ಟಿ- ಶರ್ಟ್ ನಲ್ಲಿ ಕನ್ನಡ ಸಾಹಿತ್ಯ ಮಂದಾರ..
ಪಿ.ಆರ್.ಬಿ
ಕರ್ನಾಟಕದಲ್ಲೇ ಕನ್ನಡ ಮಾತನಾಡುವುದಿಲ್ಲ. ಅವರಿಗೆ ಕನ್ನಡ ಬೇಕಾಗಿಲ್ಲ. ಇವರು ಕನ್ನಡ ಭಾಷಿಗರೇ ಅಲ್ಲ ಅಂತ ಮಾತೃಭಾಷೆ ಮರೆತವರ ಬಗ್ಗೆ ಸುಖಾಸುಮ್ಮನೆ ಮಾತನಾಡುವವರೇ ಹೆಚ್ಚು. ಆದ್ರೆ ಕನ್ನಡ ಉಳಿಸುವ ಬಗ್ಗೆ, ಅದನ್ನ ಬೆಳೆಸುವ ಬಗ್ಗೆ ಯೋಚನೆ ಮಾಡುವವರ ಸಂಖ್ಯೆ ತೀರಾ ವಿರಳ. ಅದ್ರಲ್ಲೂ ಈಗಿನ ತಲೆಮಾರಿಗಂತೂ ನಾಡ ಭಾಷೆ, ಕಲೆ ಹಾಗೂ ಸಂಸ್ಕೃತಿಯ ಅರಿವೂ ಇಲ್ಲ. ಇದು ಬೇಕಾಗಿಯೂ ಇಲ್ಲ. ಕೆಲವೊಂದು ಸಂಘಸಂಸ್ಥೆಗಳು ಕೇವಲ ಕಾಟಾಚಾರಕ್ಕೆ ಅನ್ನುವ ಹಾಗೆ ನವೆಂಬರ್ ನಲ್ಲಿ ಮಾತ್ರ ಕೆಲವೊಂದು ಕನ್ನಡ ಪರ ಕಾರ್ಯಕ್ರಮಗಳನ್ನ ಮಾಡಿ ಮುಗಿಸಿ ಪ್ರಚಾರ ಪಡೆಯುತ್ತವೆ. ಆದರೆ ಇಲ್ಲೊಂದು ಸಂಸ್ಥೆ ಕನ್ನಡ ಹಾಗೂ ಸಾಹಿತ್ಯವನ್ನ ಉಳಿಸಿ ಬೆಳೆಸುವ ಪ್ರಯತ್ನ ನಡೆಸುತ್ತಿದೆ. ಅದು ಬೆಂಗಳೂರಿನ ಸಮಾಜ ಸೇವಕರ ಸಮಿತಿ..
ಈಗಿನ ಯುವ ತಲೆಮಾರಿಗೆ ಕನ್ನಡವನ್ನ ತಲುಪಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ವಿಶೇಷ ಯೋಜನೆ ರೂಪಿಸಿದ ಸಮಾಜ ಸೇವಕರ ಸಮಿತಿ ಟಿ ಶರ್ಟ್ ಗಳ ಮೂಲಕ ಕನ್ನಡ ಭಾಷಾ ಪ್ರೇಮ ಮೂಡಿಸಲು ಮುಂದಾಗಿದೆ. ಟಿ ಶರ್ಟ್ ಗಳ ಮೇಲೆ ಜಿಪಿ ರಾಜರತ್ನಂ ಅವರ ಪದಗಳು, ಡಿವಿಜಿ ಅವರ ಕಗ್ಗಗಳನ್ನ ಪ್ರಿಂಟ್ ಮಾಡಿಸುವ ಮೂಲಕ ವಿಶಿಷ್ಟ ಪ್ರಯತ್ನ ನಡೆಸುತ್ತಿದೆ. ವಿಶೇಷ ಅಂದ್ರೆ ಕನ್ನಡ ಸಾಹಿತ್ಯದ ಬಗ್ಗೆ ಈ ರೀತಿ ಅಭಿಮಾನ ಬೆಳೆಸುತ್ತಿರುವುದು ವೃತ್ತಿಯಲ್ಲಿ ಎಂಜಿಯರ್ ಗಳಾಗಿರುವ ಒಂದು ತಂಡ. ಅದೂ ಈ ಒಂದು ಪರಿಕಲ್ಪನೆ ಹುಟ್ಟಿದ್ದೂ ಕೂಡ ಆಕಸ್ಮಿಕ. “ ಒಮ್ಮೆ ಗೆಳೆಯನೊಬ್ಬ ಕಾರ್ಯಕ್ರಮಕ್ಕೆ ಕೆಲವು ಟಿ ಶರ್ಟ್ ಗಳು ಅಗತ್ಯವಿದ್ದು, ಅವುಗಳ ಮೇಲೆ ಟೆಕ್ಸ್ಟ್ ಪ್ರಿಂಟ್ ಮಾಡಿಕೊಡುವಂತೆ ಕೇಳಿಕೊಂಡ. ಆಗ ನಾವು ಜಿ ಪಿ ರಾಜರತ್ನಂ ಅವರ ಪದಗಳನ್ನ ಹಾಕಿದೆವು. ಆರಂಭದಲ್ಲಿ ಅವುಗಳನ್ನ ನಾವೇ ಅವುಗಳನ್ನ ಧರಿಸೋದಿಕ್ಕೆ ಯೋಚಿಸಿದ್ರೂ, ಅದನ್ನ ನೋಡಿದ ಮಂದಿ ತುಂಬಾ ಮೆಚ್ಚಿಕೊಂಡರು. ಅಲ್ಲದೆ ಬಹಳಷ್ಟು ಜನ ಕನ್ನಡದ ಬರಹವಿರುವ ಟಿ ಶರ್ಟ್ ಗಳನ್ನ ಧರಿಸಲು ಇಚ್ಛಿಸಿದ್ರು. ಇದೇ ನಮಗೆ ಪ್ರೇರಣೆಯಾಯ್ತು” ಅಂತ ಸಮಾಜ ಸೇವಕರ ಸಮಿತಿಯಲ್ಲೊಬ್ಬರಾದ ರಾಜ್ ಕುಮಾರ್ ನೆನಪಿಸಿಕೊಳ್ಳುತ್ತಾರೆ.
ವಿಶೇಷ ಅಂದ್ರೆ ಟಿ ಶರ್ಟ್ ಮೇಲೆ ಕನ್ನಡ ಬರಹಗಳನ್ನ ಪ್ರಿಂಟ್ ಮಾಡೋ ಪರಿಪಾಠವನ್ನ ಮೊದಲು ಆರಂಭಿಸಿದ್ದೇ ಈ ಸಮಾಜ ಸೇವಕರ ಸಮಿತಿ. ಆದ್ರೆ ಇದನ್ನ ಕೆಲವು ಕಂಪೆನಿಗಳು ವ್ಯಾವಹಾರಿಕ ದೃಷ್ಠಿಯಿಂದ ನೋಡಿದ್ರೂ, ಈ ಸಮಿತಿ ಮಾತ್ರ ಎಂದಿಗೂ ಕೇವಲ ಹಣಗಳಿಸುವ ಒಂದೇ ಉದ್ದೇಶ ಮಾಡಿಲ್ಲ. ನಮ್ಮ ಭಾಷೆ, ಸಾಹಿತ್ಯದ ಮೇಲೆ ನಮಗೇ ಒಲವಿರಬೇಕು, ಅದು ಅಂತಃಕರಣದಿಂದ ಹೊರಹೊಮ್ಮಬೇಕು ಅನ್ನುವುದು ಈ ಸಂಸ್ಥೆಯ ಸದಸ್ಯರ ಅಭಿಮತ.
ಮೂಲತಃ ಎಂಜಿನಿಯರ್ ಗಳಾದ ಇವರ ಬಾಯಲ್ಲಿ ರಾಜರತ್ನಂ ಅವರ ಪದಗಳು, ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಸಾಲುಗಳ ಬಂದಾಗ ಅಣಕಿಸಿದವರೆಷ್ಟೋ ಮಂದಿ. ಆದ್ರೆ ಇದ್ಯಾವುದಕ್ಕೂ ಜಗ್ಗದ ಈ ಸಮಿತಿ ಸದಸ್ಯರು ತಮ್ಮನ್ನ ತಾವು ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. “ ಭಾಷೆಯನ್ನು ಉಳಿಸಿ ಬೆಳೆಸಲು ಯಾರೋ ಒಬ್ಬಿಬ್ಬರ ಪ್ರಯತ್ನಗಳು ಸಾಲುವುದಿಲ್ಲ. ಇದಕ್ಕೆ ಎಲ್ಲಾ ಮನಸ್ಥಿತಿಗಳೂ ಒಂದಾಗಬೇಕು. ಕರ್ನಾಟಕದಲ್ಲೇ ಬದುಕು ಕಂಡುಕೊಂಡವರಿಗೆ ಕನ್ನಡದ ಮೇಲೆ ತಾತ್ಸಾರ ಭಾವ ಬೇಡ.. ಆದ್ರೆ ಜಾಗತಿಕರಣ, ಆಧುನಿಕ ಭರಾಟೆಗೆ ತಕ್ಕಂತೆ ಬದಲಾವಣೆಗೆ ತಕ್ಕಂತೆ ಮಾರ್ಪಾಡುಗಳನ್ನ ತಂದ್ರೆ ಎಲ್ಲರಲ್ಲೂ ಭಾಷಾ ಪ್ರೇಮ ಮೂಡುತ್ತದೆ ” ಅನ್ನೋದು ರಾಜ್ ಕುಮಾರ್ ಅವರ ಅಭಿಪ್ರಾಯ.
ಕನ್ನಡ ಪ್ರೇಮವನ್ನ ಮೂಡಿಸುವುದಕ್ಕೆ ಸಮಾಜ ಸೇವಕರ ಸಮಿತಿ ಕೇವಲ ಕನ್ನಡ ಟಿ ಶರ್ಟ್ ಮಾರ್ಗ ಮಾತ್ರ ಕಂಡುಕೊಂಡಿಲ್ಲ. ಇದ್ರ ಜೊತೆ ಜೊತೆಗೇ ಕನ್ನಡ ಶುಭಾಷಯ ಪತ್ರಗಳನ್ನ ಶುರುಮಾಡಿದ ಹೆಗ್ಗಳಿಕೆಯೂ ಇವರಿಗಿದೆ. ಈ ಶುಭಾಷಯ ಪತ್ರಗಳಲ್ಲಿದ್ದ ನುಡಿಮುತ್ತುಗಳು, ಕನ್ನಡದ ಸಾಲುಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಆದ್ರೆ ಕಾರಣಾಂತರಗಳಿಂದ ಇದು ತಾತ್ಕಾಲಿಕವಾಗಿ ನಿಂತಿದ್ರೂ, ಭವಿಷ್ಯದಲ್ಲಿ ಇದಕ್ಕೆ ಸೂಕ್ತ ಕಾಯಕಲ್ಪ ನೀಡುವ ಲೆಕ್ಕಾಚಾರ ಈ ಸಮಿತಿಗಿದೆ.
ಕನ್ನಡ ಭಾಷೆ, ಸಂಸ್ಕೃತಿಯನ್ನ ಉಳಿಸುವ ಜೊತೆಗೆ ಸಮಾಜ ಸೇವಕರ ಸಮಿತಿ ಸಮಾಜ ಮುಖಿ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಎರಡು ಉಚಿತ ಕನ್ನಡ ಶಾಲೆಗಳನ್ನ ನಡೆಸುತ್ತಿದ್ದ ಹೆಗ್ಗಳಿಯೂ ಈ ಸಮಿತಿಗಿದೆ. ಸಂಸ್ಥೆಯ ಸದಸ್ಯರು ತಮ್ಮ ವೇತನದ ಒಂದು ಭಾಗವನ್ನ ಮೀಸಲಾಗಿ ಇಟ್ಟು ಶಾಲೆಯನ್ನ ನಡೆಸ್ತಾ ಇದ್ರು ಅನ್ನೋದು ವಿಶೇಷ.
ಸಮಾಜ ಸೇವಕರ ಸಮಿತಿಯ ಕನ್ನಡ ಕಾರ್ಯ ಕೇವಲ ಕರ್ನಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ದೂರದ ಮುಂಬೈ ಸೇರಿದಂತೆ ಕೆಲವು ದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳು ನಡೆಯುವುದಾದರೆ ಅದಕ್ಕೆ ಕನ್ನಡ ಟಿ ಶರ್ಟ್ ಗಳನ್ನ ಪೂರೈಸುವುದು ಇದೇ ಸಂಸ್ಥೆ. ಯಾರಾದ್ರೂ ಈ ಶರ್ಟ್ ಗಳನ್ನ ಪಡೆಯಲು ಇಚ್ಛಿಸಿದ್ರೆ, ಅಥವಾ ಕನ್ನಡಾಭಿಮಾನ ಬೆಳೆಸಲು ಇಚ್ಛಿಸುವುದಾದರೆ ಬೆಂಗಳೂರಿನ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ನಲ್ಲಿ ಇರುವ ಸಮಾಜ ಸೇವಕರ ಸಂಘ, #171, ಎಸ್.ಸಿ ರೋಡ್ನಲ್ಲಿರುವ ಸಮಿತಿಯ ಕಚೇರಿಗೆ ಭೇಟಿ ಕೊಡಬಹುದು. ಅಥವಾ 9886683008 ಸಂಖ್ಯೆಯನ್ನ ಸಂಪರ್ಕಿಸಲೂ ಬಹುದು. ಹೀಗೆ ಯಾವುದೇ ಅಪೇಕ್ಷೆ ಇಲ್ಲದೆ ಕನ್ನಡ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರ ಸಮಿತಿಗೆ ಶುಭ ಹಾರೈಸೋಣ.