ಪ್ರಚಾರ ಸಿಕ್ಕಿದ್ದು ಕಬಾಲಿಯಿಂದ- ಬೇಡಿಕೆ ಇರುವುದು ಗಣಪತಿಗೆ..!
ಟೀಮ್ ವೈ.ಎಸ್. ಕನ್ನಡ
ಸಿನಿಮಾ ಸ್ಟಾರ್ಗಳಿಗೆ ಅಭಿಮಾನಿಗಳೇ ದೊಡ್ಡ ಬಲ. ಒಂದು ಫಿಲ್ಡ್ ರಿಲೀಸ್ ಆಯ್ತು ಅಂದ್ರೆ ಸಾಕು, ಅಭಿಮಾನಿಗಳಿಗೆ ಹಬ್ಬ. ಅದರಲ್ಲೂ ಸೂಪರ್ ಸ್ಟಾರ್ ರಜಿನಿಕಾಂತ್ರಂತಹ ನಟನಿಗೆ ಇರುವ ಫಾಲೋವರ್ಸ್ಗಳು, ಅಭಿಮಾನಿಗಳು ಬೇರೆ ಯಾರಿಗೂ ಇಲ್ಲ. ರಜನಿಯ ಒಂದು ಸಿನೆಮಾ ರಿಲೀಸ್ ಆಗುತ್ತೆ ಅಂದ್ರೆ ಸಾಕು, ಎಲ್ಲರಿಗೂ ಅದೊಂತರಾ ಬ್ಯುಸಿನೆಸ್ ಇದ್ದಹಾಗೇ. ಈಗ ರಜನಿಯ ಕಬಾಲಿ ಚಿತ್ರ ಅದೆಷ್ಟೋ ಜನರಿಗೆ ಹೊಟ್ಟೆಗೆ ಹಿಟ್ಟು ಒದಗಿಸುತ್ತಿದೆ. ಕಬಾಲಿ ಬ್ಯುಸಿನೆಸ್ ಆಗಿ ಬದಲಾಗಿದೆ. ರಜನಿಯ ಅಭಿಮಾನಿಗಳಂತೂ ಹುಚ್ಚೆದ್ದು ಕುಣೀತಾ ಇದ್ದಾರೆ.
ಈಗ ವಿಶ್ವಾದ್ಯಂತ ಎಲ್ಲಿ ನೋಡಿದ್ರು ಕಬಾಲಿಯದ್ದೇ ಹವಾ. ರಜನಿಕಾಂತ್ ಅವರ ಸಿನಿಮಾ ಯಾವ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದೆ ಎಂದರೆ ಚೆನ್ನೈ ಮತ್ತು ಬೆಂಗಳೂರಿನ ಕೆಲ ಕಂಪನಿಗಳು ಸಿನಿಮಾ ಬಿಡುಗಡೆಯಾಗುವ ದಿನ ಆಫೀಸಿಗೆ ರಜೆ ಘೋಷಿಸಿವೆ. ಕಬಾಲಿ ಹವಾ ಬೆಂಗಳೂರಿಗೆ ಪಕ್ಕದಲ್ಲೇ ಇರುವ ಮಾಗಡಿ ಪಟ್ಟಣಕ್ಕೂ ಹಬ್ಬಿದೆ. ಇಲ್ಲಿ ಕಬಾಲಿ ಚಿತ್ರ ಪ್ರಚಾರಕ್ಕಾಗಿ ಮಾಗಡಿ ಕಲಾವಿದರಿಂದ ಜೇಡಿ ಮಣ್ಣಿನಲ್ಲಿ ರಜಿನಿಕಾಂತ್ರ ಸುಂದರ ಕಲಾಕೃತಿ ಆರಳಿದೆ.
4 ತಲೆಮಾರುಗಳಿಂದ ನಡೆಯುತ್ತಿರುವ ಕೆಲಸ
ಮಾಗಡಿ ಪಟ್ಟಣದ ಕುಂಬಾರ ಬೀದಿಯಲ್ಲಿ ವಾಸವಾಗಿರುವ ಕಲಾವಿದರಾದ ಶಿವಣ್ಣ ಮತ್ತು ಮಲ್ಲಿಕಾರ್ಜುನ್ ಕುಟುಂಬ 4 ತಲೆಮಾರುಗಳಿಂದ ಜೇಡಿ ಮಣ್ಣಿನಿಂದ ಗಣೇಶ ಮೂರ್ತಿಯನ್ನು ತಯಾರು ಮಾಡುತ್ತಿದ್ದಾರೆ. ಇವರು ಜೇಡಿ ಮಣ್ಣಿನಿಂದ ತಯಾರಿಸುವ ವಿಗ್ರಹಕ್ಕೆ ರಾಜ್ಯಾದಾದ್ಯಂತ ಬೇಡಿಕೆ ಇದ್ದು ರಾಜ್ಯದ ನಾನಾ ಭಾಗಗಳಿಂದ ಗಣೇಶನ ಭಕ್ತರು ಬಂದು ವಿಗ್ರಹಗಳನ್ನು ತೆಗೆದುಕೊಂಡು ಹೋಗುತ್ತಾರೆ. ಜುಲೈ 22ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿರುವ ಸೂಪರ್ ಸ್ಟಾರ್ ರಜಿನಿಕಾಂರ್ ನಟನೆಯ ಬಹು ನಿರೀಕ್ಷಿತ ಚಿತ್ರವಾಗಿರುವ ಕಬಾಲಿ ಚಿತ್ರದ ಪ್ರಚಾರಕ್ಕಾಗಿ ಇದೇ ಕುಟುಂಬ ಕೆಲಸ ಮಾಡುತ್ತಿದೆ. ಥಿಯೇಟರ್ ಮತ್ತು ಅಭಿಮಾನಿಗಳಿಗೆ ಬೇಕಾಗಿರುವ ರಜನಿಯ ಕಲಾಕೃತಿಯನ್ನು ಇವರೇ ಮಾಡಿಕೊಟ್ಟಿದ್ದಾರೆ. ಬೆಂಗಳೂರಿನ ಊರ್ವಶಿ ಹಾಗೂ ನಟರಾಜ್ ಚಿತ್ರಮಂದಿರದಲ್ಲಿರುವ ರಜನಿಕಾಂತ್ರ ಮಣ್ಣಿನ ಕಲಾಕೃತಿ ತಯಾರಾಗಿದ್ದು ಇಲ್ಲೇ.
ಕಬಾಲಿ ಚಿತ್ರದಲ್ಲಿನ ರಜನಿಕಾಂತ್ ಡಾನ್ ಪಾತ್ರವನ್ನು ಮಾಡಿದ್ದಾರೆ. ಅಭಿಮಾನಿಗಳು ರಜನಿ ಕಬಾಲಿಯಲ್ಲಿ ಹೋಲುವಂತಹ ಮಣ್ಣಿನ ಬೊಂಬೆ ಬೇಕೆಂದು ಬೇಡಿಕೆ ಇಟ್ಟಿದ್ದರು. ಅಭಿಮಾನಿಗಳ ಮನಸ್ಸಿಗೆ ಹಿಡಿಸಿದಂತೆ ಈ ಕಲಾವಿದರ ತಂಡ ಗೊಂಬೆಯನ್ನು ತಯಾರಿಸಿದೆ. ಇವರು ರಚಿಸಿರುವ ಈ ಮಣ್ಣಿನ ಕಲಾಕೃತಿ ಸುತ್ತಮುತ್ತಲಿನ ಜನರನ್ನು ಸಾಕಷ್ಟು ಸೆಳೆಯುತ್ತಿದೆ. ರಜನಿಕಾಂತ್ರ ಮಣ್ಣಿನ ಕಲಾಕೃತಿ ನೋಡಲು ದೂರದ ಊರುಗಳಿಂದ ಜನರು ಬರುತ್ತಿದ್ದಾರೆ. ಯಾವುದೇ ವಿಷಕಾರಿ, ರಾಸಾಯನಿಕ ವಸ್ತುಗಳನ್ನು ಬಳಸದೆ ಪರಿಸರಕ್ಕೆ ಹಾನಿಯಾಗದ ಜೇಡಿ ಮಣ್ಣಿನಿಂದ ಕಲಾಕೃತಿ ನಿರ್ಮಾಣ ಮಾಡಿದ್ದು ಅತೀ ಸುಂದರವಾಗಿ ಮೂಡಿ ಬಂದಿದೆ. ವಿಶ್ವದಲ್ಲಿರುವ ಕಬಾಲಿ ಗುಂಗನ್ನು ಬಳಸಿಕೊಂಡಿರುವ ಕಲಾವಿದರು ರಜನಿ ಅಭಿಮಾನಿಗಳಿಗಾಗಿ ಈ ಬೊಂಬೆಯನ್ನು ಮಾಡಿ ರಜನಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಇದನ್ನು ಓದಿ: ಕಬಾಲಿಯಿಂದ ಕಲಿಬೇಕು ಪ್ರಚಾರಕಲೆ
ಈ ಬಾರಿ ಫುಲ್ ಬ್ಯುಸಿ
ಈ ಕುಟುಂಬದವರು ಸಾಮಾನ್ಯವಾಗಿ ಯುಗಾ ಹಬ್ಬದ ನಂತರ ಗಣಪತಿ ತಯಾರು ಮಾಡಲು ಶುರು ಮಾಡಲಾಗುತ್ತಾರೆ. ಸೀಸನ್ಗೆ ಬೇಕಾಗುವಷ್ಟು ಗಣಪತಿಯ ಮೂರ್ತಿಗಳು ಇವರ ಬಳಿ ಸಜ್ಜಾಗಿರುತ್ತದೆ. ಈ ಭಾರಿ ರಜಿನಿಕಾಂತ್ ರವರು ಕಬಾಲಿ ಕಲಾಕೃತಿ, ದೆಹಲಿ ಪಾರ್ಲಿಮೆಂಟ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಸತ್ನ್ನು ನಡೆಸುವ ಗಣಪ, ಬಾಹುಬಲಿ ಗಣಪ, ಹೀಗೆ ೨೫ಕ್ಕೂ ಹೆಚ್ಚು ವಿಧದ ಕಲಾಕೃತಿಯ ಗಣಪನನ್ನು ತಯಾರು ಮಾಡಲಾಗುತ್ತಿದ್ದು ಈಗಾಗಲೇ ಸಾಕಷ್ಟು ಮೂರ್ತಿಗಳಿಗೆ ಬೇಡಿಕೆ ಬಂದಿದೆ.
10 ರೂಪಾಯಿಂದ ೨೫ ಸಾವಿರ ರೂಪಾಯಿ ಬೆಲೆ
ಈ ಕಲಾವಿದರು ಜೇಡಿ ಮಣ್ಣಿನಿಂದ ತಯಾರು ಮಾಡುವ ಗಣಪತಿಯ ಮೂರ್ತಿಗೆ ಸಾಕಷ್ಟು ಬೇಡಿಕೆ ಇದೆ. ಅಚ್ಚರಿ ಅಂದ್ರೆ ಇವರ ಬಳಿ ವಿವಿಧ ರೇಟ್ಗಳ ಮೂರ್ತಿಗಳಿವೆ. 10ನ ರೂಪಾಯಿಯಿಂದ ಆರಂಭವಾಗುವ ಗಣಪತಿಯ ಮೂರ್ತಿ ಬೆಲೆ, 25 ಸಾವಿರದವರೆಗೂ ತಲುಪುತ್ತದೆ. ಬೆಂಗಳೂರು, ರಾಮನಗರ, ಕುಣಿಗಲ್, ತುಮಕೂರು, ಮೈಸೂರು, ನೆಲಮಂಗಲ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಗಣಪತಿಯನ್ನು ಮಾಡಿಸಿಕೊಳ್ಳಲು ಬರುತ್ತಾರೆ. ಒಟ್ಟಿನಲ್ಲಿ ಕಬಾಲಿ ಹವಾದ ಮೂಲಕ ಯಾರ್ಯಾರಿಗೆ ಲಾಭವಾಗಿದೆ ಅನ್ನೋದನ್ನ ಲೆಕ್ಕಹಾಕೋದಿಕ್ಕೆ ಕೊಂಚ ಕಷ್ಟವಿದೆ.
1. ರೈತರಿಗಾಗಿ ಬಂದಿದೆ ಮೊಬೈಲ್ ಎಟಿಎಂ..
2. ಕರ್ನಾಟಕದಲ್ಲಿ ಸಿದ್ದವಾಯ್ತು ಸುಲ್ತಾನ್ ಗೇಮ್
3. ಶಾಲೆಗೆ ಹೋಗಿ ಮಕ್ಕಳ ಫೀಸ್ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್..!