ಜಪಾನಿನ ಹಿರಿಯಜ್ಜನ ಓದುವ ಆಸೆ- 96ರ ಹರೆಯದಲ್ಲಿ ದಕ್ಕಿತು ಪದವಿ ಗೌರವ

ಟೀಮ್​ ವೈ.ಎಸ್​. ಕನ್ನಡ

ಜಪಾನಿನ ಹಿರಿಯಜ್ಜನ ಓದುವ ಆಸೆ- 96ರ ಹರೆಯದಲ್ಲಿ ದಕ್ಕಿತು ಪದವಿ ಗೌರವ

Friday July 22, 2016,

2 min Read

ಶಿಕ್ಷಣ ಇಂದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಓದಲು, ಬರೆಯಲು ಬಾರದವರು ಎಷ್ಟೇ ಶ್ರೀಮಂತರಾಗಿದ್ದರೂ ಸಮಾಜದಲ್ಲಿ ಗೌರವ ಕಡಿಮೆ. ಹೀಗಾಗಿಯೇ ಕಡಿಮೆ ಎಂದರೂ ಪದವಿಯನ್ನಾದರೂ ಓದಿದ್ದರೆ ಒಳ್ಳೆಯದು ಎಂಬುದು ಈಗಿನ ಕಾಲದಲ್ಲಿ ಕೇಳಿಬರುವ ಮಾತುಗಳು. ಹಾಗಂತ ಇದು ಕೇವಲ ಭಾರತದ ಜನರಿಗಷ್ಟೆ ಸೀಮಿತ ಅಂತಲ್ಲ. ಬದಲಾಗಿ ಪ್ರಪಂಚದ ಎಲ್ಲಾ ದೇಶಗಳಲ್ಲೂ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇನ್ನು ಜಪಾನ್‍ನಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಶಿಕ್ಷಣಕ್ಕೆ ಸ್ವಲ್ಪ ಹೆಚ್ಚು ಪ್ರಾಮುಖ್ಯತೆಯಿದೆ. ಹೀಗಾಗಿಯೇ ಜಪಾನಿಯರು ತುಂಬ ಬುದ್ಧಿವಂತರು, ವಿಜ್ಞಾನ, ಆರ್ಥಿಕತೆ, ತಂತ್ರಜ್ಞಾನ, ವ್ಯಾಪಾರ, ಒಪ್ಪಂದ, ಸಮಾಜ, ಸ್ವಚ್ಛತೆ, ಹೀಗೆ ಎಲ್ಲ ವಿಷಯಗಳಲ್ಲೂ ಮುಂದಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಜಪಾನ್ ದೇಶ ಈ ಮಟ್ಟಿಗೆ ಸುಧಾರಣೆ ಹೊಂದಲು ಹಾಗೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರಲು ಪ್ರಮುಖ ಕಾರಣ ಶಿಕ್ಷಣ. ಹೌದು, ಶಿಕ್ಷಣ ಮನುಷ್ಯನನ್ನು, ಆತನ ಕುಟುಂಬ, ಸ್ನೇಹಿತರು, ಸಂಬಂಧಿಕರು, ಆತನ ಹಳ್ಳಿ, ಪಟ್ಟಣ, ನಗರ, ರಾಜ್ಯ, ದೇಶವನ್ನೂ ಬದಲಿಸುತ್ತದೆ. ಇದು ಜಪಾನೀಯರಿಗೆ ತುಂಬ ಚೆನ್ನಾಗಿ ಗೊತ್ತು. ಹೀಗಾಗಿಯೇ ಓದುವ ವಿಷಯದಲ್ಲಿ ಅವರು ತುಂಬ ಸೀರಿಯಸ್. ಎಷ್ಟರ ಮಟ್ಟಿಗೆ ಎಂದರೆ ವಯಸ್ಸು 90 ದಾಟಿದ್ದರೂ ಪದವಿ ಪಡೆಯುವ ಆಸೆ, ಛಲ, ಗುರಿ, ಹುಮ್ಮಸ್ಸು ಅವರಲ್ಲಿ ಮನೆ ಮಾಡಿರುತ್ತದೆ. ಅದಕ್ಕೆ ಶಿಗೆಮಿ ಹಿರಾತಾ ಪಕ್ಕಾ ನಿದರ್ಶನ.

image


ಇವರು ಶಿಗೆಮಿ ಹಿರಾತಾ...

ಶಿಗೆಮಿ ಹಿರಾತಾ. ಜಪಾನಿನ ಈ ಹಿರಿಯಜ್ಜ ಇಂದು ವಿಶ್ವದ ಕೇಂದ್ರಬಿಂದು. ಕಾರಣ ಅವರ ಓದುವ ಆಸೆ ಹಾಗೂ ಕನಸು. ಮತ್ತು ಅದನ್ನು ನನಸು ಮಾಡಿಕೊಂಡ ಸಾಧನೆ! ಹೌದು, ಇತ್ತೀಚೆಗಷ್ಟೇ ಜಪಾನ್‍ನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಸೆರಾಮಿಕ್ ಕಲೆ ವಿಭಾಗದಲ್ಲಿ ಪದವಿ ಪಡೆಯುವ ಮೂಲಕ 96ರ ಹರೆಯದ ಶಿಗೆಮಿ ಹಿರಾತಾ, ಅತಿ ಹಿರಿಯ ವಯಸ್ಸಿನಲ್ಲಿ ಪದವಿ ಪಡೆದ ವ್ಯಕ್ತಿ ಎಂದು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ!

ಇದನ್ನು ಓದಿ: ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

ಪದವಿ ಪಡೆಯಲು 11 ವರ್ಷಗಳ ಶ್ರಮ..!

1919ರಲ್ಲಿ ಮೊದಲ ವಿಶ್ವಯುದ್ಧದ ಅಂತ್ಯದಲ್ಲಿ ಹಿರೋಶಿಮಾದಲ್ಲಿ ಜನಿಸಿದ ಶಿಗೆಮಿ ಹಿರಾತಾ, 1939ರಿಂದ 1945ರವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಜಪಾನಿ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹೀಗೆ ಸಣ್ಣ ವಯಸ್ಸಿನಲ್ಲೇ ದೇಶ ಸೇವೆಗೆ ಹೊರಟ ಈ ಯೋಧನಿಗೆ ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಮದುವೆ, ಸಂಸಾರ, ಮಕ್ಕಳು ಅಂತ ಬದುಕಿನ ಜಂಜಾಟದಲ್ಲಿ ಬ್ಯುಸಿಯಾಗಿಬಿಟ್ಟರು. ಆದರೆ ಶಿಗೆಮಿ ಅವರಿಗೆ ಮಾತ್ರ ಓದುವ ಆಸೆ ಕಡಿಮೆ ಆಗಿರಲಿಲ್ಲ. ಹೇಗಾದರೂ ನಾನು ಪದವಿ ಪಡೆಯಲೇಬೇಕು ಎಂಬ ಹಠ ಅವರಲ್ಲಿ ಮೂಡಿತು. ಹೀಗಾಗಿಯೇ ತಮ್ಮ 85ನೇ ವಯಸ್ಸಿನಲ್ಲಿ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಸೆರಾಮಿಕ್ಸ್ ಕಲೆ ವಿಭಾಗಕ್ಕೆ ಅಡ್ಮಿಷನ್ ಪಡೆದು, ಕಾಲೇಜು ಸೇರಿದರು. ಆದರೆ ಅದ್ಯಾಕೋ ಏನೋ 60, 70ಕ್ಕೆ ಅರಳು – ಮರಳು ಅನ್ನೋ ಸಮಯದಲ್ಲಿ ಇವರು 85ರ ವಯಸ್ಸಿನಲ್ಲಿ ಶಿಕ್ಷಣ ಪಡೆಯಲು ಮುಂದಾಗಿದ್ದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಮರೆವು, ಓದಲು ದೃಷ್ಟಿ ಸಮಸ್ಯೆಗಳು ಹಿರಾತಾ ಅವರನ್ನು ಕಾಡತೊಡಗಿದವು. ಇದರಿಂದಾಗಿ ಪ್ರತಿ ವರ್ಷ ಹಿರಾತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದರು. ಹೀಗೆ ಪದವಿ ಪೂರ್ಣಗೊಳಿಸಲು ಹಿರಾತಾ ಅವರಿಗೆ ಬರೊಬ್ಬರಿ 11 ವರ್ಷಗಳೇ ಬೇಕಾದವು. ಹಲವರು ಅವರನ್ನು ಆಡಿಕೊಂಡರು, ಹಲವರು ಈ ಇಳಿವಯಸ್ಸಿನಲ್ಲೂ ಈ ಹಿರಿಯಜ್ಜನಿಗೆ ಇರುವ ಶಿಕ್ಷಣದ ಮೇಲಿನ ಪ್ರೀತಿಯನ್ನು ಬೆಂಬಲಿಸಿದರು. ಹೀಗೆ ಅಂತೂ ತಮ್ಮ 96ನೇ ವಯಸ್ಸಿನಲ್ಲಿ ಈ ವರ್ಷ ಶಿಗೆಮಿ ಹಿರಾತಾ ಪದವಿ ಪಡೆದರು.

image


ಈಗ ಸೆಂಚುರಿ ಬಾರಿಸೋ ಆಸೆ

ಅತಿ ಹಿರಿಯ ವಯಸ್ಸಿನಲ್ಲಿ ಪದವಿ ಪಡೆದ ಗಿನ್ನೆಸ್ ದಾಖಲೆ ಮಾಡಿರುವ ಹಿರಾತಾ ಅವರಿಗೆ ಈಗ ಮತ್ತೊಂದು ಆಸೆಯಂತೆ. ಅದೇ ಶತಾಯುಷಿಯಾಗುವುದು. ಇನ್ನು ನಾಲ್ಕು ವರ್ಷ ಹೀಗೆ ಸಂತೋಷದಿಂದ ಬಾಳಿ, ಬದುಕಿ 100 ವರ್ಷಗಳನ್ನು ಪೂರೈಸುವ ಆಸೆ ಅವರದು. ಅವರ ಆ ಆಸೆ ಈಡೇರಲಿ ಎಂದು ನಾವೂ ಹಾರೈಸೋಣ. ಜತೆಗೆ ಶಿಕ್ಷಣದ ಮಹತ್ವವನ್ನು ತಮ್ಮ 96ರ ವಯಸ್ಸಿನಲ್ಲಿ ವಿಶ್ವಕ್ಕೆ ಸಾರಿ ಹೇಳಿದ ಈ ಹಿರಿಯಜ್ಜನನ್ನು ನೋಡಿಯಾದರೂ, ಜನ ಇನ್ನುಮುಂದಾದರೂ ಶಿಕ್ಷಣಕ್ಕೆ ಒತ್ತು ನೀಡಲಿ. 

ಇದನ್ನು ಓದಿ:

1. ಪ್ರಚಾರ ಸಿಕ್ಕಿದ್ದು ಕಬಾಲಿಯಿಂದ- ಬೇಡಿಕೆ ಇರುವುದು ಗಣಪತಿಗೆ..!

2. ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ

3. ರೈತರಿಗಾಗಿ ಬಂದಿದೆ ಮೊಬೈಲ್ ಎಟಿಎಂ..