ರಾಜಸ್ಥಾನದ ಜನರ ದಾಹವನ್ನು ತಣಿಸುವ ಸೌರಚಾಲಿತ‌ ಆಟೋ

ಮೊಹಮ್ಮದ್‌ ಆಬಾದ್‌ ಸೌರಶಕ್ತಿಯಿಂದ ಚಲಿಸುವ ತಮ್ಮ ಆಟೋವನ್ನು ವಾಟರ್‌ ಟ್ಯಾಂಕ್‌ ಆಗಿ ಪರಿವರ್ತಿಸಿದ್ದಾರೆ. ಅದು ಪ್ರತಿದಿನ 2,000 ಲೀಟರ್‌ ನೀರನ್ನು ವಿತರಿಸುವ ಸಾಮರ್ಥ್ಯ ಹೊಂದಿದೆ.

ರಾಜಸ್ಥಾನದ ಜನರ ದಾಹವನ್ನು ತಣಿಸುವ ಸೌರಚಾಲಿತ‌ ಆಟೋ

Thursday June 25, 2020,

2 min Read

ರಾಜಸ್ಥಾನದ ಚುರು ಜಿಲ್ಲೆಯು ಭಾರತದ ಅತೀ ಶಾಖವಿರುವ ಪ್ರದೇಶಗಳಲ್ಲೊಂದು. ಬೇಸಿಗೆಯಲ್ಲಿ 50 ಡಿಗ್ರಿ ದಾಟುವ ತಾಪಮಾನ ಮತ್ತು ನೀರಿನ ಅಭಾವ ಅಲ್ಲಿರುವವರಿಗೆ ಹಲವಾರು ತೊಂದರೆಗಳನ್ನುಂಟು ಮಾಡುತ್ತದೆ.


ಚುರು ಜಿಲ್ಲೆಯ ಸುಜಂಗರ್‌ನ ನಿವಾಸಿಗಳ ದಾಹ ತಣಿಸಲು ಮುಂದಾಗಿರುವ ಮೊಹಮ್ಮದ್‌ ಆಬಾದ್‌, ಸೌರಶಕ್ತಿಯಿಂದ ಚಲಿಸುವ ತಮ್ಮ ಆಟೋವನ್ನು ವಾಟರ್‌ ಟ್ಯಾಂಕ್‌ ಆಗಿ ಪರಿವರ್ತಿಸಿದ್ದಾರೆ. ಅದು ಪ್ರತಿದಿನ 2,000 ಲೀಟರ್‌ ನೀರನ್ನು ವಿತರಿಸುವ ಸಾಮರ್ಥ್ಯ ಹೊಂದಿದೆ.


ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್




ಬೆಳಿಗ್ಗೆ 7 ಗಂಟೆಗೆ ಶುರುವಾಗುವ ಈ ಕಾಯಕ ಸಂಜೆ 5 ಗಂಟೆಯವರೆಗೆ ನಡೆಯುತ್ತದೆ.


“ನಾನು 10 ನಿಮಿಷ ಹೆಚ್ಚಿಗೆ ನಿಂತರೆ ಒಬ್ಬರ ದಾಹ ತಿರುತ್ತದೆಯೆಂದರೆ ಅದು ನನ್ನ ಭಾಗ್ಯವೆಂದೆ ತಿಳಿಯುತ್ತೇನೆ,” ಎನ್ನುತ್ತಾರೆ ಈ ಕಾಯಕವನ್ನೆ ತಮ್ಮ ಜೀವನದ ಗುರಿಯಾಗಿಸಿಕೊಂಡಿರುವ ಆಬಾದ್‌, ವರದಿ ದಿ ಬೆಟರ್‌ ಇಂಡಿಯಾ.


ಕಳೆದ 5 ವರ್ಷದಿಂದ ಈ ಕಾಯಕವನ್ನು ಮಾಡಿಕೊಂಡು ಬಂದಿರುವ ಇವರು, ಪ್ರತಿದಿನ 3,000 ಜನರು ತಮ್ಮ ವಾಹನದಿಂದ ನೀರು ಕುಡಿಯುತ್ತಾರೆ ಎನ್ನುತ್ತಾರೆ. ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕಚೇರಿ, ನ್ಯಾಯಾಲಯ, ತರಕಾರಿ ಮಾರುಕಟ್ಟೆ, ರೈಲು ಮತ್ತು ಬಸ್ ನಿಲ್ದಾಣಗಳಂತಹ ಸ್ಥಳಗಳಲ್ಲಿ 30 ನಿಮಿಷ ತಮ್ಮ ವಾಹನವನ್ನು ನಿಲ್ಲಿಸುತ್ತಾರೆ.


ಆಬಾದ್‌ ತಮ್ಮ ಆಟೋ ಮೇಲೆ ಧ್ವನಿವರ್ಧಕವನ್ನು ಜೋಡಿಸಿದ್ದಾರೆ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಅದರಲ್ಲಿ ಕೊರೊನಾವೈರಸ್‌ ಕುರಿತಾದ ಗೀತೆಗಳು ಮತ್ತು ಸಂದೇಶಗಳನ್ನು ಹಾಕುತ್ತಾರೆ. ಈ ಉಪಕ್ರಮದ ಪೂರ್ತಿ ಖರ್ಚನ್ನು ತಮ್ಮ ಉಳಿತಾಯದ ಹಣದಿಂದ ಆಬಾದ್‌ ಭರಿಸಿದ್ದಾರೆ. ವಾಹನದಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು ವಿಶೇಷ.


ರಸ್ತೆ ಅಪಘಾತದಲ್ಲಿ ಪ್ರಾಣಕಳೆದುಕೊಂಡ ತಮ್ಮ ಅಣ್ಣ ಮೊಹಮ್ಮದ್‌ ಸೇಠ್‌ ಅವರ ನೆನಪಿನಲ್ಲಿ ಈ ಕಾಯಕವನ್ನು ಪ್ರಾರಂಭಿಸಿದ್ದಾರೆ ಇವರು.


“ನನ್ನ ಅಣ್ಣನನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ ಮತ್ತು ಅವನ ನೆನಪುಗಳನ್ನು ಹಾಗೆಯೇ ಜೀವಂತವಾಗಿಡಲು ನಾನು ಬಯಸುತ್ತೇನೆ. ಅದಕ್ಕಾಗಿ ಇರುವ ಉತ್ತಮ ಮಾರ್ಗವೆಂದರೆ ಸಾರ್ವಜನಿಕರಿಗೆ ವಿಶೇಷವಾದ ರೀತಿಯಲ್ಲಿ ಸೇವೆ ನೀಡುವುದು. ದೇಶದ ಅತೀ ಶಾಖವಿರುವ ಊರಾದ ಚುರು ನ ಜನರ ದಾಹವನ್ನು ನೀಗಿಸುವ ಕೆಲಸ ಉತ್ತಮವೆನಿಸಿತು. ಬೇಸಿಗೆಯಲ್ಲಿ ತಂಪಾದ ನೀರು ನೀಡುತ್ತ, 3 ಸಾವಿರ ಜನರ ದಾಹವನ್ನು ತೀರಿಸುತ್ತೆನೆಂಬುದು ನನಗೆ ಖುಷಿ ಕೊಡುತ್ತದೆ,” ಎನ್ನುತ್ತಾರೆ ಆಬಾದ್‌, ವರದಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್.


ಆಬಾದ್‌ ಆರ್‌ಒ ಘಟಕದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕ್‌ ತುಂಬಿಸಿಕೊಳ್ಳುತ್ತಾರೆ. ೨ ಸಾವಿರ ಲೀಟರ್‌ ಕೊಳ್ಳಲು ಅವರಿಗೆ ೨ ಸಾವಿರ ರೂ. ಖರ್ಚಾಗುತ್ತದೆ. ತಿಂಗಳಿಗೆ 60 ಸಾವಿರ ರೂ. ಖರ್ಚಿನ ಈ ಕಾಯಕಕ್ಕೆ ಅವರ ಕುಟುಂಬವು ಸಹಾಯ ಮಾಡುತ್ತದೆ.


“ನನ್ನ ಮೂವರು ಮಕ್ಕಳು ಭದ್ರವಾದ ನೌಕರಿಯಲ್ಲಿದ್ದಾರೆ. ಅವರಿಗೆ ಈ ಕೆಲಸದ ಹಿಂದಿನ ಕಾರಣ ಗೊತ್ತು, ಕೆಲವೊಮ್ಮೆ ಅವರು ಇದರಲ್ಲಿ ಭಾಗವಹಿಸುತ್ತಾರೆ. ನನಗೆ ದೇಣಿಗೆಗಳನ್ನು ನೀಡುತ್ತಾರೆ ಮತ್ತು ಕೆಲವೊಮ್ಮೆ ಜನರು ಚಿಕ್ಕ ಪುಟ್ಟ ಹಣವನ್ನು ನೀಡುತ್ತಾರೆ,” ಎಂದರು ಆಬಾದ್‌.


ಇವರ ಈ ಕಾರ್ಯವನ್ನು ಮೆಚ್ಚಿ ಸ್ಥಳೀಯರು ಇವರಿಗೆ ಧನ್ಯವಾದ ಹೇಳುತ್ತಾರೆ ಮತ್ತು ಆಶೀರ್ವದಿಸುತ್ತಾರೆ. ಇಂತಹ ಸಣ್ಣ ಮೆಚ್ಚುಗೆಗಳು ಅವರನ್ನು ಪ್ರೇರೆಪಿಸುತ್ತವೆ. "ಅವರ ಪ್ರೀತಿಯೇ ನನ್ನನ್ನು ಪಟ್ಟಣದ ಸುತ್ತಲೂ ದಣಿವರಿಯಿಲ್ಲದೆ ತಿರುಗುವಂತೆ ಮಾಡುತ್ತದೆ, ಮತ್ತು ನನ್ನ ಉಸಿರಿರುವವರೆಗು ಈ ಕೆಲಸವನ್ನು ಮುಂದುವರಿಸುತ್ತೇನೆ ಎಂದು ನಾನು ಪ್ರಮಾಣ ಮಾಡಿದ್ದೇನೆ," ಎಂದು ಅವರು ಹೇಳಿದರು.