ಕಣ್ಣು ಕುಕ್ಕಿಸುವ ಸೌಂದರ್ಯ- ಮಿಂಚ್ತಿದ್ದಾರೆ ಮಾರ್ಟಿನಾ-ಸಾನಿಯಾ

ಡಿ.ಡಿ

ಕಣ್ಣು ಕುಕ್ಕಿಸುವ ಸೌಂದರ್ಯ- ಮಿಂಚ್ತಿದ್ದಾರೆ ಮಾರ್ಟಿನಾ-ಸಾನಿಯಾ

Sunday November 29, 2015,

3 min Read

ಕಣ್ಣುಕುಕ್ಕಿಸುವ ಸೌಂದರ್ಯ... ಮನಸ್ಸಿಗೆ ತಂಪೆರೆವ ಚೆಲುವು... ಹಾಲ್ಬೆಳಕಿನಲ್ಲೂ ಎಂಥವರನ್ನು ಮನ ಸೆಳೆಯುವ ಅಪ್ಸರೆಯರು...ವಯ್ಯಾರ ನಡಿಗೆಗಂತೂ ಹಂಸವೇ ನಾಚಿ ನೀರಾಗಬೇಕು.ದಿಟ್ಟಿಸುವ ದೃಷ್ಟಿ ಪಟಲಕ್ಕೆ ಇದಕ್ಕಿಂತ ಮುದ ನೀಡುವ ಮತ್ತೊಂದು ಸೌಭಾಗ್ಯದ ಸೊಬಗು ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ ಅನಿಸುತ್ತೆ...!

image


ಇದು ಯಾವುದೋ ಫ್ಯಾಶನ್ ಶೋ ಬಗ್ಗೆ ಬಣ್ಣದ ಬೆಳಕಿನಲ್ಲಿ ನೋಡಿ ಅಹ್ಲಾದಿಸಿದ ರಸಿಕ ವರ್ಣನೆಯಲ್ಲ. ಬದಲಾಗಿ ಟೆನಿಸ್ ಅಂಗಳದಲ್ಲಿ ಪ್ರತಿಯೊಬ್ಬ ಕ್ರೀಡಾ ರಸಿಕನನೂ ಅನುಭವಿಸಿದ ಮದಿರೆಯ ಗುಂಗು.

ನಿಜ, ನಿಮ್ಮ ಊಹೆ ತಪ್ಪಾಗಲ್ಲ. ಯಸ್, ಇದು ಟೆನಿಸ್ ಜಗತ್ತಿನ ಚೆಂದುಳ್ಳಿ ಚೆಲುವೆಯರ ವರ್ಣನೆ. ಶ್ವೇತವರ್ಣದ ಉಡುಗೆಯಲ್ಲಿ ಕ್ರೀಡಾ ರಸಿಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ಬೆಡಗಿಯರು ಬೇರಾರು ಅಲ್ಲ. ಭಾರತದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್​​ಲೆಂಡ್​​ನ ಎವರ್ ಗ್ರೀನ್ ಲೇಡಿ ಮಾರ್ಟಿನಾ ಹಿಂಗಿಸ್.

ಏರು ಯೌವನ ಆಕೆಯದ್ದಲ್ಲ- ಆದರೂ ಪಾದರಸದ ಚಲನೆ ಕುಗ್ಗಿಲ್ಲ

ಆದ್ರೆ ಇವರು ಏರು ಜವ್ವನೆಯರಲ್ಲ. ಆದ್ರೂ ಜವ್ವನೆಯರನ್ನು ನಾಚಿಸುವ ಚೆಲುವಿದೆ. ವಯಸ್ಸು ಮಾಗಿದ್ರೂ ಸೌಂದರ್ಯ ಬತ್ತಿಲ್ಲ. ಹಾಗಂತ ಈ ಅಂದಗಾತಿಯರ ಆಟ ಕೇವಲ ಚೆಲುವಿಗೆ ಅಥವಾ ವರ್ಣನೆಗೆ ಮಾತ್ರ ಸೀಮಿತವಾಗಿಲ್ಲ. ಅಂದದಷ್ಟೇ ಚಂದ ಆಟದಲ್ಲೂ ಇದೆ.

image


ಆಕ್ರಮಣಕಾರಿ ಪ್ರವೃತ್ತಿ, ಆತ್ಮವಿಶ್ವಾಸದಿಂದಲೇ ಬಗ್ಗುಬಡಿಯುವ ಸಾಮರ್ಥ್ಯ, ಎದುರಾಳಿಯ ವೀಕ್ನೆಸ್ಗಳನ್ನು ಅರಿತುಕೊಳ್ಳುವ ನೈಪುಣ್ಯತೆ, ಗೆಲ್ಲಲು ಬೇಕಾದ ತಂತ್ರಗಾರಿಕೆ, ಸೋಲಿನ ಭೀತಿಗೆ ಸಿಲುಕಿದ್ರೂ ಗೆಲ್ಲಬೇಕು ಅನ್ನೋ ಛಲ, ಅದಕ್ಕಿಂತಲೂ ಮಿಗಿಲಾಗಿ ವೃತ್ತಿಯನ್ನು ಉಸಿರಾಗಿ ಪ್ರೀತಿಸುವ ಬದ್ಧತೆಯೇ ಈ ಚೆಲುವೆಯರ ಯಶಸ್ಸಿನ ಗುಟ್ಟು.

ವಯಸ್ಸು 42 ದಾಟಿದ್ರೂ ಛಲದಂಕ ಮಲ್ಲ- ಟೆನಿಸ್ ಅಂಗಣದ ಪಟ್ಟುಗಳನ್ನು ಬಲ್ಲ

ಲಿಯಾಂಡರ್ ಪೇಸ್... ಈ ಹೆಸರು ಸರಿ ಸುಮಾರು 25 ವರ್ಷಗಳಿಂದ ಭಾರತೀಯ ಕ್ರೀಡಾಲೋಕದಲ್ಲಿ ಸದಾ ಕೇಳಿಬರುತ್ತಿದೆ. ವಯಸ್ಸು 42 ದಾಟಿದ್ರೂ ಆಡುವ ಸಾಮರ್ಥ್ಯ ಒಂಚೂರು ಕಮ್ಮಿಯಾಗಲಿಲ್ಲ. ಪ್ರಶಸ್ತಿ ಗೆಲ್ಲುವ ಹಂಬಲ - ಛಲಕ್ಕೆ ಸರಿ ಸಾಟಿ ಯಾರಿಲ್ಲ. ಇವರ ಚುರುಕಿನ ಆಟ ಎದುರಾಳಿಯನ್ನು ಭಯ ಮೂಡಿಸುತ್ತೆ. ಇವರ ಅಮೋಘ ಆಟಕ್ಕೆ ಸಾಥ್ ನೀಡುವವರು ಬೇಕಾಗಿತ್ತು..

ಮಿಕ್ಸೆಡ್ ಡಬಲ್ಸ್ ನಲ್ಲೂ ಮಾರ್ಟಿನಾ ಗೇಮ್ - ಭಾರತಕ್ಕೆ ಕೊಟ್ರು ಮೂರು ಗ್ರ್ಯಾಂಡ್ ಸ್ಲಾಮ್

ಅದಕ್ಕೆ ತಕ್ಕಂತೆ ಮಿಕ್ಸೆಡ್ ಡಬಲ್ಸ್ ನಲ್ಲಿ ಲಿಯಾಂಡರ್ ಪೇಸ್ ಗೆ ಸಾಥ್ ನೀಡಲು ಸ್ವಿಸ್ ರಾಣಿ ಆಗಮಿಸಿದ್ರು. ಮಾರ್ಟೀನಾ ಹಿಂಗೀಸ್ ಪೇಸ್ ಗೆ ಜೊತೆಯಾದ್ರು..ಅಲ್ಲಿಂದ ಪೇಸ್ ಮತ್ತು ಹಿಂಗೀಸ್ ಜೋಡಿ ಟೆನಿಸ್ ಅಂಗಣದಲ್ಲಿ ಮಿಂಚು ಹರಿಸುತ್ತಾ ಸಾಗಿತು. ಪೇಸ್ ಮುಖದಲ್ಲಿ ಮತ್ತೆ ಗ್ರ್ಯಾಂಡ್ ಸ್ಲಾಂ ನ ನಗು ಮೂಡಿಸಲು ಕಾರಣರಾದ ಮಾರ್ಟೀನಾ ಹಿಂಗಿಸ್ ಭಾರತೀಯ ನೆಚ್ಚಿನ ಆಟಗಾರ್ತಿ ಅನ್ನಿಸಿಕೊಂಡಿದ್ದಾರೆ.

image


ಮಾರ್ಟಿನಾ ಪ್ರಶಸ್ತಿ ಗೆಲ್ಲುವಾಗ ಸಾನಿಯಾ ಎಂಟ್ರಿ- 17 ವರ್ಷಗಳ ನಂತರವೂ ಮುಗಿಯದ ಬೇಟೆ

21 ವರ್ಷಗಳ ಹಿಂದೆ ಮಾರ್ಟಿನಾ ಹಿಂಗಿಸ್ ವಿಂಬಲ್ಡನ್ ಟೂರ್ನಿಯ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ರು. ಅಲ್ಲದೆ 1996ರಲ್ಲಿ ಅಂದ್ರೆ 15ರ ಹರೆಯದಲ್ಲೇ ಮಾರ್ಟಿನಾ ಹಿಂಗಿಸ್ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ರು. ಜತೆಗೆ 1996 ಮತ್ತು 1998ರಲ್ಲಿ ಡಬಲ್ಸ್ ನಲ್ಲೂ ಪ್ರಶಸ್ತಿ ಪಡೆದಿದ್ರು.

17 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಹಿಂಗಿಸ್- ಸಾನಿಯಾ ಜೊತೆಗೂಡಿ ಪಡೆದ್ರು ಸಕ್ಸಸ್

17 ವರ್ಷಗಳ ಬಳಿಕ ವಿಂಬಲ್ಡನ್ ಟೂರ್ನಿಯ ಡಬಲ್ಸ್ ಪ್ರಶಸ್ತಿ ಗೆದ್ದ ಮಾರ್ಟಿನಾ ಹಿಂಗಿಸ್ ಐದು ಸಿಂಗಲ್ಸ್ ಗ್ರ್ಯಾಂಡ್ ಸ್ಲಾಂ ಹಾಗೂ 11 ಗ್ರ್ಯಾಂಡ್ ಸ್ಲಾಂ ಡಬಲ್ಸ್ ಪ್ರಶಸ್ತಿ ಹಾಗೂ ನಾಲ್ಕು ಮಿಕ್ಸೆಡ್ ಡಬಲ್ಸ್ ಸೇರಿ ಒಟ್ಟು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 20ಕ್ಕೇರಿಸಿಕೊಂಡ್ರು..

ಸಾನಿಯಾಗೂ ಸಿಕ್ತು ಸೂಪರ್ ಸಾಥ್- ಮಹಿಳಾ ಡಬಲ್ಸ್ ನಲ್ಲಿ ನಂಬರ್ 1

ಹಾಗೇ 11 ವರ್ಷ ಹಿಂದೆ ಸಾನಿಯಾ ಮಿರ್ಜಾ ವಿಂಬಲ್ಡನ್ ಟೂರ್ನಿಯ ಜೂನಿಯರ್ ಡಬಲ್ಸ್​​​ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ರು. ಅಲ್ಲದೆ ಮಹಿಳಾ ಡಬಲ್ಸ್​​ನಲ್ಲಿ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಪಡೆದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. ಹಾಗೇ, ಮೂರು ಮಿಕ್ಸೆಡ್ ಡಬಲ್ಸ್ ಗ್ರ್ಯಾಂಡ್ ಸ್ಲಾಂ ಸೇರಿ ಒಟ್ಟು ಐದು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ್ರು.

image


ಮೂರು ಬಾರಿ ಹಿಂಗಿಸ್ ನಿವೃತ್ತಿ- ಗಾಯದಿಂದ ಕುಗ್ಗಿ ಹೋಗಿದ್ರು ಮಾರ್ಟಿನಾ

ಸಾನಿಯಾರ ಈ ಎಲ್ಲಾ ಸಾಧನೆಗೆ ಬೆಂಗವಲಾಗಿ ನಿಂತಿರುವ ಮಾರ್ಟೀನಾ ಹಿಂಗಿಸ್ ಕೂಡ ಎಲ್ಲವನ್ನು ಬಿಟ್ಟು ದೂರ ಇದ್ದವರು. ಟೆನಿಸ್ ಅಂಗಣದಲ್ಲಿ ಮಹರಾಣಿಯಂತೆ ಮೆರೆದವರು ಮಾರ್ಟೀನಾ ಹಿಂಗಿಸ್ ..ಅದ್ಭುತ ಆಟಗಾರ್ತಿಯಾಗಿದ್ದ ಮಾರ್ಟಿನಾ ಹಿಂಗಿಸ್ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿದ್ರು. ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಹಾಗೂ ನಂಬರ್ ವನ್ ಸ್ಥಾನಕ್ಕೇರಿದ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದ ಹಿಂಗಿಸ್, ವಿಲಿಯಮ್ಸ್ ಸಹೋದರಿಯರ ಅಬ್ಬರಕ್ಕೆ ಕೊಚ್ಚಿಹೊಗಿದ್ರು. ಜತೆಗೆ ಗಾಯದ ಸಮಸ್ಯೆ, ವೈಯಕ್ತಿಕ ಬದುಕು ಹಿಂಗಿಸ್ ಅವ್ರನ್ನು ಟೆನಿಸ್ನಿಂದ ದೂರ ಸರಿಯುಂತೆ ಮಾಡಿತ್ತು.

ಆಟಕ್ಕಿಂತ ಹೆಚ್ಚಾಗಿತ್ತು ಡೇಟಿಂಗ್- ಲವ್,ಡವ್ ನಿಂದ ಕುಗ್ಗಿದ್ರು ಟೆನಿಸ್ ಕ್ವೀನ್

ಇದಲ್ಲದೆ ಹಿಂಗಿಸ್ ವಯಕ್ತಿಕ ಬದುಕಿನಲ್ಲಿ ಸಾಕಷ್ಟು ನೊಂದು ಹೋಗಿದ್ರು..ವರ್ಷಕ್ಕೊಬ್ಬರಂತೆ ಸುಮಾರು ಎಂಟು ಮಂದಿ ಬಾಯ್ ಫ್ರೆಂಡ್ಗಳ ಜತೆ ಡೇಟಿಂಗ್ ಮಾಡಿಕೊಂಡಿದ್ದ ಹಿಂಗಿಸ್ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ರು. ಈ ಕಾರಣದಿಂದಲೇ ಮೂರು ನಾಲ್ಕು ಬಾರಿ ಟೆನಿಸ್ ಬದುಕಿಗೆ ವಿದಾಯ ಹೇಳಿದ್ರು.

ಅಂಗಣದಿಂದ ದೂರ ನಡೆದ್ರೂ ಕೂಡ ನೆಮ್ಮದಿ ಸಿಗಲಿಲ್ಲ..ಅದಕ್ಕಾಗಿ ಮತ್ತೆ ಬದುಕು ಹಸನಾಗಬೇಕಾದ್ರೆ ಟೆನಿಸ್ ಆಡಲೇಬೇಕು ಅನ್ನೋ ನಿಟ್ಟಿನಲ್ಲಿ ಇದೀಗ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್​​ನಲ್ಲಿ ಆಡುತ್ತಿದ್ದಾರೆ. 35ರ ಹರೆಯದಲ್ಲೂ ಮಾರ್ಟಿನಾ ಹಿಂಗಿಸ್ ಆಡುವ ರೀತಿಗೆ ವಿಶ್ವವೇ ಸಲಾಂ ಅನ್ನುತ್ತಿದೆ.

ಪ್ಲೋ..

ಅದರಲ್ಲೂ ಬ್ಯಾಕ್ ಕೋರ್ಟ್ ನಲ್ಲಿ ತಾನೇನು ತನ್ನ ಪವರ್ ಏನು ಅನ್ನೋದನ್ನು ತೋರಿಸಿದ್ದಾರೆ. ಪೇಸ್ ಜೊತೆಗೂ ಕೂಡ ಬ್ಯಾಕ್ ಕೋರ್ಟ್ ಆಡುವ ಹಿಂಗಿಸ್ ಎದುರಾಳಿಯ ವೇಗದ ಹೊಡೆತಗಳಿಗೂ ದಿಟ್ಟ ಉತ್ತರ ನೀಡುತ್ತಾ ಪಾಯಿಂಟ್ಸ್ ಹೆಚ್ಚಿಸುತ್ತಾ ಸಾಗುತ್ತಾರೆ. ವಯಸ್ಸು ಮಾಗಿದ್ರೂ ಆಟದ ಮೇಲಿನ ಪ್ರೀತಿ, ಆಟದಲ್ಲಿರುವ ಚುರುಕು ಯಾವುದೂ ಕಡಿಮೆಯಾಗಿಲ್ಲ. ಸ್ವಿಟ್ಜರ್ಲೆಂಡ್ ಗೆ ಮಾತ್ರವಲ್ದೆ ಹಿಂಗಿಸ್ ಭಾರತಕ್ಕೂ ಹಿಗ್ಗು, ಹಿರಿಮೆಯನ್ನು ತಂದುಕೊಟ್ಟ ಬೆಡಗಿಯಾಗಿದ್ದಾರೆ.