ಕಸದಿಂದ ಕಲೆ : ಕಸಕಡ್ಡಿಗಳಿಂದ ರಚಿಸಲಾದ ವಿಶಿಷ್ಟ ಕಲಾಕೃತಿಗಳನ್ನು ಸಂಗ್ರಹಿಸಿರುವ ಭಾರತದ ಮೊಟ್ಟಮೊದಲ ‘ವೇಸ್ಟ್ ಟು ಆರ್ಟ್’ ಬಯಲು ವಸ್ತು ಸಂಗ್ರಹಾಲಯ
ಭುವನೇಶ್ವರದಲ್ಲಿರುವ ವೇಸ್ಟ್ ಟು ಆರ್ಟ್ (ಕಸದಿಂದ ಕಲೆ) ಬಯಲು ವಸ್ತು ಸಂಗ್ರಹಾಲಯವು ವಿಶ್ವದ ಎಲ್ಲಾ ಭಾಗಗಳ ಕಲಾವಿದರು ಕಸಕಡ್ಡಿಗಳಿಂದ ರಚಿಸಿದ ವಿಶಿಷ್ಟ ಕಲಾಕೃತಿಗಳನ್ನು ಸಂಗ್ರಹಿಸಿದೆ ಮತ್ತು ಹವಾಗುಣ ಬದಲಾವಣೆಯಂತಹ ಹಲವಾರು ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಗಮನ ಸೆಳೆಯುವ ಮಹತ್ವದ ಕಾಯಕ ಮಾಡುತ್ತಿದೆ.
ಕಲಾವಿದರ ಭಾರತೀಯ ಸಂಸ್ಕೃತಿ ಪ್ರಚಾರ ಸಂಸ್ಥೆ (ಎ ಎನ್ ಪಿ ಐ ಸಿ), ಭುವನೇಶ್ವರ ಅಭಿವೃದ್ಧಿ ಪ್ರಾಧಿಕಾರ, ಮತ್ತು ಭುವನೇಶ್ವರ ನಗರಸಭೆಯ ಸಹಯೋಗದಿಂದ ಆಯೋಜಿತವಾದ ಅಂತರರಾಷ್ಟ್ರೀಯ ಸಾರ್ವಜನಿಕ ಕಲಾ ವಿಚಾರಗೋಷ್ಠಿ (ಐ ಪಿ ಎ ಎಸ್) ನಲ್ಲಿ ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಿಕ್ ಭಾರತದ ಮೊಟ್ಟಮೊದಲ ‘ವೇಸ್ಟ್ ಟು ಆರ್ಟ್’ ಬಯಲು ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದಾರೆ ಮತ್ತು ಇದು ರಾಜ್ಯದಲ್ಲಿ ಕಲಾವಿದರಿಗಾಗಿಯೇ ಸಮರ್ಪಿಸಲಾದ ಮೊದಲ ಜಾಗವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಾಟ್ನಾಯಿಕ್,
“ನಾನು ಕಸಕಡ್ಡಿಗಳಿಂದ ಈ ಅದ್ಭುತ ಕಲಾಕೃತಿಗಳನ್ನು ರಚಿಸಿರುವ ಎಲ್ಲಾ ಕಲಾವಿದರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಒಂದು ಮಹತ್ವದ ಕಾರ್ಯವನ್ನು ಕೈಗೊಂಡಿರುವ ಕಲಾವಿದರ ಭಾರತೀಯ ಸಂಸ್ಕೃತಿ ಪ್ರಚಾರ ಸಂಸ್ಥೆ (ಎ ಎನ್ ಪಿ ಐ ಸಿ) ಗೂ ಕೂಡ ನಾನು ಅಭಿನಂದನೆಗಳನ್ನು ಸಲ್ಲಿಸುತಿದ್ದೇನೆ”
ಈ ವಸ್ತು ಸಂಗ್ರಹಾಲಯವು ಕಸಕಡ್ಡಿಗಳನ್ನು ಕಲೆಯನ್ನಾಗಿ ಮಾರ್ಪಡಿಸುವ ಉದ್ದೇಶ ಹೊಂದಿದೆ ಮತ್ತು ಈಗಾಗಲೇ ವಿಶ್ವದ ಅನೇಕ ಭಾಗಗಳ ಕಲಾವಿದರು ಕಸಕಡ್ಡಿಗಳಿಂದ ರಚಿಸಿರುವ ಶಿಲ್ಪಗಳನ್ನು ಸಂಗ್ರಹಿಸಿದೆ. ಈ ಶಿಲ್ಪಗಳಲ್ಲಿ ಅರ್ಜೆಂಟೈನಾದ ಶಿಲ್ಪಿ ಆಗಸ್ಟೋ ಡ್ಯಾನಿಯಲ್ ಗಾಲ್ಲೋಸ್ ಕಸಕಡ್ಡಿಗಳಿಂದ ರಚಿಸಿರುವ ಭಾರತದ ರಾಷ್ಟ್ರೀಯ ಚಿಹ್ನೆಯಾಗಿರುವ ಎರಡು ಅಭಿಮುಖ ಸಿಂಹಗಳ ಕಲಾಕೃತಿಯು ಅತ್ಯಂತ ವಿಶಿಷ್ಷವಾದುದಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ನ್ಯೂಜಿಲ್ಯಾಂಡಿನ ಕಲಾವಿದ ಡೊನಾಲ್ಡ್ ಬಗ್ಲಾಸ್ ಕಬ್ಬಿಣದ ತ್ಯಾಜ್ಯದಿಂದ ಹಾರುತ್ತಿರುವ ಹದ್ದಿನ ಕಲಾಕೃತಿಯನ್ನು ರಚಿಸಿದ್ದಾರೆ. ನೆದರ್ ಲ್ಯಾಂಡ್ಸಿನ ಕಲಾವಿದೆ ಅನಿತಾ ಮಾರಿಯೋ ವಿಲ್ಮೇನ್ಲಿಯಾ ರಾಯಲ್ ಬೆಂಗಾಳ್ ಸುಂದರಿ ಟೈಗ್ರೆಸ್ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಸ್ಪೇನಿನ ಮತ್ತೊಬ್ಬ ಕಲಾವಿದ ಡ್ಯಾನಿಯಲ್ ಪೆರೆಜ್ ಸೂರೆಜ್ ‘ಹೆಡ್ ಆಫ್ ಬುದ್ಧ’ ಕಲಾಕೃತಿಯನ್ನು ಮತ್ತು ಬರೋಡಾದ ಭಾರತೀಯ ಕಲಾವಿದ ಜೀತೆಂದರ್ ಕುಮಾರ್ ಓಝಾ ಮಹಿಳಾ ಸಬಲೀಕರಣವನ್ನು ಬಿಂಬಿಸುವ ಕಲಾಕೃತಿಯನ್ನು ರಚಿಸಿದ್ದಾರೆ.
“ಕಡಿಮೆ ಮಾಡಿ, ಪುನಃ ಬಳಸಿ, ಮಾರ್ಪಾಟು ಮಾಡಿ ಮರುಬಳಸಿ” ಎಂಬ ಘೋಷಣೆಯೊಂದಿಗೆ ಈ ಎಲ್ಲಾ ಕಲಾಕೃತಿಗಳನ್ನು ಸ್ಥಾಪಿಸಲು 20 ದಿನಗಳ ಸಮಯ ಹಿಡಿದಿದೆ. ವಸ್ತು ಸಂಗ್ರಹಾಲವನ್ನು ಸಾರ್ವಜನಿಕರ ದರ್ಶನಕ್ಕೆ ತೆರೆಯಲಾಗಿದೆ.
ಈ ವಸ್ತು ಸಂಗ್ರಹಾಲಯವು ಒರಿಸ್ಸಾದ ಜನರಲ್ಲಿ ಪರಿಸರ, ಹವಾಗುಣ ಬದಲಾವಣೆ ಮತ್ತು ತ್ಯಾಜ್ಯವನ್ನು ಮರುಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವೀಕ್ಷಕರ ಗಮನ ಸೆಳೆಯಲು ಒರಿಸ್ಸಾ ಆಲಿವ್ ರಿಡ್ಲೀ ಆಮೆ, ಆನೆ, ಭಾರತೀಯ ಘೇಂಢಾಮೃಗ, ನೀಲಗಿರಿ ತಾಹರ್, ಬಂಗಾಳದ ಹುಲಿ, ಜಿಂಕೆ, ಮಂಜಿನ ಚಿರತೆ ಮುಂತಾದ ಕಲಾಕೃತಿಗಳ ಮೇಲೆ ಬೆಳಕು ಬೀಳುವ ವಿಶೇಷ ವ್ಯವಸ್ಥೆ ಮಾಡಿ ವನ್ಯಮೃಗಗಳ ರಕ್ಷಣೆಯ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುತ್ತಿದೆ ಎಂದು ಭುಬನೇಶ್ವರ್ ಬಜ್ ವರದಿ ಮಾಡಿದೆ.
ಕಲಾವಿದರ ಭಾರತೀಯ ಸಂಸ್ಕೃತಿ ಪ್ರಚಾರ ಸಂಸ್ಥೆ (ಎ ಎನ್ ಪಿ ಐ ಸಿ) ಯ ವ್ಯವಸ್ಥಾಪಕ ಟ್ರಸ್ಟಿಯಾದ ಶಶಾಂಕ್ ಮಹಾಪಾತ್ರ, ಉದ್ಘಾಟನಾ ಸಮಾರಂಭದಲ್ಲಿ ಮಾತಾನಾಡುತ್ತಾ, “ಕಲೆಯು ನಮ್ಮ ಕಣ್ಣು ಮತ್ತು ಮನಸ್ಸುಗಳಿಗೆ ಆನಂದ ನೀಡುವುದಲ್ಲದೇ ಅವಶ್ಯವಾದ ಒಂದು ಪ್ರಮುಖ ಸಾಮಾಜಿಕ ಸಂದೇಶವನ್ನು ನಮಗೆ ತಿಳಿಸುತ್ತದೆ. ಮೊಟ್ಟಮೊದಲ ವೇಸ್ಟ್ ಟು ಆರ್ಟ್ ವಸ್ತು ಸಂಗ್ರಹಾಲವು ಪ್ರವಾಸಿಗರ ಮುಖ್ಯ ಆಕರ್ಷಣೆಯಾಗುವುದರೊಂದಿಗೆ ವನ್ಯಮೃಗ ರಕ್ಷಣೆಯಂತಹ ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ” ಎಂದು ಹೇಳಿದರು. “ಈ ಒಂದು ಕಾರ್ಯಕ್ರಮದ ಪ್ರಾರಂಭವು ಒರಿಸ್ಸಾದಲ್ಲಿ ಸಮಾಜ ಸ್ನೇಹಿ ಸಾಂಸ್ಕೃತಿಕ ಕಲೆಯ ಮಹತ್ವವನ್ನು ಎತ್ತಿಹಿಡಿಯುವುದಲ್ಲದೇ ಯುವ ಕಲಾವಿದರು ಹೊಸ ಹೊಸ ಕಲೆಯನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತದೆ” ಎಂದು ಅವರು ಮುಂದುವರಿಸಿ ಹೇಳಿದರು.