ನಮ್ಮ ಆಡಳಿತಕ್ಕೆ ತಂತ್ರಜ್ಞಾನವೇ ಆಧಾರಸ್ತಂಭವಾಗಿದೆ: ಬಿಟಿಎಸ್‌ನಲ್ಲಿ ಪ್ರಧಾನಿ ಮೋದಿ
ಐಸಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಅತ್ಯಂತ ಹಳೆಯ ಮತ್ತು ಪ್ರಮುಖ ಸಭೆಗಳಲ್ಲಿ ಒಂದಾದ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19, 2020 ರಂದು ಉದ್ಘಾಟಿಸಿದರು.
ಭಾರತ ಸರ್ಕಾರವು ತಂತ್ರಜ್ಞಾನವನ್ನು ತನ್ನ ಎಲ್ಲಾ ಯೋಜನೆಗಳ ಪ್ರಮುಖ ಅಂಗವನ್ನಾಗಿಸಿಕೊಂಡಿದೆ ಮತ್ತು ತಂತ್ರಜ್ಞಾನದ ಆಧಾರದ ಮೇಲೆ ತನ್ನ ಆಡಳಿತದ ಮಾದರಿಯನ್ನು ನಿರ್ಮಿಸಿದೆ ಎನ್ನುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಪ್ರಮುಖ ವಾರ್ಷಿಕ ತಂತ್ರಜ್ಞಾನ ಕಾರ್ಯಕ್ರಮವಾದ ಬೆಂಗಳೂರು ಟೆಕ್ ಸಮ್ಮಿಟ್ 2020 (ಬಿಟಿಎಸ್ 2020)ಗೆ ಗುರುವಾರ ಚಾಲನೆ ನೀಡಿದರು.
"ನಮ್ಮ ಯೋಜನೆಗಳು ಸುಗಮವಾಗಿ ಮತ್ತು ವೇಗವಾಗಿ ಜನರನ್ನು ತಲುಪುವಲ್ಲಿ ತಂತ್ರಜ್ಞಾನವೇ ಪ್ರಮುಖ ಕಾರಣವಾಗಿದೆ. ಇದು ಕೋವಿಡ್-19 ವೈರಸ್ ವಿರುದ್ಧ ಅಲ್ಪಾವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಬಹುದು ಎಂಬ ವಿಶ್ವಾಸವನ್ನೂ ನಮಗೆ ನೀಡುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದರು.
ಐಸಿಟಿ, ಎಲೆಕ್ಟ್ರಾನಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಮುಖ ಸಭೆಗಳಲ್ಲಿ ಒಂದಾದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಮೋದಿ ಮಾತನಾಡುತ್ತಿದ್ದರು. ಈ ವರ್ಷ ವರ್ಚುಅಲ್ ಆಗಿರುವ ಶೃಂಗಸಭೆ ನವೆಂಬರ್ 19 ರಿಂದ 21 ರವರೆಗೆ ನಡೆಯುತ್ತಿದೆ.
ಇದನ್ನು ಕರ್ನಾಟಕ ಸರ್ಕಾರವು, ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಉದ್ಯಮಗಳ ಕುರಿತು ರಾಜ್ಯ ಸರ್ಕಾರದ ದೃಷ್ಟಿ ಗುಂಪು) ಮತ್ತು ಭಾರತದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ಗಳ ಸಹಯೋಗದಲ್ಲಿ ಆಯೋಜಿಸಿದೆ.
ಉದ್ಘಾಟನಾ ಭಾಷಣ ಮಾಡುತ್ತ ಮೋದಿಯವರು, "ತಂತ್ರಜ್ಞಾನದ ಕುರಿತಾಗಿರುವ ಈ ಮಹತ್ವದ ಶೃಂಗಸಭೆಯನ್ನು ವರ್ಚುಅಲ್ ರೀತಿಯಲ್ಲಿ ಆಯೋಜಿಸಲು ತಂತ್ರಜ್ಞಾನವು ಸಹಾಯ ಮಾಡುತ್ತಿದೆ. ಐದು ವರ್ಷಗಳ ಹಿಂದೆ ನಾವು ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ ಈಗ ಕೇವಲ ಸರ್ಕಾರದ ಯೋಜನೆಯಾಗಿ ಉಳಿಯದೆ ಜನರ ಜೀವನ ವಿಧಾನವಾಗಿ ಬದಲಾಗಿದೆ. ಇದು ಮಾನವ ಕೇಂದ್ರಿತ ಅಭಿವೃದ್ಧಿಗೆ ರಾಷ್ಟ್ರಕ್ಕೆ ಅವಕಾಶ ಮಾಡಿಕೊಟ್ಟಿದೆ," ಎಂದರು.
23 ನೇ ಆವೃತ್ತಿಯಲ್ಲಿ ಭಾಗವಹಿಸಿದ 25 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳಾದ, ಚಿಂತಕರು, ಉದ್ಯಮ ನಾಯಕರು, ತಂತ್ರಜ್ಞರು, ಸಂಶೋಧಕರು, ನಾವೀನ್ಯಕಾರರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಶಿಕ್ಷಣತಜ್ಞರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
200 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ವರ್ಚುಅಲ್ ಪ್ರದರ್ಶನಗಳನ್ನು ನಡೆಸುವ ನಿರೀಕ್ಷೆಯಿದೆ, ಮತ್ತು ಈ ಸಭೆಯಲ್ಲಿ ಪ್ರತಿದಿನ 4,000 ಕ್ಕೂ ಹೆಚ್ಚು ಪ್ರತಿನಿಧಿಗಳು, 270 ಸ್ಪೀಕರ್‌ಗಳು, ಸುಮಾರು 75 ಪ್ಯಾನಲ್ ಚರ್ಚೆಗಳು ಮತ್ತು 50,000 ಹೆಚ್ಚು ಜನರು ಭಾಗವಹಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಸಮಯದಲ್ಲಿ, ತಂತ್ರಜ್ಞಾನವು ಜನರ ನೆರವಿಗೆ ಬಂದಿತು. ಜನರು ಮನೆಯಿಂದ ಅಥವಾ ಎಲ್ಲಿಂದಲಾದರೂ ಕೆಲಸ ಮಾಡುವ ಪರಿಹಾರಗಳನ್ನು ಕಂಡುಕೊಂಡರು. ಬಿಕ್ಕಟ್ಟಿನ ಸಂದರ್ಭದಲ್ಲಿ ಜನರನ್ನು ಒಟ್ಟುಗೂಡಿಸಲು ತಂತ್ರಜ್ಞಾನವು ಸಹಾಯ ಮಾಡಿತು. ಸಾಂಕ್ರಾಮಿಕ ರೋಗವು ಅಂತ್ಯವಾಗದೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು," ಎಂದು ಮೋದಿ ಹೇಳಿದರು.
"ಕಳೆದ ಕೆಲವು ತಿಂಗಳುಗಳಲ್ಲಿ ತಂತ್ರಜ್ಞಾನದಲ್ಲಾದ ಬದಲಾವಣೆಯ ಪ್ರಮಾಣವು ಒಂದು ದಶಕದಲ್ಲಿ ಸಂಭವಿಸಿರಲಾರದು. ನಾವು ಈಗ ಮಾಹಿತಿ ಯುಗದ ಮಧ್ಯದಲ್ಲಿದ್ದೇವೆ, ಅಲ್ಲಿ ಬದಲಾವಣೆಯು ತುಂಬಾ ವೇಗವಾಗಿ ನಡೆಯುತ್ತಿದೆ," ಎಂದರು.
ಈ ಮಾಹಿತಿ ಯುಗದಲ್ಲಿ, ಪ್ರಧಾನಿ ಮೋದಿಯವರ ಪ್ರಕಾರ, ಮೊದಲ ಮುನ್ನಡೆಯ ಪ್ರಯೋಜನವು ಅತ್ಯುತ್ತಮವಾಗಿ ಮುನ್ನಡೆಯುವವರ ಮುಂದೆ ಅಪ್ರಸ್ತುತವಾಗುತ್ತದೆ. "ಅದ್ಭುತ ತಾಂತ್ರಿಕ ಉತ್ಪನ್ನವನ್ನು ಯಾರು ಬೇಕಾದರೂ ಈಗ ನಿರ್ಮಿಸಬಹುದು. ಮಾಹಿತಿ ಯುಗದಲ್ಲಿ ಭಾರತವು ಮುನ್ನಡೆಯಲು ಈಗ ಅತ್ಯುತ್ತಮ ಸಮಯ. ಭಾರತದಲ್ಲಿ ವಿನ್ಯಾಸಗೊಳಿಸಲಾದ ತಾಂತ್ರಿಕ ಪರಿಹಾರಗಳನ್ನು ಜಗತ್ತಿಗೆ ನಿಯೋಜಿಸುವ ಸಮಯ ಬಂದಿದೆ," ಎಂದರು ಅವರು.
ಸಭೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್; ಕೇಂದ್ರ ಐಟಿ ಸಚಿವ, ರವಿಶಂಕರ್ ಪ್ರಸಾದ್; ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ; ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಮತ್ತು ಆಕ್ಸಿಲರ್ ವೆಂಚರ್ಸ್ ಅಧ್ಯಕ್ಷರಾದ ಎಸ್ ಗೋಪಾಲಕೃಷ್ಣನ್; ಬಯೋಕಾನ್ ಡಾ. ಕಿರಣ್ ಮಜುಂದಾರ್ ಶಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.