ಆನ್ಲೈನ್ ಯೋಗ ಸ್ಪರ್ಧೆಗೆ ಚಾಲನೆ ನೀಡಿದ ಪ್ರಧಾನಿ
ಆಯುಷ್ ಸಚಿವಾಲಯದ ಸಾಮಾಜಿಕ ತಾಣಗಳಲ್ಲಿ ಸ್ಪರ್ಧೆಯು ಚಾಲನೆಗೊಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯನ್ನು ಘೋಷಿಸಿ, ನಾಗರಿಕರು ಅದರಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ.
ಮೈ ಲೈಫ್, ಮೈ ಯೋಗ (ಜೀವನ್ ಯೋಗ) ಎಂದು ಕರೆಯಲ್ಪಡುವ ಈ ಸ್ಪರ್ಧೆಯನ್ನು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ(ಐಸಿಸಿಆರ್) ಜಂಟಿಯಾಗಿ ಆಯೋಜಿಸಿವೆ.
ಇದು ಜನರ ಜೀವನದ ಮೇಲೆ ಯೋಗದಿಂದಾಗುವ ಪರಿವರ್ತನೆಯ ಮೇಲೆ ಕೇಂದ್ರಿತವಾಗಿದ್ದು, ಜೂನ್ 21 ಕ್ಕೆ ಬರಲಿರುವ ಆರನೇ ಅಂತರರಾಷ್ಟ್ರೀಯ ಯೋಗ ದಿನದ ಚಟುವಟಿಕೆಗಳ ಭಾಗವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ನಿನ್ನೆ ಭಾನುವಾರದಿಂದ ಆಯುಷ್ ಸಚಿವಾಲಯದ ಸಾಮಾಜಿಕ ತಾಣಗಳಲ್ಲಿ ಸ್ಪರ್ಧೆಯು ಶುರುವಾಗಿದೆ.
ಹಿಂದಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಸಾವಿರಾರು ಜನರು ಸಾರ್ವಜನಿಕ ಸ್ಥಳಗಳಲ್ಲಿ ಸೇರಿ ಯೋಗಾಸನ ಮಾಡುವ ಮೂಲಕ ಆಚರಿಸಲಾಗುತ್ತಿತ್ತು.
“ಕೋವಿಡ್-19 ಹರಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ಸೂಕ್ತವಲ್ಲ. ಆದ್ದರಿಂದ ಈ ವರ್ಷ ಜನರು ಮನೆಯಲ್ಲೆ, ತಮ್ಮ ಕುಟುಂಬದೊಂದಿಗೆ ಯೋಗಾಭ್ಯಾಸ ಮಾಡಲು ಸಚಿವಾಲಯ ಹೇಳುತ್ತಿದೆ,” ಎಂದು ಆಯುಷ್ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಪರ್ಧೆಯ ಮೂಲಕ ಆಯುಷ್ ಸಚಿವಾಲಯ ಮತ್ತು ಐಸಿಸಿಆರ್ ಯೋಗದ ಬಗ್ಗೆ ಜಾಗೃತಿ ಮೂಡಿಸಿ, ಹೆಚ್ಚು ಜನರು ಅಂತರರಾಷ್ಟ್ರೀಯ ಯೋಗ ದಿನ 2020ರಂದು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೆಪಿಸಲು ಬಯಸುತ್ತದೆ.
ಎರಡೂ ರೀತಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಮೊದಲ ಹಂತದಲ್ಲಿ ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯಿದ್ದು, ಅದರಲ್ಲಿ ದೇಶದೊಳಗಿನ ವಿಜೇತರನ್ನು ಆಯ್ಕೆ ಮಾಡಲಾಗುವುದು. ನಂತರ ವಿವಿಧ ದೇಶಗಳಿಂದ ಜಾಗತಿಕವಾಗಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧಿಗಳು ವಿಡಿಯೋಗಳನ್ನು ಯುವ(18 ವರ್ಷದ ಕೆಳಗೆ), ವಯಸ್ಕರು(18 ವರ್ಷಕ್ಕೂ ಮೆಲ್ಪಟ್ಟವರು) ಮತ್ತು ವೃತ್ತಿಪರ ಯೋಗಾಭ್ಯಾಸಿಗಳು ಎಂಬ ಮೂರು ವಿಭಾಗಗಳಲ್ಲಿ (ಗಂಡು ಮತ್ತು ಹೆಣ್ಣು ಪ್ರತ್ಯೇಕವಾಗಿ) ಸಲ್ಲಿಸಬಹುದು.
ಹಾಗಾಗಿ ಸ್ಪರ್ಧೆಯಲ್ಲಿ ಒಟ್ಟು ಆರು ವಿಭಾಗಗಳಿವೆ. ಭಾರತೀಯ ಸ್ಪರ್ಧಿಗಳಿಗೆ 1 ಲಕ್ಷ ರೂ., 50 ಸಾವಿರ ರೂ., ಮತ್ತು 25 ರೂ., ಯಂತೆ ಕ್ರಮವಾಗಿ ಮೊದಲ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಜಾಗತಿಕ ಬಹುಮಾನಗಳ ವಿವರಗಳನ್ನು ಶೀಘ್ರದಲ್ಲೆ ಆಯುಷ್ ಸಚಿವಾಲಯದ ಯೋಗ ಪೋರ್ಟಲ್ನಲ್ಲಿ ಘೋಷಿಸಲಾಗುವುದು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸ್ಪರ್ಧಿಗಳು ಮೂರು ನಿಮಿಷದ 3 ವಿವಿಧ ಯೋಗಾಸನ (ಕ್ರಿಯಾ, ಆಸನ, ಪ್ರಾಣಾಯಾಮ, ಬಂಧ ಹಾಗೂ ಮುದ್ರಾ) ಮಾಡುವ ವಿಡಿಯೋವನ್ನು ಸಲ್ಲಿಸಬೇಕು, ಅದರ ಜೊತೆಗೆ ಹೇಗೆ ಯೋಗ ತಮ್ಮ ಜೀವನವನ್ನು ಬದಲಿಸಿದೆ ಎಂಬ ಸಣ್ಣ ವಿಡಿಯೋ ಅಥವಾ ವಿವರಣೆಯನ್ನು ಸಲ್ಲಿಸಬೇಕು.
ವಿಡಿಯೋವನ್ನು ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ನಲ್ಲಿ #MyLifeMyYogaINDIA ಹ್ಯಾಶ್ಟ್ಯಾಗ್ನೊಂದಿಗೆ ಸರಿಯಾದ ವಿಭಾಗವನ್ನು ನಮೂದಿಸಿ ಅಪ್ಲೋಡ್ ಮಾಡಬೇಕು.


