340 ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ 11 ಲಕ್ಷ ಟೈಲ್ಸ್ ಗಳನ್ನು ತಯಾರಿಸಿದ ಇಬ್ಬರು ಸ್ನೇಹಿತರು

ಪರಸ್ ಸಲೂಜಾ ಮತ್ತು ಸಂದೀಪ್ ನಾಗ್ಪಾಲ್ ಸ್ಥಾಪಿಸಿದ ಶೈನಾ ಇಕೋ ಯುನಿಫೈಡ್ ಇಂಡಿಯಾ, ಕಚ್ಚಾ ವಿತರಕರು ಮತ್ತು ಎನ್‌ಜಿಒಗಳೊಂದಿಗೆ ಸೇರಿ ಪ್ಲ್ಯಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ನಂತರ ಅದನ್ನು ಟೈಲ್ಸ್‌ಗಳನ್ನಾಗಿ ಉತ್ಪಾದಿಸುತ್ತದೆ.

340 ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ 11 ಲಕ್ಷ ಟೈಲ್ಸ್ ಗಳನ್ನು ತಯಾರಿಸಿದ ಇಬ್ಬರು ಸ್ನೇಹಿತರು

Monday January 13, 2020,

2 min Read

ಭಾರತದಲ್ಲಿ ತ್ಯಾಜ್ಯ ನಿರ್ವಹಣೆ ಹಲವು ವರ್ಷಗಳಿಂದ ನಿರ್ಣಾಯಕ ವಿಷಯವಾಗಿದೆ. ಈ ತ್ಯಾಜ್ಯಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್ ತ್ಯಾಜ್ಯದ ಹಾಗೆ ಸಾವಯವ ಅಥವಾ ಘನತ್ಯಾಜ್ಯವಾಗಿದೆ. ಸಾವಯವ ತ್ಯಾಜ್ಯವನ್ನು ನಿರ್ವಹಿಸಬಹುದು ಮತ್ತು ವಿಲೇವಾರಿ ಮಾಡಬಹುದು ಆದರೆ ಪ್ಲಾಸ್ಟಿಕ್ ತ್ಯಾಜ್ಯವು ಒಂದು ದೊಡ್ಡ ಸಮಸ್ಯೆಯಾಗಿದ್ದು ಅದನ್ನು ನಿರಂತರವಾಗಿ ನಿಭಾಯಿಸಬೇಕಾಗಿದೆ.


ಪ್ಲಾಸ್ಟಿಕ್ ಭೀತಿಯನ್ನು ಹೋಗಲಾಡಿಸುವುದಕ್ಕಾಗಿ ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳು ವಿವಿಧ ಉಪಕ್ರಮಗಳನ್ನು ಕೈಗೊಂಡಿವೆ.


ಪ್ಲಾಸ್ಟಿಕ್ ಟೈಲ್ಸ್ ಜೊತೆಗೆ ಪರಸ್ ಸಲೂಜಾ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ದೆಹಲಿ ಮೂಲದ ಶೈನಾ ಇಕೋ ಯುನಿಫೈಡ್ ಇಂಡಿಯಾ ಅಂತಹ ಒಂದು ಸಂಸ್ಥೆಯಾಗಿದ್ದು, ಪ್ರಾರಂಭದಿಂದಲೂ 11 ಲಕ್ಷ ವರ್ಣರಂಜಿತ ಟೈಲ್ಸ್ ಗಳನ್ನು ತಯಾರಿಸಲು 340 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿದೆ.


ತಮ್ಮ ಟೈಲ್ಸ್‌ಗಳ ಬಗ್ಗೆ ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಸಂಸ್ಥಾಪಕ ಪರಾಸ್ ಸಲೂಜಾ,


"ನಮ್ಮ ಎಲ್ಲಾ ಟೈಲ್ಸ್ ಗಳು ಆ್ಯಂಟಿ-ಸ್ಟ್ಯಾಟಿಕ್, ಆಂಟಿಮೈಕ್ರೊಬಿಯಲ್, ಆ್ಯಂಟಿಬ್ಯಾಕ್ಟೀರಿಯಲ್ ಆಗಿದ್ದು, 140 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಸಾಮರ್ಥ್ಯವನ್ನು ಹೊಂದಿವೆ ಮತ್ತು -25 ಡಿಗ್ರಿ ಸೆಲ್ಸಿಯಸ್ ವರೆಗೆ ತಣ್ಣಗಾಗುತ್ತವೆ," ಎಂದರು.


ಅಲ್ಲದೆ ಪ್ರತಿ ಟೈಲ್ 20 ಮತ್ತು 40 ಟನ್ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು 50 ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎನ್ನುತ್ತಾರೆ.


2015 ರಲ್ಲಿ ಪರಸ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋದಾಗ, ಪ್ಲಾಸ್ಟಿಕ್ ತ್ಯಾಜ್ಯವು ಸುತ್ತಮುತ್ತಲಿನ ಪ್ರದೇಶಗಳನ್ನು ಹೇಗೆ ಉಸಿರುಗಟ್ಟಿಸಿದೆ ಎಂಬುದನ್ನು ಕಂಡಾಗ ಈ ಯೋಚನೆ ಪ್ರಾರಂಭವಾಯಿತು. ಈ ಸಮಸ್ಯೆಯನ್ನು ಪರಿಹರಿಸಲು ನಿಶ್ಚಯಿಸಿದ ಅವರು, ವಿಯೆಟ್ನಾಂ ಪ್ರವಾಸದ ಸಮಯದಲ್ಲಿ ಅಲ್ಲಿ ನಗರಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದನ್ನು ನೋಡಿದರು. ಹಾಗೂ ಈ ಸಮಸ್ಯೆಗೆ ವಿನೂತನ ಪರಿಹಾರವನ್ನು ಕಂಡುಹಿಡಿದರು.


ಅವರು ಭಾರತಕ್ಕೆ ಹಿಂದಿರುಗಿದ ನಂತರ ವಾಣಿಜ್ಯ ಪದವೀಧರರಾದ ಪರಸ್ ಪಾಲಿಮರ್, ರಾಸಾಯನಿಕಗಳ ಬಗ್ಗೆ ವ್ಯಾಪಕವಾಗಿ ಅಧ್ಯಯನ ಮಾಡಿದರು ಮತ್ತು ಪ್ಲಾಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಹೇಗೆ ಸಹಾಯ ಮಾಡುಬಹುದು ಎಂಬುದರ ಕುರಿತು ಉತ್ತಮ ತಿಳುವಳಿಕೆಯನ್ನು ಪಡೆಯಲು ತಜ್ಞರನ್ನು ಭೇಟಿಯಾದರು.


ಟೈಲ್ಸ್‌ಗಳನ್ನು ಪರಿಶೀಲಿಸುತ್ತಿರುವ ಡಾ. ಹರ್ಷವರ್ಧನ್ (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)




ಅದೇ ವರ್ಷ ಪರಸ್ ತನ್ನ ಸ್ನೇಹಿತ ಸಂದೀಪ್ ನಾಗ್ಪಾಲ್ ಅವರೊಂದಿಗೆ ಆರಂಭಿಕ ಮೊತ್ತ 80 ಲಕ್ಷ ರೂ ನೊಂದಿಗೆ ಶೈನಾ ಇಕೋ ಯುನಿಫೈಡ್ ಇಂಡಿಯಾವನ್ನು ಸ್ಥಾಪಿಸಿದರು. ಶುರುವಾದ ಬೆನ್ನಲ್ಲೆ, ಕಚ್ಚಾ ವಿತರಕರು ಮತ್ತು ಎನ್‌ಜಿಒಗಳೊಂದಿಗೆ ಪ್ರತ್ಯೇಕವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಸಹಭಾಗಿತ್ವ ಹೊಂದಿದರು.


ಸಿಎನ್‌ಬಿಸಿ ಟಿವಿ 18 ನೊಂದಿಗೆ ಮಾತನಾಡಿದ ಪರಸ್,


"ವಿವಿಧ ಕಡೆಗಳಿಂದ ಪ್ರಶಂಸೆಗಳು ಮತ್ತು ಮೆಚ್ಚುಗೆಗಳು ಇದ್ದರೂ, ಬೇಡಿಕೆ ಅತ್ಯಲ್ಪವಾಗಿದೆ. ಜನರು ಹೇಳುತ್ತಾರೆ, ‘ಟೈಲ್ಸ್ ಗಳನ್ನು ಮಿಕ್ಕ ವಸ್ತುಗಳಿಂದ ಮಾಡಲಾಗಿದೆ. ನಾವು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಮನೆ ಕಟ್ಟುತ್ತೇವೆ ಮತ್ತು ಕಟ್ಟಿದಾಗ ಮಾರ್ಬಲ್ ಮತ್ತು ಸಿರಾಮಿಕ್ ವಸ್ತುಗಳನ್ನು ಬಳಸಲು ಬಯಸುತ್ತೇವೆ,” ಎಂದರು.


2018 ರಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ನಗರದ ಮೊದಲ ಶ್ವಾನ ಉದ್ಯಾನವನವನ್ನು ನಿರ್ಮಿಸಿತು, ಇದಕ್ಕಾಗಿ ಟೈಲ್ಸ್ ಗಳನ್ನು ಶೈನಾ ಇಕೋ ಯುನಿಫೈಡ್ ಇಂಡಿಯಾದಿಂದಲೆ ಪಡೆಯಲಾಯಿತು. ಇಲ್ಲಿಯವರೆಗೆ, ಟೈಲ್ಸ್ಗಳನ್ನು ಲೋರಿಯಲ್, ಇಂಟರ್ನ್ಯಾಷನಲ್, ಟಾಟಾ ಮೋಟಾರ್ಸ್ - ಜಮಶೆದ್ಪುರ ದಂತಹ ದೊಡ್ಡ ಬ್ರ್ಯಾಂಡ್‌ಗಳು ಬಳಸಿಕೊಂಡಿವೆ ಮತ್ತು ಇತ್ತೀಚೆಗೆ ಗುರುಗ್ರಾಮ್ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಟೆಂಡರ್‌ಅನ್ನು ಪಡೆದಿದೆ.


ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಬಗ್ಗೆ ಗ್ರಹಿಕೆಯನ್ನು ಬದಲಾಯಿಸುವುದರ ಬಗ್ಗೆ ಮಾತನಾಡುತ್ತಾ ಪರಸ್‌,


"ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವಿದೆ ಎಂದು ಎಲ್ಲರೂ ದೂರುತ್ತಾರೆ. ನಾನು ಕನಿಷ್ಠ 50,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದೇನೆ. ಇದೇ ನಮ್ಮ ದೇಶವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ, ಆಲೋಚನೆ ಮತ್ತು ಕಾರ್ಯತಂತ್ರವಾಗಿರುವಾಗ, ಇದು ನನ್ನ ಊಟವನ್ನು ಸಂಪಾದಿಸುವ ಮಾರ್ಗವು ಆಗಿದೆ," ಎಂದು ಹೇಳಿದರು, ವರದಿ ಸಿಎನ್‌ಬಿಸಿ ಟಿವಿ 18.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.