ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾಯ್ತು ಇಟ್ಟಿಗೆ
ಸಾಂಪ್ರದಾಯಿಕ ಇಟ್ಟಿಗೆ ತಯಾರಿಕೆಯ ಶೈಲಿಯು ವಾಯು ಮಾಲಿನ್ಯಕ್ಕೆ ಕಾರಣವಾಗುವ ಅನಿಲಗಳನ್ನು ಯಥೇಚ್ಛವಾಗಿ ಹೊರಸೂಸುತ್ತದೆ. ಇದರಿಂದ ಅಲ್ಲಿನ ಕಾರ್ಮಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಹೊಸ ಪ್ಲಾಸ್ಟಿಕ್ನಿಂದ ತಯಾರಾಗುವ ಇಟ್ಟಿಗೆಯು, ಪ್ಲಾಸ್ಟಿಕ್ಕನ್ನು ಮರುಬಳಕೆ ಮಾಡುವುದರೊಟ್ಟಿಗೆ, ವಾಯು ಮಾಲಿನ್ಯವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಗಂಟೆ 800 ಜನರು ಕೇವಲ ವಾಯು ಮಾಲಿನ್ಯದಿಂದಲೇ ಸಾಯುತ್ತಾರೆ. ಇದು ಮಾನವ ತಂತಾನೆ ತಂದುಕೊಂಡ ದುರಂತ. ಸದಾ ವಾಹನಗಳು, ಕಾರ್ಖಾನೆಗಳು, ಇಟ್ಟಿಗೆ ತಯಾರಿಕಾ ಘಟಕಗಳು ಹೊರಸೂಸುವ ಹೊಗೆಯಿಂದಾಗಿ ದಿನೇ ದಿನೇ ವಾಯು ಮಾಲಿನ್ಯ ಹೆಚ್ಚುತ್ತಲೇ ಇದೆ.
ಇದಷ್ಟೇ ಅಲ್ಲದೆ, ಪ್ಲಾಸ್ಟಿಕ್ ಎಂಬ ಪೆಡಂಭೂತವೂ ಪರಿಸರವನ್ನು ಹಾಳುಮಾಡುವ ಹೊಣೆಹೊತ್ತಿದೆ. ಏಕಬಳಕೆಯ ಪ್ಲಾಸ್ಟಿಕ್ಅನ್ನು ಸಂಪೂರ್ಣವಾಗಿ ನಿಷೇಧಿಸಿದರೂ ಅದು ಅಂಗಡಿಗಳ ಮೂಲೆಗಳಲ್ಲಿ ಕಳ್ಳತನದಲ್ಲಿ ಕೂತಿರುತ್ತದೆ. ಕವರ್ಗಳು, ನೀರು-ಚಹಾದ ಲೋಟಗಳು, ಏಕಬಳಕೆಯ ತಟ್ಟೆಗಳು ಎಲ್ಲಕ್ಕಿಂತ ಹೆಚ್ಚಾಗಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಕಸದಲ್ಲಿ ಬೆರೆತು ಮಣ್ಣಲ್ಲಿ ಸೇರಿ ಮಣ್ಣನ್ನು, ನೀರಿನಲ್ಲಿ ಸೇರಿ ಜಲಪ್ರದೇಶವನ್ನು ಅಲ್ಲಿನ ಜೀವಿಗಳನ್ನು ಬದುಕದಂತೆ ಉಸಿರುಗಟ್ಟಿಸುತ್ತಿದೆ. ಇದಕ್ಕೆ ಕಾರಣರಾರು? ನಾವೇ, ಮಾತನಾಡುವ, ಬುದ್ಧಿಯಿರುವ, ನಾಗರಿಕರೆನಿಸಿಕೊಂಡಿರುವ ಮನುಷ್ಯರು!
ಮಣ್ಣಿನಿಂದ ತಯಾರಾಗುವ ಕೆಂಪು ಇಟ್ಟಿಗೆಗಳ ತಯಾರಿಕಾ ಘಟಕಗಳನ್ನು ವೀಕ್ಷಿಸಲು ತನ್ನ ಶಾಲ ದಿವಸಗಳಲ್ಲಿ ಸಹಪಾಠಿಗಳೊಂದಿಗೆ ತೆರಳಿದ ಬಾಲಕ ಅಭಿಷೇಕ್ ಅಲ್ಲಿನ ಕಾರ್ಮಿಕರ ಪರಿಸ್ಥಿತಿಯನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಾನೆ. ಅಲ್ಲಿನ ಕಾರ್ಮಿಕರು ಸದಾ ಕೆಂಪು ಧೂಳಿನಲ್ಲಿ ಕೆಲಸಮಾಡುವುದನ್ನು, ಆ ಧೂಳು ಅವರಿಗೆ ಶ್ವಾಸಕೋಶದ, ಉಸಿರಾಟದ ತೊಂದರೆಯಿಂದ ಬಳಲುವುದು ಆತನ ಗಮನಕ್ಕೆ ಬರುತ್ತದೆ.
ಪ್ರಸ್ತುತ ಜಾಧವಪುರ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು, 2017 ರಲ್ಲಿ ತಮ್ಮ ಸ್ನೇಹಿತರೊಂದಿಗೆ ಕೂಡಿ ಆರಂಭಿಸಿದ ಸಾಮಾಜಿಕ ನವೋದ್ಯಮ ಕ್ಯೂಬ್ನಲ್ಲಿ ಅಭಿಷೇಕ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನವೋದ್ಯಮದ ಗುರಿ, ಪ್ಲಾಸ್ಟಿಕ್ ಹಾಗೂ ವಾಯು ಮಾಲಿನ್ಯ ಮುಕ್ತ ಭಾರತವಾಗಿದೆ.
ಈ ಇಡೀ ತಂಡ ಕಸ ಆಯುವವರೊಂದಿಗೆ ಸೇರಿ, ಅವರು ಸಂಗ್ರಹಿಸಿದ ಕಸದಲ್ಲಿನ ಪ್ಲಾಸ್ಟಿಕ್ಅನ್ನು ಪಡೆದುಕೊಂಡು, ಸ್ವಚ್ಛಗೊಳಿಸಿದ ನಂತರ ಪುಡಿ ಮಾಡಿ, ಅದಕ್ಕೊಂದು ಆಯತದ ಆಕಾರ ಕೊಟ್ಟು ಯಾವುದೇ ವಾಯು ಮಾಲಿನ್ಯ ಮಾಡದೆ, ಪ್ಲಾಸ್ಟಿಕ್ಅನ್ನು ಮಣ್ಣಿನಲ್ಲೋ, ಸಮುದ್ರಕ್ಕೋ ಸೇರಲು ಬಿಡದೆ ಕಟ್ಟಡ ಕಟ್ಟುವ ಇಟ್ಟಿಗೆಯಾಗಿ ಪರಿವರ್ತನೆಗೊಳಿಸುತ್ತದೆ.
"ಇಟ್ಟಿಗೆ ತಯಾರಿಕಾ ಘಟಕದ ಕಾರ್ಮಿಕರಿಗೆ ಎದುರಾಗುವ ಅತಿದೊಡ್ಡ ತೊಂದರೆ ಇಟ್ಟಿಗೆ-ಧೂಳು. ಹಳೆಯ ತಯಾರಿಕಾ ತಂತ್ರಜ್ಞಾನದಿಂದಾಗಿ ಹೆಚ್ಚಿನ ಮಟ್ಟದ ವಿಷಕಾರಿ ಹೊಗೆಯ ಹೊರಸೂಸುವಿಕೆಗೆ ಕಾರಣವಾಗುತ್ತದೆ, ಕೆಲಸದಲ್ಲಿ ಹೆಚ್ಚಿನ ಸಮಯ ವಿಷಕಾರಕಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಮತ್ತು ಕನಿಷ್ಠ ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಶಿಕ್ಷಣವೂ ಇಲ್ಲವಾದ್ದರಿಂದ ಕಾರ್ಮಿಕರ ಜೀವಕ್ಕೇ ತೊಂದರೆಯಾಗುತ್ತದೆ" ಎಂದು ಅಭಿಷೇಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
'ಪ್ಲಾಸ್ಟಿಕ್ಕ್ಯೂಬ್' ಸುಟ್ಟ ಜೇಡಿಮಣ್ಣಿನ ಇಟ್ಟಿಗೆಗಳ ಪರ್ಯಾಯವಾಗಿದೆ. ನಮ್ಮ ಇಟ್ಟಿಗೆಗಳು ಸಹ ಹಗುರವಾಗಿರುತ್ತವೆ, ನಾವು ಅವುಗಳನ್ನು ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡುತ್ತೇವೆ ಮತ್ತು ಅವು ಉತ್ತಮ ಧ್ವನಿ ನಿರೋಧನವನ್ನು ಒದಗಿಸುತ್ತವೆ” ಎನ್ನುತ್ತಾರೆ ಅಭಿಷೇಕ್.
"ಪ್ಲಾಸ್ಟಿಕ್ ತಯಾರಿಸಲು ಶಕ್ತಿಯ ಬೇಡಿಕೆ ಸಾಂಪ್ರದಾಯಿಕ ಇಟ್ಟಿಗೆಗಳಿಗಿಂತ ಶೇಕಡಾ 70 ರಷ್ಟು ಕಡಿಮೆಯಾಗಿದೆ, ಆದ್ದರಿಂದ ಅವು ಗ್ರೀನ್ಹೌಸ್ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುತ್ತವೆ. ಪ್ಲಾಸ್ಟಿಕ್ ಅನ್ನು ಇತರ ರೂಪಗಳಿಗೆ ಮರುಬಳಕೆ ಮಾಡುವುದಕ್ಕಿಂತ ಇದು ಕಡಿಮೆ ಶಕ್ತಿಯನ್ನು ಬಳಸುತ್ತದೆ," ಎಂದರು.
ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತ, ಅಭಿಷೇಕ್,
"ಮುಂಬರುವ ದಿನಗಳಲ್ಲಿ, ಪ್ಲಾಸ್ಟಿಕ್ಕ್ಯೂಬ್ ಅನ್ನು ತಯಾರಿಸಲು ನಾವು ಅನೇಕ ಉತ್ಪಾದನಾ ಘಟಕಗಳನ್ನು ರಚಿಸಲು ಬಯಸುತ್ತೇವೆ, ಇದು ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ನಮ್ಮ ಉತ್ಪಾದನಾ ಘಟಕಗಳಲ್ಲಿ, ಕಾರ್ಮಿಕರ ಕಲ್ಯಾಣ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ,” ಎಂದಿದ್ದಾರೆ.
ಸಾಮಾನ್ಯ, ಸಾಂಪ್ರದಾಯಿಕ ಇಟ್ಟಿಗೆಗಳು 10-15 ರೂಪಾಯಿಗಳಿಗೆ ಸಿಗುತ್ತವೆ. ಆದರೆ, ಅಭಿಷೇಕ್ ಅವರ ಕ್ಯೂಬ್ ತಂಡ ತಯಾರಿಸಿದ ಇಟ್ಟಿಗೆಗಳು ಕೇವಲ 5-6 ರೂಪಾಯಿಗಳಿಗೆ ದೊರಕುತ್ತವೆ. ಇದರಿಂದ ಕಟ್ಟಡ ನಿರ್ಮಾಣ ವೆಚ್ಚವೂ ಕಡಿತಗೊಳ್ಳುತ್ತದೆ. ಆದರೆ ಜನರು ಈ ಪರ್ಯಾಯಕ್ಕೆ ಒಗ್ಗಿಕೊಳ್ಳುವುದು ಹಾಗೂ ಇದನ್ನು ಒಪ್ಪಿಕೊಳ್ಳುವದು ಮಾತ್ರ ನಿಧಾನಗತಿಯಲ್ಲಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.