ಮೇಘಾಲಯದ ಶಾಲೆಗಳನ್ನು ನವೀಕರಿಸಲು ತನ್ನ ಸಂಬಳವನ್ನೆ ದೇಣಿಗೆ ನೀಡಿದ 32 ವರ್ಷದ ಐಎಎಸ್ ಅಧಿಕಾರಿ

ಮೇಘಾಲಯದ ಪೂರ್ವ ಗಾರೋ ಹಿಲ್ಸ್ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಪ್ನಿಲ್ ತೆಂಬೆ, ಸಾಮಾಜಿಕ ಬದಲಾವಣೆಯನ್ನು ತರಲು ಶಿಕ್ಷಣವು ಒಂದು ಶಕ್ತಿಯೆಂದು ನಂಬುತ್ತಾರೆ. ಈ ಪ್ರದೇಶದ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಲು ಅವರು ಮುನ್ನುಡಿ ಬರೆದಿದ್ದಾರೆ ಮತ್ತು 60 ಕ್ಕೂ ಹೆಚ್ಚು ಶಾಲೆಗಳನ್ನು ನವೀಕರಿಸಲು ಸಹಾಯ ಮಾಡಿದ್ದಾರೆ.

ಮೇಘಾಲಯದ ಶಾಲೆಗಳನ್ನು ನವೀಕರಿಸಲು ತನ್ನ ಸಂಬಳವನ್ನೆ ದೇಣಿಗೆ ನೀಡಿದ 32 ವರ್ಷದ ಐಎಎಸ್ ಅಧಿಕಾರಿ

Monday December 23, 2019,

4 min Read

ಸ್ವಪ್ನಿಲ್ ತೆಂಬೆ ಇತರ ಯುವಕರಂತೆಯೇ ಇದ್ದರು. ಮಧ್ಯಪ್ರದೇಶದ ಜಬಲ್ಪುರದಲ್ಲಿ ಬೆಳೆದ ಅವರು ಮಹತ್ವಾಕಾಂಕ್ಷಿ ಮತ್ತು ಕಠಿಣ ಪರಿಶ್ರಮದ ವ್ಯಕ್ತಿಯಾಗಿದ್ದರು. ಅವರು ಬೆಳೆಯುತ್ತ ಒಂದು ಗಮನಾರ್ಹ ಪ್ರಯಾಣವನ್ನು ಕೈಗೊಂಡರು.


ಇಂಜಿನೀಯರ್ ಆಗಿರುವುದರಿಂದ ಹಿಡಿದು ಐಎಎಸ್ ಅಧಿಕಾರಿಯಾಗುವುದು ಮತ್ತು ಭಾರತದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಮೇಘಾಲಯದ ಪೂರ್ವ ಗಾರೋ ಹಿಲ್ಸ್‌ನಲ್ಲಿ ಜಿಲ್ಲಾಧಿಕಾರಿ ಸ್ಥಾನವನ್ನು ಪಡೆದುಕೊಳ್ಳುವವರೆಗೆ, ಮೂವತ್ತೆರಡು ವರ್ಷ ವಯಸ್ಸಿನವರಾದ ಸ್ವಪ್ನಿಲ್ ಜೀವನದಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದ್ದಾರೆ. ಹದಿಹರೆಯದ ಅವಧಿಯಲ್ಲಿ ಕಠಿಣ ಸಮಯವನ್ನು ಎದುರಿಸುತ್ತಿದ್ದರೂ, ಸ್ವಪ್ನಿಲ್‌ ಯಾವತ್ತೂ ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ. ಯುಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಕೋಚಿಂಗ್ ಸೆಂಟರ್‌ ನಲ್ಲಿ ಬೋಧಿಸುವ ಮೂಲಕ ಹಣವನ್ನು ಗಳಿಸುವಲ್ಲಿ ಯಶಸ್ವಿಯಾದರು.


ಐಎಎಸ್ ಅಧಿಕಾರಿ ಸ್ವಪ್ನಿಲ್ ತೆಂಬೆ ಗ್ಯಾರೊದಲ್ಲಿ ಸಾಂಪ್ರದಾಯಿಕ ಕರಕುಶಲ ಟೋಪಿ ಮತ್ತು ಕೋಟ್ ಧರಿಸಿರುವುದು.


ಇಂದು, ನಾಗರಿಕ ಸೇವಾ ಅಧಿಕಾರಿಯಾಗಿ, ಅವರು ತಮ್ಮ ಜಿಲ್ಲೆಯ ಶಾಲೆಗಳನ್ನು ನವೀಕರಿಸಲು ಹಲವಾರು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸುತ್ತಿದ್ದಾರೆ. ಅವರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಸ್ಟಾರ್ (STAR)-ಸ್ಕೂಲ್‌ ಟ್ರಾನ್ಸ್ಫಾರ್ಮೆಷನ್‌ ಬೈ ಅಗ್ಮೆಂಟಿಂಗ್‌ ರಿಸೌರ್ಸಸ್ (ಸಂಪನ್ಮೂಲಗಳನ್ನು ಹೆಚ್ಚಿಸುವ ಮೂಲಕ ಶಾಲಾ ಪರಿವರ್ತನೆ) ಎಂಬುದನ್ನು ಸೂಚಿಸುತ್ತದೆ, ಇದರಿಂದ ಈಗಾಗಲೇ 60 ಶಾಲೆಗಳನ್ನು ಮರುಸ್ಥಾಪಿಸಲಾಗಿದೆ.


ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಾಗರಿಕ ಸೇವೆಗಳನ್ನು ತೆಗೆದುಕೊಳ್ಳಲು ನಾನು ನಿರ್ಧರಿಸಿದೆ. ಗುಣಮಟ್ಟದ ಶಿಕ್ಷಣವು ಹೆಚ್ಚಿನ ಸಾಮಾಜಿಕ ತೊಂದರೆಗಳನ್ನು ಬೇರಿನಿಂದ ಕಿತ್ತು ತೆಗೆಯುವ ಶಕ್ತಿಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿಯೇ ನಾನು ಈ ವಲಯದಲ್ಲಿ ಮಧ್ಯಸ್ಥಿಕೆಗಳನ್ನು ಪರಿಚಯಿಸುವ ಮೂಲಕ ಪ್ರಾರಂಭಿಸಿದೆ. ನಾನು ನೇರವಾಗಿ ಕೊಡುಗೆ ನೀಡಲು ಉತ್ಸುಕನಾಗಿದ್ದರಿಂದ, ಪೂರ್ವ ಗಾರೊ ಹಿಲ್ಸ್‌ನ ಶಾಲೆಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ನನ್ನ ಎರಡು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದೇನೆ,” ಎಂದು ಸ್ವಪ್ನಿಲ್ ಸೋಷಿಯಲ್‌ಸ್ಟೋರಿಗೆ ಹೇಳಿದರು.


ಸ್ವಪ್ನಿಲ್ ತೆಂಬೆ ಮೇಘಾಲಯದ 60 ಕ್ಕೂ ಹೆಚ್ಚು ಶಾಲೆಗಳನ್ನು ನವೀಕರಿಸಿದ್ದಾರೆ.


ಒಂದು ವಿಸ್ಮಯಕಾರಿ ಪ್ರಯಾಣ

ಸ್ವಪ್ನಿಲ್ ಜಬಲ್ಪುರದಲ್ಲಿ ಜನಿಸಿದರೂ, ಅವರು ಬೆಳೆದದ್ದು ಕಟ್ನಿ ಪಟ್ಟಣದಲ್ಲಿ. ಅವರ ತಂದೆ ಪುರುಷೋಥಮ್ ತೆಂಬೆ ಗಣಿತ ಶಿಕ್ಷಕರಾಗಿದ್ದರು. ಸ್ವಪ್ನಿಲ್ ತಮ್ಮ ವಿದ್ಯಾಭ್ಯಾಸವನ್ನು ಕೇಂದ್ರೀಯ ವಿದ್ಯಾಲಯದಲ್ಲಿ ಮಾಡಿದರು, ಮತ್ತು ನಂತರ ಐಐಟಿ-ಖರಗ್‌ಪುರದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.


2008 ರಲ್ಲಿ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಓದುತ್ತಿರುವ ಸಮಯದಲ್ಲಿ ಐಎಎಸ್ ಅಧಿಕಾರಿಯಾಗಲು ಅವರು ನಿರ್ಧರಿಸಿದರು. ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುವ ಮೊದಲು, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ನೀತಿಯಲ್ಲಿ ದೂರಶಿಕ್ಷಣದ ಸ್ನಾತಕೋತ್ತರ ಕಾರ್ಯಕ್ರಮಕ್ಕೆ ಸ್ವಪ್ನಿಲ್ ಸೇರಿಕೊಂಡರು.


ಸ್ವಪ್ನಿಲ್ ತೆಂಬೆ ಕೇಂದ್ರ ವಿದ್ಯಾಲಯದ ಅವರ ಸ್ನೇಹಿತರೊಂದಿಗೆ.




ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಅವರು ಪಾಸ್ ಮಾಡಲು ಮಾಡಿದ ಪ್ರಯತ್ನಗಳು ಬಹಳಷ್ಟು, ಆದರೆ ಅದೇ ಸಮಯದಲ್ಲಿ ಸ್ವಪ್ನಿಲ್ ಅವರ ತಂದೆ ತೀವ್ರ ಕಾಯಿಲೆಯ ಕಾರಣದಿಂದ ಶೀಘ್ರದಲ್ಲೇ ನಿಧನರಾದರು.


“ನನ್ನ ತಂದೆ ಬಳಲುತ್ತಿದ್ದ ಆ ಎರಡು ವರ್ಷಗಳು ನನ್ನ ಜೀವನದ ಅತ್ಯಂತ ಕಠಿಣ ಸಮಯವಾಗಿತ್ತು. ನನ್ನ ಸುತ್ತಲಿನ ಪ್ರಪಂಚವು ಕುಸಿಯುತ್ತಿದೆ ಎಂದು ಭಾಸವಾಗುತ್ತಿತ್ತು. ಇದಲ್ಲದೆ, ನನ್ನ ಕುಟುಂಬದ ಆರ್ಥಿಕ ಸ್ಥಿತಿ ಬಹಳ ದುರ್ಬಲವಾಗಿತ್ತು, ಮತ್ತು ನಾನು ಅವರಿಗೆ ಸಹಾಯ ಮಾಡಬೇಕಾಗಿತ್ತು. ಹಾಗಾಗಿ, ನಾನು ಹೈದರಾಬಾದ್‌ನ ಡೆಲಾಯ್ಟ್‌ನಲ್ಲಿ ವ್ಯವಹಾರ ವಿಶ್ಲೇಷಕನಾಗಿ ಕೆಲಸಕ್ಕೆ ಸೇರಿಕೊಂಡೆ. ಎರಡು ವರ್ಷಗಳ ಕಾಲ ಹಣವನ್ನು ಉಳಿಸಿದ ನಂತರ, ನನ್ನ ಕನಸುಗಳನ್ನು ಬೆನ್ನಟ್ಟಿ ಹೋಗಲು ನಾನು ಕೆಲಸವನ್ನು ತ್ಯಜಿಸಿದೆ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ.


ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ಸ್ವಪ್ನಿಲ್ ಅವರ ಬಯಕೆಯು ಅವರನ್ನು ದೆಹಲಿಗೆ ತೆರಲುವಂತೆ ಮಾಡಿತು. ಅಲ್ಲಿ ಅವರು ಕೋಚಿಂಗ್ ಕೇಂದ್ರದಲ್ಲಿ ಬೋಧಿಸಲು ಪ್ರಾರಂಭಿಸಿದರು ಮತ್ತು ಏಕಕಾಲದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು. ಆದಾಗ್ಯೂ, ಅವರ ಮೂರನೇ ಪ್ರಯತ್ನದವರೆಗೂ ಅದನ್ನು ಭೇದಿಸಲು ಸಾಧ್ಯವಾಗಲಿಲ್ಲ. ಕೊನೆಗೆ 2015 ರಲ್ಲಿ ಅವರು ಅಖಿಲ ಭಾರತ ಶ್ರೇಯಾಂಕದಲ್ಲಿ 84 ನೇ ಸ್ಥಾನ ಪಡೆದರು.


“ಐಎಎಸ್ ಅಧಿಕಾರಿಯಾಗುವ ನನ್ನ ಆಸೆಯನ್ನು ಬಿಡುವಂತೆ ನನ್ನ ಬಹಳಷ್ಟು ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹೇಳಿದ್ದರು. ಅದು ನನ್ನನ್ನು ಕುಗ್ಗಿಸಿತ್ತು. ಆದರೆ ನಾನು ಹಠವನ್ನು ಬಿಡಲಿಲ್ಲ. ಒಬ್ಬ ವ್ಯಕ್ತಿಯಲ್ಲಿ ಕಲಿಯುವ ಹಂಬಲ ಇರುವವರೆಗೆ, ಅವಳು/ಅವನು ನಾಗರಿಕ ಸೇವೆಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನಾನು ಕಂಡುಕೊಂಡಿದ್ದೇನೆ” ಎಂದು ಸ್ವಪ್ನಿಲ್ ಹೇಳಿದರು.

ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸುವತ್ತ

ಸ್ವಪ್ನಿಲ್ ಅವರ ವೃತ್ತಿಜೀವನದ ಪ್ರಾರಂಭದಲ್ಲಿ, ಶಾಲಾ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಸಚಿವಾಲಯದ ಸಾಕ್ಷರತಾ ವಿಭಾಗದ ಸಹಾಯಕ ಕಾರ್ಯದರ್ಶಿಯಿಂದ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ನಲ್ಲಿ ಸಹಾಯಕ ಕಮಾಂಡೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.


ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ವಪ್ನಿಲ್ ತೆಂಬೆ ಮತ್ತು ಅವರ ತಂಡ.


ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಸ್ವಪ್ನಿಲ್ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್ಬಿಎಸ್ಎನ್ಎಎ) ನಲ್ಲಿ ತರಬೇತಿ ಪಡೆದರು, ನಂತರ ಅವರು ಮೇಘಾಲಯದ ವೆಸ್ಟ್ ಗರೋ ಹಿಲ್ಸ್ನ ದಾಡೆಂಗ್ರೆನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆದರು. ಪ್ರಸ್ತುತ, ಅವರು ಅದೇ ಪ್ರದೇಶದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಆದಾಗ್ಯೂ, ಈ ಪ್ರದೇಶವನ್ನು ನಿರ್ವಹಿಸುವುದು ಸ್ವಪ್ನಿಲ್‌ಗೆ ಅನೇಕ ಸವಾಲುಗಳನ್ನು ನೀಡಿತ್ತು.


“ಪೂರ್ವ ಗಾರೊ ಬೆಟ್ಟಗಳಲ್ಲಿನ ಬಹುಪಾಲು ಜನಸಂಖ್ಯೆಯು ಬುಡಕಟ್ಟು ಜನಾಂಗದವರನ್ನು ಒಳಗೊಂಡಿತ್ತು, ಅನೇಕ ರಸ್ತೆಗಳ ಪರಿಸ್ಥಿತಿ ಅಯೋಮಾಯವಾಗಿತ್ತು, ಸೆಲ್ಯುಲಾರ್ ನೆಟ್‌ವರ್ಕ್ ಸರಿಯಾಗಿರಲಿಲ್ಲ ಮತ್ತು ಅಭಿವೃದ್ಧಿ ಸೂಚಕಗಳು ಕಡಿಮೆ ಇದ್ದವು. ಈ ಕಾರಣದಿಂದಾಗಿ, ಈ ಪ್ರದೇಶದ ಕೆಲವು ಭಾಗಗಳು ಪ್ರಪಂಚದ ಇತರ ಭಾಗಗಳಿಂದ ದೂರ ಉಳಿದುಬಿಟ್ಟಿದ್ದವು. ಆದರೆ, ಕಳವಳಕಾರಿಯಾದ ಸಾಕ್ಷರತೆಯ ಪ್ರಮಾಣ (67 ಪ್ರತಿಶತ) ಅತ್ಯಂತ ಮುಖ್ಯವಾದ ವಿಷಯವಾಗಿದೆ. ಅದನ್ನು ಸುಧಾರಿಸಲು ನಾನು ಕೆಲವು ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ,” ಎಂದು ಅವರು ಹೇಳಿದರು.


ಸ್ವಪ್ನಿಲ್ ತೆಂಬೆ ತಮ್ಮ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು.




ಸ್ವಪ್ನಿಲ್ ಈ ಪ್ರದೇಶದ ಶಾಲೆಗಳನ್ನು ಪರೀಕ್ಷಿಸಲು ಸಾಕಷ್ಟು ಸಮಯವನ್ನು ವ್ಯಯಮಾಡಿದರು, ಮತ್ತು ಎಲ್ಲ ಶಾಲೆಗಳು ಕೇವಲ ಎರಡು ಅಥವಾ ಮೂರು ತರಗತಿ ಕೊಠಡಿಗಳನ್ನು ಹಾಗೂ ಶಿಥಿಲವಾದ ಒಳಾಂಗಣ ಮತ್ತು ಬಣ್ಣರಹಿತ ಗೋಡೆಗಳನ್ನು ಹೊಂದಿವೆ ಎಂದು ಅರಿತುಕೊಂಡರು. ಇದಲ್ಲದೆ, ಸಿಬ್ಬಂದಿಗಳ ಹಾಜರಾತಿ ಕಳಪೆಯಾಗಿತ್ತು. ಈ ಎಲ್ಲಾ ಅಂಶಗಳು ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿತ್ತು.


“ಇದನ್ನು ಪರಿಹರಿಸಲು, ನಾವು ಸಂಪನ್ಮೂಲಗಳನ್ನು ವರ್ಧಿಸುವ ಮೂಲಕ ಶಾಲಾ ಪರಿವರ್ತನೆ ಎಂಬ ಹೆಸರಿನ ಸ್ಟಾರ್ ಎಂಬ ಯೋಜನೆಯನ್ನು ಪರಿಚಯಿಸಿದ್ದೇವೆ. ಈ ಯೋಜನೆಯು ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ ಮತ್ತು ವಿವಿಧ ವೃತ್ತಿ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ. ಶಾಲೆಗಳಲ್ಲಿ ಬ್ಯಾನರ್‌ಗಳು ಮತ್ತು ಚಾರ್ಟ್ಗಳನ್ನು ಹಾಕುವ ಮೂಲಕ ಮತ್ತು ಶಿಕ್ಷಕರಿಗೆ ಈ ವಿಷಯವನ್ನು ಹರಡಲು ತರಬೇತಿ ನೀಡುವ ಮೂಲಕ ನಾವು ಇದನ್ನು ಕಾರ್ಯಗತಗೊಳಿಸಿದ್ದೇವೆ,” ಎಂದು ಸ್ವಪ್ನಿಲ್ ವಿವರಿಸುತ್ತಾರೆ.


‘ಅಡೋಪ್ಟ್ ಎ ಸ್ಕೂಲ್' ಯೋಜನೆಯ ಭಾಗವಾಗಿ ನವೀಕರಿಸಿದ ಶಾಲೆಗಳಲ್ಲಿ ಒಂದು.


ಸ್ವಪ್ನಿಲ್ ಪ್ರಾರಂಭಿಸಿದ ಮತ್ತೊಂದು ಕಾರ್ಯಕ್ರಮವೆಂದರೆ ‘ಆಡೋಪ್ಟ್ ಆ ಸ್ಕೂಲ್’, ಇದರಲ್ಲಿ ಅವರು ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮತ್ತು ಮೂಲಸೌಕರ್ಯಗಳನ್ನು ನವೀಕರಿಸಲು ಮತ್ತು ಕಲಿಕಾ ಸಾಮಗ್ರಿಗಳು ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ವಿತರಿಸಲು ಹಣವನ್ನು ಕೊಡುಗೆ ನೀಡಲು ಜನರನ್ನು ಪ್ರೇರೇಪಿಸಿದರು. ಸ್ವಪ್ನಿಲ್ ಸ್ವತಃ ಎರಡು ತಿಂಗಳ ವೇತನವನ್ನು ದೇಣಿಗೆ ನೀಡಿದರು. 2020 ರ ಜನವರಿಯಲ್ಲಿ, ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ತರಬೇತಿ ನೀಡಲು ಐಎಎಸ್ ಅಧಿಕಾರಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನೊಂದಿಗೆ ಪಾಲುದಾರಿಕೆ ಮಾಡಲು ಯೋಜಿಸುತ್ತಿದ್ದಾರೆ.

“ಈ ಯೋಜನೆಯ ಭಾಗವಾಗಿ ಈಗಾಗಲೇ 60 ಕ್ಕೂ ಹೆಚ್ಚು ಶಾಲೆಗಳನ್ನು ನವೀಕರಿಸಲಾಗಿದೆ. ಆದರೆ ಇನ್ನೂ ಬಹಳ ದೂರದ ಹಾದಿಯಲ್ಲಿ ಸಾಗಬೇಕಿದೆ. ಜನರ ಮುಖಗಳಲ್ಲಿ ನಾನು ನೋಡುವ ನಗು ನನ್ನ ಪ್ರೇರಣೆಯ ಮೂಲವಾಗಿದೆ” ಎಂದು ಸ್ವಪ್ನಿಲ್ ಹೇಳುತ್ತಾರೆ.