ಒಂದು ಲಕ್ಷ ವೈದ್ಯರ ಸಹಾಯದಿಂದ, ಭಾರತದಲ್ಲಿ ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು ಸುಧಾರಿಸುವ ಕೆಲಸ ಮಾಡುತ್ತಿದೆ ಈ ಸಾಮಾಜಿಕ ಉದ್ಯಮ
ನಿರಂತರ ವೈದ್ಯಕೀಯ ಶಿಕ್ಷಣ ನೀಡುವ ಸಲುವಾಗಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ, ಉಚಿತ ಮತ್ತು ಆಕರ್ಷಕವಾದ ವೀಡಿಯೊ ಮೂಲಕ ವಿಷಯವನ್ನು ಒದಗಿಸುತ್ತಿರುವ ಬೆಂಗಳೂರು ಮೂಲದ ಓಮ್ನಿಕ್ಯುರಿಸ್ ಭಾರತದಲ್ಲಿ ಆರೋಗ್ಯದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ.
2018 ರಲ್ಲಿ ಪ್ರಕಟವಾದ ದಿ ಲ್ಯಾನ್ಸೆಟ್ ಎಂಬ ಸಾಪ್ತಾಹಿಕ ವೈದ್ಯಕೀಯ ಜರ್ನಲ್ ಪ್ರಕಾರ ಭಾರತದಲ್ಲಿ ತಡೆಗಟ್ಟಬಹುದಾದ ಕಾಯಿಲೆಗಳು ಮತ್ತು ಗುಣಪಡಿಸಬಹುದಾದ ಪರಿಸ್ಥಿತಿಗಳಿಂದಾಗಿ ಪ್ರತಿವರ್ಷ 2.4 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.
2016 ರಲ್ಲಿ, ಆರೈಕೆಯ ಗುಣಮಟ್ಟ ಕಡಿಮೆ ಇರುವುದರಿಂದ ಸುಮಾರು 1.6 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ 84 ರಷ್ಟು ಹೃದಯರಕ್ತನಾಳದ ತೊಂದರೆಯಿಂದ ಸಾವು ಸಂಭವಿಸಿವೆ, ಮತ್ತು 61 ಪ್ರತಿಶತದಷ್ಟು ಸಾವುಗಳು ಜನನದ ನಂತರದ ಸಮಸ್ಯೆಗಳಿಂದಾಗಿವೆ. ಹಾಗೂ 50 ಪ್ರತಿಶತದಷ್ಟು ಕ್ಷಯರೋಗಗಳು ಆರೈಕೆಯ ಗುಣಮಟ್ಟ ಕಡಿಮೆಯಿರುವ ಕಾರಣ ಉಂಟಾಗಿದೆ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.
ಗುಣಮಟ್ಟದ ಆರೋಗ್ಯ ಸೇವೆಗಳ ಕೊರತೆಯೇ ಇದಕ್ಕೆ ಒಂದು ಬಹು ಮುಖ್ಯ ಕಾರಣ. ಸಣ್ಣ ಪಟ್ಟಣಗಳಲ್ಲಿ ಆರೋಗ್ಯ ಸೇವೆ ಒದಗಿಸುವವರು ನಗರದಲ್ಲಿನ ತಮ್ಮ ಸಹವರ್ತಿಗಳಿಗೆ ಹೋಲಿಸಿದರೆ ಇತ್ತೀಚಿನ ಬೆಳವಣಿಗೆಗಳೊಂದಿಗೆ ಅಭಿವೃದ್ಧಿ ಹೊಂದಿಲ್ಲ ಎಂಬುದು ಇದಕ್ಕೆ ಮತ್ತೊಂದು ಕಾರಣವಾಗುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಮತ್ತು ತಾಂತ್ರಿಕ ಪ್ರಗತಿಯ ಹೊರತಾಗಿಯೂ ಕೂಡ, ಕಡಿಮೆ ಗುಣಮಟ್ಟದ ಆರೈಕೆಯಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಅವರವರ ಆಯ್ದ ವಿಭಾಗಗಳಲ್ಲಿ ಇತ್ತೀಚಿನ ಪ್ರಗತಿಯೊಂದಿಗೆ ವೈದ್ಯರು ತಮ್ಮನ್ನು ತಾವು ನವೀಕರಿಸಿಕೊಳ್ಳಲು ಸಹಾಯ ಮಾಡಲು, ಸವಿತಾ ಕುಟ್ಟನ್ (36) ಮತ್ತು ಪ್ರಿಯಾಂಕ್ ಜೈನ್ (33) ಅವರು 2016 ರಲ್ಲಿ ಓಮ್ನಿಕ್ಯುರಿಸ್ ಅನ್ನು ಸ್ಥಾಪಿಸಿದರು.
ಜ್ಞಾನವನ್ನು ವೃದ್ಧಿಸಿಕೊಳ್ಳಲು ಮತ್ತು ಅವರ ಅಭ್ಯಾಸವನ್ನು ಸುಧಾರಿಸಲು ನಿರಂತರ ವೈದ್ಯಕೀಯ ಶಿಕ್ಷಣವನ್ನು (ಸಿಎಮ್‌ಇ) ಪಡೆಯಲು ಸಹಾಯವಾಗಲೆಂದು ವೈದ್ಯರಿಗೆ ಡಿಜಿಟಲ್ ವೇದಿಕೆಯನ್ನು ಒದಗಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಯನ್ನು ಹೆಚ್ಚಿಸಲು ಬೆಂಗಳೂರು ಮೂಲದ ಈ ಸಾಮಾಜಿಕ ಉದ್ಯಮವು ಪ್ರಯತ್ನಿಸುತ್ತಿದೆ.
ಸಂಸ್ಥೆಯ ಕಲಿಕೆ ನಿರ್ವಹಣಾ ಕಾರ್ಯಕ್ರಮವು ರಸಪ್ರಶ್ನೆಗಳು, ಕಾರ್ಯಯೋಜನೆಗಳು ಮತ್ತು ಪರೀಕ್ಷೆಗಳು ಸೇರಿದಂತೆ ವೆಬಿನಾರ್ ಮತ್ತು ವೀಡಿಯೊಗಳ ಸರಣಿಯನ್ನು ಒಳಗೊಂಡಿದೆ, ಇದನ್ನು ವೈದ್ಯರು ಮೊಬೈಲ್ ಅಪ್ಲಿಕೇಶನ್ ಮೂಲಕ ಉಪಯೋಗಿಸಬಹುದು. ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ವೃತ್ತಿಪರರು ಮತ್ತು ಅಸಂಖ್ಯಾತ ರೋಗಿಗಳು ಇದರ ಲಾಭ ಪಡೆದಿದ್ದಾರೆ.
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಓಮ್ನಿಕ್ಯುರಿಸ್ 35 ಪ್ರಮುಖ ವೈದ್ಯಕೀಯ ಸಂಘಗಳು ಮತ್ತು ಸಂಸ್ಥೆಗಳು ಸೇರಿದಂತೆ ದೇಶಾದ್ಯಂತ ಎಂಟು ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.
ಅದರ ಪ್ರಸ್ತುತ ಸ್ಥಿತಿಯಲ್ಲಿ, ಭಾರತದಲ್ಲಿ ಆರೋಗ್ಯ ರಕ್ಷಣೆಯ ಗುಣಮಟ್ಟವು ಕೆಲವು ಸಮಸ್ಯೆಗಳನ್ನು ಹೊಂದಿದೆ. ಅನೇಕ ವ್ಯಕ್ತಿಗಳು ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚು ನಿಜವಾಗಿದೆ ಕಾರಣ ಪ್ರಾಥಮಿಕ ವೈದ್ಯರಿಗೆ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ತಿಳಿದಿರುವುದಿಲ್ಲ. ಇಂತಹ ವಿಷಯಗಳನ್ನು ಕೇಂದ್ರೀಕರಿಸಿ ಓಮ್ನಿಕ್ಯುರಿಸ್ ಅನ್ನು ಸ್ಥಾಪಿಸಲಾಯಿತು. ಸಂಸ್ಥೆಯು ವೈದ್ಯಕೀಯ ರಂಗದಲ್ಲಿನ ಮಾಹಿತಿ, ಪರಿಕಲ್ಪನೆಗಳು ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡುತ್ತದೆ” ಎಂದು ಓಮ್ನಿಕುರಿಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಸವಿತಾ ಕುಟ್ಟನ್ ಹೇಳುತ್ತಾರೆ.
ಇದು ಹೇಗೆ ಪ್ರಾರಂಭವಾಯಿತು?
ಓಮ್ನಿಕುರಿಸ್ ನ ಹಿಂದಿರುವ ಅದ್ಭುತ ವ್ಯಕ್ತಿ ಸವಿತಾ, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಮುಗಿಸಿ ಚೆನ್ನೈನ ಗ್ರೇಟ್ ಲೇಕ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ವ್ಯವಹಾರ ಆಡಳಿತದಲ್ಲಿ (ಎಂಬಿಎ) ವ್ಯಾಸಂಗ ಮಾಡಿದರು. ನಂತರ, ಅವರು ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು ಸುಧಾರಿಸುವ ಕೆಲಸ ಮಾಡಲು ಭಾರತಕ್ಕೆ ಕಾಲಿಡುವ ಮೊದಲು ಯುಎಸ್ ಮತ್ತು ಯುರೋಪ್ನಲ್ಲಿ ಆರೋಗ್ಯ ಸಲಹೆಗಾರರಾಗಿ ಕೆಲಸ ಮಾಡಿದರು.
ಕೆಲವು ವರ್ಷಗಳ ನಂತರ, ಅವರು ಮೈಲಾನ್ ಲ್ಯಾಬೊರೇಟರೀಸ್ ಲಿಮಿಟೆಡ್ ನಲ್ಲಿ ಉಪಾಧ್ಯಕ್ಷರಾಗಿದ್ದರು, ಆ ಸಮಯದಲ್ಲೇ ಆರೋಗ್ಯ ಉದ್ಯಮದ ಅಸಹ್ಯಕರ ವಿಷಯಗಳನ್ನು ಅವರು ತಿಳಿದುಕೊಂಡರು.
ಓಮ್ನಿಕ್ಯುರಿಸ್ ಅನ್ನು ಪ್ರಾರಂಭಿಸುವ ಆಲೋಚನೆಯು ಅವರ ಕುಟುಂಬ ಸದಸ್ಯರಲ್ಲಿ ಒಬ್ಬರನ್ನು ಕಳೆದುಕೊಂಡಾಗ ಬಂದಿತು.
ನನ್ನ ಸಂಬಂಧಿಯೊಬ್ಬರು ತೀರಿಕೊಂಡಾಗ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಕೇಂದ್ರೀಕರಿಸುವ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ನಾನು ಗಂಭೀರವಾದ ಆಲೋಚನೆಯನ್ನು ಮಾಡಲು ಪ್ರಾರಂಭಿಸಿದೆ. ಅನಾರೋಗ್ಯವನ್ನು ಪತ್ತೆಹಚ್ಚಲು ವೈದ್ಯರಿಗೆ ಸಾಧ್ಯವಾಗದ ಕಾರಣ ನನ್ನ ಸಂಬಂಧಿಕರ ಸಾವು ಸಂಭವಿಸಿತ್ತು” ಎಂದು ಸವಿತಾ ನೆನಪಿಸಿಕೊಳ್ಳುತ್ತಾರೆ.
ಸವಿತಾ ಓಮ್ನಿಕ್ಯುರಿಸ್ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದಾಗ, ಐಐಟಿ-ಖರಗ್‌ಪುರದ ಹಳೆಯ ವಿದ್ಯಾರ್ಥಿ ಹಾಗೂ ಈ ಹಿಂದೆ ಎನ್‌ಕ್ಯಾಶಿಯಾ, ಸ್ಕ್ರ್ಯಾಪ್ ಮರುಬಳಕೆಯ ಕಂಪನಿಯ ಸಹ-ಸ್ಥಾಪಕರಾಗಿದ್ದ, ಪ್ರಿಯಾಂಕ್ ಜೈನ್, ಈ ಕೆಲಸದಲ್ಲಿ ಅವರೊಂದಿಗೆ ಸೇರಿಕೊಂಡರು. ಸವಿತಾ ಮತ್ತು ಪ್ರಿಯಾಂಕ್ ಕೆಲವು ಪರಸ್ಪರ ಸ್ನೇಹಿತರ ಮೂಲಕ ಸಾಮಾಜಿಕ ಕೂಟದಲ್ಲಿ ಭೇಟಿಯಾದರು ಮತ್ತು ಅವರ ಆಲೋಚನಾ ಪ್ರಕ್ರಿಯೆಯು ಸಮನಾಗಿದೆ ಎಂದು ತಿಳಿದ ನಂತರ ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದರು.
ಉತ್ತಮ ವಿಷಯವನ್ನು ನಿರ್ಮಿಸುವ ದೃಷ್ಟಿಯಿಂದ ಮತ್ತು ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ತಿಳಿಯಲು ವೈದ್ಯರು ತಮ್ಮ ಸಮಯವನ್ನು ನೀಡುತ್ತಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಈ ಜೋಡಿಯು ಎದುರಿಸಬೇಕಾಗಿದ್ದ ದೊಡ್ಡ ಸವಾಲುಗಳಲ್ಲಿ ಒಂದಾಗಿತ್ತು. ಇಂದು, ಓಮ್ನಿಕ್ಯುರಿಸ್ ಸುಮಾರು 50 ಉದ್ಯೋಗಿಗಳನ್ನು ಹೊಂದಿದೆ ಮತ್ತು ಸಂಸ್ಥೆಗೆ ಹೆಚ್ಚಿನ ಹಣವು ರಾಜ್ಯ ಸರ್ಕಾರಗಳು, ಪಾಲುದಾರ ವೈದ್ಯಕೀಯ ಸಂಘಗಳು ಮತ್ತು ಆರೋಗ್ಯ ಮತ್ತು ಔಷಧ ಕಂಪನಿಗಳಿಂದ ಹಾಗೂ ಇತರ ಪ್ರಾಯೋಜಕರಿಂದ ಬರುತ್ತದೆ.
ವೈದ್ಯರ ಕೌಶಲ್ಯಗಳನ್ನು ಹೆಚ್ಚಿಸುವುದು
ಕಾರ್ಡಿಯಾಲಜಿ, ಆಂಕೊಲಾಜಿ, ಡಯಾಬಿಟಿಸ್, ಸ್ತ್ರೀರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್ ಮತ್ತು ಗ್ಯಾಸ್ಟ್ರೋಎಂಟರಾಲಜಿಯಿಂದ ಹಿಡಿದು ವೈವಿಧ್ಯಮಯ ವಿಷಯಗಳ ಕುರಿತು ಉಪನ್ಯಾಸದ ವಿಡಿಯೋಗಳನ್ನು ಓಮ್ನಿಕ್ಯುರಿಸ್ ನೀಡುತ್ತದೆ.
ವೈದ್ಯಕೀಯ ನೋಂದಣಿ ಸಂಖ್ಯೆಯನ್ನು ನಮೂದಿಸಿದ ನಂತರ ಓಮ್ನಿಕ್ಯುರಿಸ್ ಅಪ್ಲಿಕೇಶನ್‌ನಲ್ಲಿ ಯಾವುದೇ ಅರ್ಹ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಉಪಯುಕ್ತ ಮಾಹಿತಿಯನ್ನು ಪಡೆಯಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಈ ಅಪ್ಲಿಕೇಶನ್ ಲಭ್ಯವಿದೆ, ಓಮ್ನಿಕ್ಯುರಿಸ್ ಅಪ್ಲಿಕೇಶನ್‌ನ ಕೇಂದ್ರ ಆಕರ್ಷಣೆಯೆಂದರೆ ಅದರ ಸೃಜನಶೀಲತೆ ಮತ್ತು ಆಕರ್ಷಕವಾಗಿರುವ ವಿಷಯಗಳು.
ಫೆಡರೇಶನ್ ಆಫ್ ಅಬ್ಸ್ಟೆಟ್ರಿಕ್ ಅಂಡ್ ಗೈನೆಕಾಲಜಿಕಲ್ ಸೊಸೈಟೀಸ್ ಆಫ್ ಇಂಡಿಯಾ (ಫೊಗ್ಸಿ), ಎಪಿಐ, ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್ (ಐಒಎ), ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ (ಆರ್‌ಎಸ್‌ಎಸ್‌ಡಿಐ), ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್, ವೆನೆರಿಯಾಲಜಿಸ್ಟ್ಸ್ ಮತ್ತು ಲೆಪ್ರಾಲಜಿಸ್ಟ್ಸ್ (ಐಎಡಿವಿಎಲ್) ನಂತಹ ಭಾರತದ ಹಲವಾರು ಹೆಸರಾಂತ ವೈದ್ಯಕೀಯ ಸಂಘಗಳು ಮತ್ತು ಸಂಸ್ಥೆಗಳ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸುವ ಜನರ ತಂಡ ನಮ್ಮಲ್ಲಿದೆ. ಅವರು ಪಠ್ಯ ಒವರ್ಲೆಗಳೊಂದಿಗೆ ಸಂವಾದಾತ್ಮಕ ಮತ್ತು ಅನಿಮೇಟೆಡ್ ವೀಡಿಯೊಗಳನ್ನು ಮಾಡುತ್ತಾರೆ. ಆ ವಿಡಿಯೋಗಳಿಂದ ವೈದ್ಯಕೀಯ ವೃತ್ತಿಪರರು ಉತ್ತಮ ಗ್ರಹಿಕೆಯನ್ನು ಪಡೆಯುವುದಲ್ಲದೆ, ಪಾಂಡಿತ್ಯವನ್ನು ಪಡೆದುಕೊಳ್ಳುತ್ತಾರೆ. ಈ ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಮಾಣಪತ್ರಗಳನ್ನು ಸಹನೀಡಲಾಗುತ್ತದೆ” ಎಂದು ಸವಿತಾ ಹೇಳುತ್ತಾರೆ.
ಓಮ್ನಿಕ್ಯುರಿಸ್ ಪ್ರಸ್ತುತ ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮತ್ತು ಕೇರಳ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದ್ದು, ಈ ಪ್ರದೇಶದ ಕೆಲವು ನಿರ್ದಿಷ್ಟ ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ಉದಾಹರಣೆಗೆ, ಮಧ್ಯಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಕ್ಯಾನ್ಸರ್ ರೋಗ ಹರುಡುವುದು ಸುಮಾರು 15 ಪ್ರತಿಶತದಷ್ಟು ಹೆಚ್ಚಾದಾಗ, ಸರ್ಕಾರವು ಆರಂಭಿಕ ರೋಗ ಪತ್ತೆ ಹಚ್ಚುವಿಕೆ ಮತ್ತು ರೋಗ ತಡೆಗಟ್ಟುವ ಕ್ರಮಗಳ ತೆಗೆದುಕೊಳ್ಳಲು ಓಮ್ನಿಕ್ಯುರಿಸ್ ಜೊತೆ ಕೈ ಜೋಡಿಸಿತ್ತು.
ಶೀಘ್ರದಲ್ಲೇ, ಸಾಮಾಜಿಕ-ವೈದ್ಯಕೀಯ ಉದ್ಯಮವು ಈ ವಿಷಯದ ಬಗ್ಗೆ ಸಮಗ್ರ ಚಿತ್ರ ಆಧಾರಿತ ಆನ್‌ಲೈನ್ ಮಾಡ್ಯೂಲ್ ಅನ್ನು ಪ್ರಾರಂಭಿಸಿತು ಮತ್ತು 90 ಪ್ರತಿಶತದಷ್ಟು ಯಶಸ್ಸುನ್ನು ಸಾಧಿಸಿತು.
ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ತಪಾಸಣೆ ಮಾಡುವುದು ಯಶಸ್ವಿ ಚಿಕಿತ್ಸೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂಬುದು ತಿಳಿದಿರುವ ಸತ್ಯ. ಆದರೆ, ಅದನ್ನು ಸಾಧಿಸಲು, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಈ ಕ್ಷೇತ್ರದಲ್ಲಿ ತರಬೇತಿ ನೀಡುವುದು ಮುಖ್ಯವಾಗಿದೆ. ಆದ್ದರಿಂದ, 2017 ರಲ್ಲಿ, ನಮಗೆ ಸಹಾಯ ಮಾಡಲು ನಾವು ಓಮ್ನಿಕ್ಯುರಿಸ್ ಮತ್ತು ಟಾಟಾ ಸ್ಮಾರಕ ಕೇಂದ್ರದೊಂದಿಗೆ ಸಹಯೋಗ ಹೊಂದಿದ್ದೇವೆ. ಇಂದು, ಮಧ್ಯಪ್ರದೇಶದಾದ್ಯಂತದ ಹೆಚ್ಚಿನ ವೈದ್ಯರು, ವಿಶೇಷವಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವವರು, ಅಪ್ಲಿಕೇಶನ್‌ನಲ್ಲಿ ಮಾಡ್ಯೂಲ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಮಧ್ಯಪ್ರದೇಶ ಸರ್ಕಾರದ ಆರೋಗ್ಯ ಸೇವೆಗಳ ನಿರ್ದೇಶನಾಲಯದ ಪ್ರಧಾನ ಕಾರ್ಯದರ್ಶಿ ಪಲ್ಲವಿ ಗೋವಿಲ್ ಹೇಳುತ್ತಾರೆ.
ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ನಿಜವಾಗಿಸುವುದು
60 ವರ್ಷದ ಜೆ. ಸಿ. ಸೇಕರ್ ತಮಿಳುನಾಡಿನ ದಿಂಡಿಗುಲ್ ನಗರದ ಸಮೀಪದಲ್ಲಿರುವ ವಡಮದುರೈ ಎಂಬ ಸಣ್ಣ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ವೈದ್ಯರಾಗಿದ್ದಾರೆ. ಕಳೆದ 33 ವರ್ಷಗಳಿಂದ ವೈದ್ಯರಾಗಿದ್ದರೂ, ಈ ಕ್ಷೇತ್ರದಲ್ಲಿ ಯಾವಾಗಲೂ ಕಲಿಯಬೇಕಾದದ್ದು ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವು ತಿಂಗಳುಗಳ ಹಿಂದೆ, ಅವರು ಓಮ್ನಿಕ್ಯುರಿಸ್ ಅಪ್ಲಿಕೇಶನ್ ಬಗ್ಗೆ ತಿಳಿದು, ಅದನ್ನು ಬಳಸಲು ಆರಂಭಿಸಿದರು. ಮತ್ತು ಪರಿಧಮನಿಯ ಕಾಯಿಲೆ (ಸಿಎಡಿ) ಕುರಿತು ಆನ್‌ಲೈನ್ ಮಾಡ್ಯೂಲ್‌ಗೆ ಸೈನ್ ಅಪ್ ಮಾಡಿದರು.
“ಅಪ್ಲಿಕೇಶನ್‌ನಲ್ಲಿ ವಿಷಯವನ್ನು ಸ್ಪಷ್ಟವಾಗಿ ಮತ್ತು ಸೃಜನಾತ್ಮಕವಾಗಿ ಪ್ರಸ್ತುತಪಡಿಸಲಾಗಿದೆ. ನನ್ನ ಡ್ರಾಯಿಂಗ್ ರೂಮ್ನ ಸೌಕರ್ಯದಲ್ಲಿ ಯಾವುದೇ ತೊಂದರೆಗಳಿಲ್ಲದೆ ನಾನು ಕೋರ್ಸ್ ಅನ್ನು ಪೂರ್ಣಗೊಳಿಸಿದೆ. ಈಗ, ನಾನು ಸಿಎಡಿಯ ರೋಗಲಕ್ಷಣಗಳನ್ನು ಗುರುತಿಸಲು ಸಮರ್ಥನಾಗಿದ್ದೇನೆ ಮತ್ತು ಹೆಚ್ಚಿನ ಚಿಕಿತ್ಸೆಯನ್ನು ನೀಡುವ ಕೆಲವು ವಿಶೇಷ ಆಸ್ಪತ್ರೆಗಳ ಬಗ್ಗೆ ರೋಗಿಗಳಿಗೆ ತಿಳಿಸುತ್ತೇನೆ. ಈ ಕ್ಷೇತ್ರದ ಇತರ ಅನೇಕ ವೃತ್ತಿಪರರು ಅಪ್ಲಿಕೇಶನ್ ಬಳಸಿದರೆ ಪ್ರಯೋಜನ ಪಡೆಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲದೆ, ಜನರು ಅಕ್ಷರಶಃ ತಮ್ಮ ಜೀವನವನ್ನು ವೈದ್ಯರ ಕೈಯಲ್ಲಿ ಇಡುತ್ತಾರೆ ಹಾಗಾಗಿ ಇಲ್ಲಿ ಜ್ಞಾನದ ಕೊರತೆ ಅಥವಾ ನಿರ್ಲಕ್ಷ್ಯಕ್ಕೆ ಯಾವುದೇ ಅವಕಾಶವಿಲ್ಲ” ಎಂದು ಅವರು ಹೇಳುತ್ತಾರೆ.
ಸಂಸ್ಥಾಪಕರ ಪ್ರಕಾರ, ಪ್ರಾರಂಭದಿಂದಲೂ ಒಂದು ಲಕ್ಷಕ್ಕೂ ಹೆಚ್ಚು ವೈದ್ಯಕೀಯ ವೈದ್ಯರು ಓಮ್ನಿಕ್ಯುರಿಸ್ ಅಪ್ಲಿಕೇಶನ್ ಅನ್ನು ಬಳಸಿದ್ದಾರೆ. ಇಂದು, ರಾಷ್ಟ್ರವು ಉತ್ತಮ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಒಂದು ಹೆಜ್ಜೆ ಹತ್ತಿರದಲ್ಲಿರುವುದರಿಂದ, 2020 ರ ಅಂತ್ಯದ ವೇಳೆಗೆ ಇನ್ನೂ ಎರಡು ಲಕ್ಷ ವೈದ್ಯರಿಗೆ ತರಬೇತಿ ನೀಡುವ ಗುರಿಯೊಂದಿಗೆ ಉದ್ಯಮವು ವೈದ್ಯಕೀಯ ಕ್ಷೇತ್ರದಲ್ಲಿ ಆಳವಾಗಿ ನೆಲೆಯೂರಲು ಯೋಜನೆ ರೂಪಿಸಿದೆ.
ಮೊದಲೇ ರೋಗವನ್ನು ಪತ್ತೆಹಚ್ಚುವುದು ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಓಮ್ನಿಕ್ಯುರಿಸ್ ಈ ಕೆಲಸದಲ್ಲಿ ಸಕ್ರಿಯವಾಗಿದೆ ಮತ್ತು ಜನರ ಆರೋಗ್ಯವು ರಾಷ್ಟ್ರದ ಆರೋಗ್ಯವೆಂದು ಹೇಳಲಾಗುತ್ತದೆ” ಎಂದು ಸವಿತಾ ಹೇಳುತ್ತಾರೆ.