ಹಳೆಯ ಸುದ್ದಿ ಪತ್ರಿಕೆಗಳಿಗೆ ಹೊಸ ಕಲಾತ್ಮಕ ರೂಪ! ಕಾಗದ ತ್ಯಾಜ್ಯ ನಿರ್ಮೂಲನೆಗೆ ನಾಸಿಕ್ ನ 58 ವರ್ಷದ ಮಹಿಳೆಯ ವಿನೂತನ ಕೊಡುಗೆ!
ನಾಸಿಕ್ ನ ಮೂಲ ನಿವಾಸಿಯಾದ ಮೀನಾ ಪಟ್ನಾಕರ್,ತಮ್ಮ ಬಿಡುವಿನ ಸಮಯದಲ್ಲಿ ಪತ್ರಿಕೆಗಳಿಂದ ಕರಕೌಶಲ ವಸ್ತುಗಳ ತಯಾರಿಕೆಯನ್ನು ಹವ್ಯಾಸವಾಗಿ ಪ್ರಾರಂಭಿಸಿದರು. ಕಾಲ ಕಳೆದಂತೆ ಈ ಕಲೆ ಬೃಹತ್ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ಕಾಗದ ತ್ಯಾಜಕ್ಕೆ ಹೊಸ ರೂಪ ಕೊಡುವ ಕೆಲಸಕ್ಕೆ ಎಡೆ ಮಾಡಿಕೊಟ್ಟಿದೆ.
ಬಹುತೇಕ ಜನರಿಗೆ ವಾರ್ತಾ ಪತ್ರಿಕೆಯನ್ನು ಓದುವುದು ಮುಂಜಾನೆಯ ಆಚರಣೆಗಳಲ್ಲಿ ಒಂದಾಗಿದೆ. ಬೆರಳಂಚಿನಲ್ಲಿಯೇ ಸಾವಿರಾರು ಆ್ಯಪ್ ಗಳು ಲಭ್ಯವಿರುವ ಈ ತಾಂತ್ರಿಕ ಯುಗದಲ್ಲಿ ,ಇನ್ನೂ ಹಲವು ಮಂದಿ ದೈನಂದಿನ ಮಾಹಿತಿ ಪಡೆಯಲು ಸುದ್ದಿ ಪತ್ರಿಕೆಗಳ ಮೊರೆ ಹೋಗುತ್ತಾರೆ.
ಮಾಹಿತಿಯ ದೃಷ್ಟಿಕೋನದಿಂದ ಸುದ್ದಿ ಪತ್ರಿಕೆಯಗಳು ಸಾಕಷ್ಟು ಮೌಲ್ಯಯುತವಾಗಿದ್ದರೂ ಸಹ, ಅವುಗಳ ಆಯಸ್ಸು 24 ಗಂಟೆಗಳನ್ನು ಮೀರಿ ಇಲ್ಲವಾದ್ದರಿಂದ ,ತಿಂಗಳ ಕೊನೆಯಲ್ಲಿ ಇವು ತ್ಯಾಜ್ಯ ರಾಶಿಗಳಾಗಿ ಕೊನೆಗೊಳ್ಳತ್ತವೆ.
ಇದನ್ನು ಮನಗಂಡ 58 ವರ್ಷ ವಯಸ್ಸಿನ ನಾಸಿಕ್ ನವರಾದ ಮೀನಾ ಪಟ್ನಾಕರ್ ತಿರಸ್ಕರಿಸಲ್ಪಟ್ಟ ಸುದ್ದಿ ಪತ್ರಿಕೆಗಳನ್ನು ,ಬೊಂಬೆಗಳು ಹಾಗು ಇತರೆ ಉಪಕರಣಗಳನ್ನಾಗಿ ಮಾರ್ಪಾಡು ಮಾಡಿ ಅವುಗಳಿಗೆ ಜೀವ ತುಂಬಬೇಕೆಂಬ ನಿರ್ಧಾರ ಮಾಡಿದರು.
ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಪ್ರಾರಂಭವಾದ ಈ ಕಾರ್ಯವು ದೀರ್ಘಾವಧಿಯಲ್ಲಿ ಕಾಗದ ತ್ಯಾಜ್ಯದ ವಿರುದ್ಧ ಒಂದು ಹೋರಾಟವನ್ನೇ ಶುರು ಮಾಡಿದೆ. 40 ರೂಪಾಯಿಯ ಆಭರಣಗಳ ಪುಟ್ಟ ಪೆಟ್ಟಿಗೆಯಿಂದ 800 ರೂಪಾಯಿಯ ಸುದ್ದಿ ಪತ್ರಿಕೆಯಿಂದ ಮಾಡಲಾದ ಬೊಂಬೆಗಳವರೆಗೂ ಮೀನಾ ಅವರ ಕರಕುಶಲ ವಸ್ತುಗಳು ಭಾರತದಾದ್ಯಂತ ರವಾನಿಸಲ್ಪಡುತ್ತಿವೆ.
ಮೀನಾ ಅವರ ಪ್ರಕಾರ,
“ ಹಲವು ವರ್ಷಗಳಿಂದ ನಾನು ತಯಾರಿಸುತ್ತಿರುವ ಕರಕುಶಲ ವಸ್ತುಗಳಿಗೆ ಹೊಗಳಿಕೆ ಮತ್ತು ತೆಗಳಿಕೆ ಎರಡೂ ಬಂದಿವೆ.ಕೆಲವರು ನನ್ನ ಸೃಜನಾತ್ಮಕತೆಯನ್ನು ಅಭಿನಂದಿಸಿ ಇವುಗಳನ್ನು ಖರೀದಿಸಿದರೆ,ಇನ್ನು ಕೆಲವರು ತ್ಯಾಜ್ಯ ಕಾಗದದಿಂದ ತಯಾರಿಸಿರುವುದನ್ನು ಪರಿಗಣಿಸಿ ,ಬೆಲೆ ನೀಡಲು ನಿರಾಕರಿಸುತ್ತಾರೆ.ಇದೇ ಕಾರಣಕ್ಕಾಗಿ ನಾನು ಇವುಗಳನ್ನು ಮಾರಾಟಕ್ಕಿಡುವುದಿಲ್ಲ, ಮನೆಯಲ್ಲಿ ಸಂಗ್ರಹಿಸಿಯೂ ಇಡುವುದಿಲ್ಲ. ಬದಲಾಗಿ ಬೇಡಿಕೆಗಳು ಬಂದಾಗಲೇ ತಯಾರಿಸುವುದಕ್ಕೆ ಆದ್ಯತೆ ನೀಡುತ್ತೇನೆ” - ವರದಿ ಎನ್ ಡಿ ಟಿವಿ
ಮೀನಾ ಅವರ ಕಲಾಕೃತಿಗಳ ಬೆಲೆಯು ಅದರ ವಿನ್ಯಾಸ ಹಾಗು ಅಗತ್ಯ ಶ್ರಮವನ್ನು ಅವಲಂಬಿಸಿರುತ್ತದೆ.ಮೀನಾ ತಿಳಿಸುವಂತೆ ಅನೇಕರು ದುಬಾರಿ ಬೆಲೆಯ ಕಾರಣಕ್ಕಾಗಿ ಕೊಳ್ಳಲು ನಿರಾಕರಿಸಿದರೆ, ಹಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಮೀನಾ ಅವರಿಗೆ ತಮ್ಮ ಬೇಡಿಕೆಗಳನ್ನು ತಲುಪಿಸುತ್ತಾರೆ.
ಸುದ್ದಿ ಪತ್ರಿಕೆಗಳಿಂದ ಮಾಡಿದ ಉಪಕರಣಗಳು ಬಹುಕಾಲ ಬಾಳಿಕೆ ಬರುವುದಿಲ್ಲ ಎಂದು ಮೂಗು ಮುರಿಯುವ ಅನೇಕರ ಆಲೋಚನೆಗಳನ್ನು ಮೀನಾ ಸುಳ್ಳೆಂದು ಸಾಬೀತು ಪಡಿಸಿದ್ದಾರೆ.
ಎನ್ ಡಿ ಟಿವಿ ಯೊಂದಿಗೆ ನಡೆದ ಸಂಭಾಷಣೆಯಲ್ಲಿ ಮೀನಾ ಹೀಗೆಂದು ಹೇಳಿದರು-
“ಅಂಟು ಮತ್ತು ವಿವಿಧ ರೀತಿಯ ಬಣ್ಣಗಳೊಂದಿಗೆ ಪತ್ರಿಕೆಗಳನ್ನು ಸೇರಿಸಿದಾಗ ಅಂತಿಮವಾಗಿ ಗಟ್ಟಿಯಾದ ಉತ್ಪನ್ನ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಉದಾಹರಣೆಯೇ ನಾನು ತಯಾರಿಸಿರುವ ೫ ಕೆ.ಜಿಯವರೆಗೂ ಭಾರವನ್ನು ತಡೆಯಬಲ್ಲ ಪರ್ಸ್.ಹಾಗೆಯೇ ಕರಕುಶಲ ವಸ್ತುಗಳನ್ನು ನೋಡಿಕೊಳ್ಳುವುದು ಬ್ರಹ್ಮ ಕಲೆಯೇನಲ್ಲ!-ಅವುಗಳ ಮೇಲೆ ಧೂಳು ಕೂತು ಅವುಗಳ ಕಾಂತಿ ಮಾಸದಂತೆ ಗಮನವಹಿಸಬೇಕು ಹಾಗೆಯೇ ಅವು ಒದ್ದೆಯಾಗಬಾರದು.”
ಮೀನಾ ಅವರ ಈ ಪಯಣ ಆರಂಭವಾಗಿದ್ದು ಅವರು ಹೊಸದೇನಾದರೂ ಮಾಡುವ ಹಂಬಲದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಣ್ಣು ಹಾಯಿಸಿದಾಗ.ಆಗ ಕಾಗದ ತ್ಯಾಜ್ಯದಿಂದ ಹೂಜಿಯನ್ನು ಹೇಗೆ ತಯಾರಿಸಬಹುದೆಂಬ ವಿಡಿಯೋ ಅವರ ಕಣ್ಣಿಗೆ ಬಿತ್ತು.ಅಷ್ಟೇ ಅಲ್ಲ ,ಬ್ರಿಲಿಯಂಟ್ ಭಾರತ ವರದಿ ಪ್ರಕಾರ ಮೀನಾ ಗೊಂಡ್ ಹಾಗು ವರ್ಲಿ ಕಲೆಗಳಲ್ಲಿ ಪರಿಣಿತಿ ಹೊಂದಿದ್ದಾರೆ.
ಗೃಹಿಣಿಯಾಗಿರುವ ಮೀನಾ ಅವರ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬೇರೆ ನಗರಗಳಲ್ಲಿರುವ ಕಾರಣ ಹೊಸದೇನನ್ನಾದರು ಕಲಿಯಲು ಸಾಕಷ್ಟು ಸಮಯ ಒದಗಿತು. ಮೀನಾ ಹೇಳುತ್ತಾರೆ,
“ಆನ್ ಲೈನ್ನಲ್ಲಿ ನಾನು ನೋಡುತ್ತಿದ್ದ ಟ್ಯುಟೋರಿಯಲ್ ಗಳ ಸಂಪೂರ್ಣ ಅನುಕರಣೆಯನ್ನು ನಾನು ಮಾಡುತ್ತಿರಲಿಲ್ಲ.ಆಕೃತಿಗಳನ್ನು ಬಲಿಷ್ಠವಾಗಿಸಿ ಅವುಗಳ ಸೌಂದರ್ಯವು ಎದ್ದು ಕಾಣಲು ನಾನು ಅಲ್ಲಲ್ಲಿ ಕೆಲವು ಸೇರ್ಪಡೆಗಳನ್ನು ಮಾಡಿದೆ”- ಎನ್ ಡಿ ಟಿವಿ ವರದಿ.