95 ಪ್ರತಿಶತ ಕುಸಿದ ಓಲಾ ಆದಾಯ: ಉದ್ಯೋಗ ಕಳೆದುಕೊಳ್ಳಲಿದ್ದಾರೆ 1,400 ಸಿಬ್ಬಂದಿಗಳು

ಓಲಾ ಕಂಪನಿಯ ಸಂಸ್ಥಾಪಕರಾದ ಭಾವಿಶ್‌ ಅಗರವಾಲ್‌ ಇನ್ನೂ ಮುಂದೆ ಕೋವಿಡ್-19‌ ಕಾರಣಕ್ಕೆ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ ಎಂದಿದ್ದಾರೆ.

95 ಪ್ರತಿಶತ ಕುಸಿದ ಓಲಾ ಆದಾಯ: ಉದ್ಯೋಗ ಕಳೆದುಕೊಳ್ಳಲಿದ್ದಾರೆ 1,400 ಸಿಬ್ಬಂದಿಗಳು

Thursday May 21, 2020,

2 min Read

ಕ್ಯಾಬ್‌ ಸೇವೆ ಒದಗಿಸುವ ಕಂಪನಿಯಾದ ಓಲಾ ಕೊರೊನಾವೈರಸ್‌ ಮಾಹಾಮಾರಿಯಿಂದಾದ ನಷ್ಟದಿಂದ 1,400 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ. ಕಂಪನಿಯ ಹಿರಿಯ ನಿರ್ವಹಣಾ ಮಂಡಳಿಯ ವೇತನದಲ್ಲಿ ಕಡಿತಗೊಳಿಸಿದರೂ ಈ ಪರಿಸ್ಥಿತಿ ಎದುರಾಗಿದೆ.


ಯಾವ ಹುದ್ದೆಯ ಅಥವಾ ವ್ಯವಸ್ಥಾಪನೆಯಲ್ಲಿ ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಬಹಿರಂಗಪಡಿಸಿದ ಕಂಪನಿ, ಕೋವಿಡ್‌-19 ಕಾರಣದಿಂದ ಉದ್ಯೋಗವನ್ನು ಕಡಿತಗೊಳಿಸುವುದು ಇದು ಕೊನೆಯಬಾರಿ ಎಂದಿದೆ.


“6 ವಾರಗಳ ಹಿಂದೆ ನಿಮಗೆ ನಾನು ಬರೆದ ಕೊನೆಯ ಇಮೇಲ್‌ನ ನಂತರ ನಾನು ಮುಂದೆ ಉತ್ತಮ ಪರಿಸ್ಥಿತಿಯಲ್ಲಿ ನಿಮಗೆ ಮತ್ತೆ ಇಮೇಲ್‌ ಬರೆಯಬಹುದು ಎಂದುಕೊಂಡಿದ್ದೆ. ದುರಾದೃಷ್ಟವಶಾತ್‌ ಕೋವಿಡ್‌ ಬಿಕ್ಕಟ್ಟು ನಮ್ಮ ಸುತ್ತಲೂ ಸಾಮಾಜಿಕ ಮತ್ತು ಆರ್ಥಿಕ ಹಾನಿ ಮಾಡುತ್ತಿರುವುದು ಮುಂದುವರೆದಿದೆ. ಕೊರೊನಾವೈರಸ್‌ ತಕ್ಷಣಕ್ಕೆ ನಮ್ಮನ್ನು ಬಿಟ್ಟು ಹೋಗುವುದಿಲ್ಲವೆಂಬುದು ಈಗ ಖಚಿತವಾಗಿದೆ. ವೈರಸ್‌ ಮತ್ತು ಅದರ ಪರಿಣಾಮಗಳ ಜೊತೆ ನಾವು ಬದುಕಬೇಕಾಗಿದೆ,” ಎಂದು ಓಲಾ ದ ಸಿಇಓ ಮತ್ತು ಸಹ ಸಂಸ್ಥಾಪಕರಾದ ಭಾವಿಶ್‌ ಅಗರವಾಲ್‌ ಕಂಪನಿಯ ಉದ್ಯೋಗಿಗಳಿಗೆ ಇಮೇಲ್‌ ನಲ್ಲಿ ಬರೆದಿದ್ದಾರೆ.




ಲಾಕ್‌ಡೌನ್‌ ನಿಂದ ಕಳೆದ ಎರಡು ತಿಂಗಳಲ್ಲಿ ಓಲಾದ ಆದಾಯ ಶೇ. 95 ರಷ್ಟು ಕುಸಿದಿದೆ ಎಂದು ಕಂಪನಿ ಹೇಳಿಕೆ ನೀಡಿದ್ದು, ಇದು ಕಂಪನಿಗೆ ಹಣವನ್ನು ಉಳಿಸಿಕೊಳ್ಳುವುದರತ್ತ ಮುಖಮಾಡುವಂತೆ ಮಾಡಿದೆ. ಮಂಗಳವಾರ ಓಲಾ 160 ನಗರಗಳಲ್ಲಿ ತನ್ನ ಕಾರ್ಯವನ್ನು ಪುನರಾರಂಭಿಸಿತ್ತು.


ಮೊದಲಿನ ಹಾಗೆ ಜನ ಹೊರಗಡೆ ಹೋಗಿ ತಿರುಗಾಡುವುದಕ್ಕೆ ಇನ್ನೂ ಬಹಳ ಸಮಯ ಬೇಕಾಗುತ್ತದೆ. ಕಂಪನಿಗಳ ಬಹುಪಾಲು ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದು, ತೀರಾ ಅವಶ್ಯವೆನಿಸಿದಾಗ ಮಾತ್ರ ವಿಮಾನಯಾನ ಮಾಡುತ್ತಿರುವುದು, ಇವೆಲ್ಲವೂ ಮತ್ತು ಇದರ ಪರಿಣಾಮಗಳು ತುಂಬಾ ದಿನದವರೆಗೆ ಹೀಗೆಯೆ ಇರಬಹುದು.


“ಕೋವಿಡ್‌-19 ಬರುವುದಕ್ಕಿಂತ ಮುಂಚೆ ಜಗತ್ತು ಹೇಗಿತ್ತೋ ಹಾಗಾಗುವುದು ಕೆಲ ಸಮಯದವರೆಗಂತೂ ಸಾಧ್ಯವಿಲ್ಲ,” ಎಂದು ಬರೆದಿದ್ದಾರೆ ಅವರು.


ಕೆಲಸಕಳೆದುಕೊಂಡ ಪ್ರತಿ ಉದ್ಯೋಗಿಗೂ ಮೂರು ತಿಂಗಳ ವೇತನ ನೀಡಲಾಗುತ್ತಿದ್ದು, ಕಂಪನಿಯಲ್ಲಿ ಹೆಚ್ಚು ಸಮಯ ಕಾರ್ಯನಿರ್ವಹಿಸಿದವರಿಗೆ ಹೆಚ್ಚು ಹಣ ಸಿಗಲಿದೆ. ಕಂಪನಿಯ ವಿಮಾ ಯೋಜನೆಯನ್ನು ಡಿಸೆಂಬರ್‌ 31 2020 ರ ವರೆಗೆ ವಿಸ್ತರಿಸಲಾಗುತ್ತಿದೆ.


“ಈ ನಿರ್ಧಾರವು ಉದ್ಯೋಗಿಗಳ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿಲ್ಲ, ಇದು ನಮಗೆ ಒದಗಿಬಂದಿರುವ ಅನಿಯಂತ್ರಿತ ಪರಿಸ್ಥಿತಿ.”‌

“ಇದು ಒಂದು ಬಾರಿಯ ಕಾರ್ಯವಾಗಿದ್ದು, ಈ ವಾರದ ಕೊನೆಯಲ್ಲಿ ಇಂಡಿಯಾ ಮೊಬಿಲಿಟಿ ಬ್ಯೂಸಿನೆಸ್‌ ಮತ್ತು ಮುಂದಿನ ವಾರದ ಕೊನೆಯಲ್ಲಿ ಓಲಾ ಫುಡ್ಸ್‌ ಹಾಗೂ ಓಲಾ ಹಣಕಾಸು ಸೇವೆಗಳ ಕಾರ್ಯ ಕೊನೆಗೊಳ್ಳಲಿದೆ,” ಎಂದರು ಭಾವಿಶ್.


ಲಾಕ್‌ಡೌನ್ ಘೋಷಣೆಯಾದ ಎರಡು ತಿಂಗಳ ಅವಧಿಯಲ್ಲಿ, ಕಂಪನಿಯು ತನ್ನ ಚಾಲಕರನ್ನು ಬೆಂಬಲಿಸಲು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿತ್ತು. ಇವುಗಳಲ್ಲಿ ಮನೆಯ ಖರ್ಚನ್ನು ಬೆಂಬಲಿಸಲು ಶೂನ್ಯ ಬಡ್ಡಿ ಸಾಲವನ್ನು ನೀಡಿದ್ದು ಮತ್ತು ಚಾಲಕರು ಮತ್ತು ಅವರ ಪತ್ನಿಯರಿಗೆ ಕೋವಿಡ್-19 ವಿಮೆಯನ್ನು ವಿಸ್ತರಿಸಿರುವುದು ಮತ್ತು ಇತರೆ ಕ್ರಮಗಳು ಸೇರಿವೆ.