ಬಡ ಕುಟುಂಬದ ಕುಡಿಗಳಿಗೆ ಇವರೇ ಆಶಾಕಿರಣ – 74ರ ಹರೆಯದಲ್ಲೂ ಫ್ರೀಯಾಗಿ ನೀಡ್ತಿದ್ದಾರೆ 500 ಮಕ್ಕಳಿಗೆ ಶಿಕ್ಷಣ

ಟೀಮ್ ವೈ.ಎಸ್.ಕನ್ನಡ 

ಬಡ ಕುಟುಂಬದ ಕುಡಿಗಳಿಗೆ ಇವರೇ ಆಶಾಕಿರಣ – 74ರ ಹರೆಯದಲ್ಲೂ ಫ್ರೀಯಾಗಿ  ನೀಡ್ತಿದ್ದಾರೆ 500 ಮಕ್ಕಳಿಗೆ ಶಿಕ್ಷಣ

Tuesday May 16, 2017,

2 min Read

ಸ್ನೇಹಲತಾ ಹೂಡಾ, ಹೆಸರಿಗೆ ತಕ್ಕಂತೆ ಸ್ನೇಹಮಯಿ. ಗಟ್ಟಿ ನಿರ್ಧಾರ ಮಾಡಿದ್ರೆ ವಯಸ್ಸು ಕೂಡ ಅದಕ್ಕೆ ಅಡ್ಡಿಯಾಗುವುದಿಲ್ಲ ಅನ್ನೋದಕ್ಕೆ ಒಂದು ನಿದರ್ಶನ. ಯಾವುದೇ ಪ್ರಚಾರ, ಜನಪ್ರಿಯತೆಯ ಸುಳಿಗೆ ಸಿಲುಕತೆ ಸೈಲೆಂಟ್ ಆಗಿಯೇ ಸಾಮಾಜಿಕ ಕಾಳಜಿ ಮೆರೆಯುತ್ತಿರುವ ಮಹಿಳೆ ಇವರು. ದುರ್ಬಲ ಮಕ್ಕಳಿಗಾಗಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ.

image


ಸ್ನೇಹಲತಾ ಅವರನ್ನು ಎಲ್ಲರೂ ಪ್ರೀತಿಯಿಂದ ‘ಗೌರವ್ ಮಾ’ ಅಂತಾನೇ ಕರೆಯುತ್ತಾರೆ. ಸ್ನೇಹಲತಾ ಗುರ್ಗಾಂವ್ ನಲ್ಲಿ ನಡೆಸ್ತಾ ಇರೋ ಶಾಲೆಯಲ್ಲಿ, ಚಿಂದಿ ಆಯುವವರು, ಮನೆಗೆಲಸ ಮಾಡಿ ಬದುಕುವವರು ಹೀಗೆ ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯಲಾಗುತ್ತಿದೆ.

''ದೆಹಲಿಯಲ್ಲಿ ಸರ್ಕಾರಿ ಕೆಲಸದಲ್ಲಿದ್ದ ನಾನು 2006ರಲ್ಲಿ ನಿವೃತ್ತಿ ಹೊಂದಿದೆ. ನಾನು ಕುಟುಂಬಕ್ಕಾಗಿ ಇಷ್ಟುವರ್ಷ ಸಾಕಷ್ಟು ದುಡಿದಿದ್ದೇನೆ, ಇನ್ಮೇಲೆ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ ಅಂತಾ ಹೇಳಿಬಿಟ್ಟೆ. ಯಾಕಂದ್ರೆ ನನ್ನ ಪೆನ್ಷನ್ ಹಣವನ್ನೆಲ್ಲ ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬೇಕೆಂದು ನಾನು ನಿರ್ಧರಿಸಿದ್ದೆ'' ಎನ್ನುತ್ತಾರೆ ಸ್ನೇಹಲತಾ.

ಅಂದಿನಿಂದ ಇಂದಿನವರೆಗೂ ಸ್ನೇಹತಲಾ ತಮ್ಮ ಪೆನ್ಷನ್ ಹಣವನ್ನೆಲ್ಲ ಮಕ್ಕಳ ಶಿಕ್ಷಣಕ್ಕಾಗಿಯೇ ಖರ್ಚು ಮಾಡುತ್ತಿದ್ದಾರೆ. ಆರಂಭದಲ್ಲಿ ಹತ್ತಾರು ಮಕ್ಕಳು ಶಾಲೆಗೆ ಬರ್ತಾ ಇದ್ರು. ಈಗ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ. ಅವರಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನೂ ಮಾಡಿಕೊಡುತ್ತಿದ್ದಾರೆ. ಒಬ್ಬಂಟಿಯಾಗಿಯೇ ಸ್ನೇಹಲತಾ ಇದನ್ನೆಲ್ಲ ಮುನ್ನಡೆಸ್ತಿದ್ದಾರೆ. ಆರಂಭದಲ್ಲಿ ಸಹ ಯಾರ ನೆರವನ್ನೂ ಕೇಳಲು ಅವರಿಗೆ ಇಷ್ಟವಿರಲಿಲ್ಲ. ಆದ್ರೆ ಕೆಲ ಸಹೃದಯಿಗಳು ತಾವೇ ಮುಂದಾಗಿ ಸಹಾಯ ಹಸ್ತ ನೀಡಿದ್ದರು.

ಎರಡು ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯೊಂದು ಮಕ್ಕಳಿಗೆ ಸಮವಸ್ತ್ರಕ್ಕಾಗಿ ಹಣಸಹಾಯ ಮಾಡಿತ್ತು. ಆರಂಭದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಹೆತ್ತವರ ಮನವೊಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅವರನ್ನು ಕೆಲಸಕ್ಕೆ ಕಳಿಸಿದ್ರೆ ಅಲ್ಪ ಸ್ವಲ್ಪ ಹಣವಾದ್ರೂ ಬರುತ್ತೆ ಅಂತಾ ಪೋಷಕರು ಯೋಚನೆ ಮಾಡ್ತಾ ಇದ್ರು. ಅವರನ್ನು ಒಪ್ಪಿಸಲು ಸ್ನೇಹಲತಾ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರ ಜೀವನದಲ್ಲಿ ಕೂಡ ಶಿಕ್ಷಣ ಅನ್ನೋದು ಹೆತ್ತವರು ನೀಡಿದ ಕೊಡುಗೆ. ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವ ಸಮಯದಲ್ಲೂ ಪದವಿ ಮುಗಿಸಿ ಕೆಲಸಕ್ಕೆ ಸೇರಿದ್ದಾರೆ ಅಂದ್ರೆ ಅದಕ್ಕೆ ಕಾರಣ ತಮ್ಮ ಪೋಷಕರು ಅಂತಾ ನೆನಪುಗಳನ್ನು ತಿರುವಿ ಹಾಕಿದ್ದಾರೆ.

''ನಾನು ಬೆಳೆದಿದ್ದೆಲ್ಲ ಗೋಷಾ ಪದ್ಧತಿ ಜಾರಿಯಲ್ಲಿದ್ದಾಗ. ಹೆಣ್ಣುಮಕ್ಕಳು ತಲೆಯನ್ನು ಮುಚ್ಚಿಕೊಂಡೇ ಇರಬೇಕಿತ್ತು, ಪುರುಷರ ಜೊತೆಗೆ ಮಾತನಾಡುವಂತೆಯೇ ಇರಲಿಲ್ಲ. ಆದ್ರೆ ಮುಂದಾಲೋಚನೆಯುಳ್ಳ ಹೆತ್ತವರನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಅವರಿಂದಾಗಿಯೇ ನಾನು ಶಾಲೆಯ ಮೆಟ್ಟಿಲು ಹತ್ತಲು ಸಾಧ್ಯವಾಯ್ತು. ಬ್ರಿಟಿಷ್ ಆಡಳಿತದ ಸಮಯದಲ್ಲಿ ನನ್ನ ತಂದೆ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ರು. ಅವರೇ ನನಗೆ ಈ ಕಾರ್ಯಕ್ಕೆ ಪ್ರೇರಣೆ''.

ಸ್ನೇಹಲತಾ ಅವರಿಗೆ ಈಗ 74 ವರ್ಷ ವಯಸ್ಸು. ಸಾಮಾನ್ಯವಾಗಿ ಈ ವಯಸ್ಸಿನಲ್ಲಿ ಎಲ್ರೂ ಮಕ್ಕಳು-ಮೊಮ್ಮಕ್ಕಳು ಅಂತಾ ಆರಾಮಾಗಿ ಮನೆಯಲ್ಲಿ ಇರ್ತಾರೆ. ಆದ್ರೆ ಸ್ನೇಹಲತಾ ಮಾತ್ರ ತಮ್ಮ ಸಮಯವನ್ನೆಲ್ಲ ಬಡ ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಅವರ ಬದುಕಲ್ಲಿ ಹೊಸ ಬೆಳಕು ಮೂಡಿಸಲು ಸಕಲ ಪ್ರಯತ್ನವನ್ನೂ ಮಾಡ್ತಿದ್ದಾರೆ. 

ಇದನ್ನೂ ಓದಿ...

ವಯಸ್ಸಾದವರ ಕೈ ಹಿಡಿಯುತ್ತದೆ "ಕಿಕ್​ಸ್ಟಾರ್ಟ್​"

ಊರಿನ ಜನರೆಲ್ಲಾ ಒಂದಾದ್ರು- ಕಲುಷಿತಗೊಂಡಿದ್ದ ನದಿಯನ್ನು ಶುಚಿಗೊಳಿಸಿದ್ರು..!