ಜಪಾನಿ ಕಲೆ ಮಿಯಾವಾಕಿ ವಿಧಾನದ ಮೂಲಕ ಗಿಡ ಬೆಳೆಸಿ ನಗರವನ್ನು ಹಸಿರಾಗಿಸುವ ಕೆಲಸ ಮಾಡುತ್ತಿದ್ದಾರೆ ಅಫೊರೆಸ್ಟ್‌ನ ಸಂಸ್ಥಾಪಕರಾದ ಈ ಇಂಜಿನಿಯರ್.
ಅಫೊರೆಸ್ಟ್‌ನ ಸಂಸ್ಥಾಪಕ ಶುಭೇಂದು ಶರ್ಮಾರವರು ಜಪಾನಿ ಕಲೆ ‘ಮಿಯಾವಾಕಿ’ ವಿಧಾನದ ಮೂಲಕ ಗಿಡ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ. ಇದು ಸಾಂಪ್ರದಾಯಿಕ ವಿಧಾನಕ್ಕಿಂತ ಹತ್ತು ಪಟ್ಟು ವೇಗವಾಗಿ ಕಾಡನ್ನು ಬೆಳೆಸಲು ಸಹಾಯಕವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಿದೆ. ಬದಲಾಗುತ್ತಿರುವ ಸಂದರ್ಭದಲ್ಲಿ, ಇದು ಮೂಲ ಸೌಕರ್ಯ ಕೇಂದ್ರಿತವಾಗಿದೆ. ಜನಸಂಖ್ಯೆ ಹೆಚ್ಚುತ್ತಿರುವಂತೆ ಕೃಷಿ ಭೂಮಿ ಕಾಂಕ್ರೀಟ್ ನಗರಗಳಾಗಿ ಪರಿವರ್ತನೆಗೊಂಡಿವೆ.
ಆದರೆ, ಚಿಂತನೆಗಳು ಬದಲಾಗುತ್ತಿವೆ. ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಅರಣ್ಯವನ್ನು ಪುನಃ ಸ್ಥಾಪಿಸಲು ಪರಿಸರ ಪ್ರೇಮಿಗಳು ಮತ್ತು ಸಂಸ್ಥೆಗಳು ಶ್ರಮಿಸುತ್ತಿವೆ. ಅಂತಹವರಲ್ಲಿ ಬೆಂಗಳೂರು ಮೂಲದ ಅಫೊರೆಸ್ಟ್‌ನ ಸಂಸ್ಥಾಪಕ ಶುಭೇಂದು ಶರ್ಮಾ ಸಹ ಒಬ್ಬರು. ಕ್ಷೀಣಿಸುತ್ತಿರುವ ಕಾಡನ್ನು ಪುನಃ ಸ್ಥಾಪಿಸುವ ಪ್ರಯತ್ನದಲ್ಲಿ ಇವರು ತೊಡಗಿಕೊಂಡಿದ್ದಾರೆ. ಇವರ ತಂಡವು ಜಪಾನಿನ ಮಿಯಾವಾಕಿ ವಿಧಾನ ಮೂಲಕ ಖಾಲಿಯಿರುವ ಚಿಕ್ಕ ಚಿಕ್ಕ ಪ್ರದೇಶಗಳಲ್ಲಿ ಗಿಡ ಬೆಳೆಸುವ ಕೆಲಸ ಮಾಡುತ್ತಿದೆ.
ಈ ವಿಧಾನದಿಂದ ಹತ್ತು ಪಟ್ಟು ವೇಗವಾಗಿ ಕಾಡನ್ನು ಬೆಳೆಸಬಹುದೆಂದು ಶುಭೇಂದು ಹೇಳುತ್ತಾರೆ. ಕಡಿಮೆ ಸಮಯದಲ್ಲಿ ಅಂದರೆ ಕೇವಲ ಹತ್ತೇ ವರ್ಷಗಳಲ್ಲಿ ಕಳೆದ ನೂರು ವರ್ಷಗಳ ಹಿಂದೆ ಇದ್ದಂತಹ ಕಾಡನ್ನು ಮರಳಿ ಕಾಣಬಹುದು.
ಎಡೆಕ್ಸ್ ಲೈವ್‌ನೊಂದಿಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ,
“ನಮ್ಮಲ್ಲಿ 14 ಪ್ರಮುಖ ತಂಡಗಳಿವೆ ಅವುಗಳಲ್ಲಿ ಎಂಟು ತಂಡಗಳು ಕ್ಷೇತ್ರದಲ್ಲಿದ್ದುಕೊಂಡೇ ಕೆಲಸ ಮಾಡುತ್ತವೆ. ನಾವು ದೆಹಲಿ, ಬೆಂಗಳೂರು ಮತ್ತು ಜೋಧ್ಪುರದಲ್ಲಿ ಕೇಂದ್ರಗಳನ್ನು ತೆರೆದಿದ್ದೇವೆ, ಆದರೆ, ದೇಶ ವಿದೇಶದಲ್ಲಿರುವ ನಮ್ಮ ಕೇಂದ್ರಗಳಿಗೆ ಭೇಟಿ ನೀಡುತ್ತೇವೆ. ಸದ್ಯ, ಜಮ್ಮು ಕಾಶ್ಮೀರದಲ್ಲಿ ನಮ್ಮ ಕೆಲಸ ನಡೆಯುತ್ತಿದ್ದು, ನಮ್ಮ ಮುಂದಿನ ಯೋಜನೆಯನ್ನು ಲೆಬನಾನ್‌ನಲ್ಲಿಟ್ಟುಕೊಂಡಿದ್ದೇವೆ.”
ಜಪಾನಿನ ಹೆಸರಾಂತ ಸಸ್ಯ ತಜ್ಞರಾದ ಅಕಿರಾ ಮಿಯಾವಾಕಿಯವರು ‘ಮಿಯಾವಾಕಿ’ ವಿಧಾನವನ್ನು ಪರಿಚಯಿಸಿದ್ದಾರೆ. ಈ ವಿಧಾನದಲ್ಲಿ ವಾಣಿಜ್ಯ ಉದ್ದೇಶದಿಂದ ಬೆಳೆಯುವ ಗಿಡಗಳನ್ನು ಹೊರತುಪಡಿಸಿ ಸ್ಥಳೀಯ ತಳಿಗಳ ಗಿಡಗಳನ್ನು ಮಾತ್ರ ಬೆಳೆಸಲಾಗುತ್ತದೆ. ಒಂದು ಹಂತದವರೆಗೆ ಬೆಳೆದ ನಂತರ ಇವುಗಳು ಕ್ರಮೇಣವಾಗಿ ಯಾವುದೇ ನಿರ್ವಹಣೆಯ ಅಗತ್ಯವಿಲ್ಲದೇ ನೈಸರ್ಗಿಕವಾಗಿ ಬೆಳೆಯಲಾರಂಭಿಸುತ್ತವೆ, ವರದಿಗಾರರು, ದಿ ಹಿಂದೂ ಬ್ಯೂಸಿನೆಸ್ ಲೈನ್.
“ಕಾಡು ಬೆಳೆಸುವ ಮೊದಲ ಹಂತ ಸ್ಥಳೀಯ ಗಿಡಗಳನ್ನು ಪತ್ತೆ ಹಚ್ಚುವುದು. ನಂತರ ಅವುಗಳನ್ನು - ಪೊದೆಗಳು, ಉಪ-ಮರ, ಮರ, ಮೇಲಾವರಣ ಮರ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತೇವೆ. ನಂತರ ಮಣ್ಣಿನ ಗುಣಮಟ್ಟವನ್ನು ವಿಶ್ಲೇಷಿಸುತ್ತೇವೆ ಮತ್ತು ರಂದ್ರ ಸಾಮರ್ಥ್ಯ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹಾಗೂ ಪೋಷಕಾಂಶವನ್ನು ಹೆಚ್ಚಿಸಲು ಯಾವ ಜೀವಾಣು ಸಹಾಯ ಮಾಡುತ್ತದೆಯೆಂದು ಕಂಡು ಹಿಡಿಯುತ್ತೇವೆ. ಒಂದು ಮೀಟರ್ ಆಳವನ್ನು ಅಗೆದು ಅದರಲ್ಲಿ ಜೀವಾಣುವನ್ನು ಸೇರಿಸುತ್ತೇವೆ. ಹೆಚ್ಚಿನ ಸಾಂದ್ರತೆ ಇರುವೆಡೆ ಮಣ್ಣಿನ ದಿಬ್ಬವನ್ನು ನಿರ್ಮಿಸಿ ಮೂರರಿಂದ ಐದು ಚದರ ಮೀಟರ್‌ಗೆ ಒಂದರಂತೆ ಬೀಜವನ್ನು ಬಿತ್ತುತ್ತೇವೆ ಮತ್ತು ಅದರ ಮೇಲೆ ಹಸಿ ಗೊಬ್ಬರವನ್ನು ಹಾಕಿ ಒಣ ಹುಲ್ಲಿನಿಂದ ಮುಚ್ಚುತ್ತೇವೆ.” ಎಂದು ಶುಭೇಂದು ಶರ್ಮಾರವರು ಹೇಳುತ್ತಾರೆ.
ಆರಂಭದಲ್ಲಿ ಶುಭೇಂದು ಅವರಿಗೆ ಪರಿಸರದ ಬಗ್ಗೆ ಆಸಕ್ತಿಯಿರಲಿಲ್ಲ. ಅವರು ಬೆಂಗಳೂರಿನ ಟಯೋಟಾ ಕಂಪೆನಿಯಲ್ಲಿ ಇಂಜಿನಿಯರ್ ಆಗಿ 2009ರಲ್ಲಿ ಕೆಲಸಕ್ಕೆ ಸೇರಿದ್ದರು. ಟಯೋಟಾ ಕಂಪೆನಿಯ ನಿಗಮದ ಸಾಮಾಜಿಕ ಜವಬ್ದಾರಿಯ (CSR) ಉಪಕ್ರಮದ ಭಾಗವಾಗಿ ಅರಣ್ಯವನ್ನು ಪುನಃ ಸ್ಥಾಪಿಸುವ ಕಾರ್ಯಕ್ಕೆ ಸಹಾಯ ಮಾಡಲು ಬಂದ ಅಕಿರಾ ಮಿಯಾವಾಕಿಯನ್ನು ಭೇಟಿಯಾಗುತ್ತಾರೆ. ಮಿಯಾವಾಕಿ ವಿಧಾನವು ಶುಭೇಂದುವಿಗೆ ಅತ್ಯದ್ಭುತವಾಗಿ ತೋರುತ್ತದೆ, ಇದರಿಂದ ಪ್ರೇರೇಪಿತರಾಗಿ ಅವರು ತಮ್ಮ ವೃತ್ತಿಯನ್ನು ತೊರೆದು ನಗರವನ್ನು ಹಸಿರಾಗಿಸುವ ಬಗ್ಗೆ ತಿಳಿದುಕೊಳ್ಳಲು ಆರಂಭಿಸುತ್ತಾರೆ.
ಅಂತಿಮವಾಗಿ, ನಗರದ ಚಿಕ್ಕ ಚಿಕ್ಕ ಪ್ರದೇಶಗಳನ್ನು ಅರಣ್ಯವನ್ನಾಗಿ ಪರಿವರ್ತಿಸುವ ಸರಳ ಪರಿಕಲ್ಪನೆಯೊಂದಿಗೆ ಅಫೊರೆಸ್ಟ್ ಸಂಸ್ಥೆಯನ್ನು ಹುಟ್ಟುಹಾಕಿದರು.