ಯುಪಿಯ ಈ ಸಹೋದರಿಯರು ತಮ್ಮ ಅನಾರೋಗ್ಯದ ತಂದೆಯ ಕ್ಷೌರಿಕನ ಅಂಗಡಿಯನ್ನು ನಾಲ್ಕು ವರ್ಷಗಳ ಕಾಲ ನಡೆಸಲು ಹುಡುಗರ ವೇಷ ಧರಿಸಿದ್ದರು
ಹೆಣ್ಣುಮಕ್ಕಳು ತಮ್ಮ ಪರಿಸ್ಥಿತಿಯ ನಿರ್ವಹಣೆಗಾಗಿ, ಬದುಕುವುದಕ್ಕೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ, ಉತ್ತರ ಪ್ರದೇಶದ ಈ ಸಹೋದರಿಯರೇ ಸಾಕ್ಷಿ. ತಮ್ಮ ತಂದೆಯ ಚಿಕಿತ್ಸೆಗಾಗಿ ಮತ್ತು ಜೀವನೋಪಾಯಕ್ಕಾಗಿ ಹುಡುಗರ ವೇಷ ಧರಿಸಿ ಕ್ಷೌರಿಕನ ಅಂಗಡಿಯಲ್ಲಿ ಕೆಲಸ ಮಾಡಿದ್ದಾರೆ.
ಕುಟುಂಬದ ಆಧಾರವಾಗಿದ್ದ ಏಕೈಕ ಕೊಂಡಿಗೆ ಏನಾದರೂ ಅಡಚಣೆಯುಂಟಾದರೆ, ಎಲ್ಲವೂ ಸ್ಥಗಿತವಾಗುತ್ತದೆ.
ಆದರೆ, ಗ್ರಾಮೀಣ ಉತ್ತರ ಪ್ರದೇಶದ ಈ ಇಬ್ಬರೂ ಸಹೋದರಿಯರು ಮನೆಯ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ವಿಶಿಷ್ಟವಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ. ಅವರಿಬ್ಬರು ನಾಲ್ಕು ವರ್ಷಗಳ ಕಾಲ ತಮ್ಮ ತಂದೆಯ ಕ್ಷೌರದ ಅಂಗಡಿ ನಡೆಸಲು ಹುಡುಗರ ವೇಷವನ್ನು ಧರಿಸಿದ್ದರು.
2014ರಲ್ಲಿ, ಜ್ಯೋತಿ (18) ಮತ್ತು ನೇಹಾಕುಮಾರಿ (16) ತಂದೆ ಅನಾರೋಗ್ಯಕ್ಕೆ ತುತ್ತಾಗಿರುವದರಿಂದ ಉತ್ತರ ಪ್ರದೇಶದ ಬನ್ವರಿ ಟೋಲಾದಲ್ಲಿರುವ ಅವರ ಕ್ಷೌರದ ಅಂಗಡಿಯನ್ನು ಮುಚ್ಚಬೇಕಾಯಿತು. ಕುಟುಂಬದ ಆಧಾರವಾಗಿದ್ದ ಅವರ ಅಂಗಡಿಯು ಮುಚ್ಚಿದ್ದರಿಂದ ಕುಟುಂಬವನ್ನು ಬೆಂಬಲಿಸಲು ಮತ್ತು ಅವರ ತಂದೆಯ ಚಿಕಿತ್ಸೆಗೆ ಯಾವುದೇ ಆದಾಯವಿಲ್ಲದ ಕಾರಣ, ಕುಟುಂಬವು ಕುಸಿತದ ಅಂಚಿನಲ್ಲಿತ್ತು.
ಈ ಪರಿಸ್ಥಿತಿಯನ್ನು ಗಮನಿಸಿದ ಇವರು ಮತ್ತೆ ತಮ್ಮ ತಂದೆಯ ಅಂಗಡಿಯನ್ನು ತೆರೆಯಲು ನಿರ್ಧರಿಸಿದರು. ದುರದೃಷ್ಟವಶಾತ್, ಗ್ರಾಹಕರು ಮಹಿಳಾ ಕ್ಷೌರಿಕರಿಂದ ಸೇವೆ ಪಡೆಯಲು ಹಿಂಜರಿಯುತ್ತಿರುವದರಿಂದ ಅವರ ವ್ಯವಹಾರವು ಕುಸಿಯತೊಡಗಿತು.
ಪರಿಸ್ಥಿತಿಯ ಅನಿವಾರ್ಯತೆಗೆ ಕಟ್ಟುಬಿದ್ದ ಇವರು, ಒಂದು ಉಪಾಯವನ್ನು ಜಾರಿಗೆ ತಂದರು. ಅದುವೇ ಹುಡುಗರಂತೆ ವೇಷ ಧರಿಸುವುದು. ತಮ್ಮ ಕೂದಲನ್ನು ಚಿಕ್ಕದಾಗಿ ಕತ್ತರಿಸಿದರು. ಸ್ಟೇನ್ಲೆಸ್-ಸ್ಟೀಲ್ ಕಂಕಣವಾದ ʼಕಡಗʼ (ಸಾಮಾನ್ಯವಾಗಿ ಇದನ್ನು ಈ ಪ್ರದೇಶದ ಪುರುಷರು ಧರಿಸುತ್ತಾರೆ) ಧರಿಸಿ ಹುಡುಗರಂತೆ ವೇಷ ಬದಲಾಯಿಸಿ, ತಮ್ಮ ಹೆಸರನ್ನು ದೀಪಕ್ ಮತ್ತು ರಾಜು ಎಂದು ಬದಲಾಯಿಸಿಕೊಂಡರು.
ಕ್ರಮೇಣ, ಇವರ ವ್ಯವಹಾರವು ಹೆಚ್ಚಾಯಿತು ಮತ್ತು ದಿನಕ್ಕೆ ಸುಮಾರು 400 ರೂಗಳನ್ನು ಗಳಿಸಲು ಪ್ರಾರಂಭಿಸಿದರು, ಅದನ್ನು ಅವರ ತಂದೆಯ ಚಿಕಿತ್ಸೆಗಾಗಿ ವಿನಿಯೋಗಿಸಲಾಯಿತು.
ದಿ ಗಾರ್ಡಿಯನ್ಗೆ ನೀಡಿದ ಸಂದರ್ಶನದಲ್ಲಿ ಜ್ಯೋತಿ,
ನಾವೇ ಕೆಲಸ ಮಾಡುವಾಗ, ಗ್ರಾಹಕರು ಸರಿಯಾಗಿ ನಮ್ಮೊಂದಿಗೆ ವ್ಯವಹರಿಸಲಿಲ್ಲ, ಆದ್ದರಿಂದ ಯಾರೂ ನಮ್ಮನ್ನು ಗುರುತಿಸಲು ಸಾಧ್ಯವಾಗದಂತೆ ನಮ್ಮ ಸಂಪೂರ್ಣ ಗೆಟಪ್ ಅನ್ನು ಬದಲಾಯಿಸಲು ನಿರ್ಧರಿಸಿದೆವು.
ಸುಮಾರು 100 ಮನೆಗಳನ್ನು ಹೊಂದಿರುವ ಅವರ ಗ್ರಾಮದಲ್ಲಿ ಕೆಲವರಿಗೆ ಮಾತ್ರ ಇದರ ಕುರಿತು ತಿಳಿದಿತ್ತು. ಅವರು ತಮ್ಮ ಗುರುತನ್ನು ಬದಲಾಯಿಸಿದ ನಂತರ, ಈ ಸಹೋದರಿಯರನ್ನು ಯಾರೂ ಗುರುತಿಸಲು ಸಾಧ್ಯವಾಗಲಿಲ್ಲ". " ನೀವು ಇಂದಿಗೂ ನನ್ನನ್ನು ಗುರುತಿಸಲು ಸಾಧ್ಯವಿಲ್ಲ" ಎಂದು ನೇಹಾ ಹೇಳಿದರು.
ಆದಾಗ್ಯೂ, ಸ್ಬಲ್ಪ ಸಮಯದ ಬಳಿಕ, ಸಹೋದರಿಯರು ತಮ್ಮ ಗ್ರಾಹಕರಿಗೆ ತಮ್ಮ ನಿಜವಾದ ಗುರುತನ್ನು ಬಹಿರಂಗಪಡಿಸಿದರು. "ನಾವು ಸಾಕಷ್ಟು ಆತ್ಮವಿಶ್ವಾಸವನ್ನು ಗಳಿಸಿದ್ದೇವೆ ಮತ್ತು ನಾವು ಯಾರಿಗೂ ಹೆದರುವುದಿಲ್ಲ" ಎಂದು ನೇಹಾ ಹೇಳಿದರು.
ಈಗ, ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು, ಮಧ್ಯಾಹ್ನ ಮಾತ್ರ ತಮ್ಮ ಅಂಗಡಿಯನ್ನು ತೆರೆಯುತ್ತಾರೆ. ಜ್ಯೋತಿ ಪದವಿಯನ್ನು ಪಡೆದಿದ್ದು, ನೇಹಾ ಇನ್ನೂ ಕಲಿಕೆಯಲ್ಲಿದ್ದಾರೆ.
ಇವರಿಬ್ಬರ ತಂದೆ ಧ್ರುವ ನಾರಾಯಣ,
ನಾನು ಅವರಿಬ್ಬರು ಕೆಲಸ ಮಾಡುವದನ್ನು ಕಂಡಾಗ, ಅದು ನನಗೆ ತುಂಬಾ ನೋವನ್ನು ನೀಡಿತು. ಆದರೆ ನನ್ನ ಹೆಣ್ಣುಮಕ್ಕಳ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ಅವರು ನಮ್ಮ ಕುಟುಂಬವನ್ನು ಬಿಕ್ಕಟ್ಟಿನಿಂದ ಹೊರಹಾಕಿದ್ದಾರೆ.
ಇದರ ಕುರಿತಾಗಿ, ಹತ್ತಿರದ ನಗರವಾದ ಗೋರಖ್‌ಪುರದ ಸ್ಥಳೀಯ ಪತ್ರಕರ್ತ ತಮ್ಮ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದನ್ನು ಗಮನಿಸಿದ ಸರ್ಕಾರಿ ಅಧಿಕಾರಿಗಳು ಈ ಸಹೋದರಿಯರನ್ನು ಗೌರವಿಸಿದರು.
ಉತ್ತರ ಪ್ರದೇಶದ ಕುಶಿನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಭಿಷೇಕ್ ಪಾಂಡೆ,
ಎಲ್ಲ ಕಷ್ಟಗಳೊಂದಿಗೆ ಸೆಣಸಾಡಿ ಒಬ್ಬರು ಹೇಗೆ ಬದುಕಬಲ್ಲರು ಎಂಬ ಅದ್ಬುತ ಉದಾಹರಣೆಗೆ ಈ ಸಹೋದರಿಯರು ನಿದರ್ಶನವಾಗಿದ್ದಾರೆ. ಇವರು ಸಮಾಜಕ್ಕೆ ಸ್ಪೂರ್ತಿಯಾಗಿದ್ದು, ಇವರ ಕಥೆಯನ್ನು ಜನಸಾಮಾನ್ಯರೂ ಅರಿಯಬೇಕು.