ಪ್ಲಾಸ್ಟಿಕ್ ಬಾಟಲಿಗಳಿಂದ ಶೌಚಾಲಯ ನಿರ್ಮಿಸಿದ ವಾಟರ್ ಏಡ್ ಇಂಡಿಯಾ
ಶೌಚಾಲಯವಿಲ್ಲದೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯಿಂದ ದೂರ ಉಳಿದಿದ್ದ ವೈತರಣಿಯ ಈ ಶಾಲೆಯಲ್ಲಿ ವಾಟರ್ ಏಡ್ ಇಂಡಿಯಾ ಎಂಬ ಸಂಸ್ಥೆ 3,500 ಪ್ಲಾಸ್ಟಿಕ್ ಬಾಟಲಿಗಳಿಂದ ಸ್ವಚ್ಛಂದವಾದ ಮತ್ತು ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿದೆ.
ವಿಶ್ವ ಸಂಸ್ಥೆಯ ವರದಿಯೊಂದರ ಪ್ರಕಾರ, ಪ್ರತಿ ನಿಮಿಷಕ್ಕೆ ಒಂದು ದಶಲಕ್ಷ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಉಪಯೋಗಿಸಲ್ಪಡುತ್ತವೆ ಹಾಗೂ ವರ್ಷಕ್ಕೆ 5 ಟ್ರಿಲಿಯನ್‌ನಷ್ಟು ಪ್ಲಾಸ್ಟಿಕ್ ಕವರ್‌ಗಳು ವಿಶ್ವಾದ್ಯಂತ ಬಳಕೆಯಾಗುತ್ತವೆ. ಉತ್ಪಾದನೆಗೊಳ್ಳುವ ಪ್ಲಾಸ್ಟಿಕ್‌ನಲ್ಲಿ ಅರ್ಧದಷ್ಟು ಕೇವಲ ಏಕ-ಬಳಕೆಯ ಪ್ಲಾಸ್ಟಿಕ್ ಆಗಿವೆ, ಒಮ್ಮೆ ಅವನ್ನು ಉಪಯೋಗಿಸಿ ಎಸೆದರೆ ಮತ್ತೆ ಅವು ಬಳಕೆಗೆ ಬರುವುದಿಲ್ಲ. ಇಂದು ಪ್ರಪಂಚದಲ್ಲಿ ವರ್ಷಕ್ಕೆ 300 ಟನ್‌ನಷ್ಟು ಪ್ಲಾಸ್ಟಿಕ್ ಉತ್ಪತ್ತಿಯಾಗುತ್ತಿದೆ. ಆದರೆ ಅದರ ಒಂದು ಪ್ರತಿಶತದಷ್ಟು ಸಹ ಮರು ಬಳಕೆಯಾಗುತ್ತಿಲ್ಲ ಎಂಬುದು ವಿಷಾಧನೀಯ ಸಂಗತಿ.
ಇತ್ತೀಚಿನ ದಿವಸಗಳಲ್ಲಿ ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ಸರಕಾರಗಳು ಹಾಗೂ ಸಂಘ ಸಂಸ್ಥೆಗಳು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆ ಜನರಲ್ಲಿಯೂ ಜಾಗೃತಿ ಮೂಡುತ್ತಿದೆ. ಪ್ಲಾಸ್ಟಿಕ್ ಮರುಬಳಕೆಯ ಒಂದು ವಿಧಾನವಾಗಿ ಹೆಚ್ಚು ಪರಿಣಾಮಕಾರಿಯಾಗಿರುವುದು ನಿರ್ಮಾಣ ಕಾರ್ಯಗಳಲ್ಲಿ ಪ್ಲಾಸ್ಟಿಕ್ ಉಪಯೋಗಿಸುತ್ತಿರುವುದು. ಮಹಾರಾಷ್ಟ್ರಾದ ಬುಡಕಟ್ಟು ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಡೆಯುತ್ತಿರುವ ವೈತರಣ ಆಶ್ರಮಶಾಲೆ-ವಸತಿಯುತ ಶಾಲೆಯಲ್ಲಿ ಇಂತದ್ದೊಂದು ಪ್ರಯೋಗ ನಡೆದು ಯಶಸ್ವಿಯೂ ಆಗಿದೆ.
ಮೂಲಭೂತ ಸೌಕರ್ಯಗಳ ಕೊರತೆ
ವೈತರಣ ಆಶ್ರಮಶಾಲೆಯು ವೈತರಣ ಅಣೆಕಟ್ಟಿಗೆ ಹತ್ತಿರದಲ್ಲೇ ಇದ್ದರೂ ಸಮರ್ಪಕವಾದ ನೀರಿನ ವ್ಯವಸ್ಥೆ ಹೊಂದಿರಲಿಲ್ಲ. ಆ ಕಾರಣದಿಂದಾಗಿ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಜಲ ಸಂಪರ್ಕ ಹಾಗೂ ನೈರ್ಮಲ್ಯತೆಯನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಬಾಲಕಿಯರು ಕಡಿಮೆ ಸಂಖ್ಯೆಯಲ್ಲಿದ್ದ ಕಾರಣದಿಂದಾಗಿ ಈ ಶಾಲೆಯಲ್ಲಿ ಬಾಲಕಿಯರಿಗೆ ಹಾಗೂ ಮಹಿಳೆಯರಿಗೆ ಶೌಚಾಲಯವೂ ಇರಲಿಲ್ಲ. ಹಾಗಾಗಿ ಮಹಿಳೆಯರು ಹಾಗೂ ಬಾಲಕಿಯರು ಪುರುಷರ ಶೌಚಾಲಯ ಉಪಯೋಗಿಸುತ್ತಿದ್ದರು ಹಾಗೂ ಬಾಲಕರು ಬೇರೆ ದಾರಿಯಿಲ್ಲದೆ ಬಯಲು ಶೌಚಕ್ಕೆ ತೆರಳುತ್ತಿದ್ದರು.
ಇಂದು 254 ಬಾಲಕರು ಹಾಗೂ 35 ಬಾಲಕಿಯರಿರುವ ಈ ಶಾಲೆಯಲ್ಲಿ ವಾಟರ್‌ಏಡ್ ಇಂಡಿಯಾ ಎಂಬ ಸರಕಾರೇತರ ಸಂಸ್ಥೆ ಬಾಲಕಿಯರ ಶೌಚಾಲಯ ಸಂಕೀರ್ಣವನ್ನು ನಿರ್ಮಿಸಿದೆ. ಆದರೆ ಇಲ್ಲಿ ಸಾಮಾನ್ಯವಾಗಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಾಗ್ರಿಗಳನ್ನು ಬಳಸದೆ 3,500 ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಬಿದಿರನ್ನು ಬಳಸಿ ನಿರ್ಮಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಕಾರ್ಯಕ್ಕೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ವಿಭಾಗ ಹಾಗೂ ಬುಡಕಟ್ಟು ಅಭಿವೃದ್ಧಿ ನಿಗಮದ ಬೆಂಬಲವೂ ದೊರೆತಿದೆ.
ಪ್ಲಾಸ್ಟಿಕ್ ಬಾಟಲಿಗಳಿಂದ ಶೌಚಾಲಯ ನಿರ್ಮಾಣ
ವಾಟರ್ ಏಡ್ ಇಂಡಿಯಾ ಎಂಬ ಸಂಸ್ಥೆ ವೈತರಣ ಆಶ್ರಮಶಾಲೆಗೆ ಸ್ವಚ್ಚ ನೀರಿನ ಸಂಪರ್ಕವನ್ನೂ ಹಾಗೂ ಕೈತೊಳೆಯುವ ಬೇಸಿನ್‌ಗಳನ್ನು ಒದಗಿಸಲು ಮುಂದಾಗಿತ್ತು. ಆದರೆ ಅಲ್ಲಿನ ಬಹುಮುಖ್ಯ ಸಮಸ್ಯೆಯೆಂದರೆ ಬಾಲಕಿಯರಿಗೆ ಶೌಚಾಲಯವಿಲ್ಲದಿರುವುದಾಗಿತ್ತು. ಅದೇ ಸಮಯದಲ್ಲಿ ಶಾಲಾ ಆಡಳಿತ ಮಂಡಳಿಯೂ ವಿಷಯ ಪ್ರಸ್ತಾಪಿಸಿದ್ದರಿಂದ ಕಡಿಮೆ ವೆಚ್ಚದಲ್ಲಿ ಶೌಚಾಲಯ ನಿರ್ಮಿಸುವ ಕೆಲಸ ಶುರುವಾಯಿತು.
ಈ ವಿಷಯದ ಬಗ್ಗೆ ಮಾತನಾಡುತ್ತ ವಾಟರ್ ಏಡ್ ಇಂಡಿಯಾದ ಕಾರ್ಯನಿರ್ವಹಣಾ ಅಧಿಕಾರಿ ಅಭಿಜಿತ್ ಅವಾರಿ,
“ನಾವು ಕಡಿಮೆ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಬೇಕಿದ್ದರಿಂದ, ನಮಗೆ ಹೊಸ ಕಲ್ಪನೆ ಬೇಕಿತ್ತು, ಹಾಗಾಗಿ ನಾವು ಆರ್ಕಿಟೆಕ್ಟ್ ಲಾವ್ರಿ ಬೇಕರ್ ಅವರ ಪರಿಸರ ಸಂರಕ್ಷಣಾ ವಿಧಾನ ಹಾಗೂ ತತ್ವಗಳಿಂದ ಸ್ಪೂರ್ತಿ ಪಡೆದುಕೊಂಡೆವು ಹಾಗೂ ಸಾಂಪ್ರದಾಯಿಕ ಇಟ್ಟಿಗೆಗಳ ಬದಲಿಗೆ ಪ್ಲಾಸ್ಟಿಕ್ ಬಾಟಲಿಗಳನ್ನೇ ಬಳಸಿ ವೆಚ್ಚ ತಗ್ಗಿಸಿದೆವು. ಹತ್ತಿರದ ನಗರಸಭೆಗಳಾದ ತ್ರಿಂಭಕೇಶ್ವರ, ಇಗಾಟಪುರಿ ಹಾಗೂ ಅಕೋಲೆಗಳಿಂದ ಸುಮಾರು 3,500 ಪ್ಲಾಸ್ಟಿಕ್ ಬಾಟಲಿಗಳನ್ನು ತರಿಸಿದೆವು. ನಾವು ಕಟ್ಟಡದ ಅವಶೇಷಗಳ ಕಲ್ಲುಗಳನ್ನೇ ಬುನಾದಿಗೆ ಬಳಸಿದೆವು” ಎಂದು ಎನ್‌ಡಿಟಿವಿಗೆ ಹೇಳಿದರು.
ಒಳಗೋಡೆಗಳನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಬಿದಿರನ್ನು ಬಳಸಲಾಗಿದೆ. ಬಿದಿರಿನ ಗೋಡೆಯು ಸಾಮಾನ್ಯ ಇಟ್ಟಿಗೆಯ ಗೋಡೆಗಿಂತ ಹೆಚ್ಚು ಶಕ್ತಿಯುತವಾಗಿದ್ದು, ವಾತಾವರಣದಲ್ಲಿನ 30 ಪ್ರತಿಶತದಷ್ಟು ಇಂಗಾಲವನ್ನು ಹೀರಿಕೊಳ್ಳುವ ಶಕ್ತಿಯನ್ನೂ ಹೊಂದಿದೆ. ಅಷ್ಟೇ ಅಲ್ಲದೆ ಈ ಶೌಚಾಲಕ್ಕೆ ಎರಡು ಲೀಚ್ ಹೊಂಡಗಳನ್ನು ನಿರ್ಮಿಸಲಾಗಿದ್ದು ಅವು ಮಲವನ್ನು ಹಾಗೂ ಶೌಚಾಲಯ ಸಂಕೀರ್ಣದ ತ್ಯಾಜ್ಯದ ನೀರನ್ನು ಹಿಡಿದುಕೊಳ್ಳುತ್ತದೆ. ಹಾಗೂ ಅಲ್ಲಿನವರಿಗೆ ಲೀಚ್ ಹೊಂಡಗಳ ಪರ್ಯಾಯ ಬಳಕೆಯ ಬಗ್ಗೆಯೂ ವಾಟರ್ ಏಡ್ ತಿಳಿಸಿಕೊಟ್ಟಿದೆ ಎಂದು ವರದಿಗಳು ತಿಳಿಸಿವೆ.
ಈ ಶೌಚಾಲಯದ ಉಪಯುಕ್ತತೆಯ ಬಗ್ಗೆ ಎನ್‌ಡಿಟಿವಿ ಯೊಂದಿಗೆ ಮಾತನಾಡಿದ ಅಲ್ಲಿನ ವಿದ್ಯಾರ್ಥಿನಿ ಆಕಾಂಕ್ಷ ಹೀಗೆ ಹೇಳಿದರು,
“ನಾವು ಈ ಮುಂಚೆಯೆಲ್ಲ ಶೌಚಕ್ಕೆ ದೂರದಲ್ಲಿರುವ ಶೌಚಾಲಯಕ್ಕೆ ತೆರಳಬೇಕಿತ್ತು, ಅದೂ ಸಹ ಸರಿಯಾದ ಸ್ಥಿತಿಯಲ್ಲಿರಲಿಲ್ಲ. ಈಗ ನಿರ್ಮಿಸಿರುವ ಈ ಶೌಚಾಲಯವು ನಮಗೆ ಉಪಯುಕ್ತವಾಗಿದೆ. ನಾವು ಈಗ ಈ ಹೊಸ ಶೌಚಾಲಯವನ್ನು ಬಳಸಬಹುದಾಗಿದೆ, ನನಗೆ ಈ ಗೋಡೆಯ ಮೇಲಿನ ಚಿತ್ರಕಲೆ ಬಹಳ ಇಷ್ಟವಾಯಿತು. ನಾನು ಇದರ ಬಗ್ಗೆ ನಮ್ಮ ಪೋಷಕರಿಗೂ ತಿಳಿಸಿದ್ದೇನೆ.”
ತ್ಯಾಜ್ಯ ವಸ್ತುಗಳ ಮರುಬಳಕೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು
ವಿಶಿಷ್ಟ ರೀತಿಯಲ್ಲಿ ನಿರ್ಮಿಸಿರುವ ಈ ಮಹಿಳಾ ಶೌಚಾಲಯವು ಎಲ್ಲರ ಗಮನ ಸೆಳೆದಿದೆ. ಅದರ ಸುಸಜ್ಜಿತ ಗಾಳಿ ಬೆಳಕಿನ ವ್ಯವಸ್ಥೆ, ಸಮರ್ಪಕವಾದ ವಿದ್ಯುತ್ ಸಂಪರ್ಕ ಹಾಗೂ ನೀರಿನ ವ್ಯವಸ್ಥೆ ಸುರಕ್ಷಿತ, ನೈರ್ಮಲ್ಯತೆಯ ಭಾವನೆ ನೀಡಿದರೆ, ಗೋಡೆಯ ಮೇಲಿನ ವಾರ್ಲಿ ಚಿತ್ರಕಲೆ ಅದಕ್ಕೊಂದು ಅದ್ಭುತವಾದ ಕಲಾತ್ಮಕ ರೂಪವನ್ನು ನೀಡಿದೆ.
“ನನ್ನ ಪ್ರಕಾರ ಮಕ್ಕಳು ಬದಲಾವಣೆಯ ರೂವಾರಿಗಳು. ಅವರು ಜಲ, ನೈರ್ಮಲ್ಯತೆಯ ಹಾಗೂ ಸ್ವಚ್ಚತೆಯ ಬಗ್ಗೆ ಕಲಿತು ತಮ್ಮ ಸಮುದಾಯಕ್ಕೂ ಅದರ ಬಗ್ಗೆ ತಿಳುವಳಿಕೆ ನೀಡುತ್ತಾರೆ. ವೈತರಣದಲ್ಲಿ ನಾವು ವಿಶಿಷ್ಟ ಮಾದರಿಯನ್ನು ಅನುಸರಿಸಿದೆವು. ಹಾಗೂ ಮಕ್ಕಳು ಯೋಜನೆಯ ಪ್ರತಿ ಹಂತದಲ್ಲೂ ಇರುವಂತೆ ಖಾತರಿ ಪಡಿಸಿಕೊಂಡೆವು. ಅವರಿಗೆ ಬಾಟಲಿಗಳಿಗೆ ಮರಳು ಮತ್ತು ಮಣ್ಣನ್ನು ತುಂಬಲು ಹೇಳಿದೆವು. ಈ ಕ್ರಮವನ್ನು ನಾವು ಬಳಸಿದ್ದು ಮಕ್ಕಳಲ್ಲಿ ಶೌಚಾಲಯದ ಮಾಲೀಕತ್ವವನ್ನು ಖಾತರಿ ಪಡಿಸುವುದಕ್ಕಷ್ಟೇ ಅಲ್ಲದೆ ಅವರಲ್ಲಿ ತ್ಯಾಜ್ಯದ ವಸ್ತುಗಳನ್ನು ಮರುಬಳಕೆ ಮಾಡಿ ಅನನ್ಯವಾದದ್ದೇನನ್ನಾದರು ಸೃಷ್ಟಿಸುವ ಸೂಕ್ಷ್ಮತೆಯನ್ನು ಬೆಳೆಸಲು. ಇದರ ಫಲಿತಾಂಶವಾಗಿ ವಿದ್ಯಾರ್ಥಿನಿಯರು ಈ ಶೌಚಾಲಯವನ್ನು ಅತ್ಯಂತ ಹೆಚ್ಚಾಗಿ ಸ್ವೀಕರಿಸಿದ್ದಾರೆ” ಎಂದು ವಾಟರ್ ಏಡ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ಬಿನು ಅರಿಕಲ್ ಎನ್‌ಡಿಟಿವಿ ಗೆ ಹೇಳಿದರು.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.