Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಉತ್ತರಾಖಂಡದ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಅರಣ್ಯವನ್ನಾಗಿ ಪೋಷಿಸುತ್ತಿರುವ 76 ವಯಸ್ಸಿನ ಪ್ರಭಾ ದೇವಿ

76 ವರ್ಷ ವಯಸ್ಸಿನ ಪರಿಸರವಾದಿ ಪ್ರಭಾದೇವಿ, ಉತ್ತರಾಖಂಡದ ತನ್ನ ಹಳ್ಳಿಯಲ್ಲಿರುವ ಅವರ ಸಣ್ಣ ಜಮೀನಿನಲ್ಲಿ ವಿವಿಧ ಜಾತಿಯ 500 ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ.

ಉತ್ತರಾಖಂಡದ ಗ್ರಾಮದಲ್ಲಿ 500ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಅರಣ್ಯವನ್ನಾಗಿ ಪೋಷಿಸುತ್ತಿರುವ 76 ವಯಸ್ಸಿನ ಪ್ರಭಾ ದೇವಿ

Wednesday October 16, 2019 , 2 min Read

ಹವಾಮಾನ ವೈಪರೀತ್ಯವು ನಮ್ಮ ಕೈಯಲ್ಲಿದೆ. ಪ್ಲಾಸ್ಟಿಕ್ ಬಳಕೆ, ಮರಗಳನ್ನು ಕಡಿಯುವುದು ಮತ್ತು ಪರಿಸರದ ಮೇಲೆ ಹಾನಿ ಉಂಟುಮಾಡುವ ಇತರ ಹಾನಿಕಾರಕ ಅಭ್ಯಾಸಗಳಿಂದ ಮಾಲಿನ್ಯದಂತಹ ಬಹುದೊಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಾಗರಿಕರು ಮತ್ತು ಸರ್ಕಾರಗಳು ಇತ್ತಿಚೇಗೆ ಗಮನಕ್ಕೆ ತೆಗೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಭಾರತದ ಜನರು ಕೈ ಕಟ್ಟಿ ಕೂರದೆ ತಮ್ಮ ಕೈಲಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಆರೆ ಫಾರೆಸ್ಟ್ ಪ್ರತಿಭಟನೆಯನ್ನು ಉದಾಹರಣೆಗೆ ತೆಗೆದುಕೊಳ್ಳಿ. ಮುಂಬೈನ ‘ಕೊನೆಯ ಶ್ವಾಸಕೋಶ’ (ಲಾಸ್ಟ್ ಲಂಗ್ಸ್) ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳ ನೆಪವಾಗಿ 2 ಸಾವಿರ ಮರಗಳನ್ನು ಕಡಿಯುವ ನಿರ್ಧಾರವನ್ನು ತಡೆಯುವಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಇಡೀ ದೇಶದಾದ್ಯಂತ ಕೋಲಾಹಲ ಸೃಷ್ಟಿಯಾಗಿತ್ತು.


ಪರಿಸರವಾದಿ ಪ್ರಭಾದೇವಿ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಭವಿಷ್ಯದ ಪೀಳಿಗೆಗೆ ಮರಗಳು ಅತ್ಯಮೂಲ್ಯ ಎಂಬುದನ್ನು ಪ್ರಭಾ ದೇವಿಯವರಿಗಿಂತ ಚೆನ್ನಾಗಿ ಯಾರೂ ಕೂಡ ತಿಳಿದಿಲ್ಲ ಎನಿಸುತ್ತದೆ. ತಮ್ಮ‌ ಮುಪ್ಪಿನ 76 ವರ್ಷದಲ್ಲಿಯೂ ಇವರು ಉತ್ತರಾಖಂಡದ ತನ್ನ ಗ್ರಾಮದಲ್ಲಿ ಒಂದು ಸಂಪೂರ್ಣ ಅರಣ್ಯವನ್ನೇ ನೆಟ್ಟು ಪೋಷಿಸುತ್ತಿದ್ದಾರೆ. ಈ‌ ಕಾಡು ಓಕ್, ರೋಡೋಡೆಂಡ್ರಾನ್, ದಾಲ್ಚಿನ್ನಿ, ಸೋಪ್ ನಟ್ (ರೀಥಾ) ಒಳಗೊಂಡಂತೆ ವಿವಿಧ ಜಾತಿಗಳ 500 ಕ್ಕೂ ಹೆಚ್ಚು ಹಸಿರು ಮರಗಳನ್ನು ಒಳಗೊಂಡಿದೆ ಎಂದು ಹಿಮಾಲಯನ್ ಘಾಟ್ ವರದಿ ಮಾಡಿದೆ.


ಉತ್ತರಾಖಂಡದ ರುದ್ರಪ್ರಯಾಗ್ ಎಂಬ ಜಿಲ್ಲೆಯಲ್ಲಿರುವ ಪಲಾಶತ್ ಎಂಬ ಹಳ್ಳಿಯ ಪ್ರಭಾ ದೇವಿ ಹಲವು ವರ್ಷಗಳ‌ ಹಿಂದೆಯೇ ಆರಂಭಿಸಿದ ಈ‌ ಕಾರ್ಯವನ್ನು ಅವರು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಅವರು,


"ನಮ್ಮ ಹಳ್ಳಿಯ ಸುತ್ತಮುತ್ತಲಿನಲ್ಲಿ ಅರಣ್ಯನಾಶ ಚಟುವಟಿಕೆಗಳು ತೀವ್ರ ಏರಿಕೆ ಕಂಡುಕೊಂಡಿದ್ದು, ಮರಗಳನ್ನು ಕಡಿದು ಜನರು ಆ ಜಾಗದಲ್ಲಿ ಹೊಸ ಕಟ್ಟಡಗಳನ್ನು ಅಥವಾ ರೆಸಾರ್ಟ್‌ಗಳನ್ನು ನಿರ್ಮಿಸಲು ಇಚ್ಛಿಸುತ್ತಾರೆ. ಇದರಿಂದಾಗಿ ಕಾಡಿನ ಸಂಪೂರ್ಣ ಪರಿಸರ ವ್ಯವಸ್ಥೆಯು ತೊಂದರೆಗೊಳಗಾಗುತ್ತಿದೆ. ಮಾನವರ ಭೌತಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಕಾಡುಗಳನ್ನು ನಿರ್ದಯವಾಗಿ ಕಡಿಯುವುದನ್ನು ನೋಡಿ ನನಗೆ ಬೇಸರವಾಯಿತು. ಬೇಸಾಯ ಮಾಡದ ತುಂಡು ಭೂಮಿಯೊಂದು ನಮ್ಮ‌ ಬಳಿ ಇತ್ತು, ಹಾಗಾಗಿ ನಾನು ಆ ಭೂಮಿಯಲ್ಲಿಯೂ ಹಾಗೂ ನನ್ನ ಮನೆಯ ಸುತ್ತಲೂ ಮರಗಳನ್ನು ನೆಡಲು ಪ್ರಾರಂಭಿಸಿದೆ. ಈಗ, ಇದು ದಟ್ಟವಾದ ಅರಣ್ಯವಾಗಿ ಮಾರ್ಪಟ್ಟಿದೆ. ಬಂಜರು ಭೂಮಿಯಲ್ಲಿ ಇನ್ನು ಹೆಚ್ಚಿನ ಮರಗಳನ್ನು ನೆಡುವ ಗುರಿ ಹೊಂದಿದ್ದೇನೆ” ಎಂದರು

ಪ್ರಭಾ ತಮ್ಮ 16 ನೇ ವಯಸ್ಸಿನಲ್ಲಿಯೇ ವಿವಾಹವಾದರು. ಅವರು ಶಿಕ್ಷಣ ಪಡೆಯಲಿಲ್ಲ. ಅವರು ಶಿಕ್ಷಣದಿಂದ ವಂಚಿತರಾಗಿರಬಹುದು, ಆದರೆ ಮರಗಳನ್ನು ಹೇಗೆ ಕಾಳಜಿ‌ ಮಾಡಬೇಕು ಎಂಬ ಜ್ಞಾನ ಅವರಲ್ಲಿ ಉತ್ತುಂಗ ಮಟ್ಟದಲ್ಲಿದೆ. ತೋಟಗಾರಿಕೆಯ ಎಲ್ಲಾ ವಿಧಾನಗಳನ್ನು ಸ್ವತಃ ತಾವೇ ಕಲಿತಿರುವ ಅವರು, ಇದೀಗ ಭೂಪ್ರದೇಶದ ಪರಿಸ್ಥಿತಿಗಳು ಮತ್ತು ಮರದ ನಿರ್ಣಾಯಕ ಬೆಳವಣಿಗೆಗೆ ಬಗ್ಗೆ ವಿವರಗಳ ನೀಡುವಷ್ಟು ಪರಿಣಿತರಾಗಿದ್ದಾರೆ‌.


(ಚಿತ್ರಕೃಪೆ: ದಿ‌ ಲಾಜಿಕಲ್ ಇಂಡಿಯನ್)


ವಿಶಿಷ್ಟವಾದ ಈ‌ ಪ್ರಯತ್ನಗಳಿಂದಲೇ ಪ್ರಭಾ ದೇವಿ ಅವರು ಹಳ್ಳಿಯಲ್ಲಿ ‘ಮರಗಳ ಸ್ನೇಹಿತೆ’ ಎಂದೇ ಖ್ಯಾತಿಗಳಿಸಿದ್ದಾರೆ. ಅಂತರ್ಜಲ ಮಟ್ಟ ಕುಸಿಯುವಿಕೆ ಹಳ್ಳಿಯಲ್ಲಿ ಒಂದು ಪ್ರಮುಖ ಕಳವಳವಾಗಿತ್ತು. ಇದಕ್ಕೆ ಪರಿಹಾರವಾಗಿ, ನೀರಿನ ಹಿಡುವಳಿ ಸಾಮರ್ಥ್ಯವನ್ನು ಹೆಚ್ಚಿಸಲು ಹತ್ತಿರದ ಪ್ರದೇಶಗಳಲ್ಲಿ ಸ್ಥಳೀಯ ಪ್ರಭೇದಗಳಾದ ಬಂಜ್‌ನ ಮರಗಳನ್ನು ನೆಡಲು ಅವರು ಇತರರಿಗೆ ಸಲಹೆ ನೀಡಿದರು. ಈ ಮರಗಳು ಜಾನುವಾರುಗಳಿಗೆ ಮೇವನ್ನು ಒದಗಿಸುವುದಲ್ಲದೇ, ಸ್ಥಳೀಯರು ಅವಲಂಬಿಸಿರುವ ಕೃಷಿ ಆಧಾರಿತ ಚಟುವಟಿಕೆಗಳಲ್ಲಿ ಬಳಸಬಹುದು.


ಪ್ರಭಾ ದೇವಿ ಅವರ ಪುತ್ರ ಮನೀಶ್ ಸೆಮ್ವಾಲ್ ದಿ ಲಾಜಿಕಲ್ ಇಂಡಿಯನ್‌ ನೊಂದಿಗೆ ಮಾತನಾಡಿ,


“ಒಂದು ದಿನದ ಮಟ್ಡಿಗೆ ಕೂಡ ನಗರಕ್ಕೆ ಬರಲು ಅಮ್ಮ ನಿರಾಕರಿಸುತ್ತಾರೆ. ಗರ್ವಾಲಿ ಸಂಸ್ಕೃತಿಯನ್ನು ಆಳವಾಗಿ ನಂಬಿರುವ ಅವರು, ನಮ್ಮ ಆಚರಣೆಗಳಷ್ಟೇ, ಕಾಡುಗಳು ಮುಖ್ಯವೆಂದು ಭಾವಿಸಿದ್ದಾರೆ. ನಾವೆಲ್ಲರೂ ಬೇರೆ ಕಡೆ ಇರುವ ಕಾರಣ, ಅವರು ಕಾಡಿನಿಂದ ದೊರೆತ ಉತ್ಪನ್ನಗಳನ್ನು ಸ್ಥಳೀಯ ಸಮುದಾಯದ ಸದಸ್ಯರಿಗೆ ಸಾಲವಾಗಿ ನೀಡುತ್ತಾರೆ" ಎಂದರು.

ಪ್ರಭಾ ದೇವಿಯಂತಹ ಜನರು ಪರಿಸರವನ್ನು ತಮ್ಮದೇ ಆದ ರೀತಿಯಲ್ಲಿ ಉಳಿಸಲು ಪ್ರಯತ್ನ‌ ಮಾಡುತ್ತಿರುವುದರಿಂದ, ಭೂಮಿ ತಾಯಿ ಸಂತಸದಿಂದಿದ್ದಾಳೆ.