ಇ-ಕಾಮರ್ಸ್ ಮೂಲಕ ಭಾರತದ ಸಂಸ್ಕೃತಿ ಅನಾವರಣ:ಆನ್ಲೈನ್ ವೆಬ್ಸೈಟ್ಗಳೊಂದಿಗೆ `ಶಿಂಪ್ಲಿ' ಪೈಪೋಟಿ
ಭಾರತಿ ಭಟ್
ಸೇನಾಧಿಕಾರಿಯ ಮಗನಾಗಿದ್ದಿರಿಂದ ರಜತ್ ಗರ್ಗ್ ಅವರಿಗೆ ದೇಶದ ವಿವಿಧೆಡೆ ಪ್ರವಾಸ ಮಾಡುವ ಅವಕಾಶ ಸಿಕ್ಕಿತ್ತು. ಈ ಪ್ರವಾಸದ ಅನುಭವ ರಜತ್ ಅವರಿಗೆ ಭಾರತದ ವೈವಿದ್ಯತೆಗಳ ಬಗ್ಗೆ ಅರಿವು ಮೂಡಿಸಿತ್ತು. ಜೈಸಲ್ಮೇರ್ನಿಂದ ಅಗರ್ತಲಾ, ಅಲ್ಲಿಂದ ಕಾಶ್ಮೀರ, ಕಾಶ್ಮೀರದಿಂದ ಕರ್ನಾಟಕ ಹೀಗೆ ಪ್ರತಿಯೊಂದು ಸ್ಥಳವೂ ಸಾಂಸ್ಕೃತಿಕವಾಗಿ ಅನನ್ಯವಾಗಿತ್ತು. ಆಚರಣೆ, ಆಹಾರ, ಬಟ್ಟೆ ಎಲ್ಲದರಲ್ಲೂ ವೈವಿಧ್ಯತೆಯಿತ್ತು. ಈ ಪ್ರವಾಸದ ಅನುಭವಗಳನ್ನು ನೆನಪಿನಲ್ಲಿರಿಸಿಕೊಳ್ಳಲು ರಜತ್ ಗರ್ಗ್, ಸ್ನೇಹಿತರು ಹಾಗೂ ಕುಟುಂಬದವರಿಗೆ ನೆನಪಿನ ಕಾಣಿಕೆಗಳನ್ನು ತರುತ್ತಿದ್ರು. ತಾಯಿಗೆ ಕುಲ್ಲು ಶಾಲು, ತಂದೆಗೆ ಹಿಮಾಚಲದ ಟೋಪಿ, ಸ್ನೇಹಿತರಿಗೆ ಮಧುಬನಿ ಪೇಂಟಿಂಗ್ಸ್ ಹೀಗೆ ಸ್ಪೆಷಲ್ ಗಿಫ್ಟ್ಗಳನ್ನು ತಂದಿದ್ದಾರೆ. ಆಗ ಅವರಿಗೆ ಇಂತಹ ಅಧಿಕೃತ ಹಾಗೂ ಗುಣಮಟ್ಟದ ಉತ್ಪನ್ನಗಳಿಗೆ ಒಂದು ವೇದಿಕೆಯ ಅಗತ್ಯವಿದೆ ಎಂಬ ಅರಿವಾಯ್ತು. ಎಲ್ಲರೂ ಆಯಾ ಜಾಗಕ್ಕೆ ಹೋಗಿ ಅವುಗಳನ್ನು ಕೊಂಡು ತರಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಕಡೆ ಎಲ್ಲಾ ವಸ್ತುಗಳು ಸಿಗುವಂತೆ ಮಾಡಬೇಕೆಂಬ ಯೋಚನೆಗಿಳಿದ ರಜತ್ 2014ರಲ್ಲಿ `ಶಿಂಪ್ಲಿ'ಯನ್ನು ಆರಂಭಿಸಿದ್ರು.
`ಶಿಂಪ್ಲಿ' ಇ ಕಾಮರ್ಸ್ ಮಾರುಕಟ್ಟೆ. ಬೇರೆ ಬೇರೆ ರಾಜ್ಯಗಳ ವಿಶಿಷ್ಟ ಉತ್ಪನ್ನಗಳು ಇಲ್ಲಿ ಸಿಗುತ್ತವೆ. ಇದು ಭಾರತದ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ಎನ್ನುತ್ತಾರೆ ರಜತ್. ಸಾಂಪ್ರದಾಯಿಕ ಉಡುಪುಗಳು ಹಾಗೂ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಹಲವು ಕಂಪನಿಗಳಿವೆ. ಆದ್ರೆ ನೈಜ ಭಾರತ ಬಳಸುವ ವಸ್ತುಗಳ ಪ್ರದರ್ಶನದಲ್ಲಿ ದೊಡ್ಡ ಅಂತರವಿದೆ. ಕೆಲವರು ಅಕ್ರಮವಾಗಿ, ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಗ್ರಾಹಕರಲ್ಲಿ ಅಪನಂಬಿಕೆ ಮೂಡಿಸುತ್ತಿದ್ದಾರೆ. ಹಾಗಾಗಿ ಪ್ರಮಾಣಿತ ಮಾರಾಟಗಾರರಿಂದ ಉತ್ಪನ್ನಗಳನ್ನು ಖರೀದಿಸುವ ಮೂಲಕ ರಜತ್ ಗುಣಮಟ್ಟ ಕಾಪಾಡುತ್ತಿದ್ದಾರೆ.
ಅದ್ವಿತೀಯ...
ಎಪಿಐಗಳ ಸಮಗ್ರ ಸೆಟ್ ಹೊಂದಿರುವ ಭಾರತದ ಏಕೈಕ ಇ-ಕಾಮರ್ಸ್ ಕಂಪನಿ ಅಂದ್ರೆ `ಶಿಂಪ್ಲಿ'. ಸಾವಿರಕ್ಕೂ ಹೆಚ್ಚು ಅಂಗಸಂಸ್ಥೆಗಳು ಶಿಂಪ್ಲಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಎಪಿಐಗಳನ್ನು ಬಳಸಿ ತಿಂಗಳಿಗೆ ಒಂದು ಮಿಲಿಯನ್ಗೂ ಅಧಿಕ ಸಮಸ್ಯೆಗಳನ್ನು ಬಗೆಹರಿಸುತ್ತಿವೆ. ಶಿಂಪ್ಲಿ ವೇದಿಕೆಯ ಮೂಲಕವೇ ಮಾರಾಟ ಹೆಚ್ಚಿಸುವತ್ತ ಗಮನ ಹರಿಸಲಾಗ್ತಿದೆ. ಪ್ರತಿದಿನ 10,000ಕ್ಕೂ ಹೆಚ್ಚು ಮಂದಿ ಶಿಂಪ್ಲಿ ವೆಬ್ಸೈಟ್ಗೆ ವಿಸಿಟ್ ಮಾಡ್ತಿದ್ದಾರೆ. ಜೊತೆಗೆ ಸೇಲ್ಸ್ ಕೂಡ ದಿನೇ ದಿನೇ ಹೆಚ್ತಾ ಇದೆ. 2500 ಮಾರಾಟಗಾರರು, 1.7 ಕೋಟಿ ಮೊತ್ತದ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದಾರೆ. ಬ್ರ್ಯಾಂಡೆಡ್ ಅಲ್ಲದ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರಲ್ಲಿ ನಂಬಿಕೆ ಮೂಡಿಸುವುದೇ ತಮ್ಮ ಗುರಿ ಎನ್ನುತ್ತಾರೆ ರಜತ್. 2500 ಮಾರಾಟಗಾರರಲ್ಲಿ ಶೇಕಡಾ 40ರಷ್ಟು ಮಂದಿ ಇದೇ ಮೊದಲ ಬಾರಿ ಆನ್ಲೈನ್ ವಹಿವಾಟಿಗೆ ಇಳಿದಿದ್ದಾರೆ.
ಭಾರತದ ವೈವಿದ್ಯಮಯ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಒಂದೆಡೆ ತರಲು ಕೆಳಹಂತದಿಂದಲೇ ಕೆಲಸ ಮಾಡಿ ವೇದಿಕೆ ಸೃಷ್ಟಿಸುವುದು ರಜತ್ ಅವರ ಹಂಬಲ. ಜೊತೆಗೆ ಅದರ ನೇರ ಲಾಭ ಕುಶಲಕರ್ಮಿಗೆ ತಲುಪುವಂತೆ ಮಾಡಲು ಅವರು ಶ್ರಮಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಸಮಸ್ಯೆ ಇರೋದ್ರಿಂದ ಆನ್ಲೈನ್ನಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಪಡೆಯುವುದು ಕಷ್ಟ ಅನ್ನೋದು ಅವರ ಅಭಿಪ್ರಾಯ.
ಆದಾಯ ಮಾದರಿ ಮತ್ತು ಬೆಳವಣಿಗೆ
ಶಿಂಪ್ಲಿ ವೇದಿಕೆ ಪ್ರತಿ ಮಾರಾಟದ ಮೇಲೂ ಕಮಿಷನ್ ವಿಧಿಸುತ್ತದೆ. 10 ತಿಂಗಳಲ್ಲಿ 1.5 ಕೋಟಿ ಮೊತ್ತದ ವಹಿವಾಟಿನ ನಿರೀಕ್ಷೆ ಇದೆ. 18 ರಿಂದ 24 ತಿಂಗಳಲ್ಲಿ ಇದು ದುಪ್ಪಟ್ಟಾಗಲಿದೆ. ಆನ್ಲೈನ್ ಹಾಗೂ ಆಫ್ಲೈನ್ ಎರಡೂ ಮಾರುಕಟ್ಟೆಗಳ ಮೇಲೆ ಶಿಂಪ್ಲಿ ಗಮನ ಹರಿಸಿದೆ. ಕೇವಲ ಆನ್ಲೈನ್ ಮಾರ್ಕೆಟ್ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಲು ಹೋಗಿಲ್ಲ.
ಪೈಪೋಟಿ
ದಿನೇ ದಿನೇ ವರ್ಧಿಸುತ್ತಿರುವ ಸಾಂಪ್ರದಾಯಿಕ ಉಡುಪುಗಳ ಮಾರುಕಟ್ಟೆ ಭಾರತದ ಉಡುಪು ಉದ್ಯಮಕ್ಕೆ ಹೊಸ ರೂಪ ನೀಡುತ್ತಿದೆ. ಭಾರತದ ಚಿಲ್ಲರೆ ವ್ಯಾಪಾರಿ ವೆಬ್ಸೈಟ್ಗಳ ಪ್ರಕಾರ 2013ರಲ್ಲಿ ಸಾಂಪ್ರದಾಯಿಕ ಉಡುಪುಗಳ ಮಾರುಕಟ್ಟೆ ಮೌಲ್ಯ 13,100 ಮಿಲಿಯನ್ ಡಾಲರ್ನಷ್ಟಿತ್ತು. ಇದು 2018ರ ವೇಳೆಗೆ ಶೇಕಡಾ 8 ರಷ್ಟು ಹೆಚ್ಚಳವಾಗಲಿದ್ದು, 19,600 ಮಿಲಿಯನ್ ಡಾಲರ್ನಷ್ಟಾಗುವ ಸಾಧ್ಯತೆ ಇದೆ. ಈ ವಿಭಾಗದಲ್ಲಿ `ಶಿಂಪ್ಲಿ' ಮಾತ್ರವಲ್ಲ, `ಕ್ರಾಫ್ಟ್ಸ್ವಿಲ್ಲಾ', `ಸಿಬಾಝಾರ್', `ಇಂಡಿಯಾರೂಟ್ಸ್' ಕೂಡ ಭಾರಿ ಪೈಪೋಟಿ ಒಡ್ಡುತ್ತಿವೆ. ಇತ್ತೀಚೆಗೆ ಈ ಎಲ್ಲ ಸಂಸ್ಥೆಗಳು ಕೂಡ ನಿಧಿ ಹೆಚ್ಚಳ ಮಾಡಿವೆ. ಈ ವರ್ಷ `ಇಂಡಿಯಾರೂಟ್ಸ್' ಕೆಜೆಎಸ್ ಗ್ರೂಪ್ನಿಂದ 5 ಮಿಲಿಯನ್ ಡಾಲರ್ ನೆರವು ಪಡೆದಿದೆ. `ಕ್ರಾಫ್ಟ್ಸ್ವಿಲ್ಲಾ' ಕೂಡ ಸೀಕ್ವೊಯಾ ಕ್ಯಾಪಿಟಲ್, ಗ್ಲೋಬಲ್ ಫೌಂಡರ್ಸ್ ಕ್ಯಾಪಿಟಲ್ನಿಂದ 18 ಮಿಲಿಯನ್ ಡಾಲರ್ ನೆರವು ಪಡೆದಿದೆ.
ಈ ಕ್ಷೇತ್ರದಲ್ಲಿನ ಪೈಪೋಟಿಯನ್ನು ನೋಡಿದ್ರೆ ರಜತ್ ಅವರ `ಶಿಂಪ್ಲಿ'ಯಲ್ಲಿ ಅತಿ ಹೆಚ್ಚು ಅಂದ್ರೆ 17 ಮಿಲಿಯನ್ ಉತ್ಪನ್ನಗಳಿವೆ. ಇದು ಕೇವಲ ಮಾರಾಟಗಾರರು ಹಾಗೂ ಖರೀದಿದಾರರನ್ನು ಸಂಪರ್ಕಿಸುವ ಇ-ಕಾಮರ್ಸ್ ಮಾರುಕಟ್ಟೆಯಲ್ಲ, ಭಾರತದ ಸಂಪ್ರದಾಯವನ್ನು ಪರಿಚಯಿಸುವ ತಾಣ. ಭಾರತದ ಇತಿಹಾಸ ಮತ್ತು ಸಂಸ್ಕøತಿಯನ್ನು ಗ್ರಾಹಕರಿಗೆ ಪರಿಚಯಿಸುವ ಕೆಲಸವನ್ನೂ ಇದು ಮಾಡುತ್ತಿದೆ. ಹಾಗಾಗಿ ಸಹಜವಾಗಿಯೇ ತಮ್ಮ ಸಂಸ್ಥೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಅನ್ನೋ ಆಶಾವಾದವನ್ನು ರಜತ್ ಹೊಂದಿದ್ದಾರೆ.