ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಿಸಿದ ಭಾರತೀಯ ಸೇನೆ

ಭಾರತೀಯ ಸೇನೆಯ ಮಿಲಿಟರಿ ಇಂಜಿನಿಯರ್ ಸರ್ವೀಸಸ್‌ 1.24 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಗುವಾಹಟಿಯಲ್ಲಿ ರಸ್ತೆ ನಿರ್ಮಿಸಿದೆ.

ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಿಸಿದ ಭಾರತೀಯ ಸೇನೆ

Thursday December 05, 2019,

2 min Read

ಅತಿ ದೊಡ್ಡ ಸೈನ್ಯ ಬಳಗ ಹೊಂದಿರುವ ನಮ್ಮ ಭಾರತೀಯ ಸೇನೆ ತಮ್ಮ ಕಾರ್ಯವೈಖರಿಯಿಂದ ಎಂದಿಗೂ ಪ್ರಚಲಿತವಾಗಿರುತ್ತದೆ. ಬರೀ ಗಡಿ ಕಾಯುವುದಲ್ಲದೇ ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿರುವ ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆ. ಭಾರತೀಯ ಸೇನೆ ವಿಶ್ವದ ಅತಿ ದೊಡ್ಡ ಸ್ವಯಂ ಸೇವಾ ಸೇನೆಯಾಗಿದೆ. ನಮ್ಮ ಸೈನಿಕರು ಹಗಲು ರಾತ್ರಿ, ಬಿಸಿಲು ಮಳೆ ಎನ್ನದೇ ತಮ್ಮೆಲ್ಲ ಆಸೆಗಳನ್ನು ತೊರೆದು ದೇಶದ ರಕ್ಷಣೆಗೆ ನಿಂತಿರುತ್ತಾರೆ. ಅಂತೆಯೇ ಯೋಧ ಬರೀ ಗಡಿಯಲ್ಲಿ ಅಷ್ಟೇ ಅಲ್ಲದೇ ದೇಶದ ಒಳಗೂ ಪ್ಲಾಸ್ಟಿಕ್ ಎಂಬ ವೈರಿಯಿಂದ ರಕ್ಷಿಸಲು ಹೊಸದಾರಿಯೊಂದನ್ನು ಕಂಡು ಹಿಡಿದಿದ್ದಾರೆ.


ಪ್ಲಾಸ್ಟಿಕ್‌ ನಿಂದ ನಿರ್ಮಾಣವಾಗುತ್ತಿರುವ ರಸ್ತೆ (ಚಿತ್ರಕೃಪೆ:ಟ್ವಿಟರ್ )




ಭಾರತವು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಲ್ಲಿ ವಿಶ್ವದ 15ನೇ ಅತಿದೊಡ್ಡ ದೇಶವಾಗಿದೆ. ಅತಿಯಾಗಿ ಪ್ಲಾಸ್ಟಿಕ್ ಬಳಕೆ ಮಾಡಿ ಅದನ್ನು ನಾಶಮಾಡಲಾಗದಿರುವ ಪರಿಸ್ಥಿತಿಯೊಂದನ್ನು ನಮ್ಮ ದೇಶ ತಂದುಕೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಂಬ ಮಹಾಮಾರಿಯನ್ನು ನಿಯಂತ್ರಿಸಲು ಭಾರತೀಯ ಸೇನೆ ಹೊಸದೊಂದು ದಾರಿಯನ್ನು ಕಂಡುಹಿಡಿದಿದ್ದು ಅದು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಅದೇನೆಂದರೆ ಭಾರತೀಯ ಸೇನೆಯ ಮಿಲಿಟರಿ ಇಂಜಿನಿಯರ್ ಸರ್ವೀಸಸ್‌ 1.24 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಗುವಾಹಟಿಯಲ್ಲಿ ರಸ್ತೆ ನಿರ್ಮಿಸಿದೆ, ವರದಿ ದಿ ಲಾಜಿಕಲ್ ಇಂಡಿಯನ್.


ಮಿಲಿಟರಿ ಇಂಜಿನಿಯರ್ ಸೇವೆಗಳ ಪ್ರಾಯೋಗಿಕ ಯೋಜನೆಯಾದ ನಾರಂಗಿ ಮಿಲಿಟರಿ ಯೋಜನೆಯ ಭಾಗವಾಗಿ ಈ ರಸ್ತೆಯನ್ನು ನಿರ್ಮಿಸಲಾಗಿದ್ದು, ಇಡೀ ದೇಶಕ್ಕೆ ಅಪಾಯಕಾರಿಯಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೈನ್ಯದ ಮಾನದಂಡಗಳ ಪ್ರಕಾರ ಸೃಜನಾತ್ಮಕವಾಗಿ ಬಳಸಿಕೊಂಡಿದೆ. ಪರಿಸರವನ್ನು ಈ ಮೂಲಕ ಸಂರಕ್ಷಿಸುತ್ತಿರುವುದಕ್ಕೆ ಭಾರತೀಯ ಸೇನೆಗೆ ಇಡೀ ದೇಶವೇ ಶ್ಲಾಘಿಸುತ್ತಿದೆ.


ಕಳೆದ ವರ್ಷ ಸರ್ಕಾರದ ವರದಿಯ ಪ್ರಕಾರ ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆಯು 2014-15 ರಲ್ಲಿ 1.591 ಮಿಲಿಯನ್ ಮೆಟ್ರಿಕ್ ಟನ್ನಿಂದ 2017-18 ರಲ್ಲಿ 1.719 ಮಿಲಿಯನ್ ಮೆಟ್ರಿಕ್ ಟನ್ ಗೆ ಏರಿಕೆಯಾಗಿದೆ. ಹಾಗೂ 2018-19ರ ಉತ್ಪಾದನೆ 1.589 ಮಿಲಿಯನ್ ಮೆಟ್ರಿಕ್ ಟನ್ ಆಗಿದೆ. ಹೀಗೆ ಇಷ್ಟೊಂದು ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಬಹುದಾಗಿದೆ.


ಭಾರತದ 60 ಪ್ರಮುಖ ನಗರಗಳು ಪ್ರತಿದಿನ ಸುಮಾರು 4.059 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಅದರಲ್ಲಿ 1.2 ಮೆಟ್ರಿಕ್ ಟನ್ ಪ್ಲಾಸ್ಟಿಕ್ ನ್ನು ಬಳಸಿ ಸೇನೆಯ ಮಿಲಿಟರಿ ಇಂಜಿನಿಯರ್ ಸರ್ವೀಸಸ್‌ ಅಸ್ಸಾಂನ ಅತಿದೊಡ್ಡ ನಗರವಾದ ಗುವಾಹಟಿಯಲ್ಲಿ ರಸ್ತೆ ನಿರ್ಮಿಸಿರುವುದು ಭಾರತದಲ್ಲಿರುವ ರಸ್ತೆಗಳ ನಿರ್ಮಾಣ ಮಾಡುವುದಕ್ಕೆ ನಿಜಕ್ಕೂ ಒಂದು ಅತ್ಯುತ್ತಮವಾದ ಉದಾಹರಣೆಗೆಯಾಗಿದೆ.


ಕೂತುಹಲಕಾರಿ ಎಂದರೆ ಸಂಶೋಧಕರು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ಪರಿಸರ ಸ್ನೇಹಿ ವಿಧಾನವೊಂದನ್ನು ಕಂಡುಹಿಡಿದಿದ್ದಾರೆ. ಗ್ರೇಟರ್ ನೋಯ್ಡಾದ ಗದ್ದೆ ಪ್ರದೇಶಗಳಿಂದ ಪ್ಲಾಸ್ಟಿಕ್ ತಿನ್ನುವ ಎರಡು ಬ್ಯಾಕ್ಟೀರಿಯಾ ತಳಿಗಳನ್ನು ಕಸ ವಿಲೇವಾರಿ ಮಾಡಲು ಕಂಡುಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಸರಿಯಾದ ಯೋಜನೆಗಳನ್ನು ಹಾಕಿದರೆ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯ ಸಮಸ್ಯೆಯೇ ಇರುವುದಿಲ್ಲ ಎನ್ನಬಹುದು, ವರದಿ ಸ್ಕೂಪ್ ವೂಪ್.


ಸದ್ದಿಲ್ಲದೆ ದೇಶದ ಒಳ ನುಸುಳುವ ಭಯೋತ್ಪಾದಕರಿಂದ ರಕ್ಷಿಸಿದಂತೆ, ಇಂದು ಭಾರತೀಯ ಮಿಲಿಟರಿ ಇಂಜಿನಿಯರ್ ಸರ್ವೀಸಸ್‌ ಈ ಪ್ಲಾಸ್ಟಿಕ್ ಎಂಬ ಮಹಾಮಾರಿಯಿಂದ ದೇಶವನ್ನು ರಕ್ಷಿಸಲು ಮುಂದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾದ ಈ ಯೋಜನೆಯನ್ನೇ ಆಧರಿಸಿ ಭಾರತದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಎಲ್ಲ ರಸ್ತೆ ನಿರ್ಮಾಣ ಮಾಡಬಹುದಾಗಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.