ಕಸ ವಿಲೇವಾರಿಗೆ ಮಾದರಿ ಈ ರೆಸ್ಟೋರೆಂಟ್
ಪಿ.ಅಭಿನಾಷ್
ಬಿಬಿಎಂಪಿಗೆ ಬೆಂಗಳೂರಿನ ಕಸ ನಿರ್ವಹಣೆ ಕಬ್ಬಿಣದ ಕಡಲೆಯಾಗಿದೆ. ಏನೆ ಮಾಡಿದ್ರೂ, ಯಾವುದೇ ಯೋಜನೆಗಳನ್ನ ಹಾಕಿಕೊಂಡ್ರೂ, ಕಸದ ಸಮಸ್ಯೆಯನ್ನ ಮಾತ್ರ ನಿವಾರಿಸಲು ಬಿಬಿಎಂಪಿಯಿಂದ ಸಾಧ್ಯವಾಗ್ತಾ ಇಲ್ಲ. ಅಂತಹದ್ರಲ್ಲಿ, ಬೆಂಗಳೂರಿನ ಅತ್ಯಂತ ಹಳೆ ಹೋಟೆಲ್‍ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನ, ಕಸ ಸಂಸ್ಕರಣೆಗೆ ಮಾದರಿಯಾಗದೆ.
ಹೌದು ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ನ್ಯೂ ಕೃಷ್ಣ ಭವನಕ್ಕೆ ಆರು ದಶಕಗಳ ಇತಿಹಾಸವಿದೆ. ಈ ಹೋಟೆಲ್ ಅಂದ್ರೆ ನಗರದ ಹಿರಿಯ ನಾಗರಿಕರಿಗೆ ಅಚ್ಚುಮೆಚ್ಚು. ದಕ್ಷಿಣ ಭಾರತ ತಿಂಡಿತಿನಿಸುಗಳಿಗೆ ಪ್ರಸಿದ್ಧಿ ಪಡೆದಿರುವ ನ್ಯೂ ಕೃಷ್ಣ ಭವನ್ ಇದೀಗ, ಕಸ ಸಂಸ್ಕರಣೆ ಮಾಡಿ ಹೆಸರುವಾಸಿಯಾಗಿದೆ. ಹೌದು, ಪ್ರತಿನಿತ್ಯ ಈ ರೆಸ್ಟೋರೆಂಟ್‍ನಲ್ಲಿ ಕನಿಷ್ಟ ಅಂದ್ರೂ ಎರಡು ಸಾವಿರ ಮಂದಿ ಭೇಟಿ ಕೊಡ್ತಾರೆ. ಈ ವೇಳೆ ಈ ಹೋಟೆಲ್‍ನಲ್ಲಿ ಸಂಗ್ರಹವಾಗುವ ಕಸವೂ ಹೆಚ್ಚು. ಒಂದಷ್ಟು ಕಸವನ್ನೂ ಬೀದಿಗೆ ಬಿಸಾಡದೆ, ಕಸದಿಂದಲೇ ರಸ ತೆಗೆಯುವ ನ್ಯೂ ಕೃಷ್ಣ ಭವನ್ ನಿಜಕ್ಕೂ ನಗರದ ಎಲ್ಲಾ ರೆಸ್ಟೋರೆಂಟ್‍ಗಳಿಗೂ ಮಾದರಿ.
ಪ್ರತಿನಿತ್ಯ ನ್ಯೂ ಕೃಷ್ಣ ಭವನ್‍ನಲ್ಲಿ ಇನ್ನೂರು ಕೆಜಿಯಷ್ಟು ಹಸಿತ್ಯಾಜ್ಯ ಸಂಗ್ರಹವಾಗತ್ತದೆ. 25 ಕೆಜಿಯಷ್ಟು ಮಸಿ, 25ಕೆಜಿಯಷ್ಟು ಬಳಸಿದ ಕಾಫಿ, ಟೀ ಪೌಡರ್, 25 ಕೆಜಿಯಷ್ಟು ಹಣ್ಣು ತರಕಾರಿ ಸಿಪ್ಪೆ ಸಂಗ್ರಹವಾಗತ್ತೆ. ಇವೆಲ್ಲವನ್ನೂ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಾ ಬಂದಿರುವ ನ್ಯೂ ಕೃಷ್ಣ ಭವನ, ಪೇಪರ್ ಕಪ್ಸ್ ಹಾಗೂ ಪ್ಲೇಟ್‍ಗಳನ್ನ ಮಾರಾಟ ಮಾಡುತ್ತದೆ. ಕಾಫಿ ಹಾಗೂ ಟೀ ಪುಡಿಯನ್ನ ಸಂಸ್ಕರಣೆ ಮಾಡಿ ಹತ್ತಿರದ ಪಾರ್ಕ್‍ಗಳಿಗೆ ಗೊಬ್ಬರವನ್ನಾಗಿ ನೀಡ್ತಾರೆ. ಇನ್ನು, ತರಕಾರಿ ಹಾಗೂ ಹಣ್ಣಿನ ಸಿಪ್ಪೆಗಳನ್ನ ಗೊಬ್ಬರವನ್ನಾಗಿಸಿ ಮಾರಾಟ ಮಾಡ್ತಾರೆ.
'ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನ ನೋಡಿದ್ರೆ ನನಗೆ ತುಂಬಾ ಬೇಸರವಾಗ್ತಿತ್ತು. ಹಾಗಾಗಿ, ನನ್ನ ಹೋಟೆಲ್‍ನಿಂದ ಒಂದಷ್ಟು ಕಸವನ್ನೂ ಹೊರಹಾಕಬಾರದು ಅಂತಾ ನಿರ್ಧರಿಸಿದೆ. ಘನತ್ಯಾಜ್ಯ ವಿಲೇವಾರಿ ತಂಡದ ಸದಸ್ಯರಾಗಿರುವ ಎನ್ ಎಸ್ ರಮಾಕಾಂತ್ ಅವರ ಸಲಹೆ ಪಡೆದು ನಾನೇ ಸಂಸ್ಕರಣೆ ಮಾಡಲು ಆರಂಭಿಸಿದೆ. ಇಂದು ನನ್ನ ಹೋಟೆಲ್‍ನಿಂದು ಒಂದು ಕೆಜಿಯಷ್ಟು ಕಸವೂ ಹೊರ ಹೋಗುವುದಿಲ್ಲ. ಕಸವನ್ನ ಇತರೆಡೆಗೆ ಸಾಗಿಸಲು ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಸಂಸ್ಕರಣೆ ಮಾಡ್ತಾ ಇದ್ದೇನೆ. ಇದು ನನಗೆ ಖುಷಿ ಕೊಟ್ಟಿದೆ.' ಅಂತಾರೆ ಹೋಟೇಲ್‍ನ ಮಾಲೀಕ ಗೋಪಿನಾಥ್ ಪ್ರಭು.
1954ರಲ್ಲಿ ಈ ಹೋಟೆಲ್ ಆರಂಭವಾದಾಗ ಕೇವಲ ಮೂವರು ಸಿಬ್ಬಂದಿಗಳಿದ್ರು. ಇಂದು ಈ ಸಿಬ್ಬಂದಿ ಸಂಖ್ಯೆ 95ಕ್ಕೆ ಏರಿಕೆಯಾಗಿದೆ. ಕಸ ಸಂಸ್ಕರಣೆಯೂ ಸವಾಲಾಗಿ ಪರಿಣಮಿಸಿದೆ. ಕಸ ನಿರ್ವಹಣೆಗಾಗಿಯೇ ಇಬ್ಬರು ಸಿಬ್ಬಂದಿಯನ್ನ ಮೀಸಲಿಡಬೇಕು. ಮೊದಲು ಪ್ಲ್ಯಾಸ್ಟಿಕ್ ತ್ಯಾಜ್ಯವನ್ನ ಐಟಿಸಿಗೆ ನೀಡಲಾಗ್ತಾ ಇತ್ತು. ಪ್ರತಿ ಕೆಜಿ ಒಣ ತಾಜ್ಯಕ್ಕೆ ಎರಡು ರೂಪಾಯಿಗಲನ್ನ ನೀಡ್ತಾ ಇದ್ರು. ಆದ್ರೆ, ಪೇಪರ್ ಹಾಗೂ ಪ್ಲಾಸ್ಟಿಕ್ ಕಪ್‍ಗಳು ಸ್ವಚ್ಛವಾಗಿರಬೇಕಿತ್ತು. ಜ್ಯೂಸ್ ಕುಡಿದ ಹಾಗೂ ಕಾಫಿ ಟೀ ಕುಡಿದ ಕಪ್‍ಗಳನ್ನ ಕ್ಲೀನ್ ಮಾಡೋದು ಸಾಧ್ಯವಿಲ್ಲ. ಹಾಗಾಗಿ, ಒಣ ಕಸ ಸಂಸ್ಕರಣೆ ಮಾಡುವವರಿಗೆ ಪೇಪರ್ ಹಾಗೂ ಪ್ಲಾಸ್ಟಿಕ್‍ನ ಮಾರಾಟ ಮಾಡಲಾಗುತ್ತಾ ಇದೆ.
ನಗರದಲ್ಲಿ ಸಾವಿರಾರು ರೆಸ್ಟೋರೆಂಟ್‍ಗಳಿವೆ. ಎಲ್ಲಾ ರೆಸ್ಟೋರೆಂಟ್‍ಗಳಿಂದಲೂ ನೂರಾರು ಮೆಟ್ರಿಕ್ ಟನ್ನಷ್ಟು ಕಸ ಸಂಗ್ರಹವಾಗತ್ತೆ. ರೆಸ್ಟೋರೆಂಟ್‍ಗಳು ಕಸವನ್ನ ವಿಂಗಡನೆ ಮಾಡಬೇಕು ಅನ್ನೋ ನಿಯಮವಿದ್ರೂ ಯಾರೊಬ್ಬರು ಪಾಲಿಸ್ತಾ ಇಲ್ಲ. ಹಾಗಾಗಿ, ನಗರದ ಕಸದ ಸಮಸ್ಯೆಗೆ ರೆಸ್ಟೋರೆಂಟ್‍ಗಳೂ ಪ್ರಮುಖ ಕಾರಣವಾಗ್ತಾ ಇವೆ. ಕಸ ಎತ್ತಲು ಬಿಬಿಎಂಪಿಗೆ ಕೊಡುವ ಹಣದ ಬದಲು ಸ್ವಲ್ಪ ಜಾಗ್ರತೆ ವಹಿಸಿದ್ರೆ, ಅವರವರ ರೆಸ್ಟೋರೆಂಟ್‍ಗಳ ಕಸವನ್ನ ಅಲ್ಲೇ ಸಂಸ್ಕರಿಸಬಹುದು.
ನಗರದ ಸಾವಿರಾರು ರೆಸ್ಟೋರೆಂಟ್‍ಗಳಿಗೆ ಮಾದರಿ ಈ ನ್ಯೂ ಕೃಷ್ಣ ಭವನ್. ನ್ಯ ಕೃಷ್ಣ ಭವನ್‍ನ ಕಸ ಸಂಸ್ಕರಣೆ ಬಿಬಿಎಪಿ ಅಧಿಕಾರಿಗಳ ಗಮನಕ್ಕೂ ಬಂದಿದೆ. ಇತರರು ಎನ್‍ಕೆಬಿಯಂತೆ ಕಸ ಸಂಸ್ಕರಣೆ ಮಾಡುವಂತೆಯೂ ಬಿಬಿಎಂಪಿ ಕರೆ ಕಟ್ಟಿದೆ. ಎನ್‍ಕೆಬಿಯ ಈ ಕಾರ್ಯ ಹೋಟೆಲ್‍ಗೆ ಬರುವ ಗ್ರಾಹಕರ ಮನಸನ್ನೂ ಗೆದ್ದಿದೆ. ಕಸವನ್ನ ತಕ್ಷಣವೇ ವಿಭಜಿಸಿ ವಿಲೇವಾರಿ ಮಾಡ್ತಿರೋದ್ರಿಂದ, ಹೋಟೆಲ್‍ನ ಸ್ವಚ್ಛತೆ ಇನ್ನೂ ಹೆಚ್ಚಾಗಿದೆ.
ಎನ್‍ಕೆಬಿ ಮಾಲೀಕರು ಇದು ನನ್ನ ನಗರ ಸ್ವಚ್ಚವಾಗಿರಬೇಕು ಅಂತಾ ಈ ಕಾರ್ಯ ಕೈಗೊಂಡಿದ್ದಾರೆ. ನರದಲ್ಲಿರುವ ಇತರೆ ಹೋಟೆಲ್‍ಗಳು ಇವರ ಹಾದಿಯಲ್ಲೇ ನಡೆದ್ರೆ ನಗರದ ಕಸದ ಸಮಸ್ಯೆ ಒಂದು ಮಟ್ಟಿಗಾದ್ರೂ ಕಡಿಮೆಯಾದೀತು. ಎನ್‍ಕೆಬಿ ಮಾಲೀಕರಿಗೆ ನಗರದ ಮೇಲಿರುವ ಪ್ರೀತಿ ಕಾಳಜಿ ಸಿಲಿಕಾನ್ ಸಿಟಿ ಜನತೆಗೆ ಬಂದ್ರೆ ಬೆಂಗಳೂರು ಕ್ಲೀನ್ ಸಿಟಿಯಾಗಲಿದೆ.