ಚಂದ್ರಯಾನ-2 : ವಿಕ್ರಮ್ ಲ್ಯಾಂಡರ್‌ ನ ಅವಶೇಷಗಳನ್ನು ಪತ್ತೆ ಹಚ್ಚಿದ ಭಾರತೀಯ ಇಂಜಿನೀಯರ್‌

ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆಹಚ್ಚಿದ ಷಣ್ಮುಗ ಸುಬ್ರಮಣಿಯನ್ ಅವರಿಗೆ ಮಿಂಚಂಚೆ ಮುಖಾಂತರ, ವಿಕ್ರಮ್ ಲ್ಯಾಂಡರ್ ನ ಅವಶೇಷಗಳ ಬಗ್ಗೆ ತಿಳಿಸಿದ್ದಕ್ಕಾಗಿ ನಾಸಾ ಅಧಿಕಾರಿಯೊಬ್ಬರು ಧನ್ಯವಾದಗಳನ್ನು ಅರ್ಪಿಸಿದರು.

ಚಂದ್ರಯಾನ-2 : ವಿಕ್ರಮ್ ಲ್ಯಾಂಡರ್‌ ನ ಅವಶೇಷಗಳನ್ನು ಪತ್ತೆ ಹಚ್ಚಿದ ಭಾರತೀಯ ಇಂಜಿನೀಯರ್‌

Tuesday December 03, 2019,

2 min Read

ಇಂದು ಮುಂಜಾನೆ ಚೆನ್ನೈ ಮೂಲದ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ಅವರ ಟ್ವೀಟ್ ವೈರಲ್ ಆಗಿದೆ. ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಆದ ಇವರು ಚಂದ್ರನ ಮೇಲ್ಮೈಯಲ್ಲಿ ಇಸ್ರೋದ ಚಂದ್ರಯಾನ್ -೨ ಭಾಗವಾದ ವಿಕ್ರಮ್ ಲ್ಯಾಂಡರ್ ನ ಅವಶೇಷಗಳನ್ನು ಪತ್ತೆಹಚ್ಚಲು ನಾಸಾಕ್ಕೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.


ನಾಸಾದ ಗೊಡ್ಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಲೂನಾರ್ ರೆಕಾನೈಸನ್ಸ್ ಆರ್ಬಿಟರ್ ಮಿಷನ್‌ನ ಉಪ ಪ್ರಾಜೆಕ್ಟ್ ವಿಜ್ಞಾನಿ ಜಾನ್ ಕೆಲ್ಲರ್ ಅವರಿಂದ ಸ್ವೀಕರಿಸಿದ ಮಿಂಚಂಚೆಯ ಸ್ಕ್ರೀನ್‌ಶಾಟ್‌ನೊಂದಿಗೆ ಈ ಟ್ವೀಟ್ ಅನ್ನು ಮಾಡಲಾಗಿದೆ.

ಮಿಂಚಂಚೆಯಲ್ಲಿ, ನಾಸಾ ಅಧಿಕಾರಿಯು ಭಗ್ನಾವಶೇಷಗಳ ಬಗ್ಗೆ ಸಂಸ್ಥೆಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು, ಅದರ ನಂತರ ತಂಡವು ಪ್ರಭಾವವಾದ ಜಾಗದ ಹಳೆಯ ಮತ್ತು ಹೊಸ ಚಿತ್ರಗಳನ್ನು ಹೋಲಿಸಿ ಕೆಲವು ಬದಲಾವಣೆಗಳನ್ನು ಕಂಡುಕೊಂಡಿದೆ. ಇದರೊಂದಿಗೆ, ನಾಸಾ ಚಂದ್ರಯಾನವು ಅಪ್ಪಳಿಸಿದ ಜಾಗದ ಬಗ್ಗೆ ದೃಢಪಡಿಸಿತು ಮತ್ತು ಅವರ ಸಂಶೋಧನೆಯ ಶ್ರೇಯವನ್ನು ನೀಡಿತು.


ನಾಸಾ ತನ್ನ ಹೇಳಿಕೆಯಲ್ಲಿ ಈ ರೀತಿಯಾಗಿ ಹೇಳಿದೆ,


"ಷಣ್ಮುಗ ಮೊದಲು ಕಂಡುಹಿಡಿದ ಭಗ್ನಾವಶೇಷವು ಮುಖ್ಯ ಕ್ರ್ಯಾಶ್ ಸೈಟ್‌ನಿಂದ ವಾಯುವ್ಯಕ್ಕೆ 750 ಮೀಟರ್ ದೂರದಲ್ಲಿದೆ ಮತ್ತು ಆ ಮೊದಲ ಮೊಸಾಯಿಕ್‌ನಲ್ಲಿ ಒಂದೇ ಪ್ರಕಾಶಮಾನವಾದ ಪಿಕ್ಸೆಲ್ನಿಂದ ಕೂಡಿತ್ತು."


ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಆದ ಇವರು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್‌ನ ಅವಶೇಷಗಳನ್ನು ಸಕ್ರಿಯವಾಗಿ ಪತ್ತೆ ಮಾಡಿರುವುದು ಇದೇ ಮೊದಲಲ್ಲ, ಅಕ್ಟೋಬರ್ 3 ರಂದು, ಷಣ್ಮುಗ ಅವರು ಲ್ಯಾಂಡಿಂಗ್ ಜಾಗದ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿ, ನಾಸಾವನ್ನು ವಿಕ್ರಮ್ ಲ್ಯಾಂಡರ್ ಇದೇ ಇರಬಹುದೇ ಎಂದು ಕೇಳಿದ್ದರು, ಏಕೆಂದರೆ ಅದು ಚಂದ್ರನ ಮರಳಿನ ಕೆಳಗೆ ಹೂತಿರುವ ಹಾಗೆ ಕಾಣುತ್ತಿತ್ತು.



ಷಣ್ಮುಗ ಸುಬ್ರಮಣಿಯನ್ (ಚಿತ್ರಕೃಪೆ: ಫೇಸ್‌ಬುಕ್)




ಷಣ್ಮುಗ ಅವರ ಸಾಧನೆಯ ಸುದ್ದಿಯನ್ನು ತಿಳಿದ, ಉದ್ಯಮಿಯಾದ ಆನಂದ್ ಮಹೀಂದ್ರಾ, ಅವರ ಪ್ರಯತ್ನವನ್ನು ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಪ್ರಶಂಸಿಸಿ ಟ್ವಿಟ್ ಮಾಡಿದ್ದಾರೆ.


ಸೆಪ್ಟೆಂಬರ್ 7 ರಂದು, ಇಸ್ರೋ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಮೃದುವಾಗಿ ಇಳಿಸಲು ಪ್ರಯತ್ನಿಸಿತು. ದುರದೃಷ್ಟವಶಾತ, ನಿಗದಿತ ಟಚ್‌ಡೌನ್‌ಗೆ ಸ್ವಲ್ಪ ಮೊದಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ವಿಕ್ರಮ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಇದನ್ನು ಅನುಸರಿಸಿ, ನಾಸಾದ ಲೂನಾರ್ ರೆಕಾನೈಸನ್ಸ್ ಆರ್ಬಿಟರ್ (ಎಲ್ಆರ್ಒ) ಕ್ಯಾಮೆರಾ ತಂಡವು ಸೆಪ್ಟೆಂಬರ್ 17 ರಂದು ವಿಕ್ರಮ ಲ್ಯಾಂಡರ್ ಇಳಿಯಬೇಕಾದ ಜಾಗದ ಮೊದಲ ಮೊಸಾಯಿಕ್ ಅನ್ನು ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಿತ್ತು.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.