ಛತ್ತಿಸಗಡ್ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಜೈವಿಕ ವಿಘಟನೀಯ ಪರ್ಯಾಯವನ್ನು ಕಂಡುಕೊಳ್ಳುವಂತೆ ಕಂಪನಿಗಳನ್ನು ಒತ್ತಾಯಿಸುತ್ತಿದ್ದಾರೆ

ಛತ್ತಿಸಗಡ್ ಅಂಬಿಕಾಪುರದ ಹೋಲಿ ಕ್ರಾಸ್ ಶಾಲೆಯ ವಿದ್ಯಾರ್ಥಿಗಳು ನಗರದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು ಪ್ಲಾಸ್ಟಿಕ್ ರ‍್ಯಾಪರ್‌ಗಳನ್ನು ಕಂಪನಿಗಳಿಗೆ ವಾಪಾಸ್ ಕಳುಹಿಸುತ್ತಿದ್ದಾರೆ‌.

ಛತ್ತಿಸಗಡ್ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಜೈವಿಕ ವಿಘಟನೀಯ ಪರ್ಯಾಯವನ್ನು ಕಂಡುಕೊಳ್ಳುವಂತೆ ಕಂಪನಿಗಳನ್ನು ಒತ್ತಾಯಿಸುತ್ತಿದ್ದಾರೆ

Tuesday January 07, 2020,

2 min Read

ಪ್ಲಾಸ್ಟಿಕ್ ಪ್ರಪಂಚದಾದ್ಯಂತ ಮಾಲಿನ್ಯದ ಪ್ರಮುಖ ಮೂಲವಾಗಿ ಕಂಡು ಬರುತ್ತಿದೆ. ಕೇವಲ ಸರ್ಕಾರ ಮಾತ್ರ ಅದನ್ನು ತೊಡೆದು ಹಾಕಲಾಗುವುದಿಲ್ಲ, ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸಹ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಛತ್ತಿಸಗಡ್‌ನ ಅಂಬಿಕಾಪುರದ ವಿದ್ಯಾರ್ಥಿಗಳ ನೇತೃತ್ವದ ಈ ಉಪಕ್ರಮವು ರ‍್ಯಾಪರ್‌ಗಳ ರೂಪದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು ಪ್ರಯತ್ನ ಮಾಡುತ್ತಿದೆ.


ಹೋಲಿ ಕ್ರಾಸ್ ಶಾಲೆಯ ವಿದ್ಯಾರ್ಥಿಗಳು ಬಿಸ್ಕತ್ತು, ಚಾಕೊಲೇಟ್, ಚಿಪ್ಸ್‌ನಂತಹ ಪ್ಲಾಸ್ಟಿಕ್ ರ‍್ಯಾಪರ್‌ಗಳನ್ನು ತಯಾರಿಕಾ ಕಂಪನಿಗಳಿಗೆ ವಾಪಸ್ ಕಳುಹಿಸುತ್ತಿದ್ದಾರೆ‌. ನಗರದಲ್ಲಿ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್‌ನ್ನು ನಿಭಾಯಿಸಲು ಮತ್ತು ಕಂಪನಿಗಳು ಜೈವಿಕ ವಿಘಟನೀಯ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಈ ಮೂಲಕ ಒತ್ತಾಯಿಸಲಾಗುತ್ತಿದೆ.


ವಿದ್ಯಾರ್ಥಿಗಳು ಪ್ಲಾಸ್ಟಿಕ್ ಹೊದಿಕೆಗಳಿಂದ ತಯಾರಿಸಿದ ಚಿತ್ರವನ್ನು ಪ್ರದರ್ಶಿಸುತ್ತಿರುವುದು (ಚಿತ್ರಕೃಪೆ: ಎಎನ್‌ಐ)


ಎಎನ್‌ಐ ಜೊತೆ ಮಾತನಾಡಿದ ಶಾಲಾ ವಿದ್ಯಾರ್ಥಿ ಮಹಿ ಗುಪ್ತಾ,


"ಈ ಪ್ಲ್ಯಾಸ್ಟಿಕ್ ಹೊದಿಕೆಗಳ ಮೇಲೆ ‘ನಾವು ಆಹಾರವನ್ನು ಇಷ್ಟಪಟ್ಟರೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಏನು ಮಾಡಬೇಕೆಂದು ನಮಗೆ ತಿಳದಿಲ್ಲವಾದ್ದರಿಂದ ನಾವು ಅದನ್ನು ವಾಪಸ್ ಕಳುಹಿಸುತ್ತಿದ್ದೇವೆ,' ಎಂಬ ಟಿಪ್ಪಣಿಯನ್ನು ಬರೆದು, ಆಹಾರವನ್ನು ಪ್ಯಾಕೇಜಿಂಗ್ ಮಾಡಲು ಜೈವಿಕ ವಿಘಟನೀಯ ಪರ್ಯಾಯಗಳನ್ನು ಅಳವಡಿಸಿಕೊಳ್ಳುವಂತೆ ವಿನಂತಿಸುತ್ತಿದ್ದೇವೆ," ಎನ್ನುತ್ತಾನೆ.


ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಶ್ಲಾಘಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ತಮ್ಮ ಟ್ವಿಟರ್‌ನಲ್ಲಿ, "ನಮ್ಮ ಯುವ ವಿದ್ಯಾರ್ಥಿಗಳ ಉತ್ತಮ ಕಾರ್ಯವಿದು. ಇಂತಹ ಪ್ರಯತ್ನಗಳು ಏಕ-ಬಳಕೆಯ ಪ್ಲಾಸ್ಟಿಕ್‌ನ್ನು ಕಡಿಮೆ ಮಾಡುವಲ್ಲಿ ಅರಿವು ಮೂಡಿಸುತ್ತವೆ," ಎಂದು ಬರೆದುಕೊಂಡಿದ್ದಾರೆ‌.


ಈ ರೀತಿಯ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡುತ್ತಿರುವುದು ಇದು ಎರಡನೇಯ ಬಾರಿ. ಶಾಲೆಯು ವಿದ್ಯಾರ್ಥಿಗಳನ್ನು ಮತ್ತು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಹೋರಾಟವನ್ನು ಮತ್ತಷ್ಟು ಪ್ರೋತ್ಸಾಹಿಸಲು ಸುಸ್ಥಿರತೆಯ ಪರಿಕಲ್ಪನೆಗೆ ಮಹತ್ವ ನೀಡುತ್ತಿದೆ‌.


ಎನ್‌ಡಿಟಿವಿಯೊಂದಿಗಿನ ಸಂವಾದದಲ್ಲಿ ಮಾತನಾಡಿದ ಅಂಬಿಕಾಪುರದ ಮಹಾನಗರ ಪಾಲಿಕೆಯ ವಕ್ತಾರರು,


"ಈ ಮಕ್ಕಳು ಎಂಎನ್‌ಸಿಗಳನ್ನು ಅವುಗಳ ಕಾರಣದಿಂದ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ಹೊಣೆಗಾರನ್ನಾಗಿ ಮಾಡುತ್ತಿರುವುದು ನಮಗೆ ತುಂಬಾ ಖುಷಿಯನ್ನುಂಟುಮಾಡಿದೆ. ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ(ಪಿಡಬ್ಲೂಎಮ್)2016 ರ ಯೋಜನೆಗೆ ವಿಸ್ತೃತ ನಿರ್ಮಾಪಕ ಜವಾಬ್ದಾರಿ (ಇಪಿಆರ್‌) ತುಂಬಾ ಮುಖ್ಯವಾದ ಅಂಶವಾಗಿದೆ. ಇದರ ಮುಖ್ಯ ಗುರಿಯೆಂದರೆ ಮಾಲಿನ್ಯ ಮುಕ್ತವಾಗಿಸುವುದು.ಅಂಬಿಕಾಪುರದಲ್ಲಿ ಗಾರ್ಬೆಜ್ ಕೆಫೆಯಿದೆ. ಅಲ್ಲಿ ನಾವು ಪ್ಲಾಸ್ಟಿಕ್ ತ್ಯಾಜ್ಯವನ್ನು ತರುವವರಿಗೆ ಪ್ರತಿಯಾಗಿ ಉಚಿತ ಬಿಸಿಯಾದ ಹಾಗೂ ರುಚಿಕರವಾದ ಊಟವನ್ನು‌ ನೀಡುತ್ತೇವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಅಂಬಿಕಾಪುರದ ಯುವ ವಿದ್ಯಾರ್ಥಿಗಳು ಇಪಿಆರ್‌(ಎಕ್ಸಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಬ್ಲಿಟಿ)ನಲ್ಲಿ ಮುನ್ನಡೆ ಸಾಧಿಸುತ್ತಿರುವುದು ನನಗೆ ಖುಷಿ ತಂದಿದೆ!," ಎಂದೆನ್ನುತ್ತಾರೆ.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.