ಕೋವಿಡ್-19 ರೋಗಿಗಳಿಗಾಗಿ ಆಂಬ್ಯುಲೆನ್ಸ್ಗಳಾಗಿ ಬದಲಾದ ಕೇರಳದ ರಕ್ಷಣಾ ದೋಣಿಗಳು
ಜೀವ ಉಳಿಸುವ ಉದ್ದೇಶದಿಂದ, ಕೇರಳವು ರಸ್ತೆ ಸಂಪರ್ಕವನ್ನು ಹೊಂದಿರದ ಪ್ರದೇಶಗಳಲ್ಲಿ ಕೋವಿಡ್-19 ರೋಗಿಗಳಿಗೆ ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಹಾಯವಾಗಲೆಂದು ರಕ್ಷಣಾ ದೋಣಿಗಳನ್ನು ನಿಯೋಜಿಸಿದೆ.
ಕೆನಡಾದ ನಟ ಮತ್ತು ಉದ್ಯಮಿ ರಿಯಾನ್ ರೆನಾಲ್ಡ್ಸ್ ಒಮ್ಮೆ "ಯಾವುದೇ ರೀತಿಯ ಬಿಕ್ಕಟ್ಟು ಉತ್ತಮವಾಗಿಯೂ ಇರಬಹುದು, ಅದು ನಿಮ್ಮನ್ನು ಎಚ್ಚರಗೊಳಿಸುತ್ತದೆ," ಎಂದು ಹೇಳಿದ್ದರು.
ಇತ್ತೀಚೆಗೆ ತೀವ್ರ ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲಿ ಇದನ್ನು ಕಾಣಬಹುದು. ಅಲ್ಲಿ ಜೀವಗಳನ್ನು ಉಳಿಸಲು ರಕ್ಷಣಾ ದೋಣಿಗಳನ್ನು ಆಂಬುಲೆನ್ಸ್ಗಳಾಗಿ ಪರಿವರ್ತಿಸಲಾಗಿದೆ.
ದಿ ನ್ಯೂಸ್ ಮಿನಿಟ್ ಪ್ರಕಾರ, ಕೇರಳವು 24 ಗಂಟೆ ಚಾಲ್ತಿಯಿರುವ ಎರಡು ದೋಣಿಗಳನ್ನು ಆಂಬ್ಯುಲೆನ್ಸ್ಗಳಾಗಿ ನಿಯೋಜಿಸಿದೆ. ಇದರಲ್ಲಿ ಒಂದು ಕೋವಿಡ್-19 ರೋಗಿಗಳಿಗಾಗಿ ಮೀಸಲಿದ್ದರೆ ಇನ್ನೊಂದು ಸಾಮಾನ್ಯ ಆರೋಗ್ಯ ಸಮಸೈ ತುರ್ತುಗಳಿಗಾಗಿ ನಿಯೋಜಿಸಲಾಗಿದೆ.
ರಾಜ್ಯ ನೀರು ಸರಬರಾಜು ಇಲಾಖೆಯ ನಿರ್ದೇಶಕರಾದ ಶಾಜಿ ವಿ ನಾಯಿರ್ ಮಾತನಾಡುತ್ತಾ,
“ಆಂತರಿಕ ಪ್ರದೇಶಗಳಲ್ಲಿ ವಾಸಿಸುವ ಜನರು ಹಲವರಿದ್ದು, ಅವರು ಆಸ್ಪತ್ರೆಗಳಿಗೆ ಹೋಗಲು ದೋಣಿಗಳನ್ನೆ ಅವಲಂಬಿಸಿದ್ದಾರೆ. ಸಾಮಾನ್ಯ ದೋಣಿಗಳು 10 ಗಂಟೆಗೆ ತಮ್ಮ ಸೇವೆಯನ್ನು ಮುಗಿಸಿದ ನಂತರ ಹೊರಗೆ ಹೋಗಲು ಬೇರೆ ದಾರಿಗಳೆ ಇರುವುದಿಲ್ಲ. ಈ ಆಂಬ್ಯುಲೆನ್ಸ್ ದೋಣಿಗಳು ಕಳೆದ ಕೆಲವು ತಿಂಗಳಿನಲ್ಲಿ ನೂರಾರು ಜನರ ಜೀವವನ್ನು ಉಳಿಸಿವೆ,” ಎಂದರು.
ಆಲಪ್ಪುಝಾದ ಪೆರುಂಬಾಲಂ ದ್ವೀಪದಲ್ಲಿ 25,000 ಕ್ಕೂ ಅಧಿಕ ಜನರು ಸಾರಿಗೆ ಸಂಪರ್ಕ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಅಂತಹ ಪ್ರದೇಶಗಳಲ್ಲಿ ರಕ್ಷಣಾ ದೋನಿಗಳು ಬಹುಪಯೋಗಿ ಆಗಿವೆ.
ಸದ್ಯ ಐದು ರಕ್ಷಣಾ ದೋಣಿಗಳು ಅಲಪ್ಪುಝಾ, ಪನವಲ್ಲಿ, ವೈಕ್ಕೋಮ್, ಮುಹಮ್ಮ ಮತ್ತು ಎರ್ನಾಕುಲಂನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ. ಇವುಗಳಲ್ಲಿ ನಾಲ್ಕು ಆಂಬ್ಯುಲೆನ್ಸ್ ಸೇವೆಗಳಿಗೆ ಬಳಸಲಾಗುತ್ತದೆ. ರೋಗಿಗಳು ಹತ್ತಿರದ ದಡಕ್ಕೆ ಬಂದ ಕೂಡಲೇ ಅವರನ್ನು ನಿಯಮಿತ ಆಂಬ್ಯುಲೆನ್ಸ್ಗಳಿಗೆ ಸ್ಥಳಾಂತರಿಸಲಾಗುತ್ತದೆ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ.
ಕೊರೊನಾವೈರಸ್ ಸೋಂಕಿತರನ್ನು ಕರೆದೊಯ್ಯಲು ವ್ಯವಸ್ಥೆಗೊಳಿಸಲಾದ ತೆಪ್ಪಕ್ಕೆ ಬಂದಾಗ, ಚಾಲಕ ಮತ್ತು ಇಬ್ಬರು ತರಬೇತಿ ಪಡೆದ ಪರಿಚಾರಕರು ಯಾವಾಗಲೂ ಇರುತ್ತಾರೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಗಳು ಪಿಪಿಇ ಕಿಟ್ಗಳು, ಮುಖವಾಡಗಳು ಮತ್ತು ಸೋಂಕುನಿವಾರಕಗಳನ್ನು ಸಿಂಪಡಿಸುವಂತಹ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ.