ಪ್ಲಾಸ್ಟಿಕ್ ವಿರುದ್ಧದ ಹೋರಾಟದಲ್ಲಿ ಪ್ಲಾಸ್ಟಿಕ್ ಬದಲಾಗಿ ಬಿದಿರನ್ನು ಬಳಸುತ್ತಿದೆ ಮುಂಬೈ ಮೂಲದ ಈ ಸ್ಟಾರ್ಟ್ಅಪ್
2017 ರಲ್ಲಿ ನಾಲ್ಕು ಜನ ಅಭಿಯಂತರರಿಂದ ಶುರುವಾದ ಬೆಕೊ ಬಿದಿರಿನ ತಿರುಳು ಹಾಗೂ ಜೋಳದ ಪಿಷ್ಟದಿಂದ ಕಿಚನ್ ಟವೆಲ್ ಗಳನ್ನು ಹಾಗೂ ಕಸದ ಚೀಲಗಳನ್ನು ತಯಾರಿಸುತ್ತದೆ.
ಭಾರತ ಈಗ ಪ್ಲಾಸ್ಟಿಕ್ ಬಿಕ್ಕಟ್ಟಿನ ನಟ್ಟನಡುವಿನಲ್ಲಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 2017 ನೇ ವರದಿಯ ಪ್ರಕಾರ, ದೇಶದಲ್ಲಿ ದಿನವೊಂದಕ್ಕೆ 25,940 ಟನ್ ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಅಗುತ್ತದೆ. ಅದರಲ್ಲಿ ಅರ್ಧದಷ್ಟು ಕೇವಲ ಒಂದು ಬಾರಿ ಉಪಯೋಗಿಸಿದಂತದು, ಮುಖ್ಯವಾಗಿ ಪ್ಯಾಕಿಂಗ್ ಮಾಡುವ ಸಲುವಾಗಿ.
ಪ್ಲಾಸ್ಟಿಕ್ ತ್ಯಾಜ್ಯದ ರಾಶಿಸಂಚಯ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ವ್ಯಾಪಕವಾಗಿ ಬೀರಿದೆ. ಅನುಚಿತ ವಿಲೇವಾರಿ ಕ್ರಮಗಳಿಂದ ಪ್ಲಾಸ್ಟಿಕ್ ನಲ್ಲಿನ ರಾಸಾಯನಿಕಗಳು ಮಣ್ಣಿನಲ್ಲಿ ಸೇರಿಬಿಡುತ್ತವೆ ಹಾಗೂ ಭಾರತದಲ್ಲಿ ಪ್ಲಾಸ್ಟಿಕ್ ಅನ್ನು ಸೀದಾ ಸುಡುವುದು ಗಾಳಿಗೆ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡಿದಂತಾಗುತ್ತದೆ. ಪ್ಲಾಸ್ಟಿಕ್ ಪ್ರಾಣಿಗಳ ಹಾಗೂ ಜಲಚರಗಳ ಅವನತಿಗೆ ಕಾರಣವಾಗುತ್ತಿದೆ. ಟಿಇಆರ್ ಐ ವರದಿ ಪ್ರಕಾರ ಕೇರಳ, ಮುಂಬಯಿ ಹಾಗೂ ಅಂಡಮಾನ್ ನಿಕೋಬಾರ್ ಪಕ್ಕದ ಸಮುದ್ರ ಅತ್ಯಂತ ಕಲುಷಿತವೆಂದು ತಿಳಿದುಬಂದಿದೆ.
ಇಲ್ಲಿನ ದಡಗಳಲ್ಲಿ ಬಂದು ನಿಲ್ಲುವ ತ್ಯಾಜ್ಯವು ಏಕ ಉಪಯೋಗ ವಸ್ತುಗಳಿಂದ ಕೂಡಿವೆ. ಪ್ಲಾಸ್ಟಿಕ್ ಬಾಟಲ್, ಕವರ್ ಗಳು, ಕ್ಲಟರಿಗಳು ಹೆಚ್ಚು ಪ್ರಮಾಣದಲ್ಲಿವೆ. ಕಡಲತೀರಗಳು ಮತ್ತು ಸಮುದ್ರ ಜೀವನವನ್ನು ಪ್ಲಾಸ್ಟಿಕ್ ತ್ಯಾಜ್ಯ ವಿನಾಶ ಮಾಡುತ್ತಿರುವುದನ್ನು ಕಂಡ ನಂತರ, ಆದಿತ್ಯ ರುಯಾ, ಅನುಜ್ ರುಯಾ, ಅಕ್ಷಯ್ ವರ್ಮಾ, ಮತ್ತು ಪುನೀತ್ ಬಾತ್ರಾ ಎಂಬ ನಾಲ್ಕು ಜನ ಎಂಜಿನಿಯರ್‌ಗಳು 2017 ರಲ್ಲಿ ಮುಂಬೈನಲ್ಲಿ ಬೆಕೊವನ್ನು ಪ್ರಾರಂಭಿಸಿದರು. ಈ ಸ್ಟಾರ್ಟ್ ಅಪ್ ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಉತ್ಪನ್ನಗಳಾದ ಕಸದ ಚೀಲಗಳು, ಕಿಚನ್ ಟವೆಲ್ ಮತ್ತು ಟಿಶ್ಯೂ ರೋಲ್‌ಗಳನ್ನು ತಯಾರಿಸುತ್ತದೆ, ಇದು ಗ್ರಾಹಕರಿಗೆ ಏಕ-ಬಳಕೆಯ ವಸ್ತುಗಳನ್ನು ಒದಗಿಸುತ್ತದೆಯಾದರೂ ಇವುಗಳು ಪರಿಸರಕ್ಕೆ ಮಾರಕವಲ್ಲ.
ಪಯಣ
ಸಹೋದರರಾದ ಅನುಜ್ ಮತ್ತು ಆದಿತ್ಯ ರುಯಾ ಮುಂಬೈಯಲ್ಲಿ ಬೀಚ್ ಸ್ವಚ್ಚತಾ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಆದಿತ್ಯನಿಗೆ ಬಿಟ್ಸ್ ಪಿಲಾನಿಯಿಂದ ಪುನೀತ್ ಬಾತ್ರಾ ತಿಳಿದಿದ್ದರೆ, ಅಕ್ಷಯ್ ವರ್ಮಾ ಮತ್ತು ಆದಿತ್ಯ ಬಾಲ್ಯದ ಗೆಳೆಯರು. ಚೌಪಟ್ಟಿ ಮತ್ತು ಜುಹುವಿನಲ್ಲಿ ಬೀಚ್ ಸ್ವಚ್ಚತಾ ಆಂದೋಲನದಡಿ ನಡೆದ ಕಾರ್ಯದಲ್ಲಿ ಭಾಗವಹಿಸಿದಾಗ, ಕಡಲತೀರಗಳಲ್ಲಿ ಸಂಗ್ರಹವಾದ ತ್ಯಾಜ್ಯದ ಪ್ರಮಾಣವನ್ನು ನೋಡಿ ಅವರು ಆಶ್ಚರ್ಯಗೊಂಡರು.
"ಅಗಾಧವಾದ ವಿಸ್ತಾರದಲ್ಲಿ ಕೂಡಿಕೊಂಡಿದ್ದ ಎಂದಿಗೂ ಖಾಲಿಯಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ನೋಡಿ ನಾವು ಚಿಂತೆಗೀಡಾಗಿ ಆಗ ನಾವು ಬೆಕೊ ದ ಬಗ್ಗೆ ಯೋಚಿಸಿದ್ದು. ಮೊದಮೊದಲು ನಾವು ಅಷ್ಟೇನೂ ಆಸಕ್ತಿ ತೋರಿಸದೇ ಇದ್ದರೂ ಆದಿತ್ಯ ಮಾತ್ರ ಏನಾದರು ಮಾಡಬೇಕೆಂದು ಪಟ್ಟುಹಿಡಿದಿದ್ದ. ಆತ ಅಕ್ಷಯ್ ನೊಂದಿಗೆ ಸಂಪರ್ಕದಲ್ಲಿದ್ದ ಮತ್ತು ನಾವು ಆಗಲೆ ಬೆಕೊ ವನ್ನು ಪ್ರಾರಂಭಿಸಿದ್ದು" ಎನ್ನುತ್ತಾರೆ ಸಂಸ್ಥಾಪಕ ಸದಸ್ಯರು ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಪುನೀತ ಬಾತ್ರ.
ಭೌತಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಅಕ್ಷಯ್ ಉತ್ಪನ್ನಗಳನ್ನು ಬಿದಿರಿನ ತಿರುಳಿನಿಂದ ಹಾಗೂ ಜೋಳದ ಪಿಷ್ಟದಿಂದ ಮಾಡಬೇಕೆಂಬ ಕಲ್ಪನೆಯನ್ನು ಕಟ್ಟಿಕೊಟ್ಟರು. ಬೆಚ್ಚನೆಯ ಸಮಶೀತೋಷ್ಣ ಹಾಗೂ ಉಷ್ಣವಲಯದಲ್ಲಿ ಬಿದಿರು ಚೆನ್ನಾಗಿ ಬೆಳೆಯುತ್ತದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿತ್ತು. ಬೇರೆಲ್ಲಾ ಜಾತಿಯ ತೋಟಗಳಿಗಿಂತ ಬಿದಿರು ಅತೀ ಚೆನ್ನಾಗಿ, ಬೇಗನೆ ಹಾಗೂ ಕಡಿಮೆ ನೀರು ಉಪಯೋಗಿಸಿ ಬೆಳೆಯುತ್ತದೆ.
ಬೆಕೊ ತನ್ನ ಸಂಶೋಧನೆ ಮಾಡಲು ಒಂದು ವರ್ಷ ತೆಗೆದುಕೊಂಡಿತು. 2018 ರಲ್ಲಿ ನೋಂದಾಯಿಸಿಕೊಂಡು ಕೇವಲ ಐದು ತಿಂಗಳ ಹಿಂದೆ ಕೆಲಸವನ್ನು ಪ್ರಾರಂಭಿಸಿದರು. ಬಿದಿರಿನ ಪಾಲಿಮರ್‌ನಿಂದ ಟಿಶ್ಯೂ ಪೇಪರ್ ಉತ್ಪನ್ನಗಳನ್ನು ಹಾಗೂ ಬಳಸಿ ಎಸೆಯಬಹುದಾದ ವಸ್ತುಗಳನ್ನು ತಯಾರಿಸುವ ಭಾರತದ ಏಕೈಕ ಕಂಪೆನಿ ಇದು ಎಂದು ಹೇಳಿಕೊಂಡಿದೆ, ಇದು ಪ್ಲಾಸ್ಟಿಕ್‌ಗೆ ಪರಿಸರ ಸ್ನೇಹಿ ಪರ್ಯಾಯವಾಗಿ ಶೀಘ್ರವಾಗಿ ಹೊರಹೊಮ್ಮುತ್ತದೆ.
ಆರಂಭದಲ್ಲಿ ಬೆಕೊ ಕಂಪನಿಯು ಟಿಶ್ಯೂ ಪೇಪರ್ ಮತ್ತು ಕಸದ ಚೀಲಗಳ ಮೇಲೆ ತಮ್ಮ ಚಿತ್ತವನ್ನು ಹರಿಸಿದ್ದರು, ಆದರೆ ಅದರ ಮಾರ್ಗದರ್ಶಕರೊಂದಿಗೆ ಸಮಾಲೋಚಿಸಿದ ನಂತರ, ಅಡಿಗೆ ಟವೆಲ್, ಟಾಯ್ಲೆಟ್ ರೋಲ್ ಮತ್ತು ಟೂತ್‌ಪಿಕ್‌ಗಳನ್ನು ತಯಾರಿಸಲು ಬಿದಿರನ್ನೇ ಬಳಸಲು ಕಂಪನಿಯು ನಿರ್ಧರಿಸಿತು.
ಬೆಕೊದ ಉತ್ಪನ್ನಗಳು ಅದರ ಮಿಶ್ರಗೊಬ್ಬರವಲ್ಲದ, ಜೈವಿಕವಾಗಿ ವಿಘಟನೆ ಮಾಡಲಾಗದ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಇಡೀ ತಂಡ ಗಮನಿಸಿದೆ. ಅದರ ಕೆಲವು ಸ್ಪರ್ಧಿಗಳು ಒರಿಗಮಿ, ಪಾಸಿಯೊ ಮತ್ತು ಜಾನ್ಸನ್ ಮತ್ತು ಜಾನ್ಸನ್ ಆಗಿವೆ.
ಬೆಕೊ ರೈತ ಮಾರುಕಟ್ಟೆಗಳನ್ನು, ಪ್ರದರ್ಶನಗಳನ್ನು ಪ್ರವೇಶಿಸಿತು ಹಾಗೂ ಬೇಡಿಕೆ ಇರುವಷ್ಟು ಉತ್ಪಾದನೆಯಾಗಿತ್ತಿಲ್ಲ ಎಂಬುದನ್ನೂ ತಿಳಿದುಕೊಂಡಿತು.
"ನಮ್ಮ ಉತ್ಪನ್ನಗಳು ಬಿಸಿಬಿಸಿ ಕೇಕಿನಂತೆ ಮಾರಟವಾಗತೊಡಗಿದವು" ಎನ್ನುತ್ತಾರೆ ಪುನೀತ್.
ಚಂದನೆಯ ಕಂತೆ
ಬೆಕೊ ಮೊಸೊ ಬಿದಿರನ್ನು ಬಳಸುತ್ತದೆ, ಇದು ಮುಖ್ಯವಾಗಿ ಚೀನಾ, ಮಹಾರಾಷ್ಟ್ರ ಮತ್ತು ಈಶಾನ್ಯ ಭಾರತದಲ್ಲಿ ಬೆಳೆಯುತ್ತದೆ. ಈ ರೀತಿಯ ಬಿದಿರನ್ನು ಮರುಬಳಕೆ ಮಾಡಬಹುದಾದ ಬಿದಿರಿನ ಬಟ್ಟೆಯನ್ನು ತಯಾರಿಸಲು ಬಳಸಬಹುದು, ಇದು ಹೀರಿಕೊಳ್ಳುವ ಮತ್ತು 100 ಪ್ರತಿಶತ ಮಣ್ಣಿನಲ್ಲಿ ಕರಗಿಬಿಡುವ ಶಕ್ತಿಯನ್ನು ಹೊಂದಿದೆ. ಬಿದಿರಿನ ಕಿಚನ್ ಟವೆಲ್ ಅನ್ನು ಸಾಮಾನ್ಯ ಜೈವಿಕ ವಿಘಟನೀಯವಲ್ಲದ ಮೈಕ್ರೊಫೈಬರ್ ಬಟ್ಟೆಯಂತೆ 100 ಬಾರಿ ತೊಳೆದು ಬಳಸಬಹುದಾಗಿದೆ.
ಆದರೆ ತನ್ನ ಶೈಶವಾವಸ್ಥೆಯಲ್ಲಿರುವ ಬೆಕೂ, ಅದನ್ನು ಮುಂದುವರಿಸಲು ಉತ್ತಮ ಹೆಜ್ಜೆ ಇಡುತ್ತಿದೆ.
ಪ್ಲಾಸ್ಟಿಕ್ ಪ್ಯಾಕೇಜಿಂಗ್ ಪರಿಸರಕ್ಕೆ ಮಾಡಿದ ಹಾನಿಯನ್ನು ಕಂಡ ಕಂಪನಿಯು ತನ್ನ ಉತ್ಪನ್ನಗಳನ್ನು ಪ್ಯಾಕೇಜ್ ಮಾಡಲು ಪ್ಲಾಸ್ಟಿಕ್ ಅನ್ನು ಬಳಸದಿರಲು ನಿರ್ಧರಿಸಿತು. ಬೆಕೊ ಕಂಪನಿಯು ಪ್ಲಾಸ್ಟಿಕ್ ಬದಲಿಗೆ ಕ್ರಾಫ್ಟ್‌ನಲ್ಲಿ ಬಳಸುವ ಮರುಬಳಕೆಯ ಕಾಗದವನ್ನು ಬಳಸುತ್ತದೆ. ಇದು ಮೊದಲಿನಿಂದಲೂ ತಮ್ಮ ಯೋಜನೆಯ ಭಾಗವಾಗಿತ್ತು ಎನ್ನುತ್ತಾರೆ ಪುನೀತ್.
ಪ್ಯಾಕೇಜಿಂಗ್ ಗಾಗಿ ಮರುಬಳಕೆಯ ಮತ್ತು ಕ್ರಾಪ್ಟ್ ಕಾಗದವನ್ನು ಬಳಸುವ ಈ ಪೈಕಿಯಲ್ಲಿ ಏಕೈಕ ಬ್ರಾಂಡ್ ಇದು ಎಂದು ಕಂಪೆನಿ ಹೇಳಿಕೊಂಡಿದೆ, ಇದು ಉತ್ಪನ್ನದ ಪ್ರತಿಯೊಂದು ಘಟಕವನ್ನು ಜೈವಿಕ ವಿಘಟನೀಯ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡುತ್ತದೆ.
ಪ್ರತಿನಿತ್ಯ ಮತ್ತು ಪ್ರತಿ ರೀತಿಯಲ್ಲೂ ನಾವು ನಮ್ಮನ್ನು ಉನ್ನತ ಗುಣಮಟ್ಟಕ್ಕೆ ಏರಿಸಿಕೊಳ್ಳುತ್ತೇವೆ. ಯಾಕೆಂದರೆ ನಾವು ನಮ್ಮ ಮೇಲೆ ಬಳಸುವುದೆಲ್ಲವೂ ಮುಖ್ಯವೆಂದೇ ಭಾವಿಸಿದ್ದೇವೆ." ಎನ್ನುತ್ತಾರೆ ಆದಿತ್ಯ.
ಮಾರುಕಟ್ಟೆ ಮತ್ತು ಆದಾಯ
ಕಂಪೆನಿಯು ಈಗಾಗಲೇ ಮುಂಬೈನ 1,500 ಕ್ಕೂ ಹೆಚ್ಚು ಮಳಿಗೆಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ, ಮತ್ತು ಅಮೆಜಾನ್ ಮತ್ತು ನೈಕಾದಂತಹ ಇಕಾಮರ್ಸ್ ತಾಣಗಳಲ್ಲಿಯೂ ಇವು ಸಿಗುತ್ತವೆ. ಮುಂದಿನ ಮಾರ್ಚ್ ವೇಳೆಗೆ, ಬೆಕೊ 5,000-6,000 ಮಳಿಗೆಗಳನ್ನು ಮಹಾರಾಷ್ಟ್ರ, ಗುಜರಾತ್, ಪುಣೆ, ರಾಜ್‌ಕೋಟ್ ಮತ್ತು ಅಹಮದಾಬಾದ್ ನಗರಗಳಿಗೆ ಪ್ರವೇಶಿಸಲು ನಿರೀಕ್ಷಿಸುತ್ತಿದೆ.
"ನಮ್ಮ ಮೊದಲ ಮೂಲೋದ್ದೇಶ ಇದ್ದದ್ದು ಚಿಲ್ಲರೆ ವ್ಯಾಪಾರಿಗಳಾಗಿ ನಾವು ಸ್ಥಾಪಿತಗೊಳ್ಳಬೇಕು ಎಂಬುದು ಹಾಗೂ ನಾವು ತಿಂಗಳಿಗೆ 2.5 ಲಕ್ಷದ ಸುತ್ತಮುತ್ತ ಲಾಭ ಮಾಡುತ್ತಿದ್ದೇವೆ. ಈಗ ಬಿ2ಬಿ ನಲ್ಲಿ ಪಾಲ್ಗೊಂಡಿರುವ ನಾವು ಸಾಂಘಿಕ ಮಾರಾಟಮಾಡಿ ಈ ತಿಂಗಳು 4.80 ಇಂದ 5 ಲಕ್ಷದವರೆಗೆ ಲಾಭ ಮಾಡಲೇಬೇಕು" ಎನ್ನುತ್ತಾರೆ ಪುನೀತ್
ಈಗಾಗಲೇ ಸ್ಥಾಪಿತವಾಗಿ ಹೆಸರುಮಾಡಿ ಹೆಚ್ಚು ಮಳಿಗೆಗಳನ್ನು ಹೊಂದಿರುವ ಡಿ ಮಾರ್ಟ್, ನೇಚರ್ಸಗಳಲ್ಲಿ ಮಾರಾಟ ಮಾಡಿದರೆ ಹೆಚ್ಚು ಲಾಭ ತಂದುಕೊಡುತ್ತವೆ. ಈಗ ಅದು ಈ ದಾರಿಯಲ್ಲಿ ನಡೆದು ಸಾಕಾರಗೊಳ್ಳುತ್ತಿದ್ದು ಇದೇ ರೀತಿ ಮುಂದುವರೆದರೆ ಇನ್ನು ಐದೇ ತಿಂಗಳಿನಲ್ಲಿ ಲಾಭದಾಯಕ ಕಂಪನಿಯಾಗಲಿದೆ.
ಅಂಗಡಿಗಳಲ್ಲಿ, ಮಳಿಗೆಗಳಲ್ಲಿ ತನ್ನ ಬ್ರ್ಯಾಂಡ್ ಬಗ್ಗೆ ಮಾರ್ಕೆಟಿಂಗ್ ಮಾಡುವಾಗ ಅವುಗಳ ಬೆಲೆ ನಿಗದಿಪಡಿಸುವುದು ಕಷ್ಟದ ಕೆಲಸವಾಗಿತ್ತು. ಎಲ್ಲರ ಕೈಗೆಟುಕುವ, ಎಲ್ಲರೂ ಭರಿಸಬಹುದಾದ ಬೆಲೆ ನಿಗದಿ ಮಾಡುವ ಗುರಿಯನ್ನು ಕಂಪನಿಯು ಹೊಂದಿದೆ.
ಸಾವಯವ ಉತ್ಪನ್ನಗಳು ಸಾವಯವವಲ್ಲದ ಉತ್ಪನ್ನಗಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ದುಪ್ಪಟ್ಟು ಅಥವಾ ಮೂರರಷ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟಗೊಳ್ಳುತ್ತವೆ, ಆದರೆ ಬೆಕೊ ಕೆಲವನ್ನು ಹೊರತುಪಡಿಸಿ ಅದರ ಸುಮಾರು ಉತ್ಪನ್ನಗಳನ್ನು ಈಗಿರುವ ಬೆಲೆಗಳ ಶ್ರೇಣಿಯಲ್ಲೇ ಇಟ್ಟಿದೆ.
"ಜನ ಯಾವಾಗಲೂ ಅಗ್ಗವಾದ, ಪರಿಸರಕ್ಕೆ ಹಾನಿಕಾರಕವಾದ ವಸ್ತುಗಳನ್ನೇ ಆಯ್ದುಕೊಳ್ಳುತ್ತಾರೆ." ಎಂದು ಪುನೀತ್ ಅಭಿಪ್ರಾಯ ಪಟ್ಟಿದ್ದಾರೆ.
ತನ್ನ ಸ್ಪರ್ಧಿಗಳಿಗಿಂತ ಭಿನ್ನವಾಗಿರುವ ಬೆಕೊ ತನ್ನ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಸಾಕಷ್ಟು ಹಾರ್ಡ್ ಡೇಟಾ ಮತ್ತು ವಿಜ್ಞಾನವನ್ನು ಬಳಸುತ್ತದೆ.
ಪರಿಸರ ಸ್ನೇಹಿ, ವಿಘಟನೆ ಹೊಂದುವ ವಸ್ತುಗಳ ಭವಿಷ್ಯ
ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿರುವ ಬೆಕೊ, ಮಹತ್ವಾಕಾಂಕ್ಷೆಯ ಬೆಳವಣಿಗೆಯ ಯೋಜನೆಯನ್ನು ಸಹ ರೂಪಿಸಿಕೊಂಡಿದೆ. ಇದು ಜೈವಿಕ ವಿಘಟನೀಯವಾದ ಟವೆಲ್ ಗಳನ್ನು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒಳಗೊಂಡಂತೆ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಜೋಳದ ಪಿಷ್ಟದ ಪಾಲಿಮರ್‌ಗಳಿಂದ ತಯಾರಿಸಿದ ಸಂಪೂರ್ಣ ಕರಗಬಲ್ಲ ಮತ್ತು ಜೈವಿಕ ವಿಘಟನೀಯ ಕಸದ ಚೀಲಗಳನ್ನು ಈ ವರ್ಷದ ಜೂನ್‌ನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.
ಆದಾಗ್ಯೂ ಬೆಕೊ ಪರಿಸರದ ಮೇಲೆ ಬೀರಿರುವ ಪ್ರಭಾವವೇನು ಎಂಬುದು ಅರ್ಥವಾಗುವುದಿಲ್ಲ. ಕಂಪನಿಯ ಜಾಲತಾಣವು ಬೆಕೊ 120 ಟನ್ ನಷ್ಟು ತ್ಯಾಜ್ಯವನ್ನು ತಗೆದು 75 ಪ್ರತಿಶತ ಕಾರ್ಬನ್ ಹೊರ ಸೂಸುವಿಕೆಯನ್ನು ಅನ್ನು ಕಡಿಮೆ ಮಾಡಿರುವುದಾಗಿ ಹೇಳಿಕೊಂಡಿದೆ. ಆದರೆ ಬದಲಾವಣೆ ಆಗಬೇಕಿರೋದು ಗ್ರಾಹಕರಿಂದ.
ಪುನೀತ್, ಉತ್ತಮ ಆಯ್ಕೆಗಳೆಡೆಗೆ ಹೊರಳಬಲ್ಲ ಆಯ್ಕೆಗಳಿಗೆ ನಮ್ಮನ್ನು ತಿರುಗಿಸುವ ಸಾಮಾಜಿಕ ಜಾಗೃತಿ ಬೇಕು ಎಂದು ನಂಬುತ್ತಾರೆ. ಪ್ಲಾಸ್ಟಿಕ್ ನಿಷೇಧದಂತಹ ಸರಕಾರಿ ಆದೇಶಗಳು ಜನರನ್ನು ಪರಿಸರ ಸ್ನೇಹಿ ಉತ್ಪನ್ನಗಳೆಡೆಗೆ ಹೊರಳಿಸಿದೆ. ಆದಾಗ್ಯೂ ಈ ಕ್ರಮಗಳು ಇನ್ನಷ್ಟು ಬಿಗಿಗೊಳ್ಳಬೇಕು ಎನ್ನುತ್ತಾರೆ ಪುನೀತ್.
"ಚತುರವಾದ ಆಯ್ಕೆಗಳನ್ನು ಹಾಗೂ ಪರ್ಯಾಯ ಮಾರ್ಗವನ್ನು ಹುಡುಕುವುದರಿಂದ ನಾವು ಪರಿಸರಕ್ಕೆ ಸೇವೆ ಸಲ್ಲಿಸಿದಂತಾಗುತ್ತದೆ. ಹೇಗೂ ಪ್ಲಾಸ್ಟಿಕ್ ನಿಷೇಧ ಎಲ್ಲೆಡೆಯೂ ಅನಿವಾರ್ಯವಾದ್ದರಿಂದ ಪರಿಸರ ಸ್ನೇಹಿ ಡಿಸ್ಪೋಸಲ್ ಗಳಿಗೆ ಒಳ್ಳೆಯ ಭವಿಷ್ಯವಿದೆ" ಎಂದೂ ಸೇರಿಸುತ್ತಾರೆ.