ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ ಬುಡಕಟ್ಟು ಮಕ್ಕಳಿಗೆ ಭರವಸೆಯ ಬೆಳಕಾಗಿರುವ ಕೇಂದ್ರೀಕೃತ ಅಡಿಗೆಮನೆಗಳು
ಕೆಲವು ವರ್ಷಗಳ ಹಿಂದೆ, ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲಿ ಸಾವನ್ನಪ್ಪುತಿದ್ದ ಕಾರಣ ಮಹಾರಾಷ್ಟ್ರದ ಬುಡಕಟ್ಟು ಪ್ರದೇಶವು ಕುಖ್ಯಾತವಾಗಿತ್ತು. ಆದರೆ ಈಗ ಸರ್ಕಾರ ಮತ್ತು ಇತರ ಸಂಸ್ಥೆಗಳ ಸಮಯೋಚಿತ ಪ್ರಯತ್ನದಿಂದಾಗಿ ಈ ಚಿತ್ರಣ ಬದಲಾಗುತ್ತಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್‌ಪುರಿ ತಾಲ್ಲೂಕಿನ ಮುಂಡೇಗಾಂವ್‌ನಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ (ಇಎಂಆರ್‌ಎಸ್) 8ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಮನೀಶಾ ಭೈರವ್, ನೆಲದ ಮೇಲೆ ಚಕ್ಕಂಬಕ್ಕಲ ಹಾಕಿಕೊಂಡು ಕುಳಿತು ಚಪಾತಿ, ಪಲ್ಯ, ಅನ್ನ-ಸಾರು ತಿನ್ನತ್ತಾ ಹೇಳುತ್ತಾಳೆ,
“ಇಲ್ಲಿ ಬಡಿಸುವ ಆಹಾರವನ್ನು ನಾನು ಇಷ್ಟಪಡುತ್ತೇನೆ. ಇದು ತುಂಬಾ ಆರೋಗ್ಯಕರವಾಗಿರುತ್ತದೆ. ನಮ್ಮ ಶಿಕ್ಷಕರು ಹೆಚ್ಚು ತರಕಾರಿಗಳನ್ನು ತಿನ್ನಲು ಹೇಳುತ್ತಾರೆ.”
ಮನೀಷಾಳ ಪೋಷಕರು ರೈತರಾಗಿದ್ದಾರೆ. ಅವಳು ತಾನು ಒಂದು ದಿನ ಎಂಜಿನಿಯರ್ ಆಗಬೇಕೆಂಬ ಮಹದಾಸೆಯನ್ನು ಹೊಂದಿದ್ದಾಳೆ. ಅವಳು ಮಧ್ಯಾಹ್ನದ ಊಟವನ್ನು ಮುಗಿಸಿ ಅವಳಿಗಾಗಿ ಆಟದ ಮೈದಾನದಲ್ಲಿ ಕಾಯುತ್ತಿರುವ ಅವಳ ಸ್ನೇಹಿತರಾದ ಲತಾ ಸಾಸಾನೆ ಮತ್ತು ಹೇಮಂತ್ ಖಡೆಯವರೊಂದಿಗೆ ಸೇರಿಕೊಂಡು ಆಟವಾಡುತ್ತಾಳೆ.
ಈ ಯುವ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ ಮತ್ತು ಕೆಲವು ವರ್ಷಗಳ ಹಿಂದೆ ಅವರು ಅವರ ಪೋಷಕರು ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬುಡಕಟ್ಟು ಪ್ರದೇಶದ ನಿರ್ಮಾಣ ಸ್ಥಳಗಳಲ್ಲಿ ವಾಸಿಸುತ್ತಿದ್ದರು ಎಂಬ ಸತ್ಯವನ್ನು ನಂಬುವುದು ಸಾಧ್ಯವಿಲ್ಲ ಎನಿಸುತ್ತದೆ.
ಇಂದು, ಅವರು ಅಶ್ರಮಶಾಲೆ ಎಂಬ ಸರ್ಕಾರಿ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡುತಿದ್ದಾರೆ. ಅಲ್ಲಿ ರಾಜ್ಯ ಬುಡಕಟ್ಟು ಅಭಿವೃದ್ಧಿ ಇಲಾಖೆಯು ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಟಾಟಾ ಟ್ರಸ್ಟ್ ಮತ್ತು ಅಕ್ಷಯ ಪಾತ್ರೆ ಯೋಜನೆಗಳ ಸಹಯೋಗದೊಂದಿಗೆ ನಡೆಸುವ ಕೇಂದ್ರೀಕೃತ ಅಡಿಗೆಮನೆಗಳ ಮೂಲಕ ಪೌಷ್ಠಿಕ ಆಹಾರವನ್ನೂ ನೀಡುತ್ತದೆ.
ಮಹಾರಾಷ್ಟ್ರದ ಪಾಲ್ಘರ್ ಮತ್ತು ನಾಸಿಕ್ ಜಿಲ್ಲೆಯಲ್ಲಿ ಪೌಷ್ಠಿಕ ಆಹಾರದ ಅವಶ್ಯಕತೆ ಬಹಳಷ್ಟು ಇದೆ. ಈ ಪ್ರದೇಶಗಳಲ್ಲಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರು ಆದಾಯ ಗಳಿಕೆ ಮತ್ತು ಜೀವನೋಪಾಯಕ್ಕಾಗಿ ಕೃಷಿ ಮತ್ತು ಅರಣ್ಯ ಸಂಪನ್ಮೂಲಗಳನ್ನು ಅವಲಂಬಿಸಿದ್ದಾರೆ.
ಕೃಷಿಯಿಂದ ಅವರಿಗೆ ಅವರ ಪ್ರಧಾನ ಆಹಾರಗಳಾದ ಅಕ್ಕಿ, ರಾಗಿ ಮತ್ತು ದ್ವಿದಳ ಧಾನ್ಯಗಳು ದೊರೆಯುತ್ತವೆ. ಮತ್ತು ಕಾಡುಗಳು ಅದರ ಸಮೃದ್ಧ ವೈವಿಧ್ಯತೆಯು ವಿವಿಧ ಗೆಡ್ಡೆಗಳು, ಹಣ್ಣುಗಳು, ಎಲೆಗಳು ಮತ್ತು ಹೂವುಗಳನ್ನು ಒದಗಿಸಿತ್ತವೆ. ಆದರೂ ಕೂಡ ಈ ಪ್ರದೇಶದಲ್ಲಿನ ಬರಗಾಲ ಮತ್ತು ಸಂಪನ್ಮೂಲಗಳ ಕೊರತೆಗಳು ಬೆಳೆಗಳ ಇಳುವರಿಯನ್ನು ಕಡಿಮೆ ಮಾಡುತ್ತವೆ. ಇದು ಅಲ್ಲಿನ ಜನರ ಆಹಾರ ಸೇವನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯುಂಟು ಮಾಡುತ್ತದೆ.
"ಗ್ರಾಮೀಣ ಪ್ರದೇಶದ ದುರ್ಬಲ ಸಮುದಾಯಗಳಿಗೆ ಪೌಷ್ಟಿಕ ಆಹಾರದ ಕೊರತೆಯಿದೆ ಮತ್ತು ಈ ಅಪೌಷ್ಟಿಕತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಅವರಿಗೆ ಸರಿಯಾದ ಉಪಚಾರ ದೊರೆಯುತ್ತಿಲ್ಲ” ಎಂದು ಟಾಟಾ ಟ್ರಸ್ಟ್‌ನ ಹಿರಿಯ ಸಲಹೆಗಾರ ಬುರ್ಜಿಸ್ ಎಸ್ ತಾರಾಪೊರೆವಾಲಾ ಹೇಳುತ್ತಾರೆ.
ಕೇಂದ್ರ ಸರ್ಕಾರದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಕಾರ್ಯಕ್ರಮದ ಅನುಷ್ಠಾನದ ಜೊತೆಗೆ ಅಪೌಷ್ಟಿಕತೆಯನ್ನು ನಿವಾರಿಸುವ ತುರ್ತು ಅಗತ್ಯವನ್ನು ಮನಗಂಡ ಮಹಾರಾಷ್ಟ್ರ ಸರ್ಕಾರವು 2015 ರಲ್ಲಿ ಅನೇಕ ಸಂಸ್ಥೆಗಳ ಸಹಯೊಗದೊಂದಿಗೆ ಅನ್ನಪೂರ್ಣ ಕಿಚನ್ ಕೇಂದ್ರವನ್ನು ಪ್ರಾರಂಭಿಸಿತು. ಸರ್ಕಾರ ನಡೆಸುವ ವಸತಿ ಶಾಲೆಗಳ ಮಕ್ಕಳಲ್ಲಿ ಇರುವ ರಕ್ತಹೀನತೆ, ಅಪೌಷ್ಟಿಕತೆಗಳನ್ನು ಹೋಗಲಾಡಿಸಲು ಅವರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಾರಂಭದಿಂದಲೂ, ಈ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಾದ ಪಾಲ್ಘರ್ ಮತ್ತು ಮಹಾರಾಷ್ಟ್ರದ ನಾಸಿಕ್ ಪ್ರದೇಶಗಳಲ್ಲಿ ಮಧ್ಯಾಹ್ನದ ಊಟ ಯೋಜನೆಯೊಂದಿಗೆ ಸೇರಿಸಲಾಗಿದೆ. ಇಂದು ಕಾಂಬಲ್‌ಗಾಂವ್ (ಪಾಲ್ಘರ್) ಮತ್ತು ಮುಂಡೇಗಾಂವ್(ನಾಸಿಕ್)ನಲ್ಲಿ ಒಂದೊಂದು ಅಡಿಗೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಇವು 52 ಶಾಲೆಗಳ 22,000 ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುತ್ತಿವೆ.
"ಪೌಷ್ಠಿಕ ಆಹಾರವನ್ನು ನೀಡುವ ಮೂಲಕ, ನಾವು ಬುಡಕಟ್ಟು ಸಮುದಾಯದ ಶಾಲೆಗೆ ಹೋಗುವ ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನು ನಿವಾರಿಸುತಿದ್ದೇವೆ. ಈ ಎರಡು ಯೋಜನೆಗಳ ಯಶಸ್ಸನ್ನು ಗಮನಿಸಿದರೆ, ಮುಂದಿನ ಎರಡು ವರ್ಷಗಳಲ್ಲಿ, ಅಂದರೆ 2020ರ ವೇಳೆಗೆ ಅಪೌಷ್ಟಿಕತೆ ಮುಕ್ತ ಮಹಾರಾಷ್ಟ್ರದ ನಮ್ಮ ಗುರಿಯನ್ನು ಯಶಸ್ವಿಯಾಗಿ ಮುಟ್ಟುತ್ತೇವೆ” ಎಂದು ಬುಡಕಟ್ಟು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ರಾಜಗೋಪಾಲ್ ದೇವರಾ ಹೇಳುತ್ತಾರೆ.
1,108 ಆಶ್ರಮ ಶಾಲೆಗಳು ಮತ್ತು ಮಹಾರಾಷ್ಟ್ರದ 490 ಹಾಸ್ಟೆಲ್‌ಗಳಲ್ಲಿ ಕಲಿಯುತ್ತಿರುವ ಸುಮಾರು ಆರು ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಬುಡಕಟ್ಟು ಅಭಿವೃದ್ಧಿ ಇಲಾಖೆ (ಟಿಡಿಡಿ), ಮುಂಡೇಗಾಂವ್ ನಾಸಿಕ್ ಜಿಲ್ಲೆಯ ಇಂಗ್ಲೀಷ್ ಮಾಧ್ಯಮ ವಸತಿ ಶಾಲೆ ಮತ್ತು ಕಂಬಲ್ಗಾಂವ್ ಪಾಲ್ಘರ್ ಜಿಲ್ಲೆಯ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಪ್ರಾಯೋಗಿಕತೆಯ ಆಧಾರದ ಮೇಲೆ 'ಅನ್ನಪೂರ್ಣ' ಎಂಬ ಕೇಂದ್ರೀಕೃತ ಅಡುಗೆ ಯೋಜನೆಯನ್ನು ಪ್ರಾರಂಭಿಸಿತು.
ಸವಾಲುಗಳನ್ನು ನಿವಾರಿಸುವುದು
"ಕಳಪೆ ಪೌಷ್ಠಿಕಾಂಶವು ಅನೇಕ ಕಾರಣಗಳಿಂದಾಗಿ ಉಂಟಾಗುತ್ತದೆ. ಮುಖ್ಯವಾಗಿ, ಅಸಮರ್ಪಕ ಆಹಾರ ಸೇವನೆ, ಸರಿಯಾದ ಆರೋಗ್ಯ ಸೇವೆಗಳು ಲಭ್ಯವಿಲ್ಲದಿರುವುದು, ಅನಾರೋಗ್ಯಕರ ವಾತಾವರಣದಲ್ಲಿ ವಾಸಿಸುವುದು ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಆರೈಕೆಯಲ್ಲಿ ಅಸಮರ್ಪಕತೆ ಮುಂತಾದ ಅಂಶಗಳು ಅಪೌಷ್ಟಿಕತೆಗೆ ಕಾರಣವಾಗಬಹುದು, ಇದರ ಪರಿಣಾಮಗಳೇನಂದರೆ ಕುಂಠಿತ ಬೆಳವಣಿಗೆ (ವಯಸ್ಸಿಗೆ ಕಳಪೆ ಎತ್ತರ) ಮತ್ತು ಕಡಿಮೆ ತೂಕ (ವಯಸ್ಸಿಗೆ ತಕ್ಕನಾದ ತೂಕವಿಲ್ಲದಿರುವುದು)” ಎಂದು ಟಾಟಾ ಟ್ರಸ್ಟ್‌ಗಳ ಮುಖ್ಯ ಆಹಾರ ತಜ್ಞ ಟಿ ಮಧುಸೂಧನ್ ರಾವ್ ಹೇಳುತ್ತಾರೆ.
ಬುಡಕಟ್ಟು ಅಭಿವೃದ್ಧಿ ಇಲಾಖೆ ಕೇಂದ್ರ ಅಡಿಗೆಮನೆಗಳಿಗೆ ಸೂಕ್ತ ಸ್ಥಳಗಳನ್ನು ಗುರುತಿಸುವಲ್ಲಿ ಸಹಾಯ ಮಾಡಿದೆ ಮತ್ತು ಮೂಲಸೌಕರ್ಯ, ಮಾನವಸಂಪನ್ಮೂಲಗಳ (ಅಡುಗೆಯವರು, ಸಹಾಯಕರು ಮತ್ತು ಭದ್ರತಾ ಸಿಬ್ಬಂದಿ) ಮತ್ತು ಸಾಮಾನ್ಯ ಖರ್ಚುಗಳ ಜವಾಬ್ದಾರಿ ನಿಭಾಯಿಸಿದೆ. ಟಾಟಾ ಟ್ರಸ್ಟ್ ಮತ್ತು ಅಕ್ಷಯ ಪಾತ್ರೆಗಳು ವಿವಿಧ ಸೌಲಭ್ಯಗಳ ವಿನ್ಯಾಸ, ತಳಮಟ್ಟದ ಅಧ್ಯಯನಗಳು, ಸ್ಥಳಿಯ ತಾಂತ್ರಿಕ ಮತ್ತು ಗುಣಮಟ್ಟದ ವ್ಯವಸ್ಥಾಪನಾ ಬೆಂಬಲ ತಂಡಗಳನ್ನು ರಚಿಸಲು ಸಹಾಯ ಮಾಡಿವೆ.
ಸುಸ್ಥಿರ ಮಾದರಿಯ ಕೇಂದ್ರೀಕೃತ ಅಡುಗೆಮನೆ
ಈ ಅಡಿಗೆಮನೆಗಳ ಮೂಲಕ, ಪ್ರತಿದಿನ 20,000 ಮಕ್ಕಳಿಗೆ ಸಂಸ್ಥೆಯು ಮೂರು ಬಾರಿ ಆರೋಗ್ಯಕರ ಮತ್ತು ಪೌಷ್ಠಿಕ ಊಟ ಮತ್ತು ತಿಂಡಿಯನ್ನು ನೀಡುತ್ತದೆ. ಒಂದು ಅಡಿಗೆಮನೆ 60,000 ಊಟಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
"ಹೆಚ್ಚುವರಿ ಸಬ್ಸಿಡಿಯನ್ನು ಅವಲಂಬಿಸದೆ, ಈ ಮಾದರಿಯು ಸುಸ್ಥಿರವಾದ ಯೋಜನೆಯಾಗಿದೆ. ಪ್ರತಿ ಕೇಂದ್ರ ಅಡುಗೆಮನೆಗೆ 5 ಕೋಟಿ ರೂಪಾಯಿ ಆರಂಭಿಕ ಬಂಡವಾಳ ಬೇಕಾಗುತ್ತದೆ. ಸರ್ಕಾರವು ತನ್ನ ಬಜೆಟ್‌ಗೆ ಅನುಗುಣವಾಗಿ ವಾರ್ಷಿಕ 9 ಕೋಟಿ ರೂ. ಗಳಿಂದ 10 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಡುತ್ತದೆ. ಎರಡನೆಯದಾಗಿ, ಈ ಕೇಂದ್ರೀಕೃತ ಅಡಿಗೆಮನೆಗಳು ಹೆಚ್ಚು ದೂರದಲ್ಲಿರುವ ಸ್ಥಳಗಳಿಗೂ ತಮ್ಮ ಸೇವೆಯನ್ನು ನೀಡಬಲ್ಲವಾಗಿವೆ. ಪ್ರತಿಯೊಂದು ಅಡುಗೆಮನೆಯು 70 ಕಿ.ಮೀ. ವರೆಗಿನ ಶಾಲೆಗಳಿಗೆ ಸೇವೆ ನೀಡುತ್ತದೆ,” ಎಂದು ಮಧುಸೂಧನ್ ಹೇಳುತ್ತಾರೆ.
ಪ್ರತಿ ಕೇಂದ್ರ ಅಡುಗೆಮನೆಯಲ್ಲಿ 600 ಲೀಟರ್ ಸಾಮರ್ಥ್ಯದ ನಾಲ್ಕು ಅನ್ನ ಬೇಯಿಸುವ ಹಂಡೆಗಳು ಮತ್ತು 1,200 ಲೀಟರ್ ಸಾಮರ್ಥ್ಯದ ಸಾಂಬಾರು ತಯಾರಿಸುವ ಎರಡು ಹಂಡೆಗಳನ್ನು ಅಳವಡಿಸಲಾಗಿದೆ.
ದೂರದ ಹಳ್ಳಿಗಳಲ್ಲಿ ಬೆಳೆದಿರುವ ಅನೇಕ ವಿದ್ಯಾರ್ಥಿಗಳಿಗೆ ಇಲ್ಲಿ ಬಡಿಸುವ ಆಹಾರದ ಪರಿಚಯವಿರುವುದಿಲ್ಲ. ಅಕ್ಟೋಬರ್ 2017 ರಲ್ಲಿ ಉಪಾಹಾರಕ್ಕಾಗಿ ಇಡ್ಲಿ ಮತ್ತು ಸಾಂಬಾರ್ ಅನ್ನು ಬಡಿಸಲು ಪ್ರಾರಂಭಿಸಿದಾಗ ಹೆಚ್ಚಿನ ವಿದ್ಯಾರ್ಥಿಗಳು ಈ ಆಹಾರವನ್ನು ಮೊದಲು ನೋಡಿರದ ಕಾರಣ ಅದನ್ನು ಮುಟ್ಟಲು ಹಿಂಜರಿಯುತ್ತಿದ್ದರು ಎಂದು ನಾಸಿಕ್ ಮತ್ತು ಪಾಲ್ಘರ್ ಅಡಿಗೆಮನೆಗಳ ಉಸ್ತುವಾರಿಯಾದ ಟಾಟಾ ಟ್ರಸ್ಟ್ಸ್ ಕಾರ್ಯನಿರ್ವಾಹಕ ಮನೋಜ್ ಕುಲಕರ್ಣಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.
“ಅವರು ಸಾಂಬಾರ್ ಕುಡಿಯುತ್ತಿದ್ದರು ಆದರೆ ಇಡ್ಲಿಗಳನ್ನು ಮುಟ್ಟುತ್ತಿರಲಿಲ್ಲ. ಇದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದ್ದು ಪೌಷ್ಟಿಕವಾದ ಮತ್ತು ಆರೋಗ್ಯಕ್ಕೆ ಒಳ್ಳೆಯ ಆಹಾರವಾಗಿದೆ ಎಂದು ನಾನು ಅವರಿಗೆ ಹೇಳಬೇಕಾಯಿತು ”ಎಂದು ಅವರು ಹೇಳುತ್ತಾರೆ.
ಪ್ರಸ್ತುತ, ಒಂದು ಅಡುಗೆಮನೆಯು ಈ ಶಾಲೆಯಲ್ಲಿರುವ 3,500 ವಿದ್ಯಾರ್ಥಿಗಳು ಮತ್ತು 50 ಕಿ.ಮೀ ವ್ಯಾಪ್ತಿಯ ಆಶ್ರಮ ಶಾಲೆಗಳು ಸೇರಿದಂತೆ ಇತರ ಒಂಬತ್ತು ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸಬಲ್ಲದಾಗಿದೆ.
ಯೋಜನೆಯ ಪರಿಣಾಮ
ಡಿಸೆಂಬರ್ 2017 ರಲ್ಲಿ ಮಹಾರಾಷ್ಟ್ರದ ಎರಡು ಜಿಲ್ಲೆಗಳ ಕೇಂದ್ರೀಕೃತ ಅಡಿಗೆಮನೆ (ಅನ್ನಪೂರ್ಣ) ಮತ್ತು ಸರ್ಕಾರಿ ಬುಡಕಟ್ಟು ವಸತಿ ಶಾಲೆಗಳಲ್ಲಿನ ಸಾಮಾನ್ಯ ಅಡಿಗೆಮನೆಗಳನ್ನು ಹೋಲಿಸಿ ಮಾಡಿದ ಅಧ್ಯಯನವು ಕೇಂದ್ರೀಕೃತ ಅಡಿಗೆಮನೆಗಳ ಮೂಲಕ ಪೌಷ್ಠಿಕ ಆಹಾರವನ್ನು ನೀಡುವುದರಿಂದ ಕಡಿಮೆ ತೂಕದ ಮತ್ತು ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣದಲ್ಲಿ ಶೇಕಡಾವಾರು ಇಳಿಕೆಯಾಗಿದೆ ಎಂಬುದನ್ನು ದೃಢಪಡಿಸಿದೆ.
"ಕೇಂದ್ರೀಕೃತ ಅಡಿಗೆಮನೆಗಳು ಪೌಷ್ಠಿಕಾಂಶಭರಿತ ಉತ್ತಮ ಗುಣಮಟ್ಟದ ಆರೋಗ್ಯಕರವಾದ ಊಟವನ್ನು ಒದಗಿಸುತ್ತವೆ. ಸರ್ಕಾರಿ ಬುಡಕಟ್ಟು ವಸತಿ ಶಾಲೆಗಳ ಕೇಂದ್ರೀಕೃತ ಮತ್ತು ಸ್ಥಳೀಯ ಅಡಿಗೆಮನೆಗಳ ಮೂಲಕ ನಿಯಮಿತ ಪೌಷ್ಠಿಕ ಆಹಾರವನ್ನು ಒದಗಿಸುವ ಯೋಜನೆಯು ಬುಡಕಟ್ಟು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಮಹತ್ವದ ಯೋಜನೆಯಾಗಿದೆ” ಎಂದು ಮುಂಬೈನ ಯುನಿಸೆಫ್‌ನ ರಾಜ್ಯ ಸಲಹೆಗಾರ್ತಿ ಮತ್ತು ಅಧ್ಯಯನದ ಲೇಖಕಿ ದೇವಿಕಾ ದೇಶಮುಖ್ ಹೇಳುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕಳೆದ ಎರಡು ವರ್ಷಗಳಿಂದ ಅಪೌಷ್ಟಿಕತೆಯಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಕುಸಿಯುತ್ತಿದೆ. 2016-17ರಲ್ಲಿ ಆರು ವರ್ಷದೊಳಗಿನ 315 ಮಕ್ಕಳು ಅಪೌಷ್ಟಿಕತೆಯಿಂದಾಗಿ ಸಾವಿಗೆ ತುತ್ತಾದರು. ಅಂದಿನಿಂದ, ಈ ದುರಂತ ಸಾವುಗಳಲ್ಲಿ ಸಂಖ್ಯೆ ಕಡಿಮೆಯಾಗಿದೆ. 2017-18ರಲ್ಲಿ 248 ಮತ್ತು 2018-19 ರಲ್ಲಿ 189 ಅಪೌಷ್ಟಿಕತೆಗೆ ಸಂಬಂಧಿಸಿದ ಸಾವು ಸಂಭವಿಸಿವೆ. ಅನೇಕ ಸಂಸ್ಥೆಗಳ ಸಹಯೋಗದೊಂದಿಗೆ ಸರ್ಕಾರವು ಪ್ರಾರಂಭಿಸಿದ ಹಲವಾರು ಯೋಜನೆಗಳಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಅಂಗನವಾಡಿ ಕೇಂದ್ರಗಳ ನವೀಕರಣ ಮತ್ತು ಪೌಷ್ಠಿಕಾಂಶ ಸುಧಾರಣಾ ಯೋಜನೆಯನ್ನು ಬಲಪಡಿಸುವುದು ಇವುಗಳಲ್ಲಿ ಸೇರಿವೆ.
ಮುಂದಿನ ಯೋಜನೆ
ಈ ಮಾದರಿಯ ಯೋಜನೆಗಳನ್ನು ಇನ್ನಷ್ಟು ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಉತ್ಸುಕವಾಗಿದೆ. ಅನ್ನಪೂರ್ಣ ಕೇಂದ್ರೀಕೃತ ಅಡುಗೆಮನೆಗಳನ್ನು ಜನರಲ್ ಮಿಲ್ಸ್ ಇಂಡಿಯಾದಂತಹ ಕಾರ್ಪೊರೇಟ್ ಸಂಸ್ಥೆಗಳು ಬೆಂಬಲಿಸುತ್ತಿವೆ. ಇವು ಈ ಕೇಂದ್ರ ಅಡಿಗೆಮನೆಗಳಿರುವ ಆಶ್ರಮಶಾಲೆಗಳಲ್ಲಿ ಪೌಷ್ಠಿಕಾಂಶಭರಿತ ಆಹಾರದ ಅವಶ್ಯಕತೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಅಲ್ಲದೆ ತಮ್ಮ ಪರಿಣತಿಯನ್ನು ಉಪಯೋಗಿಸಿಕೊಂಡು ತರಬೇತಿ ಕಾರ್ಯಕ್ರಮಗಳ ಮೂಲಕ ಅಡಿಗೆಮನೆಗಳ ಪ್ರಕ್ರಿಯೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಸಹಾಯ ಮಾಡುತ್ತವೆ. ಇಂಡಿಯನ್ ಹೊಟೇಲ್ ಲಿಮಿಟೆಡ್ (ತಾಜ್ ಗ್ರೂಪ್) ತನ್ನ ಬಾಣಸಿಗರ ಮೂಲಕ ಪಾಕವಿಧಾನಗಳನ್ನು ಪ್ರಮಾಣೀಕರಿಸಲು ಸಹಾಯ ಮಾಡಿದೆ.
"ಸಮೃದ್ಧ ಪೌಷ್ಠಿಕಾಂಶಭರಿತ ಆಹಾರದ ಮೂಲಕ ದೇಶದಲ್ಲಿ ಸೂಕ್ತವಾದ ಪೌಷ್ಠಿಕಾಂಶದ ಮಾನದಂಡಗಳನ್ನು ಮತ್ತು ಶಿಕ್ಷಣ, ನೈರ್ಮಲ್ಯ, ಬಡತನ ನಿವಾರಣೆ, ಆರೋಗ್ಯ ಇತ್ಯಾದಿಳಿಗೆ ಸಂಬಂಧಿಸಿದ ಸೂಕ್ತ ಯೋಜನೆಗಳನ್ನು ರೂಪಿಸುವುದು ದೀರ್ಘಕಾಲೀನ ಪರಿಹಾರವಾಗಿದೆ" ಎಂದು ಮಧುಸೂಧನ್ ಹೇಳುತ್ತಾರೆ.
ಪೌಷ್ಠಿಕಾಂಶದ ಸುರಕ್ಷತೆಗಾಗಿ ಈ ಬಹುಮುಖಿ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಭಾರತದ ಆಹಾರ ಮತ್ತು ಆರೋಗ್ಯ ಪರಿಸರ ವ್ಯವಸ್ಥೆಯ ಪಾಲುದಾರರ ಸಹಯೋಗದೊಂದಿಗೆ ಕೆಲಸ ಮಾಡುವ ಮೂಲಕ ಸರ್ಕಾರವು ದೇಶದ ಭವಿಷ್ಯವಾಗಿರುವ ಕಡುಬಡವರ ಮಕ್ಕಳ ಜೀವನದಲ್ಲಿ ದೊಡ್ಡ ಪ್ರಮಾಣದ ಸುಸ್ಥಿರ ಪರಿಣಾಮವನ್ನು ಸೃಷ್ಟಿಸಿ ಅವರ ಉನ್ನತಿಯನ್ನು ಸಾಧಿಸಬಹುದಾಗಿದೆ.