ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುತ್ತ ಉತ್ತರಖಂಡದ ಕೃಷಿಭೂಮಿಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ ಈ ಮಾಜಿ ಮಾರ್ಕೆಟಿಂಗ್ ಕಾರ್ಯನಿರ್ವಾಹಕಿ
36 ವರ್ಷದ ಮಾಜಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮತ್ತು ಪರಿಸರವಾದಿ ಶಗುನ್ ಸಿಂಗ್ ಅವರು 11 ಪ್ರದೇಶಗಳ ಕೃಷಿಭೂಮಿಯನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ತೊಡಗಿರುವ ಗೀಲಿ ಮಿಟ್ಟಿ ಫೌಂಡೇಶನ್ನ ಮುಖ್ಯಸ್ಥರಾಗಿದ್ದಾರೆ, ಇದಲ್ಲದೆ ಆಕೆ ಅರ್ಥ್ ಬ್ಯಾಗ್ ತಂತ್ರವನ್ನು ಬಳಸಿಕೊಂಡು ಮಣ್ಣಿನ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ.
ನೀವು ಯಾವುದಾದರೂ ಕಟ್ಟಡ ನಿರ್ಮಾಣ ನಡೆಯುತ್ತಿರುವ ನಿವೇಶನದ ಮುಂದೆ ಹೋದರೆ ನಿಮಗೆ ಸಿಮೆಂಟ್ ಚೀಲಗಳು ಹಾಗೂ ಇಟ್ಟಿಗೆಗಳು ಕಾಣುತ್ತವೆ. ನಮ್ಮಲ್ಲಿ ಬಹಳಷ್ಟು ಜನರಿಗೆ ನಾವು ಉಪಯೋಗಿಸುವ ಸಿಮೆಂಟು ಹಾಗೂ ಕೆಂಪು ಇಟ್ಟಿಗೆಗಳು ಸುಸ್ಥಿರವಲ್ಲ ಹಾಗೂ ಕೊಳೆಯುವುದಿಲ್ಲ ಎಂಬುದು ತಿಳಿದಿಲ್ಲ. ಆದಾಗ್ಯೂ ಬಹುತೇಕ ನಿರ್ಮಾಣ ಸಂಸ್ಥೆಗಳು ಅದನ್ನೇ ಬಳಸುತ್ತವೆ.
ಆದರೆ 36 ವರ್ಷದ ಶಗುನ್ ಸಿಂಗ್ ಅವರಿಗೆ ಈ ಅಭ್ಯಾಸಗಳನ್ನು ಬದಲಾಯಿಸಬೇಕು ಹಾಗೂ ವ್ಯತ್ಯಾಸವನ್ನು ತರಬೇಕು ಎಂಬ ಹಂಬಲ. ಅದಕ್ಕಾಗಿ ಅವರು ಗೀಲಿ ಮಿಟ್ಟಿ ಎಂಬ ಸಾಮಾಜಿಕ ಉದ್ಯಮವನ್ನು ಆರಂಭಿಸಿದರು. ಅದರ ಅಡಿಯಲ್ಲಿ ಅವರು ಗೀಲಿ ಮಿಟ್ಟಿ ಫಾರ್ಮ್ಸ್, ಪರಿಸರ ಸ್ನೇಹಿ ಹಾಗೂ ಸಂಸ್ಥೆಯ ಒಡೆತನದಲ್ಲಿ ಸುಸ್ಥಿರ ವಾಸಸ್ಥಳಗಳನ್ನು ಸ್ಥಾಪಿಸಿದ್ದಾರೆ.
ಪಂಗೋಟ್ನ (ಉತ್ತರಖಂಡದ ನೈನಿತಾಲ್ನಿಂದ ಸರಿಸುಮಾರು 25 ಕಿ.ಮೀ ದೂರದಲ್ಲಿರುವ) ಗುಡ್ಡಗಾಡು ಪ್ರದೇಶವಾದ ಮಹ್ರೋರಾ ಗ್ರಾಮದಲ್ಲಿ ನೆಲೆಗೊಂಡಿರುವ ಶಾಗುನ್ ಮಣ್ಣು, ಹಸುವಿನ ಸಗಣಿ ಮತ್ತು ಸುಣ್ಣದಿಂದ ಮನೆಗಳನ್ನು ನಿರ್ಮಿಸುವ ಮೂಲಕ ಬದಲಾವಣೆ ತರುತ್ತಿದ್ದಾರೆ.
ಶೀ ದಿ ಪೀಪಲ್ ನೊಂದಿಗಿನ ಮಾತುಕತೆಯಲ್ಲಿ,
"ಮಣ್ಣಿನಲ್ಲಿ ಸಾಕಷ್ಟು ಉಷ್ಣ ಶಕ್ತಿ ಇದೆ. ಉಷ್ಣ ಶಕ್ತಿಯಿಂದ, ಮಣ್ಣು ಬಹಳ ಸಮಯದವರೆಗೆ ಶಾಖ ಮತ್ತು ಶೀತವನ್ನು ಹೀರಿಕೊಳ್ಳುತ್ತದೆ. ಅನೇಕರು ಈಗ ಅದರ ಸಾಮರ್ಥ್ಯವನ್ನು ಗೌರವಿಸುವುದಿಲ್ಲ,” ಎಂದು ಹೇಳಿದರು.
ಫಾರ್ಮ್ಗಳು ಉತ್ಪತ್ತಿಯಾದ ಕಸವನ್ನು ಮರುಬಳಕೆ ಮಾಡುತ್ತವೆ. ಶಗುನ್ ಪ್ರಕಾರ, ಎಲ್ಲಾ ಮನೆಗಳನ್ನು ನಾಲ್ಕು ತಂತ್ರಗಳಿಂದ ತಯಾರಿಸಲಾಗುತ್ತದೆ.
"ಇಲ್ಲಿ ಅರ್ಥ್ ಬ್ಯಾಗ್ ತಂತ್ರ ಬಹಳ ಮುಖ್ಯವಾದದ್ದು. ಭೂಕಂಪ ಪೀಡಿತ ಪ್ರದೇಶಗಳಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಬಹುತೇಕರಿಗೆ ತಿಳಿದಿಲ್ಲ, ನೇಪಾಳದ ಭೂಕಂಪದ ಸಂದರ್ಭದಲ್ಲಿ ಎಲ್ಲ ಕಟ್ಟಡಗಳು ಬಿದ್ದರೂ ಒಂದು ಮನೆ ಮಾತ್ರ ಹಾಗೆಯೇ ಇತ್ತು. ಕಾರಣ ಅದು ಅರ್ಥ್ ಬ್ಯಾಗ್ ತಂತ್ರದಿಂದ ಕಟ್ಟಿದ ಮನೆಯಾಗಿತ್ತು," ಎಂದು ಅವರು ವಿವರಿಸುತ್ತಾರೆ.
ಸುಸ್ಥಿರತೆಯ ಅಂಶದ ಹೊರತಾಗಿ, ಈ ವಸತಿ ರಚನೆಗಳು ಆಧ್ಯಾತ್ಮಿಕ ಶಕ್ತಿಯನ್ನು ಸಹ ತರುತ್ತವೆ ಎಂದು ನಂಬಿರುವ ಶಗುನ್, ಒಬ್ಬ ವ್ಯಕ್ತಿಯು ಅದನ್ನು ಒಳಗೆ ವಾಸಿಸುವಾಗ ಅನುಭವಿಸಬಹುದು ಎನ್ನುತ್ತಾರೆ.
ಸಿಮೆಂಟ್ ರಚನೆಗಳು ಉಸಿರಾಡಲು ಸಾಧ್ಯವಿಲ್ಲ ಎಂದು ನಂಬಿರುವ ಶಗುನ್, ನೀವು ಸುಮಾರು ಒಂದು ದಶಕಗಳ ಕಾಲ ಈ ಮನೆಯನ್ನು ಲಾಕ್ ಮಾಡಿ, ಮತ್ತೆ ಪ್ರವೇಶಿಸಿದಾಗ ಮಾಲಿನ್ಯಕಾರಕಗಳ ವಿಷತ್ವವನ್ನು ನೀವು ಅನುಭವಿಸಬಹುದು ಎನ್ನುತ್ತಾರೆ. ಆದರೆ ಮಣ್ಣಿನ ಮನೆಯ ವಿಷಯದಲ್ಲಿ, ಮಣ್ಣಿನ ಗೋಡೆಗಳು ಉಸಿರಾಡಲು ಸಮರ್ಥವಾಗಿದ್ದು, ಅವು ಸ್ವಲ್ಪ ಗಾಳಿಯ ಹರಿವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ವಿಶೇಷ ಕೃಷಿ ತಂತ್ರಗಳು ಮತ್ತು ಪರ್ಮಾಕಲ್ಚರ್ ಫಾರ್ಮ್ ಮೂಲಕ ಅನೇಕ ಗ್ರಾಮೀಣ ರೈತರ ಜೀವನವನ್ನು ಪುನರುಜ್ಜೀವನಗೊಳಿಸುವಲ್ಲಿ ಶಗುನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು 30 ವಿದ್ಯಾರ್ಥಿಗಳು, ಸ್ವಯಂಸೇವಕರು ಮತ್ತು ಇಂಟರ್ನಗಳ ತಂಡದೊಂದಿಗೆ ಕೆಲಸ ಮಾಡುತ್ತಿದ್ದು, 11 ಸಾಕಣೆ ಕೇಂದ್ರಗಳನ್ನು ಮರುವಿನ್ಯಾಸಗೊಳಿಸಲು ಅವರೆಲ್ಲ ಸಹಾಯ ಮಾಡುತ್ತಿದ್ದಾರೆ.
ಮಳೆ ನೀರು ಕೊಯ್ಲು, ಹೊಂಡಗಳ ಪುನರುಜ್ಜೀವನ ಹಾಗೂ ಸಸ್ಯ ವೈವಿಧ್ಯತೆಯನ್ನೂ ಒಳಗೊಂಡ ಹಲವು ಬದಲಾವಣೆಗಳನ್ನು ಈ ಪ್ರದೇಶ ಕಂಡಿದೆ. ರೈತರು ಸಹ ಗೋಧಿ, ಬಟಾಣಿ ಹಾಗೂ ರಾಗಿ ಬೆಳೆಗಳನ್ನು ಬೆಳೆಯಲು ಆರಂಭಿಸಿದ್ದಾರೆ.
ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತಾ, ಶಗುನ್,
"ನಾವು ಮುಂಬರುವ ಮಳೆಗಾಲದೊಳಗೆ ಹೆಚ್ಚುವರಿ ಆದಾಯ ತರಿಸಬಲ್ಲ ಸ್ಥಳೀಯ ಮೀನುಗಳನ್ನು ಉಳಿಸಿಕೊಳ್ಳಲು ಹೊಲಗಳಲ್ಲಿ ಚಿಕ್ಕ ಹೊಂಡಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿದ್ದೇವೆ," ಹೀಗೆ ಹೇಳಿದರು.