ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ

ಟೀಮ್ ವೈ.ಎಸ್.ಕನ್ನಡ 

ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ

Tuesday July 19, 2016,

2 min Read

ಹರೀಶ್ ದಾಂಡೇವ್ ಅವರ ಬಳಿ ಸರ್ಕಾರಿ ನೌಕರಿಯೇನೋ ಇತ್ತು, ಆದ್ರೆ ಅದರಲ್ಲಿ ಖುಷಿ ಇರಲಿಲ್ಲ. ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಹರೀಶ್​ಗೆ ಮಣ್ಣಿನ ಮಗನಾಗಬೇಕೆಂಬ ಹಂಬಲವಿತ್ತು. ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತವಿತ್ತು. ಒಮ್ಮೆ ದೆಹಲಿಯಲ್ಲಿ ನಡೆದ ಕೃಷಿ ವಸ್ತು ಪ್ರದರ್ಶನದಲ್ಲಿ ಹರೀಶ್ ಪಾಲ್ಗೊಂಡಿದ್ರು. ಅದು ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಡ್ತು. ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ ಹರೀಶ್, ಪಕ್ಕಾ ಕೃಷಿಕನಾಗಲು ಸಜ್ಜಾದ್ರು. ತಮ್ಮ 120 ಎಕರೆ ಜಮೀನಿನಲ್ಲಿ ಅವರೀಗ ಅಲೋವೆರಾ ಮತ್ತು ಇತರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

image


ಹರೀಶ್ ಅವರು ಕೃಷಿಯಿಂದ ಮಾಡುವ ವಾರ್ಷಿಕ ವಹಿವಾಟು ಎಷ್ಟು ಗೊತ್ತಾ? ಬರೋಬ್ಬರಿ 1.5 ರಿಂದ 2 ಕೋಟಿ ರೂಪಾಯಿ. ತಮ್ಮದೇ ಸ್ವಂತ ಕಂಪನಿಯೊಂದನ್ನು ಸಹ ಅವರು ಆರಂಭಿಸಿದ್ದಾರೆ . ರಾಜಸ್ತಾನದ ಜೈಸಲ್ಮೇರ್​ನಿಂದ 45 ಕಿಲೋ ಮೀಟರ್ ದೂರದಲ್ಲಿರುವ ಧೈಸರ್​ನಲ್ಲಿ `ನ್ಯೂಟ್ರೆಲೋ ಅಗ್ರೋ' ಹೆಸರಿನ ಕಂಪನಿಯನ್ನು ನಡೆಸುತ್ತಿದ್ದಾರೆ. ಥಾರ್ ಮರುಭೂಮಿಯಲ್ಲಿ ಅವರು ಬೆಳೆದ ಅಲೋವೆರಾ ಭಾರೀ ಪ್ರಮಾಣದಲ್ಲಿ ಪತಂಜಲಿ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ಗೆ ಪೂರೈಕೆಯಾಗ್ತಾ ಇದೆ. ಇವುಗಳಿಂದ ಪತಂಜಲಿ ಅಲೋವೆರಾ ಜ್ಯೂಸ್ ತಯಾರಿಸುತ್ತಿದೆ.

ಮರುಭೂಮಿಯಲ್ಲಿ ಬೆಳೆದ ಅಲೋವೆರಾ ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ ಅವುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಹರೀಶ್ ಅವರು ಬೆಳೆದ ಅಲೋವೆರಾದ ಗುಣಮಟ್ಟ ಉತ್ತಮವಾಗಿರುವುದನ್ನು ಮನಗಂಡ ಪತಂಜಲಿ ಕಂಪನಿ ಕೂಡಲೇ ಅಲೋವೆರಾ ಎಲೆಗಳಿಗಾಗಿ ಬೇಡಿಕೆ ಇಟ್ಟಿತ್ತು. ಈಗ ಅಲ್ಲಿಂದಲೇ ಅಲೋವೆರಾ ಎಲೆಗಳನ್ನು ಖರೀದಿಸ್ತಿದೆ.

ಹರೀಶ್ ಧಾಂಡೇವ್ ಅವರ ತ್ಯಾಗಕ್ಕೆ ತಕ್ಕ ಪ್ರತಿಫಲವೀಗ ಸಿಕ್ಕಿದೆ. ಅಸಲಿಗೆ ಹರೀಶ್ ಅವರೊಬ್ಬ ಎಂಜಿನಿಯರ್. ಜೈಸಲ್ಮೇರ್ ಮುನ್ಸಿಪಲ್ ಕೌನ್ಸಿಲ್ನಲ್ಲಿ ಅವರಿಗೆ ಜೂನಿಯರ್ ಎಂಜಿನಿಯರಿಂಗ್ ನೌಕರಿಯೂ ದೊರೆತಿತ್ತು. ಆದ್ರೆ ಸರ್ಕಾರಿ ನೌಕರಿಯಿದ್ರೂ ಹರೀಶ್ ಅವರಿಗೆ ಮಣ್ಣಿನೆಡೆಗೆ ಸೆಳೆತ ಹೆಚ್ಚಾಗಿತ್ತು. ಅವರ ಬಳಿ ಜಮೀನಿತ್ತು, ನೀರಿಗೇನೂ ಕೊರತೆಯಿರಲಿಲ್ಲ ಆದ್ರೆ ಐಡಿಯಾ ಇರಲಿಲ್ಲ. ದೆಹಲಿಯ ಕೃಷಿ ವಸ್ತುಪ್ರದರ್ಶನ ವೀಕ್ಷಿಸಿ ಬಂದ ಬಳಿಕ ತಾವು ಅಲೋವೆರಾ, ನೆಲ್ಲಿಕಾಯಿ ಮತ್ತು ಗುಂಡಾವನ್ನು ಬೆಳೆಯಬೇಕೆಂದು ಹರೀಶ್ ನಿರ್ಧರಿಸಿದ್ರು. ಸಾಮಾನ್ಯವಾಗಿ ಮರುಭೂಮಿಯಲ್ಲಿ ಜೋಳ, ಗೋಧಿ, ಹೆಸರುಬೇಳೆ, ಸಾಸಿವೆ ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಆದ್ರೆ ತಾವು ಹೊಸದೇನನ್ನಾದರೂ ಬೆಳೆಯಬೇಕೆಂದು ಹರೀಶ್ ತೀರ್ಮಾನ ಮಾಡಿದ್ರು. `ಬೇಬಿ ಡೆನ್ಸಿಸ್' ಎಂಬ ಬಗೆಯ ಅಲೋವೆರಾ ಬೆಳೆದ್ರು. ಇವು ಅತ್ಯುತ್ತಮ ಗುಣಮಟ್ಟದ ಎಲೆಗಳಾಗಿದ್ದು, ಬ್ರೆಜಿಲ್, ಹಾಂಗ್ಕಾಂಗ್ ಮತ್ತು ಅಮೆರಿಕದಲ್ಲಿ ಭಾರೀ ಬೇಡಿಕೆಯಿದೆ. 

ಆರಂಭದಲ್ಲಿ ಹರೀಶ್ 80,000 ಸಸಿಗಳನ್ನು ನೆಟ್ಟಿದ್ರು. ಈಗ ಅವುಗಳ ಸಂಖ್ಯೆ 7 ಲಕ್ಷದಷ್ಟಾಗಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಹರೀಶ್ ಸುಮಾರು 125-150 ಟನ್​ಗಳಷ್ಟು ಅಲೋವೆರಾ ತಿರುಳನ್ನು ಹರಿದ್ವಾರದಲ್ಲಿರುವ ಪತಂಜಲಿ ಕಾರ್ಖಾನೆಗೆ ಪೂರೈಸಿದ್ದಾರೆ. ಒಟ್ಟಾರೆ ಸರ್ಕಾರಿ ನೌಕರಿ ಬಿಟ್ಟು ಕೃಷಿಕನಾಗ ಹೊರಟ ಹರೀಶ್ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ...

ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

ಎಲ್ಲರಂತಲ್ಲ ಈ ಆಟೋ ಡ್ರೈವರ್- ಅಣ್ಣಾ ದೊರೈಗೆ ಸಲಾಂ ಅಂತಿದ್ದಾರೆ ಚೆನ್ನೈ ಪ್ಯಾಸೆಂಜರ್ಸ್..!