ಒರಿಸ್ಸಾದ ಮೊದಲ ಮಹಿಳಾ ಪೈಲಟ್ ಆಗಿರುವ ಬುಡಕಟ್ಟು ಜನಾಂಗದ 23 ವರ್ಷ ವಯಸ್ಸಿನ ಯುವತಿ
ಒರಿಸ್ಸಾದ ಅನುಪ್ರಿಯಾ ಲಕ್ರಾಸ್ ಪೈಲಟ್ ಆಗಬೇಕೆಂದು ಎಂಜನಿಯರಿಂಗ್ ಓದುವುದನ್ನು ನಿಲ್ಲಿಸಿದರು ಮತ್ತು ಏಳು ವರ್ಷಗಳ ನಂತರ ಅವರ ಕನಸು ನನಸಾಯಿತು.
ಮಾವೋ ಮೂಲಭೂತವಾದಿಗಳ ತುಳಿತಕ್ಕೆ ಸಿಲುಕಿರುವ ಒರಿಸ್ಸಾದ ಮಲ್ಕಾನಗರಿ ಜಿಲ್ಲೆಯ ಬುಡುಕಟ್ಟು ಜನಾಂಗದ ಯುವತಿಯ ಆಕಾಶದಲ್ಲಿ ಹಾರಾಡಬೇಕೆಂಬ ಕನಸು ನನಸಾಗಿ ಅವರು ಈಗ ಹಿಂದುಳಿದ ಪ್ರದೇಶದ ಮೊದಲ ಮಹಿಳಾ ಪೈಲಟ್ ಆಗಿದ್ದಾರೆ.
ಇಪ್ಪತ್ಮೂರು ವರ್ಷ ವಯಸ್ಸಿನ ಅನುಪ್ರಿಯಾ ಲಕ್ರಾಸ್ ಎಂಜನಿಯರಿಂಗ್ ಓದಿಗೆ ಮಧ್ಯದಲ್ಲಿ ತಿಲಾಂಜಲಿಯನ್ನಿಟ್ಟು ಪೈಲಟ್ ಆಗಬೇಕೆಂಬ ಕನಸು ಕಂಡು 2012 ರಲ್ಲಿ ಏವಿಯೇಷನ್ ಅಕಾಡೆಮಿ ಸೇರಿದರು. ಅವರ ಕನಸು ಏಳು ವರ್ಷಗಳ ನಂತರ ನನಸಾಯಿತು.
ಬುಡುಕಟ್ಟು ಜನಾಂಗದವರೇ ಹೆಚ್ಚಿರುವ ಜಿಲ್ಲೆಯಿಂದ ಬಂದಿರುವ ಈ ಯುವತಿ ಒಂದು ಖಾಸಗಿ ವಾಯುಯಾನ ಕಂಪೆನಿಯಲ್ಲಿ ಸಹ-ಪೈಲಟ್ ಆಗಿ ಕೆಲಸ ಮಾಡಲಿದ್ದಾರೆ.
ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಾಟ್ನಾಯಿಕ್ ಲಕ್ರಾ ಅವರನ್ನು ಅವರ ಪರಿಶ್ರಮ ಮತ್ತು ಛಲದಿಂದ ಮಾಡಿದ ಅಪರೂಪದ ಸಾಧನೆಗಾಗಿ ಅಭಿನಂದಿಸಿದ್ದಾರೆ ಮತ್ತು ಇದು ಇತರರಿಗೆ ಮಾರ್ಗದರ್ಶಕವಾದ ಉದಾಹರಣೆಯೆಂದು ಪ್ರಶಂಸಿಸಿದ್ದಾರೆ.
“ನಾನು ಅನುಪ್ರಿಯಾ ಲಕ್ರಾ ಅವರ ಯಶಸ್ಸಿನ ಬಗ್ಗೆ ತಿಳಿದು ಅತೀವ ಸಂತೋಷಗೊಂಡಿದ್ದೇನೆ. ಕಠಿಣ ಪರಿಶ್ರಮ ಮತ್ತು ದೃಢನಿರ್ಧಾರಗಳಿಂದ ಗಳಿಸಿದ ಈ ಯಶಸ್ಸು ಇತರರಿಗೆ ಮಾದರಿಯಾಗಬಲ್ಲದು”
ಎಂದು ನವೀನ್ ಪಾಟ್ನಾಯಿಕ್ ಟ್ವೀಟ್ ಮಾಡಿದ್ದಾರೆ. ಪೈಲಟ್ ಆಗಿ ಅವರಿನ್ನು ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಅವರು ಹಾರೈಸಿದ್ದಾರೆ.
ಒರಿಸ್ಸಾದ ಪೋಲೀಸ್ ಇಲಾಕೆಯಲ್ಲಿ ಹವಾಲ್ದಾರರಾಗಿರುವ ಮರಿನಿಯಾಸ್ ಲಕ್ರಾ ಮತ್ತು ಗೃಹಿಣಿಯಾಗಿರುವ ಜಮಾಜ್ ಯಾಸ್ಮಿನ್ ಲಕ್ರಾರ ಪುತ್ರಿಯಾದ ಅನುಪ್ರಿಯಾ ಮಲ್ಕಾನಗರಿಯ ಕಾನ್ವೆಂಟೊಂದರಲ್ಲಿ ಹತ್ತನೆಯ ತರಗತಿಯನ್ನು ಮುಗಿಸಿದರು.
ಪೈಲಟ್ ಆಗಬೇಕೆಂಬ ಮಹದಾಸೆಯಿಂದ ಭುವನೇಶ್ವರದಲ್ಲಿ ತಾನು ಓದುತಿದ್ದ ಎಂಜನಿಯರಿಂಗ್ ವ್ಯಾಸಂಗವನ್ನು ಮಧ್ಯದಲ್ಲಿಯೇ ನಿಲ್ಲಸಿ ಪೈಲಟ್ ಪ್ರವೇಶ ಪರೀಕ್ಷೆಗೆ ತಯಾರಾದರು ಎಂದು ಅವರ ತಂದೆ ಹೇಳುತ್ತಾರೆ.
2012 ರಲ್ಲಿ ಭುವನೇಶ್ವರದ ಪೈಲಟ್ ತರಬೇತಿ ವಿದ್ಯಾಲಯಕ್ಕೆ ಅವರು ಸೇರಿದರು. “ಪೈಲಟ್ ಆಗಬೇಕೆಂಬ ಅವರ ಕನಸು ನನಸಾಗಿರುವುದು ನಮಗೆಲ್ಲಾ ತುಂಬಾ ಸಂತೋಷ ತಂದಿದೆ. ಈಗ ಅವರು ಖಾಸಗಿ ವಾಯುಯಾನ ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿ ಕೆಲಸ ಮಾಡಲು ಆಯ್ಕೆಯಾಗಿದ್ದಾರೆ” ಎಂದು ಅವರ ತಂದೆ ಮರಿನಿಯಾಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ಖಾಸಗಿ ವಾಯುಯಾನ ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿ ನೇಮಕವಾಗಿದ್ದು ವಿದೇಶಕ್ಕೆ ಹಾರಲು ಸಿದ್ಧವಾಗಿದ್ದಾರೆ.
“ಮಲ್ಕಾನಗರಿ ಜಿಲ್ಲೆಯಂತಹ ಹಿಂದುಳಿದ ಪ್ರದೇಶದಿಂದ ಬಂದ ಯುವತಿಯೊಬ್ಬಳಿಗೆ ಇದು ಅತಿದೊಡ್ಡ ಸಾಧನೆಯಾಗಿದೆ. ಈ ಯಶಸ್ಸು ಅವಳ ಏಳು ವರ್ಷಗಳ ಕಠಿಣ ಪರಿಶ್ರಮದಿಂದ ಬಂದಿದೆ” ಎಂದು ಅವರ ತಂದೆ ಹೇಳುತ್ತಾರೆ.
ಮಗಳ ಯಶಸ್ಸಿನಿಂದ ಅತೀವ ಸಂತಸಗೊಂಡಿರುವ ಅವರ ತಾಯಿ ಹೀಗೆ ಹೇಳುತ್ತಾರೆ. “ನನಗೆ ತುಂಬಾ ಸಂತೋಷವಾಗಿದೆ. ಮಲ್ಕಾನಗರಿಯ ಜನರಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ಅವಳ ಈ ಯಶಸ್ಸು ಇತರ ಯುವತಿಯರಿಗೆ ಸ್ಫೂರ್ತಿಯಾಗಿದೆ”
ಅನುಪ್ರಿಯಾ ತನ್ನ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನಕ್ಕೆ ಅವರ ಕುಟುಂಬದ ಸದಸ್ಯರು ಉತ್ತೇಜನ ನೀಡಿರುವುದನ್ನು ಅವರ ತಾಯಿ ಹೆಮ್ಮೆಯಿಂದ ನೆನೆಯುತ್ತಾರೆ.