ವಯೋವೃದ್ಧರು, ಮಕ್ಕಳಿಗೆ ಊಟ ನೀಡುವ ಮೂಲಕ ತೀರಿಹೋದ ಮಗನ ಆಸೆಯನ್ನು ಈಡೇರಿಸುತ್ತಿರುವ ಮುಂಬೈ ಮೂಲದ ತನ್ನಾ ದಂಪತಿಗಳು
ಆಕಸ್ಮಿಕ ಅಪಘಾತದಲ್ಲಿ ಮರಣ ಹೊಂದಿದ ಮಗನ ನೆನಪು ಚಿರ ಕಾಲ ಉಳಿಯಬೇಕು ಎಂಬ ನಿಟ್ಟಿನಲ್ಲಿ ವಯೋವೃದ್ಧರಿಗೆ, ಅನಾಥರಿಗೆ ಆಹಾರ, ಬಟ್ಟೆ ಕೊಡುವ ಮೂಲಕ ತಮ್ಮ ಜೀವನ ಮುಡಿಪಾಗಿಟ್ಟ ಮುಂಬೈನ ತನ್ನಾ ದಂಪತಿಗಳು.
ಇದು 2011 ರಲ್ಲಿ ನಡೆದ ಘಟನೆ. ಮುಂಬೈ ಮೂಲದ ದಂಪತಿಗಳ ಮಗ ಸಾವನ್ನಪ್ಪಿದ ನಂತರ ಖಿನ್ನತೆಗೊಳಗಾದ ಪ್ರದೀಪ್ ತನ್ನಾ ಹಾಗೂ ದಮಯಂತಿ ತನ್ನಾ ದಂಪತಿ ಮುಂದೆ ದಾರಿ ಕಾಣದೆ ಆತ್ಮೆ ಹತ್ಯೆ ಯೋಚನೆಗಳು ಕೂಡ ಇವರ ಮುಂದಿದ್ದಾಗ ಮಗನಿಗಾಗಿ ಬದಲುಕಲು ನಿರ್ಧಾರ ಮಾಡುತ್ತಾರೆ. ತಮ್ಮ ಮಗನನ್ನು ಪ್ರತಿನಿತ್ಯ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸವನ್ನು ಮಾಡಲು ಮುಂದಾಗುತ್ತಾರೆ ಈ ದಂಪತಿ.
ಪ್ರದೀಪ್ ತನ್ನಾ, ದಯಮಂತಿ ತನ್ನಾ ಎಂಬ ದಂಪತಿಯ ಪುತ್ರ ನಿಮೇಶ್ 2011 ರಲ್ಲಿ ಮುಂಬೈನ ಕಂಪನಿಯೊಂದರಲ್ಲಿ ಸಂದರ್ಶನಕ್ಕೆಂದು ಹೊರಟಾಗ ರೈಲು ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ತಮ್ಮ ಮಗನ ಸಾವಿನ ಸುದ್ದಿ ತಿಳಿದ ದಂಪತಿ ಅಕ್ಷರಶಃ ಕಂಗಾಲಾಗಿ ಹೋಗಿದ್ದರು. ಪ್ರಪಂಚದಲ್ಲಿ ತಮಗೆ ಇನ್ನೇನು ಉಳಿದಿಲ್ಲ ಎನ್ನುವ ಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದರು. ದೇವರು, ಮಠ ಮಂದಿರ, ಸೇರಿದಂತೆ ಸಾಕಷ್ಟು ಕಡೆ ಸುತ್ತಿದರೂ ಮಗ ಸಾವಿನ ಶೋಕದಿಂದ ಹೊರ ಬರಲೇ ಇಲ್ಲ. ಹೀಗಿರುವಾಗ ತಮ್ಮ ಮಗನ ಹೆಸರು ಚಿರಕಾಲ ಇರಬೇಕು ಎಂಬ ಉದ್ದೇಶದಿಂದ ಹಾಗೂ ತಮ್ಮ ಮಗನನ್ನು ಸದಾ ನೆನಪಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ಮಗನ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಒಂದನ್ನು ಆರಂಭಿಸಿದ ಈ ದಂಪತಿ ಅದರ ಮುಖಾಂತರ ಉಚಿತ ಅನ್ನದಾಸೋಹ ಮಾಡುತ್ತಿದ್ದಾರೆ ಎಂದು ಲೋಕಲ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ದಿ ಬೆಟರ್ ಇಂಡಿಯಾ ಪ್ರಕಾರ, ತಮ್ಮ ಮಗ ನಿಮೇಶ್‌ನ ಸ್ಪರಿಸುತ್ತಾ ಪ್ರತಿ ದಿನ ಅನಾಥರಿಗೆ, ಹಸಿದು ಬಂದವರಿಗೆ, ಬಡವರಿಗೆ, ವೃದ್ಧರಿಗೆ ಪ್ರತಿ ದಿನ ಆಹಾರ ನೀಡುತ್ತಿದ್ದಾರೆ. ಆರಂಭದಲ್ಲಿ ಈ ದಂಪತಿ ತಮ್ಮ ಮನೆಯಲ್ಲಿಯೇ ಆಹಾರ ತಯಾರಿಸಿ 30 ಮಂದಿಗೆ ನೀಡುತ್ತಿದ್ದರು. ದಿನ ಕಳೆದಂತೆ ಈ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸದ್ಯ ಈ ದಂಪತಿ ಪ್ರತಿ ನಿತ್ಯ 110 ಕ್ಕೂ ಹೆಚ್ಚು ಕುಟುಂಬಗಳಿಗೆ ಹಾಗೂ ಅನಾಥರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅನಾಥ ಹಾಗೂ ಬಡ ಮಕ್ಕಳಿಗೆ, ವೃದ್ಧರಿಗೆ ಬಟ್ಟೆ, ಶಾಲಾ ಪುಸ್ತಕ, ಔಷಧಿಗಳನ್ನು ನೀಡುತ್ತಿದ್ದಾರೆ. ಸದ್ಯ 7 ಜನರನ್ನು ಕೆಲಸಕ್ಕಿಟ್ಟುಕೊಂಡು ಈ ಸಾಮಾಜ ಸೇವೆಯನ್ನು ನೆರೆವೇರಿಸಿಕೊಂಡು ಬಂದಿದ್ದಾರೆ.
ಇನ್ನು ಈ ದಂಪತಿ ಆಹಾರ ಪುಸ್ತಕ ಬಟ್ಟೆ ಅಷ್ಟೆ ಅಲ್ಲದೆ ಮಗನ ಹೆಸರಿನಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸುತ್ತಿದ್ದಾರೆ. ಈ ಮೂಲಕ ಮಗನ ಹೆಸರಿನಲ್ಲಿ ನಾನಾ ಪಾರಿತೋಷಕಗಳನ್ನು ಕ್ರೀಡಾಪಟುಗಳಿಗೆ ನೀಡುತ್ತಿದ್ದಾರೆ. ಮಗನ ಜನ್ಮ ದಿನದಂದೂ ತಮ್ಮ ಮಗನ ಹುಟ್ಟುಹಬ್ಬವನ್ನು ಹೀಗೆ ಅನಾಥರಿಗೆ, ವೃದ್ಧಿರಿಗೆ ಆಹಾರ ನೀಡುವ ಮೂಲಕ ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ. ಹಾಗಂತ ಇವರೇನು ಹೇಳಿಕೊಳ್ಳುವಷ್ಟು ಶ್ರೀಮಂತರಲ್ಲ. ಆದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇವರ ಈ ಕೆಲಸಕ್ಕೆ ಹಲವಾರು ದಾನಿಗಳು ಕೈಜೋಡಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡುತ್ತಾ ಪ್ರದೀಪ್ ತನ್ನಾ ದಂಪತಿ, ಹೀಗೆ ಹೇಳಿದರು,
ಜೀವನದಲ್ಲಿ ಏನೂ ಇಲ್ಲ ಎಲ್ಲವನ್ನು ಕಳೆದುಕೊಂಡೆವು ಅಂದುಕೊಳ್ಳುತ್ತಿರುವಾಗಲೇ ನಮಗೆ ಅನ್ನಿಸಿದ್ದು ಬಡವರಿಗೆ ಅನ್ನ ನೀಡುವ ಇಂಥಹದೊಂದು ಕಾರ್ಯ ಮಗನನ್ನು ಅವನ ಹೆಸರನ್ನು ಜೀವಂತವಾಗಿಡಲು ಸಾಧ್ಯವಾಗುತ್ತದೆ ಎಂದು. ಹೀಗಂದುಕೊಂಡವರೇ ಈ ಕೆಲಸಕ್ಕೆ ಕೈ ಹಾಕಿದೆವು. ನಮ್ಮ ಹಾಗೆ, ಮಕ್ಕಳನ್ನು, ತಂದೆ ತಾಯಿಯನ್ನು, ಆತ್ಮೀಯರನ್ನು ಕಳೆದುಕೊಂಡ ಎಷ್ಟೋ ಜನ ಇದ್ದಾರೆ. ಅವರಿಗೆ ಎಂದೂ ಒಂಟಿತನ ಕಾಡಬಾರದು ಎಂಬುದು ನಮ್ಮ ಆಶಯ ಎನ್ನುತ್ತಾರೆ ಈ ದಂಪತಿ.
ಅದೇನೆ ಇರಲಿ ಮಗ ತೀರಿಕೊಂಡ ಎಂದು ಜೀವನ ಪೂರ್ತಿ ಅದೇ ಚಿಂತೆಯಲ್ಲಿಲ್ಲದೆ, ತಮ್ಮದೇ ಆದ ಒಂದು ಯೋಚನೆಯ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿರುವ ಪ್ರದೀಪ್ ತನ್ನ ಹಾಗೂ ದಮಯಂತಿ ತನ್ನಾ ರ ಹಸಿದವರಿಗೆ ಊಟ ನೀಡುವ ಕೆಲಸ ನಿಜಕ್ಕೂ ಶ್ಲಾಘನೀಯ. ಇಂದಿಗೂ ತಮ್ಮ ಮಗ ಜೀವಂತವಾಗಿಯೇ ಇದ್ದಾನೆ. ಈ ಕೆಲಸದಲ್ಲಿ ನಾವು ಅವನನ್ನು ನೋಡುತ್ತೇವೆ ಎಂಬ ಭಾವನೆಯಿಂದಲೇ ಬೆಳಗ್ಗೆಯಾದರೆ ಸಾಕು ತಮ್ಮನ್ನು ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಈ ದಂಪತಿ. ಇವರ ಸಾಮಾಜಿಕ ಕಳಕಳಿ ಹಾಗೂ ಈ ಕೆಲಸಕ್ಕೆ ನಮ್ಮದೊಂದು ಸಲಾಂ ಹೇಳಲೇಬೇಕು.