ಮೇ 3 ವರೆಗೆ ಲಾಕ್‌ಡೌನ್ ವಿಸ್ತರಣೆ, ನಿಯಮಗಳನ್ನು ಬಿಗಿಗೊಳಿಸಲಾಗುವುದು: ನರೇಂದ್ರ ಮೋದಿ
21 ದಿನದ ಲಾಕ್‌ಡೌನ್ ಮಂಗಳವಾರ ಮುಗಿಯುತ್ತಿದ್ದಂತೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಕೊರೊನಾ ವಿರುದ್ಧದ ಯುದ್ಧದಲ್ಲಿ ನಿಯಮಗಳನ್ನು ಇನ್ನೂ ಬಿಗಿಗೊಳಿಸಿದ್ದಾರೆ.
Prashant Hiremath
Tuesday April 14, 2020 , 2 min Read
ಅಂಬೇಡ್ಕರ ಅವರಿಗೆ ನಮನ ಸಲ್ಲಿಸುತ್ತ ಭಾಷಣ ಆರಂಭಿಸಿದ ಮೋದಿ ದೇಶದ ಜನರ ಸಂಯಮಕ್ಕೆ ವಂದಿಸಿ, ಕೊರೊನಾ ತಡೆಗೆ ದೇಶ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ಶ್ಲಾಘಿಸಿದರು.
ಕೊರೊನಾ ತಡೆಗೆ ಮೊದಲೇ ವಿದೇಶದಿಂದ ಬಂದವರಿಗೆ 14 ದಿವಸಗಳ ಐಸೋಲೆಷನ್ ಘೋಷಿಸಲಾಗಿತ್ತು ಮತ್ತು ಯಾವುದೇ ಕೊರೊನ ಪ್ರಕರಣ ದಾಖಲಾಗುವ ಮೊದಲೇ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪ್ರಾರಂಭಸಲಾಗಿತ್ತು. ನಮ್ಮ ಸ್ಥಿತಿಯನ್ನು ಬೇರೆ ದೇಶಗಳೊಂದಿಗೆ ಹೋಲಿಸಿ ನೋಡುವುದು ಉಚಿತವಲ್ಲ. ಸಮಗ್ರ ಮತ್ತು ಸಂಯೋಜಿತ ಕ್ರಮ ತೆಗೆದುಕೊಳ್ಳದಿದ್ದರೆ ಭಾರತದ ಸ್ಥಿತಿ ಗಂಭೀರವಾಗಿರುತ್ತಿತ್ತು ಎಂದರು.
“ಲಾಕ್‌ಡೌನ್ ನ ಲಾಭವು ದೇಶಕ್ಕೆ ಸಿಕ್ಕಿದೆ. ಆರ್ಥಿಕ ದೃಷ್ಟಿಯಿಂದ ಇದು ದುಬಾರಿಯಾಗಿದೆ. ಆದರೆ ಭಾರತೀಯ ನಾಗರಿಕರ ಜೀವ ಮುಖ್ಯವಾಗಿದೆ, ಆದ್ದರಿಂದ ಲಾಕ್ ಡೌನ್ ಅನ್ನು ಮೇ 3 ರ ವರೆಗೂ ವಿಸ್ತರಿಸಲಾಗುವುದು,” ಎಂದರು ಪ್ರಧಾನಿ ಮೋದಿ.
ಈ ನಿಟ್ಟಿನಲ್ಲಿ ಪ್ರಧಾನಿ ಮಾತನಾಡಿದ ಪ್ರಮುಖಾಂಶಗಳು ಇಲ್ಲಿವೆ:
ಹೊಸ ಪ್ರದೇಶದಲ್ಲಿ ವೈರಸ್ ಹರಡದಂತೆ ನೋಡಿಕೊಳ್ಳಬೇಕು. ಹಾಟ್‌ಸ್ಪಾಟ್ ಗಳನ್ನು ಎಚ್ಚರದಿಂದ ನಿರ್ವಹಿಸಬೇಕು, ಅಲ್ಲಿ ನಿಯಮಗಳನ್ನು ಬಿಗಿಗೊಳಿಸಲಾಗುವುದು.
ಹೊಸ ಪ್ರಕರಣವಾಗದಂತೆ ನೋಡಿಕೊಂಡ ಹಾಟ್‌ಸ್ಪಾಟ್‌ಗಳಲ್ಲಿ ನಿಯಮ ಸಡಿಲಗೊಳಿಸುವುದು.
ಹೊರಗಡೆ ಹೋಗುವುದನ್ನು ಇನ್ನೂ ಬಿಗಿಗೊಳಿಸಲಾಗುವುದು.
ಸರ್ಕಾರದಿಂದ ವಿಸ್ತೃತ ಮಾರ್ಗಸೂಚಿ ನೀಡಲಾಗುವುದು.
ರೈತರಿಗೆ ಮತ್ತು ಅತೀ ಕೆಳವರ್ಗದ ಜನರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕಷ್ಟ ಬರದಂತೆ ನೋಡಿಕೊಳ್ಳಲಾಗುವುದು.
“ದೇಶದಲ್ಲಿ ಮೊದಲು ಒಂದೇ ಕೊರೊನಾ ಲ್ಯಾಬ್ ಇತ್ತು, ಈಗ ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡಲಾಗಿದೆ. 600 ಕೋವಿಡ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಈ ಸೌಲಭ್ಯಗಳ ವಿಸ್ತರಣೆ ಮಾಡುವತ್ತ ಕೆಲಸ ಮಾಡಲಾಗುತ್ತಿದೆ,”
ಎಂದ ಪ್ರಧಾನಿ ಧೈರ್ಯದಿಂದ ನಿಯಮ ಪಾಲನೆ ಮಾಡಿ ಕೊರೊನಾ ಸೋಲಿಸೋಣ ಎನ್ನುತ್ತಾ ದೇಶದ ಜನರಿಗೆ 7 ಮುಖ್ಯವಾದ ಮಾತುಗಳನ್ನು ಹೇಳಿದರು.
- ಹಿರಿಯರನ್ನು ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕು.
- ಲಾಕ್ ಡೌನ್ ನಿಯಮ ಪಾಲನೆ ಮಾಡಿ.
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸಿಕೊಳ್ಳಬೇಕಾದದ್ದು ಅಗತ್ಯ, ಅದಕ್ಕಾಗಿ ಆಯುಷ್ಯ ಮಂತ್ರಾಲಯದ ಸೂಚನೆಗಳನ್ನು ಪಾಲನೆ ಮಾಡಿ.
- ಆರೋಗ್ಯ ಸೇತು ಮೊಬೈಲ್ ಆಪ್ ಇನ್ಸ್ಟಾಲ್ ಮಾಡಿ, ಬೇರೆಯವರಿಗೂ ಬಳಸಲು ಹೇಳಿ.
- ಎಷ್ಟಾಗುತ್ತೋ ಅಷ್ಟು ಬಡವರ ಕುಟುಂಬಕ್ಕೆ ಸಹಾಯ ಮಾಡಿ, ಆಹಾರ ನೀಡಿ.
- ಖಾಸಗಿ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಡಿ ಎಂದರು
- ಕೊರೊನ ಯೋಧರಾದ ವೈದ್ಯರು, ನರ್ಸ್ ಮತ್ತು ಪೋಲಿಸರಿಗೆ ಗೌರವ ನೀಡಿ.
7 ಮಾತುಗಳನ್ನು ನಿಷ್ಟೆಯಿಂದ ಪಾಲಿಸಿ ಮತ್ತು ಕೊರೊನಾ ಮಾರಿಯನ್ನು ಹೊಡೆದುಹಾಕಲು ಸಾಥ್ ನೀಡಿ ಎನ್ನುತ್ತ ತಮ್ಮ ಮಾತನ್ನು ಮುಗಿಸಿದರು ಪ್ರಧಾನಿ.