ಪುಣೆಯ ರೆಸ್ಟೋರೆಂಟ್ ಗಳಲ್ಲಿ "ಅರ್ಧ ಲೋಟ ನೀರು"

ಪುಣೆಯ ರೆಸ್ಟೋರೆಂಟ್ ಗಳಲ್ಲಿ "ಅರ್ಧ ಲೋಟ ನೀರು"

Tuesday September 03, 2019,

2 min Read

ಹೋಟೆಲ್ ಎಂದಾಕ್ಷಣ ಥಟ್ಟನೆ ಮನಸಿಗೆ ಬರುವುದು ಟೇಬಲ್ ಮೇಲೆ ನಾಲ್ಕಾರು ತಣ್ಣನೆ ನೀರಿನ ಲೋಟ ಇಟ್ಟು, ಏನ್ ತಗೋಳ್ತಿರ ಸರ್? ಎಂದು ವಿಚಾರಿಸುವ ಮಾಣಿಗಳು.


ಆದ್ರೆ ಮಹಾರಾಷ್ಟ್ರದ ಪ್ರಮುಖ ನಗರವಾದ ಪುಣೆಯ ಹೋಟೆಲ್ ಗಳಿಗೆ ನೀವು ಭೇಟಿ ಕೊಟ್ಟರೆ, ನಿಮ್ಮ ಟೇಬಲ್ ಮೇಲೆ ಅರ್ಧಲೋಟ ನೀರು ಇರುವುದು ಕಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಇದೀಗ ಪುಣೆ ಮಹಾನಗರ ಎದುರಿಸುತ್ತಿರುವ "ನೀರಿನ ಕೊರತೆ"ಯ ಸಮಸ್ಯೆಗೆ ಅಲ್ಲಿನ 'ಪುಣೆ ರೆಸ್ಟೋರೆಂಟ್ ಮತ್ತು ಹೋಟೆಲ್ ಮಾಲೀಕರ ಸಂಘ' ಈ "ಅರ್ಧಲೋಟ ನೀರಿ"ನ ಮೊರೆ ಹೋಗಿವೆ.


ಪುಣೆ ನಗರದ ಈ ಸಂಘದ (ಪಿ ಆರ್‌ ಎ ಎಚ್‌ ಆ) ಸದಸ್ಯತ್ವ ಹೊಂದಿದ ಸುಮಾರು ಈ 800 ಹೋಟೆಲ್ ಗಳು ಹಾಗೂ ಮೂರೂವರೆ ಸಾವಿರ ಇತರೆ ಹೋಟೆಲ್‌ಗಳು ಗಳು ನೀರಿನ ಸಂರಕ್ಷಣೆಗಾಗಿ ಪಣ ತೊಟ್ಟಿದ್ದು, ಪ್ರತಿ ಹೋಟೆಲ್ ತನ್ನ ನಿತ್ಯಬಳಕೆಯ 1,6೦೦ ಲೀಟರ್ ನೀರಿನಲ್ಲಿ 50% ರಷ್ಟನ್ನು ಉಳಿಸಲು ನಿರ್ಧರಿಸಿದೆ.


ಈ ವರ್ಷದ ಆರಂಭದಲ್ಲೇ ಪುಣೆ ನಗರ ಎದುರಿಸಬಹುದಾದ ನೀರಿನ ಕೊರತೆಯನ್ನು ಮನಗಂಡ 'ಪುಣೆ ರೆಸ್ಟೋರೆಂಟ್ ಮತ್ತು ಹೋಟೆಲ್ ಮಾಲೀಕರ ಸಂಘ'ವು "ಹಾಫ್ ಫಿಲ್ಡ್ ಗ್ಲಾಸ್" ಕ್ರಮವನ್ನು ತಮ್ಮ ಹೋಟೆಲ್ ಗಳಲ್ಲಿ ಈಗಾಗಲೇ ಜಾರಿಗೆ ತಂದಿವೆ. ಪುಣೆ ಮಹಾನಗರ ಪಾಲಿಕೆ ಕೂಡ ಚಳಿಗಾಲದ ಪ್ರಾರಂಭದೊಂದಿಗೆ ತನ್ನ ವ್ಯಾಪ್ತಿಯ ನಾಗರಿಕರಿಗೆ ನೀರು ಸರಬರಾಜಿನಲ್ಲಿ ಶೇಕಡಾ 10% ರಷ್ಟನ್ನು ಮೊಟಕುಗೊಳಿಸುವುದಾಗಿ ಘೋಷಿಸಿದೆ.




ಹಳೆಯ ದೊಡ್ಡ ಲೋಟಗಳ ಬದಲಾಗಿ ಇದೀಗ ಹೋಟೆಲ್‌ಗಳಲ್ಲಿ‌ ಸಣ್ಣ ಲೋಟಗಳನ್ನು ಬಳಕೆ ಮಾಡುತ್ತಿರುವುದು (ಚಿತ್ರಕೃಪೆ : ಬಿಬಿಸಿ)


ಈ ಸಂಘವು ''ಹಾಫ್-ಫಿಲ್ಡ್ ಗ್ಲಾಸ್'' ಪ್ರಯತ್ನದೊಂದಿಗೆ ಹಲವಾರು ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ನೀರಿನ ಸಂರಕ್ಷಣೆಯ ಕುರಿತಾದ ಭಿತ್ತಿಪತ್ರಗಳನ್ನು ವಿತರಿಸುತ್ತಾ ಜಾಗೃತಿ ಮೂಡಿಸುತ್ತಿದೆ. ಸಂಘದ ಈ ಶ್ರಮಕ್ಕೆ ಸಾಕ್ಷಿಯಾಗಿ ಸುಮಾರು 400 ಹೋಟೆಲ್ ಗಳು ನೀರಿನ ಅನಾವಶ್ಯಕ ಪೋಲು ತಡೆಯಲು ತಮ್ಮ ಹೋಟೆಲುಗಳಲ್ಲಿ 'ಹಾಫ್-ಫಿಲ್ಡ್ ಗ್ಲಾಸ್" ಅಭ್ಯಾಸವನ್ನು ಅಳವಡಿಸಿಕೊಂಡಿವೆ.


ಈ ಸಂಘದ ಭಿತ್ತಿಪತ್ರಗಳು 800 ಸದಸ್ಯ ಹೋಟೆಲ್ ಗಳು ಹಾಗೂ 3500 ಪುಣೆ ನಗರದ ಇತರ ಹೋಟೆಲ್ ಗಳಿಗೂ ಹಂಚಲ್ಪಟ್ಟಿದ್ದು, ಹೋಟೆಲ್ ಗಳಿಗೆ ಬರುವ ಗ್ರಾಹಕರಲ್ಲಿ ನೀರಿನ ಮಿತ ಬಳಕೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ಟೇಬಲ್ ಮೇಲೆಯೂ ಈ ಕಾರ್ಡ್‌ಗಳನ್ನು ಇಡಲಾಗುತ್ತಿದೆ.


ಸಂಘದ ಅಧ್ಯಕ್ಷರಾದ ಶ್ರೀ ಗಣೇಶ ಶೆಟ್ಟಿ ಅವರು ಬಿಬಿಸಿ ಗೆ ನೀಡಿದ ಸಂದರ್ಶನ ಒಂದರಲ್ಲಿ ಸಂಘದ ಈ ಕ್ರಮದ ಕುರಿತು ಹೀಗೆ ಹೇಳುತ್ತಾರೆ:


"ನಾವು ಗ್ರಾಹಕರಿಗೆ ಅರ್ಧಲೋಟ ನೀರನ್ನೇ ಮೊದಲು ಪೂರೈಸುತ್ತೇವೆ, ಅವರಿಗೆ ಅಗತ್ಯವಿದ್ದರೆ ಮಾತ್ರ ಮತ್ತೆ ಕುಡಿಯಲು ನೀರನ್ನು ನೀಡಲಾಗುವುದು. ಹೆಚ್ಚುವರಿಯಾಗಿ ಉಳಿದ ನೀರನ್ನು ಗಿಡಗಳಿಗೆ, ಹೋಟೆಲ್ ಸ್ವಚ್ಛತೆಗೆ ಬಳಸಿಕೊಳ್ಳುತ್ತೇವೆ. ಅತಿ ಕಡಿಮೆ ನೀರನ್ನು ಉಪಯೋಗಿಸಬಹುದಾದ ಶೌಚಾಲಯದ ನಿರ್ಮಾಣ ಹಾಗೂ ಮಳೆನೀರನ್ನು ಹಿಡಿದಿಟ್ಟುಕೊಳ್ಳಬಹುದಾದ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸಿದ್ದೇವೆ. ನಮ್ಮ ಸಿಬ್ಬಂದಿಗಳಿಗೆ ನೀರಿನ ಮಿತ ಬಳಕೆಯ ಕುರಿತು ವಿವರಿಸಿದ್ದೇವೆ. ಇವೆಲ್ಲ ಪ್ರಯತ್ನ ದ ಫಲವಾಗಿ ಪ್ರತಿದಿನ 1,600 ಲೀಟರ್ ಉಪಯೋಗಿಸುತ್ತಿದ್ದ ಹೋಟೆಲ್ ಗಳು ಈಗ ಸುಮಾರು ಶೇಕಡಾ 50%ರಷ್ಟನ್ನು ಉಳಿಸುತ್ತಿವೆ."


ಸಾಂಧರ್ಬಿಕ ಚಿತ್ರ, ಚಿತ್ರಕೃಪೆ: ಬಿಬಿಸಿ


ಪಶ್ಚಿಮ ಮಹಾರಾಷ್ಟ್ರದ ನಗರ ಪುಣೆ ಮತ್ತು ಹಲವು ನಗರಗಳು ಪ್ರತಿ ವರ್ಷ ತೀವ್ರತರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಭಾರತ ಸರಕಾರದ ವರದಿಯಂತೆ ಈ ವರ್ಷದ ಆರಂಭದಲ್ಲಿ ನಮ್ಮ ದೇಶವು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದು ಇಲ್ಲಿಯವರೆಗೆ 600 ದಶಲಕ್ಷ ಜನರನ್ನು ಬಾಧಿಸಿದೆ. ವರದಿಯ ಪ್ರಕಾರ, 2020 ರ ಸುಮಾರಿಗೆ ನಮ್ಮ ರಾಷ್ಟ್ರದ 21 ನಗರಗಳು ಗಂಭೀರವಾದ ಅಂತರ್ಜಲ ಕೊರತೆಯನ್ನು ಎದುರಿಸಲಿವೆ.


ತಜ್ಞರು ದೂರುವ ಹವಾಮಾನ ಬದಲಾವಣೆ, ಅರಣ್ಯನಾಶ, ಹೆಚ್ಚುತ್ತಿರುವ ನಗರದ ಜನಸಾಂದ್ರತೆ ಇವೆಲ್ಲ ಒಂದು ಕಾರಣವಾದರೆ, ಪುಣೆ ನಗರದ 'ಖಡಕ್ವಾಸಲ ಅಣೆಕಟ್ಟಿನ' ಅಸಮರ್ಪಕ ನಿರ್ವಹಣೆ ಕೂಡ ಆಣೆಕಟ್ಟಿನ ನೀರುಸಂಗ್ರಹ ಸಾಮರ್ಥ್ಯವನ್ನು ಕುಂಟಿತಗೊಳಿಸಿ ನೀರಿನ ಕೊರತೆಗೆ ಕಾರಣವಾಗಿದೆ.