ಮುಂಬೈನಲ್ಲಿ ತಿಪ್ಪೆ ಆಯುವವರ ಮತ್ತು ಪೌರ ಕಾರ್ಮಿಕರ ಜೀವನ ಸುಧಾರಿಸುವ ಗುರಿ ಹೊಂದಿದ್ದಾಳೆ ಈ ಹುಡುಗಿ
ಮುಂಬೈನ ಸ್ಕಾಟಿಷ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂಜನಾ ರನ್ವಾಲ್, ಮುಂಬೈನಲ್ಲಿ ತಿಪ್ಪೆ ಆಯುವವರಿಗೆ ಮತ್ತು ಪೌರ ಕಾರ್ಮಿಕರಿಗೆ ಅಗತ್ಯವಿರುವ ಆಹಾರ ಮತ್ತು ಸುರಕ್ಷಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸಮುದಾಯದ ಜೀವನ ಸುಧಾರಣೆಗೊಳಿಸುವ ಗುರಿ ಹೊಂದಿದ್ದಾಳೆ. ಈ ಹುಡುಗಿಯ ಸ್ಫೂರ್ತಿದಾಯಕ ಕಥೆಯನ್ನು ಓದಿ.
ಮುಂಬೈನ ಸ್ಕಾಟಿಷ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂಜನಾ ರನ್ವಾಲ್ ತನ್ನ ಇತರ ಗೆಳೆಯರಂತೆ ಕಾಲೇಜು ಜೀವನದ ಬಗ್ಗೆ ಹತ್ತಾರು ಕನಸು ಕಟ್ಟುಕೊಂಡಿದ್ದಾಳೆ. ಅದರ ಜತೆಯಲ್ಲಿ ಸಮಾಜಮುಖಿ ಕಾರ್ಯದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಇದೇ ಕಾರಣಕ್ಕೆ ಆಕೆ ಅವರೆಲ್ಲರಿಗಿಂತ ವಿಶೇಷವಾಗಿ ಕಾಣಿಸುತ್ತಾಳೆ. ಮುಂಬೈನಲ್ಲಿ ತಿಪ್ಪೆ ಆಯುವ ಮತ್ತು ಪೌರ ಕಾರ್ಮಿಕರ ಬದುಕಿನಲ್ಲಿ ಒಳ್ಳೆಯ ಬದಲಾವಣೆ ತರುವ ಜತೆಗೆ ಅವರ ಜೀವನವನ್ನು ಸುಧಾರಿಸಲು ದಣಿವರಿಯದೇ ದುಡಿಯುತ್ತಿದ್ದಾಳೆ.
ನಿರಂತರ ಓದುವ ಹುಚ್ಚು, ಬಾಸ್ಕೆಟ್ ಬಾಲ್ ಆಸಕ್ತಿ, ಪಿಯಾನೋ ನುಡಿಸುವ ಕಲೆಯ ಜತೆ ಜತೆಗೆ ಸಂಜನಾ ಮುಂಬೈನಲ್ಲಿರುವ ಕ್ಲೀನ್ ಅಪ್ ಫೌಂಡೇಶನ್‌ನ ಜತೆ ಸೇರಿ ನಗರದಲ್ಲಿರುವ ಅಸಂಖ್ಯಾತ ತಿಪ್ಪೆ ಆಯುವವರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾಳೆ.
ಇದು ಸಂಜನಾಳ ಮೊದಲ ಸಾಮಾಜಿಕ ಕಾರ್ಯವೇನಲ್ಲ, 2018ರಲ್ಲಿ ಆಕೆ ಶಾಲೆಯ ವತಿಯಿಂದ ಕಾಲು ಕಳೆದುಕೊಂಡವರಿಗೆ ಕೃತಕ ಕಾಲು ಜೋಡಿಸಲು ಹಣ ಸಂಗ್ರಹಿಸುವ ಕಾರ್ಯ ಆರಂಭಿಸಿದಾಗಿನಿಂದಲೂ ಇಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಲಾಯರ್ ಆಗುವ ಕನಸು ಕಾಣುತ್ತಿರುವ ಸಂಜನಾ, ಸದ್ಯ ದೇಣಿಗೆ ಸಂಗ್ರಹಿಸುವ ಅಭಿಯಾನದಲ್ಲಿ ಭಾಗವಹಿಸಿ ಎಂಟು ಜನರಿಗೆ ನಡೆದಾಡುವಂತಾಗಲು ಬೇಕಾಗುವಷ್ಟು ಹಣ ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾಳೆ.
ಸಂಜನಾ ಸೋಶಿಯಲ್‌ಸ್ಟೋರಿಯೊಂದಿಗೆ ಮಾತನಾಡುತ್ತಾ ಹೀಗೆ ಹೇಳುತ್ತಾಳೆ,
“ ಈ ಕಾರ್ಯಾಚರಣೆಯ ಬಗ್ಗೆ ಮೊದಲು ಕೇಳಿದಾಗ, ಕಾಲಿಲ್ಲದವರು ಅನುಭವಿಸುತ್ತಿರುವ ಯಾತನೆಯನ್ನು ಊಹಿಸಲು ಸಹ ಸಾಧ್ಯವಾಗಿರಲಿಲ್ಲ. ಅವರು ನಡೆದಾಡುವಂತೆ ಮಾಡಲು ಕೃತಕ ಕಾಲು ಜೋಡಣೆಯೊಂದೇ ಮಾರ್ಗವಾಗಿತ್ತು, ಈ ಕಾರ್ಯಾಚರಣೆಗೆ ನನ್ನ ಕೈಲಾದಷ್ಟು ಮಾಡಲು ಬಯಸಿದ್ದೆ. ಕ್ರೌಡ್ ಫಂಡಿಂಗ್ ವೇದಿಕೆ, ಫ್ಯೂಯೆಲ್ ಡ್ರೀಮ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಕೆಲಸ ಆರಂಭಿಸಿದೆ. ಕೊನೆಯಲ್ಲಿ ನನಗೆ 84,000 ರೂ. ಹೊಂದಿಸಲು ಸಾಧ್ಯವಾಯಿತು”.
ತನ್ನ ಸಹೋದರ ಸಿದ್ದಾರ್ಥ ರನ್ವಾಲ್ ಆರಂಭಿಸಿರುವ ಕ್ಲೀನ್ ಅಪ್ ಫೌಂಡೇಶನ್‌ನ ಕಾರ್ಯಗಳನ್ನು ಪ್ರಸಾರ ಮಾಡುವ ಕೆಲಸದಲ್ಲಿ ಸಂಜನಾ ಭಾಗಿಯಾಗಿದ್ದಾಳೆ. ತಿಪ್ಪೆ ಆಯುವವರ ಮತ್ತು ಪೌರ ಕಾರ್ಮಿಕರ ಕಲ್ಯಾಣ ಇದರ ಪ್ರಮುಖ ಉಪಕ್ರಮಗಳಲ್ಲೊಂದಾಗಿದೆ. ಆಕೆಯು ಅವರಿಗೆ ಸುರಕ್ಷಾ ಉಪಕರಣಗಳನ್ನಷ್ಟೇ ಅಲ್ಲದೇ ಆಹಾರ ಮತ್ತು ಶುದ್ಧ ಕುಡಿಯುವ ನೀರು ಒದಗಿಸುವ ಮೂಲಕ 350 ಕೆಲಸಗಾರರ ಆರೋಗ್ಯ ಸುಧಾರಣೆಗೆ ಮುಂದಾಗಿದ್ದಾಳೆ.
ನಗರವನ್ನು ಸ್ವಚ್ಛವಾಗಿಡುವ ಇವರ ಜೀವನವೇ ನರಕವಾಗಿದೆ
ತಿಪ್ಪೆ ಆಯುವವರು ನಗರದ ಕಾರ್ಮಿಕ ಪಡೆಯ ಒಂದು ಅವಿಭಾಜ್ಯ ಅಂಗ. ಪ್ರತಿನಿತ್ಯ ಚಿಂದಿಯನ್ನು ಆಯುತ್ತಾರೆ, ಪ್ಲಾಸ್ಟಿಕ್ ಬಾಟಲ್, ಪ್ಯಾಕಿಂಗ್ ವಸ್ತುಗಳು, ಪುಡಿ ಕಾಗದ, ಸಮೋಸಾದಿಂದ ಹಿಡಿದು ತರಕಾರಿ ಸಿಪ್ಪೆಯವರೆಗೂ ಎಲ್ಲ ರದ್ದಿಯನ್ನು ಆಯುತ್ತಾರೆ. ಕೊನೆಗೆ ಅವೆಲ್ಲವನ್ನೂ ಬೇರ್ಪಡಿಸಿ ಯೋಗ್ಯವಾದುವನ್ನು ಮಾರಾಟ ಮಾಡುತ್ತಾರೆ, ನಗರದ ಸ್ವಚ್ಛತೆ ಮತ್ತು ಅಚ್ಚುಕಟ್ಟುತನವನ್ನು ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಕಿತ್ತು ತಿನ್ನುವ ಬಡತನದಿಂದಾಗಿ ಜೀವನ ನಡೆಸಲು ಪರದಾಡುವ ಪರಿಸ್ಥಿತಿ ಇವರದ್ದು.
ನಮ್ಮ ದೇಶದಲ್ಲಿ ಚಿಂದಿ ಆಯುವ ಸುಮಾರು 15 ಲಕ್ಷ ಮಂದಿ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿಕಿರಣ, ಆಸ್ಪತ್ರೆ ತ್ಯಾಜ್ಯದಂಥ ಅಪಾಯಕಾರಿ ವಸ್ತುಗಳನ್ನು ಅರಿವಿಲ್ಲದೇ ಹೆಕ್ಕುತ್ತಾರೆ. ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತರಾಗಿ ಜೀವನ ಸಾಗಿಸುತ್ತಿರುವ, ಇವರ ದುಡಿಮಗೆ ಸಿಗುವುದು ಬಿಡಿಗಾಸು ಮಾತ್ರ.
ತಿಪ್ಪೆ ಆಯುವವರು ಅನುಭವಿಸುತ್ತಿರುವ ಕಷ್ಟಗಳು ಸಂಜನಾಳ ಗಮನಕ್ಕೆ ಬಂದ ಮೇಲೆ ಅವರಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದಳು. ಸಿದ್ದಾರ್ಥ ತನ್ನ ಉನ್ನತ ಶಿಕ್ಷಣದ ನಿಮಿತ್ತ ವಿದೇಶದಲ್ಲಿ ನೆಲೆಸಿರುವ ಕಾರಣ ಈಕೆಯೇ ಕ್ಲೀನ್ ಅಪ್ ಫೌಂಡೇಶನ್‌ನಲ್ಲಿ ಸಕ್ರಿಯವಾಗಿದ್ದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾಳೆ.
“ತಿಪ್ಪೆ ಆಯುವವರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಈ ಪೌಂಡೇಶನ್, ಬೃಹನ್ ಮುಂಬೈ ಕಾರ್ಪೋರೇಷನ್(BMC) ಆಫೀಸಿನ ಸುತ್ತ ಮುತ್ತ ಹಲವಾರು ವಾಟರ್ ಪ್ಯೂರಿಫೈರ್‌ಗಳನ್ನು ಅಳವಡಿಸುವ ಮೂಲಕ ಪ್ರತಿನಿತ್ಯ ಸುಮಾರು 12,000 ಪೌರ ಕಾರ್ಮಿಕರು ಶುದ್ಧ ಕುಡಿಯುವ ನೀರನ್ನು ಪಡೆಯಲು ಸಹಾಯಕವಾಗಿದೆ. ಆದಾಗ್ಯೂ ಇದು ನಮ್ಮ ಮೊದಲ ಹೆಜ್ಜೆ. ಇನ್ನೂ ಹೆಚ್ಚಿನ ಕಾರ್ಯಗಳು ನಮ್ಮಿಂದಾಗಬೇಕಿವೆ. ತಿಪ್ಪೆ ಆಯುವವರ ಜೀವನ ಸುಧಾರಣೆಗಾಗಿ 2019ರಲ್ಲಿ ನಾನು ಕೇರಿಂಗ್ ಫಾರ್ ದಿ ಕ್ಲೀನ್‌ನೆಸ್ ಎಂಬ ಉಪಕ್ರಮವನ್ನು ಆರಂಭಿಸಿದ್ದೇನೆ” ಎಂದು ಸಂಜನಾ ವಿವರಿಸುತ್ತಾಳೆ.
ಮುಂಬೈನಾದ್ಯಂತ 200ಕ್ಕೂ ಹೆಚ್ಚು ತಿಪ್ಪೆ ಆಯುವವರಿಗೆ ಪೌಂಡೇಷನ್ ವತಿಯಿಂದ ರೇನ್‌ಕೋಟ್ ಮತ್ತು ಗಮ್ ಬೂಟ್‌ಗಳನ್ನು ವಿತರಣೆ ಮಾಡಲಾಗಿದೆ. ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿರುವುದರಿಂದ ತಿಪ್ಪೆ ಆಯುವವರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಯಿತು. “ಈ ಅಭಿಯಾನ ಯಶಸ್ವಿಯಾಗಲು ಹಲವಾರು ದಾನಿಗಳು ಮತ್ತು ತಿಪ್ಪೆ ಆಯುವವರನ್ನು ಗುರುತಿಸಲು ಹಾಗೂ ಕೆಲವು ಕಾನೂನುಬದ್ಧ ನಿಯಮಗಳನ್ನು ಪಾಲಿಸಲು ನೆರವಾದ ಮಹಾನಗರ ಪಾಲಿಕೆಯ ವಾರ್ಡ್ ನೌಕರ ಚಂದ್ರಕಾಂತ್ ತಂಬೆಯವರ ಪಾತ್ರ ಪ್ರಮುಖವಾಗಿತ್ತು” ಎಂದು ಸಂಜನಾ ಹೇಳುತ್ತಾಳೆ.
ಉಜ್ವಲ ಭವಿಷ್ಯದತ್ತ
ವಿದ್ಯಾಭ್ಯಾಸ ಮತ್ತು ಸಾಮಾಜಿಕ ಉಪಕ್ರಮಗಳಲ್ಲಿ ಒಟ್ಟೊಟ್ಟಿಗೇ ತೊಡಗಿಸಿಕೊಳ್ಳುವುದು ಸುಲಭದ ಮಾತಲ್ಲ. ಪ್ರತಿನಿತ್ಯ ಎರಡು ಗಂಟೆಗಳ ಕಾಲ ಸಾಮಾಜಕ ಕಾರ್ಯಗಳಲ್ಲಿ ಸಂಜನಾ ತೊಡಗಿಸಿಕೊಳ್ಳುತ್ತಾಳೆ. ಆದರೆ ಈ ಹುಡುಗಿಗೆ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಯಾವುದೇ ತೊಡಕು ಎದುರಾಗಿಲ್ಲ. ಹಲವಾರು ಯೋಜನೆಗಳ ಮೂಲಕ ದೇಶದಾದ್ಯಂತ ಇನ್ನೂ ಹೆಚ್ಚು ತಿಪ್ಪೆ ಆಯುವವರನ್ನು ತಲುಪುವ ಗುರಿ ಸಂಜನಾಳದ್ದಾಗಿದೆ.
“ಇದು ಆರಂಭವಷ್ಟೇ. ಪೌರ ಕಾರ್ಮಿಕರ ಏಳ್ಗೆಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದೇನೆ. ಕೊಳಕು ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಅವರು ನಿರಂತರವಾಗಿ ಕಾಯಿಲೆಗೆ ಬೀಳುತ್ತಿರುತ್ತಾರೆ, ಈ ಕಾರಣದಿಂದ ದೇಣಿಗೆಯನ್ನು ಸಂಗ್ರಹಿಸಿ ಅವರಿಗೆ ವೈದ್ಯಕೀಯ ವಿಮೆ ಮಾಡಿಕೊಡುವುದು ನನ್ನ ಸದ್ಯದ ಯೋಜನೆಯಾಗಿದೆ” ಎಂದು ಸಂಜನಾ ಹೇಳುತ್ತಾಳೆ
ಅಮೆರಿಕದ ನಾರ್ಥ್ ವೆಸ್ಟರ್ನ್ ಯುನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಸಂಜನಾಳ ಸಹೋದರ ಸಿದ್ದಾರ್ಥ, ತನ್ನ ಸಹೋದರಿಯನ್ನು ಪ್ರಶಂಸಿಸಿದ್ದು ಹೀಗೆ ”ಸಂಜನಾ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾಳೆ, ಅವಳ ಬಗ್ಗೆ ನನಗೆ ಹೆಮ್ಮೆಯಿದೆ. ಭವಿಷ್ಯದಲ್ಲಿ ಉತ್ತಮ ಸಮಾಜಕ್ಕಾಗಿ ವ್ಯಾಪಕ ಬದಲಾವಣೆಯನ್ನು ತರಲಿದ್ದಾಳೆ ಎನ್ನುವ ಭರವಸೆಯಿದೆ”
ಜನ ವಿಭಿನ್ನವಾದದನ್ನೇನಾದರೂ ಮಾಡಬೇಕೆಂದರೆ ಯಾವುದೋ ಒಂದು ಅಂಶ ಪ್ರಭಾವ ಬೀರಿರುತ್ತದೆ. ಹಾಗಿದ್ದರೆ ಸಂಜನಾಳ ಮೇಲೆ ಪ್ರಭಾವ ಬೀರಿದ ಅಂಶವೇನು?
“ನಾವು ಮಾಡುವ ಸಣ್ಣ ಕಾರ್ಯಗಳು ಜನರ ಜೀವನದ ಮೇಲೆ ಗಾಢವಾದ ಪರಿಣಾಮ ಬೀರುತ್ತಿರುವುದು ವಿಚಿತ್ರ ಸತ್ಯ. ಈ ವಿಷಯವೇ ನಾನು ಇವೆಲ್ಲವನ್ನು ಮಾಡಲು ಪ್ರೇರೇಪಿಸಿತು. ಪ್ರತಿಯೊಬ್ಬರೂ ಸಮಾಜಕ್ಕಾಗಿ ಕೈಲಾದಷ್ಟನ್ನು ಮಾಡಲು ತೊಡಗಿಸಿಕೊಂಡರೆ ಜಗತ್ತು ಅತ್ಯುತ್ತಮ ತಾಣವಾಗಿ ಬದಲಾಗಲಿದೆ”