ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?

ಟೀಮ್​ ವೈ.ಎಸ್​. ಕನ್ನಡ

ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?

Thursday March 03, 2016,

2 min Read

ದುಡ್ಡೇ ದೊಡ್ಡಪ್ಪ ಅನ್ನೋ ಮಾತಿದೆ. ಆದ್ರೆ ಹಣ ಗಳಿಸೋದು ಎಷ್ಟು ಕಷ್ಟ ಅನ್ನೋದು ಎಲ್ರಿಗೂ ಗೊತ್ತಿದೆ. ಅತ್ಯಂತ ಸುಲಭವಾಗಿ ಒಂದೇ ದಿನದಲ್ಲಿ ನೀವು ಕೂಡ 6.5 ಕೋಟಿ ರೂಪಾಯಿ ಗಳಿಸಬಹುದು. ಅರೆ ಅದ್ಹೇಗೆ ಅಂತಾ ಆಶ್ಚರ್ಯವಾಗ್ತಿದ್ಯಾ? ಕೋಟಿ ಗಳಿಕೆಯ ಕಮಾಲ್ ಹೇಗೆ ಅನ್ನೋದನ್ನು ನಾವ್ ಹೇಳ್ತೀವಿ ಕೇಳಿ.

`ಮೇಕ್ ಇನ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಉತ್ಪನ್ನವೊಂದನ್ನು ಬಿಡುಗಡೆ ಮಾಡುತ್ತಿರುವುದಾಗಿ ಇಡೀ ಜಗತ್ತಿಗೆ ಸಾರಿ ಹೇಳಿಬಿಡಿ..

ಈಗ ಎಲ್ಲಾ ಕಡೆ `ಮೇಕ್ ಇನ್ ಇಂಡಿಯಾ' ಮೇನಿಯಾ ಶುರುವಾಗಿದೆ. ಈ ಅಭಿಯಾನದ ಬಗ್ಗೆ ಸಖತ್ ಕ್ರೇಝ್ ಹುಟ್ಕೊಂಡಿದೆ. ಅತ್ಯಂತ ಅಗ್ಗದ ಸ್ಮಾರ್ಟ್‍ಫೋನ್ ಎಲ್ಲಾ ಕಡೆ ಭರ್ಜರಿ ಹವಾ ಎಬ್ಬಿಸಿದೆ. ಅದೇ `ಫ್ರೀಡಮ್ 251', ಕೇವಲ 251 ರೂಪಾಯಿಗೆ 3ಜಿ, ಎಚ್‍ಡಿ ಸ್ಕ್ರೀನ್, ಡ್ಯೂಯೆಲ್ ಕ್ಯಾಮೆರಾ ಹೀಗೆ ಹತ್ತಾರು ಫೀಚರ್‍ಗಳುಳ್ಳ ಸ್ಮಾರ್ಟ್ ಫೋನ್ ಸಿಗುತ್ತೆ ಅಂದ್ರೆ ಯಾರಿಗಿಷ್ಟವಾಗೊಲ್ಲ ಹೇಳಿ?

ಮಾರ್ಕೆಟಿಂಗ್ ವೆಚ್ಚ (ನೀವು ಖರ್ಚು ಮಾಡುವ ಹಣ 0)

ಮಾಧ್ಯಮದ ಮೂಲಕ ಇಡೀ ವಿಶ್ವದ ಗಮನ ಸೆಳೆಯಿರಿ, ಪ್ರಮುಖ ದಿನಪತ್ರಿಕೆಗಳು, ವೆಬ್‍ಸೈಟ್‍ಗಳು, ಬಿಬಿಸಿಯಂತಹ ವಾಹಿನಿಗಳಲ್ಲಿ ಸುದ್ದಿ ಮಾಡಿ. ಫೇಸ್‍ಬುಕ್, ಟ್ವಿಟ್ಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲೂ ಹವಾ ಎಬ್ಬಿಸಿಬಿಡಿ. ಉತ್ಪನ್ನ ಎಷ್ಟು ಆಕರ್ಷಕವಾಗಿದೆ, ಭಾರತೀಯರು ಎಂತಹ ಅದ್ಭುತ ಮನಸ್ಥಿತಿ ಉಳ್ಳವರು ಎಂಬುದನ್ನು ಕೇಳಲು ಜನರು ಇಷ್ಟಪಡುತ್ತಾರೆ ಎಂಬ ಸತ್ಯವನ್ನು ಅರಿಯದೇ ಮಾಧ್ಯಮಗಳು ನಿಮ್ಮನ್ನು ಚೆನ್ನಾಗಿ ಬಿಂಬಿಸುತ್ತವೆ.

image


ಉತ್ಪನ್ನ ಬಿಡುಗಡೆಗೆ ದಿನಾಂಕ ನಿಗದಿಪಡಿಸಿ (ನೀವು ಖರ್ಚು ಮಾಡುವ ಹಣ 5,00,000 ರೂ.)

ಉತ್ಪನ್ನ ಬಿಡುಗಡೆಗೆ ದಿನಾಂಕ ನಿಗದಿಗೊಳಿಸಿ. ನಿಮ್ಮ ಉತ್ಪನ್ನ ಲಾಂಚ್ ಸಮಯದಲ್ಲೇ, ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಕೂಡ ಆಯೋಜಿಸಿರಬೇಕು. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಂತೆ. ಯಾಕಂದ್ರೆ ನೀವು ಮಾಧ್ಯಮದವರನ್ನು ಆಹ್ವಾನಿಸಬೇಕೆಂದೇನಿಲ್ಲ, ಆಹ್ವಾನವಿಲ್ಲದೆ ಅವರೇ ಆಗಮಿಸುತ್ತಾರೆ. ಚೀನಾದಲ್ಲಿ ತಯಾರಾದ 5 ಅಗ್ಗದ ಫೋನ್‍ಗಳನ್ನು ತನ್ನಿ, ಅದರ ಮೇಲೆ ನಿಮ್ಮ ಬ್ರಾಂಡ್‍ನ ಸ್ಟಿಕ್ಕರ್‍ಗಳನ್ನು ಅಂಟಿಸಿ. ತುಂಬಾ ಸುಂದರ ಮಾದರಿಯ ಫೋನ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನವನ್ನೇ ಸೃಷ್ಟಿಸಿಬಿಡಿ.

ಮುಂಚಿತವಾಗಿ ಫೋನ್ ಬುಕ್ ಮಾಡಲು ವೆಬ್‍ಸೈಟ್ ಅಭಿವೃದ್ಧಿಪಡಿಸಿ (ನೀವು ಖರ್ಚು ಮಾಡುವ ಹಣ 7,500 ರೂ.)

ನಿಮ್ಮ ವಿಳಾಸ, ಫೋನ್ ನಂಬರ್, ಹಾಗೂ ನೀವು ನಿಜ ಹೇಳುತ್ತಿದ್ದೀರಾ ಎಂಬುದನ್ನು ದೃಢಪಡಿಸುವಂತಹ ಎಲ್ಲ ವಿವರಗಳನ್ನು ಒಳಗೊಂದ ಸುಂದರ, ಸರಳ ವೆಬ್‍ಸೈಟ್ ಒಂದನ್ನು ಅಭಿವೃದ್ಧಿಪಡಿಸಿ. (ಆದ್ರೆ `ಫ್ರೀಡಮ್ 251' ವೆಬ್‍ಸೈಟ್‍ನಲ್ಲಿ ಮಾಡಿದಂತಹ ಯಡವಟ್ಟು ಮಾಡಬೇಡಿ, ಯಾಕಂದ್ರೆ ಅದರಲ್ಲಿ ಕಾಂಟ್ಯಾಕ್ಟ್ ನಂಬರ್ ಇಲ್ಲ) ಕರಾರು ಮತ್ತು ನಿಯಮಗಳ ಪುಟದಲ್ಲಿ ಒಂದು ನಿಯಮವನ್ನು ಕಡ್ಡಾಯವಾಗಿ ನಮೂದಿಸಿ : ``ಯಾವುದೇ ಕಾರಣಗಳಿಂದ 6 ತಿಂಗಳುಗಳಲ್ಲಿ ನಿಮಗೆ ಮೊಬೈಲ್ ಫೋನ್ ಡೆಲಿವರಿ ಮಾಡಲು ಸಾಧ್ಯವಿಲ್ಲದಿದ್ರೆ ನಿಮ್ಮ ಹಣವನ್ನು ಹಿಂದಿರುಗಿಸಲಾಗುತ್ತದೆ''.

ಬುಕ್ಕಿಂಗ್ ಸ್ವೀಕರಿಸಲು ನಿಮ್ಮ ವೆಬ್‍ಸೈಟ್ ಓಪನ್ ಮಾಡಿ.. (ನೀವು ಖರ್ಚು ಮಾಡುವ ಹಣ 0)

ನಿಮ್ಮ ಅದ್ಭುತ ಆಫರ್‍ಗೆ ಮನಸೋತು 40 ಲಕ್ಷ ಗ್ರಾಹಕರು 251 ರೂಪಾಯಿ ಪಾವತಿಸ್ತಾರೆ, ಡೆಲಿವರಿ ವೆಚ್ಚ ಪ್ರತಿ ಆರ್ಡರ್‍ಗೆ 40 ರೂಪಾಯಿ. ಈ ಮೂಲಕ ನೀವು 145 ಕೋಟಿ ರೂಪಾಯಿ ಸಂಗ್ರಹಿಸುತ್ತೀರಾ. ಇನ್ನು 6 ತಿಂಗಳುಗಳಲ್ಲಿ ಮೊಬೈಲ್ ಡೆಲಿವರಿ ಮಾಡುತ್ತೇವೆ, ಇಲ್ಲವಾದಲ್ಲಿ ಹಣ ವಾಪಸ್ ಕೊಡುವುದಾಗಿ ಗ್ರಾಹಕರಿಗೆ ವಾಗ್ದಾನ ನೀಡಿ. ಸಂಗ್ರಹವಾದ 145 ಕೋಟಿ ರೂಪಾಯಿಯನ್ನು 6 ತಿಂಗಳು ಬ್ಯಾಂಕ್‍ನಲ್ಲಿ ಠೇವಣಿ ಇಡಿ. ನಿಮಗೆ ಕಡಿಮೆ ಅಂದ್ರೂ ಶೇ.9ರಷ್ಟು ಬಡ್ಡಿ ದೊರೆಯುತ್ತೆ. 6 ತಿಂಗಳಲ್ಲಿ ದೊರೆಯುವ 6.5 ಕೋಟಿ ರೂಪಾಯಿ ಬಡ್ಡಿ ಹಣ ನಿಮ್ಮದಾಗುತ್ತೆ.

ಆರು ತಿಂಗಳ ನಂತರ ಗ್ರಾಹಕರಿಂದ ಸಂಗ್ರಹಿಸಿದ 145 ಕೋಟಿ ರೂಪಾಯಿಯನ್ನು ಅವರಿಗೆ ಹಿಂದಿರುಗಿಸಿಬಿಡಿ. ಬಡ್ಡಿ ಹಣ 6.5 ಕೋಟಿ ರೂಪಾಯಿಯನ್ನು ನಿಮ್ಮ ಜೇಬಿಗೆ ಸೇರಿಸಿ.

ಲೇಖಕರು: ರೋಹಿತ್ ಲೋಹಡೆ

ಅನುವಾದಕರು: ಭಾರತಿ ಭಟ್