೂಲತಃ ಕೋಲಾರ ಜಿಲ್ಲೆಯ ಮಂಚಿಗಾನ ಎಂಬ ಪುಟ್ಟ ಹಳ್ಳಿಯವರು. ನಾಲ್ಕು ಮಕ್ಕಳಿದ್ದ ವಿದ್ಯಾವಂತ ಕುಟುಂಬದ ಕೊನೆಯ ಪುತ್ರನಾಗಿ ಜನಿಸಿದ ಇವರ ಬಾಲ್ಯ ಸಂತೋಷದಿಂದ ಕೂಡಿರಲಿಲ್ಲ. ಕಾರಣ, ಅವರ ತಂದೆ ಮದ್ಯವ್ಯಸನಿಯಾಗಿದ್ದರಿಂದ, ಹಣಕ್ಕಾಗಿ ಕುಟುಂಬದ ಎಲ್ಲ‌ ಆಸ್ತಿಯನ್ನು ಮಾರಿದರು.


ಗೋಪಿನಾಥ್ ಮೂರು ವರ್ಷದವರಿದ್ದಾಗಲೇ ತಮ್ಮ‌ ತಂದೆ‌ ಅವರನ್ನು ಕೈಬಿಟ್ಟಿದ್ದರು, ದಾರಿ ಕಾಣದ ತಾಯಿ ತನ್ನ‌ ಮಕ್ಕಳೊಂದಿಗೆ ಗುಡಿಸಿಲಿನಲ್ಲಿ ವಾಸಿಸಲು ಆರಂಭಿಸಿದರು. ಮೂರು ಹೊತ್ತಿನ ಊಟಕ್ಕಾಗಿ ಮಕ್ಕಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ, ತಾಯಿಯೊಂದಿಗೆ ದುಡಿಯಲು ಆರಂಭಿಸಿದರು. ಗುಡಿಸಲಿನ ಕೊಟ್ಟಿಗೆ ಸ್ವಚ್ಛತೆ ಮಾಡುತ್ತಿದ್ದ ಗೋಪಿನಾಥ್, ಮಾಲೀಕರ ಮಕ್ಕಳು ಶಾಲೆಗೆ ಹೋಗುತ್ತಿದ್ದನ್ನು ನೋಡಿ ತಾನು ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗುತ್ತಿಲ್ಲವಲ್ಲವೆಂದು ಕೊರಗುತ್ತಿದ್ದರಂತೆ.


ಸ್ಪರ್ಶ ಸಂಸ್ಥೆ ಆತೋಜಿಸಿದ್ದ ಆರೋಗ್ಯ ಶಿಬಿರ (ಚಿತ್ರಕೃಪೆ: ಸ್ಪರ್ಶ)

ಮನೆ ಬಿಟ್ಟು ಹೋಗಿದ್ದ ತಂದೆ ಆರು ವರ್ಷಗಳ‌ ನಂತರ ಮರಳಿ ಮನೆಗೆ ಬಂದರು, ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ಆರಂಭಿಸಿದ್ದ ತಂದೆ ಬೇರೊಂದು ಮದುವೆಯಾಗಿದ್ದರು. ವಾಪಾಸ್ಸು ಹೋಗುವಾಗ ತನ್ನೊಡನೆ ಗೋಪಿನಾಥ್‌ನನ್ನು ಕರೆದೊಯ್ದರು. ಮಲತಾಯಿಗೆ ಗೋಪಿನಾಥ್ ಬಗ್ಗೆ ಅತಿಯಾದ ಪ್ರೀತಿಯಿತ್ತು ಹಾಗಾಗಿ ಅವರನ್ನು ಹತ್ತಿರದ ಶಾಲೆಯೊಂದಕ್ಕೆ ಸೇರಿಸಿದರು. ಇದರಿಂದ ಗೋಪಿನಾಥ್‌ರವರ ಜೀವನ‌ ಹೊಸ ತಿರುವು‌ ಪಡೆಯಿತು.


ಹೇಗೋ‌ ಎಂಎಸ್‌ಡಬ್ಲ್ಯು ಪದವಿ ಪಡೆದ ಗೋಪಿನಾಥ್, ಸಮಾನಮನಸ್ಕ ಸ್ನೇಹಿತರೊಂದಿಗೆ 2002ರಲ್ಲಿ ಸೋಷಿಯಲ್ ವರ್ಕರ್ಸ್ ಅಸೋಸಿಯೇಷನ್ ಫಾರ್ ಪೀಪಲ್ ಎಂಬ ಗುಂಪೊಂದನ್ನು ರಚಿಸಿಕೊಂಡರು. ಈ ಸಂಘದ ಮೂಲಕ ನೂರಾರು ರೀತಿಯ ಶಿಕ್ಷಣ ವಂಚಿತ ಮಕ್ಕಳನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೇ ಆರೋಗ್ಯ ತಪಾಸಣಾ ಶಿಬಿರಗಳು, ಶಿಕ್ಷಣದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಮತ್ತು ಸರ್ಕಾರಿ ಶಾಲೆಗಳ ಮಕ್ಕಳಿಗೆ ವ್ಯಕ್ತಿತ್ವ ಅಭಿವೃದ್ಧಿ ತರಗತಿಗಳನ್ನು ಸಹ ಆಯೋಜಿಸಿದರು.


ತದನಂತರ 2004ರಲ್ಲಿ ಬಾಲ‌ ಕಾರ್ಮಿಕ ಪ್ರಕರಣಗಳ ಕುರಿತು ಕಾರ್ಯನಿರ್ವಹಿಸುವ ಪರಸ್ಪರ ಟ್ರಸ್ಟ್‌ಗೆ ಸೇರ್ಪಡೆಯಾದರು. ಸ್ಟೇಟ್ ಅಲಯನ್ಸ್ ಫಾರ್ ಎಜುಕೇಶನ್ ಯೋಜನೆಗೆ ರಾಜ್ಯ ಸಂಯೋಜಕರಾಗಿ ಆಯ್ಕೆಯಾಗುವ ಮೂಲಕ‌ ಗೋಪಿನಾಥ್‌ರವರ ವೃತ್ತಿಜೀವನ ಆರಂಭವಾಯಿತು. ಈ ಕೆಲಸವು ಕರ್ನಾಟಕದಾದ್ಯಂತ ಮೂರು ವರ್ಷಗಳ ಕಾಲ ಪ್ರಯಾಣಿಸಲು ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳ ಸಮಸ್ಯೆಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟಿತು. ಪ್ರತಿ ಮಗುವನ್ನು ಶಾಲೆಗೆ ಕರೆತರಲು ಮತ್ತು ಭಾರತದ ಸಾಮಾನ್ಯ ಶಾಲಾ ವ್ಯವಸ್ಥೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅವರು ಧ್ವನಿ ಎತ್ತಲು ನಿರ್ಧರಿಸಿದರು.


(ಚಿತ್ರಕೃಪೆ: ಸ್ಪರ್ಶ)

ತಮ್ಮ ಕಾರ್ಯದೊತ್ತಡದ ನಡುವೆಯು ಸ್ವಲ್ಪ ಬಿಡುವಿನ ಸಮಯದಲ್ಲಿ‌ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು‌ ಗುರುತಿಸಿ‌ ಅವರನ್ನು‌ ಒಗ್ಗೂಡಿಸಿ ಒಂದು ಗುಡಿಸಿಲಿನಲ್ಲಿ ಅವರಿಗೆ ಮೂರು ತಿಂಗಳದವರೆಗೆ ಶಿಕ್ಷಣ ಜಾಗೃತಿ ಮೂಡಿಸಿದರು. ನಂತರದಲ್ಲಿ‌ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು. ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯವು ಕೇವಲ‌ ಒಬ್ಬರಿಂದ ಬೃಹತ್ ಮಟ್ಟದಲ್ಲಿ ಸಾಗಲು ಸಾಧ್ಯವಿಲ್ಲ‌ ಎಂಬುದನ್ನು ಅರಿತ ಇವರು ತಮ್ಮ ವಿಚಾರಧಾರೆಗಳನ್ನು ತಮ್ಮ ಸ್ನೇಹಿತರಾದ ಕೃಷ್ಣ ಹಾಗೂ ಪತ್ನಿ ಚೈತ್ರ‌ರೊಂದಿಗೆ ಚರ್ಚಿಸಿ ಹಲವು ಹಿತೈಷಿಗಳನ್ನು ಸೇರಿಸಿಕೊಂಡು ತಮ್ಮ ಸ್ಪರ್ಶ ಅಂದರೆ, ನಿರ್ಗತಿಕರನ್ನು ಸ್ಪರ್ಶಿಸುವ ಸಂಸ್ಥೆಯೊಂದನ್ನು ರಚಿಸಿದರು.


ಪ್ರಸ್ತುತ ಸುಮಾರು 2,500 ಕುಟುಂಬಗಳು ಆಹಾರ ಕೊರತೆ ಹಾಗೂ ಜೀವನೋಪಾಯದ ಬಿಕ್ಕಟ್ಟಿನಿಂದ ಪಾರಾಗಿದ್ದಾರೆ. ಅನಾಥರು, ಬಾಲಕಾರ್ಮಿಕರು, ಚಿಂದಿ ಆಯುವವರು ಹಾಗೂ ಭಿಕ್ಷುಕರು ಸೇರಿದಂತೆ 3,000 ಕ್ಕೂ ಹೆಚ್ಚು ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಸುಮಾರು 5,000 ಕೂಲಿ ಕೆಲಸಗಾರರ ಮಕ್ಕಳು ಹಾಗೂ ವಲಸೆಗಾರರ ಶಿಶುಗಳನ್ನು ಪ್ರಾಥಮಿಕ ಕಾಳಜಿ ಕೇಂದ್ರದಲ್ಲಿ ಪೋಷಿಸಲಾಗುತ್ತಿದೆ. ಸುಮಾರು 1,500 ಕ್ಕೂ ಹೆಚ್ಚು ಯುವಕರಿಗೆ ವೃತ್ತಿಪರ ತರಬೇತಿ ನೀಡಿದ್ದು, ಅದರಲ್ಲಿ ಶೇ.70 ರಷ್ಟು ಯುವಕರು ಉದ್ಯೋಗ ಪಡೆದಿದ್ದಾರೆ. ಮಕ್ಕಳ ಹೆಲ್ಪ್‌ಲೈನ್ 1098 ನಿಂದ ಪ್ರತಿವರ್ಷ 700ಕ್ಕೂ ಹೆಚ್ಚು ಅಸಹಾಯಕ ಮಕ್ಕಳನ್ನು ರಕ್ಷಿಸಲಾಗುತ್ತಿದೆ. 2015 ರಿಂದ ಇಲ್ಲಿಯವರೆಗೆ ಸುಮಾರು 54 ಬಾಲ್ಯ ವಿವಾಹ ಪ್ರಕರಣಗಳು ಇವರ ಗಮನಕ್ಕೆ ಬಂದಿದ್ದು, ಅದರಲ್ಲಿ ನಾವು 2016-2017ರಲ್ಲಿ 41 ವಿವಾಹಗಳನ್ನು ನಿಲ್ಲಿಸಿದ್ದಾರೆ.


ಮಕ್ಕಳ ಶ್ರೇಯೋಭಿವೃದ್ಧಿಯತ್ತ ಸ್ಪರ್ಶ

ಮಕ್ಕಳ ಆರೈಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ರಕ್ಷಣಾತ್ಮಕ ವಾತಾವರಣದ ಕಡೆಗೆ ಸ್ಪರ್ಶಾ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ, ನಗರ ಮತ್ತು ಗ್ರಾಮೀಣ ಬೆಂಗಳೂರಿನಾದ್ಯಂತದ ನಮ್ಮ ಅಭಿವೃದ್ಧಿ ಕೇಂದ್ರಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳ ರಕ್ಷಣೆ, ಮಕ್ಕಳ ಆರೈಕೆ, ಮಕ್ಕಳ ಅಭಿವೃದ್ಧಿ, ಮತ್ತು ಯುವ ಕೌಶಲ್ಯ ಅಭಿವೃದ್ಧಿಯತ್ತ ಶ್ರಮಿಸುತ್ತಿದೆ.

ಮಕ್ಕಳ ಧಾಮ

ಇದು ಸ್ಪರ್ಶ ಟ್ರಸ್ಟ್‌ನ ಪ್ರಸುತ್ತದ ಬಹು ಆಯಾಮದ ಯೋಜನೆಯಾಗಿದ್ದು, ಬಾಲಕರ ರಕ್ಷಣೆ, ಆರೈಕೆ, ಶಿಕ್ಷಣ ಹಾಗೂ ವಸತಿ ಒದಗಿಸುವ ವೃತ್ತಿಪರ ಅಭಿವೃದ್ಧಿ ಕೇಂದ್ರದ ಕಾರ್ಯಕ್ರಮವಾಗಿದೆ. 300 ಮಕ್ಕಳ ವೃತ್ತಿಪರ ಅಭಿವೃದ್ಧಿ ಕೇಂದ್ರವಾಗಿ 'ಮಕ್ಕಳ‌ಧಾಮ'ವನ್ನು ಪರಿವರ್ತಿಸಲು ಚಟುವಟಿಕೆಯ ಮೇಲ್ವಿಚಾರಣೆ, ಸಲಹೆಗಾಗಿ ಕಾರ್ಪೋರೇಟ್ ಅಭಿವೃದ್ಧಿ ವಲಯದ ಉನ್ನತ ಮಟ್ಟದ ವೃತ್ತಿಪರರನ್ನು ಹೊಂದಿರುವ ಸಮಿತಿಯೊಂದನ್ನು ರಚಿಸಲಾಗಿದೆ. ದೇಶಕ್ಕಾಗಿ ಯುವ ಉದ್ಯೋಗಿಗಳ ಸಾಮರ್ಥ್ಯ ಹೆಚ್ಚಿಸಿ, ಶಿಸ್ತುಬದ್ಧ ಮತ್ತು ಉತ್ಪಾದಕ ನಾಗರಿಕರನ್ನಾಗಿ ಪರಿವರ್ತಿಸಿ, ಸುಸ್ಥಿರ ಉದ್ಯೋಗಾವಕಾಶಗಳ ಮೂಲಕ ಕುಟುಂಬಗಳನ್ನು ಬೆಂಬಲಿಸುವ ಸಾಮರ್ಥ್ಯ ನೀಡುವ ಉದ್ದೇಶ ಹೊಂದಿದೆ.


ಜಾಯ್ ಆಫ್ ಲರ್ನಿಂಗ್ ಕಾರ್ಯಕ್ರಮದಲ್ಲಿ ಯುವಕ-ಯುವತಿಯರ ಸಂಭ್ರಮ (ಚಿತ್ರಕೃಪೆ: ಸ್ಪರ್ಷ)


ನಿಸರ್ಗ ಗ್ರಾಮ

ಬೀದಿ ಮಕ್ಕಳಿಗೆ ಕೌಶಲ್ಯಭಿವೃದ್ಧಿ ನೀಡುವ ಕೇಂದ್ರವಾಗಿದ್ದು, ಹದಿನೆಂಟು ವರ್ಷದ ವರೆಗಿನ‌ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತದೆ. ಸ್ವಯಂ ಉದ್ಯೋಗಕ್ಕೆ ಪೂರಕ ತರವೇತಿ ನೀಡಲಾಗುತ್ತದೆ.


ಶಿಕ್ಷಣ ಮಿತ್ರ

ಶಿಕ್ಷಣ ವಂಚಿತ ಮಕ್ಕಳಿಗಾಗಿ ಜಾರಿಗೆ ತಂದ ಶಿಕ್ಷಣ ಮಿತ್ರ ಯೋಜನೆಯಡಿ ಆರು ವರ್ಷದಿಂದ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತಿದೆ.


ಮಕ್ಕಳ ಮಿತ್ರ

ಪ್ರತಿದಿನ 25ರಿಂದ 35 ಚಿಂದಿ ಆಯುವ ಮಕ್ಕಳು, ಬಾಲ ಕಾರ್ಮಿಕರು ಮತ್ತು ಅರ್ಧದಲ್ಲಿಯೇ ಶಾಲೆಬಿಟ್ಟ ಮಕ್ಕಳನ್ನು ಪತ್ತೆ ಮಾಡಿ ಆಶ್ರಯ ನೀಡಲಾಗುತ್ತಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.


ಆಪ್ತಮಿತ್ರ

ಗ್ರಾಮೀಣ ಭಾಗಗಳಿಂದ ವಲಸೆ ಬರುವ ನಿರ್ಗತಿಕ ಮಕ್ಕಳಿಂದ ವಯೋವೃದ್ಧರವರೆಗೆ ಆಶ್ರಯತಾಣವಾಗಿದೆ.



ಯುವರ್‌ಸ್ಟೋರಿ ಯೊಂದಿಗೆ ಮಾತನಾಡಿದ, ಸ್ಪರ್ಶ ಸಂಸ್ಥೆಯ ಸ್ವಯಂಸೇವಕರಾದ ನವೀನ್,


"ನಾನು ಸುಮಾರು ಎರಡು ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿಯೂ ಕೊರತೆ ಬಾರದ ಹಾಗೆ ಮಕ್ಕಳನ್ನು ಕಾಳಜಿ‌ಮಾಡುತ್ತೇವೆ. ನಾನು ಉದ್ಯೋಗಿಯಾಗಿದ್ದು ಪ್ರತಿ‌ದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಗರದ ನಾಯಂಡಳ್ಳಿಯಲ್ಲಿರುವ ಸ್ಪರ್ಶ ಕೇಂದ್ರದಲ್ಲಿ ನಾನು ಮಕ್ಕಳಿಗೆ ಪಾಠ ಮಾಡುತ್ತೇನೆ‌. ಇದು ಸಂಪೂರ್ಣ ಉಚಿತ ಸೌಲಭ್ಯವಾಗಿದ್ದು, ಒತ್ತಡದ ಜೀವನದ ಮಧ್ಯೆ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಳೆಯುವುದು ಅತ್ಯಂತ ಖುಷಿಯಾಗಿದೆ ಹಾಗೂ ಇದು‌ ನನ್ನ ಪುಣ್ಯ" ಎಂದರು.


ನಾಯಂಡಹಳ್ಳಿ ಸ್ಪರ್ಶ ಕೇಂದ್ರದ ಮಕ್ಕಳು (ಚಿತ್ರಕೃಪೆ: ನವೀನ)


ಸಂಸ್ಥೆಯ ಬೆನ್ನೆಲುಬು

ಚೈಲ್ಡ್‌ಲೈನ್‌ ಇಂಡಿಯಾ ಪ್ರತಿಷ್ಠಾನ, ಗೋದ್ರೇಜ್‌ ಅಪಾರ್ಟ್‌ಮೆಂಟ್ಸ್‌ ಫ್ಯಾಮಿಲಿ, ಇನ್‌ಫಿನಿಟಿ ಕಂಪ್ಯೂಟರ್‌ ಸೊಲ್ಯೂಷನ್‌, ಎಕ್ಸ್‌ ಕ್ಯಾಲಿಬರ್‌ ಪ್ರತಿಷ್ಠಾನ, ಇನ್ನರ್‌ವ್ಹೀಲ್‌ ಬೆಂಗಳೂರು ಪೂರ್ವ, ಸೀತಾರಾಮ್‌ ಜಿಂದಾಲ್‌ ಪ್ರತಿಷ್ಠಾನ, ಎಎಕ್ಸ್‌ಎ ಬ್ಯುಸಿನೆಸ್‌ ಸರ್ವಿಸ್‌‌ಗಳಂತಹ ಪ್ರತಿಷ್ಠಿತ ಕಂಪನಿಗಳು ಈ ಸಂಸ್ಥೆಯ ಅನುದಾನಿಗಳಾಗಿದ್ದು ನೂರಾರು ಖಾಸಗಿ ವ್ಯಕ್ತಿಗಳು ಈ ಸಂಸ್ಥೆಗೆ ಹಣದ ಬೆಂಬಲ ನೀಡುತ್ತಿದ್ದಾರೆ.


ಬೆಂಬಲ ನೀಡಲು ಬಯಸುವ ದಾನಿಗಳು ಹಣ, ಅಗತ್ಯ ವಸ್ತುಗಳು, ಸ್ವಯಂಸೇವಕರಾಗಿ, ಮಗುವಿನ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಸಹಾಯ ಮಾಡಬಹುದು. ದೂ. ಸಂಖ್ಯೆ- 9902088483


ವೆಬ್‌ಸೈಟ್- www.sparsha.org


ಈ ಬಾರಿಯ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಇಚ್ಛಿಸಿರುವ ಟ್ರಸ್ಟ್ 'ಲಿಟಲ್ ಹ್ಯಾಂಡ್ಸ್' ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ನವೆಂಬರ್ 14 -17 ರವರೆಗೆ ಬೆಂಗಳೂರಿನ, ಎಂ.ಜಿ ರಸ್ತೆಯ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್‌ನಲ್ಲಿ ಮಕ್ಕಳ ಚಿತ್ರಕಲೆಯ ಪ್ರದರ್ಶನವನ್ನು ಏರ್ಪಡಿಸಿದೆ. ಖಾಲಿ ಗೋಡೆಗಳ ಮೇಲೆ ಮಕ್ಕಳ ಪುಟ್ಟ ಕೈಗಳಿಂದ ಚಿತ್ರಬಿಡಿಸಿ, ನಿಮ್ಮ ಸಹಾಯ ಹಸ್ತದೊಂದಿಗೆ ಅವರ ಬಾಳನ್ನು ರಂಗುಗೊಳಿಸಿ ಎಂದು ಕರೆನೀಡಿದೆ.