ಬಿದಿರಿನ ಆಭರಣಗಳಿಗೆ ಮನ ಸೋಲುತ್ತಿದ್ದಾರೆ ಹೆಂಗೆಳೆಯರು...
ನಿನಾದ
ಚಿನ್ನ, ಬೆಳ್ಳಿ, ಮೆಟಲ್, ಟೆರ್ರಾಕೋಟಾ, ಜೂಟ್ ಆಭರಣಗಳ ಬಳಿಕ ಇದೀಗ ಮಾರುಕಟ್ಟೆಯಲ್ಲಿ ಹೆಂಗಳೆಯರನ್ನು ಸೆಳೆಯೋದಕ್ಕೆ ಹೊಸ ರೀತಿಯ ಆಭರಣಗಳ ಎಂಟ್ರಿಯಾಗಿದೆ. ಅದೇ ಬಿದಿರಿನ ಆಭರಣಗಳು. ಮೆಟಲ್ ಆಭರಣಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ವಿವಿಧ ವಿನ್ಯಾಸಗಳ ಬಿದಿರಿನ ಆಭರಣಗಳು, ಬ್ಯಾಗ್ ಗಳು, ಚಪ್ಪಲಿಗಳು ಇದೀಗ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ.
ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಬಿದಿರಿನಿಂದ ತಯಾರಿಸಿದ ವಿವಿಧ ರೀತಿಯ ಬುಟ್ಟಿಗಳು ಮಾತ್ರ ಲಭ್ಯವಾಗುತ್ತಿದ್ದವು.ಆದ್ರೀಗ ಬಿದಿರಿನಿಂದಲೇ ನಾನಾ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿವೆ. ಅದರಲ್ಲೂ ಬಿದಿರಿನ ಆಭರಣಗಳು ದೇಶ ವಿದೇಶಗಳಲ್ಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಬಿದಿರಿನ ಆಭರಣಗಳು ಪಕ್ಕಾ ನೈಸರ್ಗಿಕವಾಗಿರುತ್ತವೆ ಹಾಗೇ ಹಗುರವಾಗಿರುತ್ತವೆ ಅನ್ನೋ ಕಾರಣಕ್ಕೆ ಹೆಂಗೆಳೆಯರು ಬಿದಿರಿನ ಆಭರಣಗಳತ್ತ ಒಲವು ತೋರುತ್ತಿದ್ದಾರೆ.
ಇವತ್ತು ಚಿನ್ನ ಸೇರಿದಂತೆ ಇನ್ನಿತರೆ ಲೋಹಗಳಲ್ಲಿ ತಯಾರುಗುವಂತಹ ಆಭರಣಗಳಂತೆ ಎಲ್ಲಾ ರೀತಿಯ ಆಭರಣಗಳನ್ನು ಬಿದಿರಿನಿಂದ ತಯಾರಿಸಲಾಗುತ್ತೆ. ಬಿದಿರಿನ ಓಲೆಗಳು, ಸರಗಳು, ನೆಕ್ಲೇಸ್ ಗಳು, ಹೇರ್ ಪಿನ್ ಗಳು, ಚಪ್ಪಲಿಗಳು, ಟೋಪಿಗಳು, ಅಷ್ಟೇ ಯಾಕೆ ಬಿದಿರಿನ ವಿವಿಧ ರೀತಿಯ ಪಾತ್ರೆಗಳು ಇವತ್ತು ಮಾರುಕಟ್ಟೆಗೆ ಬಂದಿವೆ. ಪರಿಸರ ಸ್ನೇಹಿಯಾಗಿರೋದರಿಂದ ಇಂತಹಗಳನ್ನು ಜನ ಜಾಸ್ತಿ ಇಷ್ಟಪಡುತ್ತಾರೆ ಅನ್ನೋದು ಬಿದಿರಿನ ಉತ್ಪನ್ನಗಳ ಮಾರಾಟಗಾರ ಅಸ್ಸಾಂನ ತಿಲಕ್ ಅಭಿಪ್ರಾಯ.
ಇನ್ನು ಬಿದಿರಿನ ಉತ್ಪನ್ನಗಳಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿರೋದರಿಂದ ಗುಡಿ ಕೈಗಾರಿಕೆದಾರರಿಗೆ ಕೈ ತುಂಬಾ ಕೆಲಸ ಸಿಗುತ್ತಿದೆ. ಜೊತೆಗೆ ಆಧುನಿಕ ಶೈಲಿಗೆ ಒಗ್ಗುವಂತೆ ಉತ್ಪನ್ನಗಳನ್ನು ತಯಾರಿಸುತ್ತಿರೋದರಿಂದ ಅವರ ಕ್ರಿಯಾಶೀಲತೆ ಯನ್ನು ತೋರ್ಪಡಿಸಿಕೊಳ್ಳಲು ಒಂದೊಳ್ಳೆ ಅವಕಾಶ ಸಿಗುತ್ತಿದೆ. ಇನ್ನು ಟೆರ್ರಾಕೋಟಾ, ಮೆಟಲ್ ಆಭರಣಗಳಂತೆ ಬಿದಿರಿನ ಆಭರಣಗಳು ಕೂಡ ಧರಿಸಿದಾಗ ಡಿಫರೆಂಟ್ ಲುಕ್ ಕೊಡೋದರಿಂದ ಹೆಚ್ಚು ಇಷ್ಟವಾಗುತ್ತೆ ಅಂತಾರೆ ಖಾಸಗಿ ಕಂಪನಿ ಉದ್ಯೋಗಿ ಸ್ವಾತಿ.
ಬಿದಿರಿನ ಉತ್ಪನ್ನಗಳನ್ನು ಹೆಚ್ಚಾಗಿ ಬಿದಿರು ಬೆಳೆಯೋ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ ಕರ್ನಾಟಕದ ಚಾಮರಾಜ ನಗರ ಮುಂತಾದ ಕಡೆಗಳಲ್ಲಿ ತಯಾರಿಸಲಾಗುತ್ತೆ. 10 ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿಗಳವರೆಗಿನ ಬಿದಿರಿನ ಐಟಂಗಳು ಇವತ್ತು ಮಾರುಕಟ್ಟೆಗಳಲ್ಲಿ ದೊರೆಯುತ್ತವೆ. ಅದರಲ್ಲೂ ಆಭರಣಗಳಿಗೆ ಇವತ್ತು ಫುಲ್ ಡಿಮ್ಯಾಂಡ್.