ಕುವೆಂಪು ಮೊಮ್ಮಗಳು ಬರೆಯುತ್ತಾರೆ..!
ಗಗನಚುಕ್ಕಿ, ಕುವೆಂಪು ಮೊಮ್ಮಗಳು
ಬರವಣಿಗೆ: ಗಗನಚುಕ್ಕಿ, ಕುವೆಂಪು ಮೊಮ್ಮಗಳು
೨೯-೧೨-೧೯೦೪ ಕ್ರೋಧಿನಾಮ ಸಂವತ್ಸರದ ಮಾರ್ಗಶಿರ ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ ತಾಯಿಯ ತವರು ಮನೆಯ ಹಿರೇಕೊಡಿಗದಲ್ಲಿ(ಕೊಪ್ಪ, ಚಿಕ್ಕಮಗಳೂರು ಜಿಲ್ಲೆ) ಈ ಲೋಕಕ್ಕೆ “ವಿಶ್ವ ಮಾನವತ್ವದ ಬೇರು” ಕುವೆಂಪುರವರು ಕಣ್ದೆರೆದರು. ಅವರ ಆರಾಧ್ಯದೈವವಾಗಿದ್ದ ಶ್ರೀ ಮಹಾಮಾತೆ ಶಾರದಾದೇವಿಯವರ ಜನ್ಮತಿಥಿಯೂ ಹಾಗೂ ಇವರ ಜನ್ಮತಿಥಿಯೂ ಒಂದೇ ಆಗಿರುವುದು ಕುವೆಂಪುರವರಿಗೆ ಆನಂದ ಮತ್ತು ಹೆಮ್ಮೆಯ ವಿಷಯವಾಗಿತ್ತು.
ತಂದೆ ಕುಪ್ಪಳ್ಳಿ ವೆಂಕಟಪ್ಪ ಗೌಡ, ತಾಯಿ ಸೀತಮ್ಮ. “ನಮ್ಮ ತಂದೆ ತಾವು ಸಾಯುವ ಮುನ್ನ ನನ್ನ ಕಡೆ ನೋಡುತ್ತಾ ಏನೋ ತುಂಬಾ ಹರ್ಷದಾಯಕವಾದದ್ದನ್ನು ಕಂಡಂತೆ ಸಂತೋಷಾತಿಶಯದಿಂದ ನಕ್ಕ ಆ ಚಿತ್ರ ನನ್ನ ಜೀವಮಾನವನ್ನೆಲ್ಲಾ ಬೆಂಬತ್ತಿ ಬಂದಿದೆ” ಎಂದು ಮೂಕರಾಗುತ್ತಾರೆ ಕುವೆಂಪು. ಹೆಚ್.ಎಸ್ ಮಂಜಪ್ಪ ಗೌಡ ಹೊಸಮನೆ ಕುವೆಂಪುರವರ ಬದುಕಿಗೆ ಹೊಸ ಚೈತನ್ಯ ನೀಡಿದ ಹಿರಿಜೀವ. ಕುವೆಂಪುರವರು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಾಗ ಮಂಜಪ್ಪಗೌಡರೊಡನೆ ಕಾಲುನಡಿಗೆಯಲ್ಲಿಯೇ ಇಂಗ್ಲಾದಿಗೆ ಹೊರಟಿದ್ದರು. ಮಧ್ಯಾಹ್ನದ ಬಿಸಿಲು ಹಸಿರು ವನಗಳ ಮೇಲೆ ಹೊಳೆದಿತ್ತು. ಆಗ ಗೌಡರು ದಾರಿಯಲ್ಲಿ ಇತರ ಅನೇಕ ಬುದ್ಧಿವಾದಗಳೊಂದಿಗೆ ‘Long Fellow’ ಕವಿಯ "A Psalm Of Life” ಹೇಳಿ ಕುವೆಂಪುರವರ ಮನಸ್ಸಲ್ಲಿ ಸಾಹಿತ್ಯದ ಬೀಜ ಬಿತ್ತಿದರು.
೧೯೧೬ ಕುಪ್ಪಳ್ಳಿಯ ಮನೆಯಲ್ಲೇ ಖಾಸಗಿ ಮೇಷ್ಟ್ರಮೂಲಕ ಆರಂಭಿಕ ವಿಧ್ಯಾಭ್ಯಾಸ, ೧೯೧೮ ರವರೆಗೆ ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ೧೯೧೯ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಉತ್ತೀರ್ಣ. ೧೯೨೧ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಮತ್ತು ಮುಂದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಶಿಕ್ಷಣ ಪಡೆದಿದ್ದು, ೧೯೨೬ ಮೈಸೂರು ರಾಮಕೃಷ್ಣಾಶ್ರಮದಿಂದ ಸ್ವಾಮಿ ಸಿದ್ಧೇಶ್ವರಾನಂದರ ದರ್ಶನ ಹಾಗೂ ಅವರ ಪ್ರೋತ್ಸಾಹದಿಂದ ಶ್ರೀರಾಮಕೃಷ್ಣಾಶ್ರಮ ಸೇರಿಕೊಂಡರು. ೧೯೨೭ ರಲ್ಲಿ ಬಿ.ಎ. ಪದವಿ ಹಾಗೂ ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪ್ರಾರಂಭ.
ಕುವೆಂಪುರವರನ್ನು ಕನ್ನಡಕ್ಕೆ ದಕ್ಕಿಸಿದ್ದು ಐರಿಷ್ ಕವಿ ‘ಜೇಮ್ಸ್ ಹೆನ್ರಿ ಕಸಿನ್ಸ್’. ಅವರು ೧೯೨೪ ರಲ್ಲಿ ಮೈಸೂರಿಗೆ ಬಂದಿದ್ದರು. ಶಾಲಾ ವಾರ್ಷಿಕೋತ್ಸವದಂದು ಬರೆದಿದ್ದ ಕವನವೊಂದನ್ನು ಕೇಳಿ ಅಪಾರವಾಗಿ ಪ್ರಶಂಸಿಸಿದ್ದ ಇತಿಹಾಸದ ಪ್ರೊಫೆಸರ್ ಡಾ. ಎಂ. ಎಚ್. ಕೃಷ್ಣಯ್ಯಂಗಾರ್ ಅವರ ಸಲಹೆ ಮೇರೆಗೆ ಕುವೆಂಪುರವರು ಕಸಿನ್ಸ್ ಅವರನ್ನು ಸಂದರ್ಶಿಸಿದ್ದು ಕುವೆಂಪುರವರ ಬದುಕಿಗಷ್ಟೇ ಅಲ್ಲಾ ಕರ್ನಾಟಕದ ಪಾಲಿಗೂ ಭಾಗ್ಯದ ಬಾಗಿಲು ತೆರೆಸಿತು. ಭೋರ್ಗರೆದು ಮುನ್ನುಗ್ಗಿದ್ದ ಕುವೆಂಪುರವರ ಭಾವ ಪ್ರವಾಹ ಇಂಗ್ಲೀಷಿನಿಂದ ಕನ್ನಡಕ್ಕೆ ಹೊರಳಿ, ಕುವೆಂಪುರವರ ಕೀರ್ತಿ ಅಮರವಾಯಿತು. ಕುವೆಂಪುರವರ ಇಂಗ್ಲೀಷ್ ಭಾಷಾ ಮೋಹ ಮೀರಿ ಕನ್ನಡದಲ್ಲೇ ಬರೆಯಬೇಕೆಂದು ಪ್ರೇರಣೆ ನೀಡಿ ದಿಕ್ಸೂಚಿಯಾದವರೇ ಜೇಮ್ಸ್ ಹೆನ್ರಿ ಕಸಿನ್ಸ್.
ನಿಮಗೆ ನಾನಾವ ರೀತಿಯಿಂದೆನಿತು ಋಣಿ… ಎಂದು ಶುರುವಾಗುವ ಕುವೆಂಪುರವರು ತಮ್ಮ ಗುರುಗಳಾದ ಸಿದ್ಧೇಶ್ವರಾನಂದ ಸ್ವಾಮೀಜಿಗಳಿಗೆ ಬರೆದಿರುವ ಕವಿತೆ ಅವರೊಳಗಿದ್ದ ಗುರುಗಳೆಡೆಗಿನ ಭಕ್ತಿ, ಧನ್ಯತಾ ಭಾವವನ್ನು ಸೂಚಿಸುತ್ತದೆ. ೧೫-೦೨-೧೯೨೬ರಲ್ಲಿ ಕನ್ನಡ ಖ್ಯಾತ ಕವಿ ನಾ.ಕಸ್ತೂರಿರವರು ಸ್ವಾಮಿ ವಿವೇಕಾನಂದರ ಜನ್ಮೋತ್ಸವದಲ್ಲಿ “LET THE SPIRIT OF PARAMAHAMSA DESCEND ON Mr. PUTTAPPA” ಎಂದು ಹೇಳಿದ್ದರು.
ಕುವೆಂಪುರವರು ಕನ್ನಡದ ಕವನ ‘ಪೂವು’ (೧೯೨೪) ಈ ಕವನವನ್ನು ಬರೆದ ಮೊದಮೊದಲಲ್ಲಿ ಅವರಲ್ಲಿದ್ದ ಸಾಧನೆಯ ಭಾವ ಹಾಗೂ ರಾಮಾಯಣ ದರ್ಶನಂ ಬರೆದ ನಂತರದಲ್ಲಿದ್ದ ಅಭಿಪ್ರಾಯವನ್ನು ಅವರೇ ಹೀಗೆ ಹೇಳಿದ್ದಾರೆ .“ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ನನಗನ್ನಿಸುತ್ತದೆ, ಒಂದು ನೂತನ ಶಕವನ್ನೇ ತರುವಂತೆ, ಸಂಪ್ರದಾಯ ದೂರವಾದ ಬೇರೆಯ ರೀತಿಯಲ್ಲಿ, ಸ್ಪೂರ್ತಿಗೊಂಡಾಗ ನನ್ನ ನುಡಿಯಲ್ಲಿಯೇ ನಾನು ಬರೆಯಬೇಕೆಂದು ಸ್ವಲ್ಪ ಕಾಲದಿಂದಲೂ ಯಾವುದಕ್ಕಾಗಿ ಹೆಣಗುತ್ತಿದ್ದೆನೋ ಅದು ಸಾರ್ಥಕವಾಗಿರುವ ಒಂದು ಅತ್ಯಂತ ಸುಮೂಲ್ಯ ದಿನ. ನಾನು ಸಂಪ್ರದಾಯದ ವಿರುದ್ಧ ದಂಗೆಯೆದ್ದಿದ್ದೇನೆ, ಯಾವ ಅರ್ಥದಲ್ಲಿ ಎಂದರೆ, ನನ್ನದೇ ಆಗಿರುವ ಛಂದಸ್ಸು ಇತ್ಯಾದಿಗಳನ್ನು ಅನುಸರಿಸುವಲ್ಲಿ, ಕಾವ್ಯದ ವಸ್ತು ಭಾವನೆಗಳೆಲ್ಲ ನನ್ನವೇ, ಕನ್ನಡದಲ್ಲಿ ಅಲ್ಲದಿದ್ದರೆ ಅವನ್ನೆಲ್ಲ ಇಂಗ್ಲೀಷಿನಲ್ಲಿಯೇ ಬರೆಯುತ್ತಿದ್ದೆ. ಒಂದು ಪುಟ್ಟ ಸುಂದರ ಕವನ ರಚಿಸಿದೆ. ಅದಕ್ಕೆ ‘ಪೂವು’ ಎಂದು ಹೆಸರು ಕೊಟ್ಟಿದ್ದೇನೆ. ನನ್ನ ಸ್ನೇಹಿತರೂ, ಕೆಲವು ಪರಿಚಿತರೂ ಅದನ್ನು ಹೊಗಳಿದ್ದೇ ಹೊಗಳಿದ್ದು! ಅನೇಕರು ಅದರ ನಾದ ಮಾಧುರ್ಯಕ್ಕಾಗಿ, ಕೆಲವರು ಅದರ ವಸ್ತು ಭಾಗಗಳಿಗಾಗ, ಒಬ್ಬಿಬ್ಬರು ಅದರ ನೂತನ ಶೈಲಿಗಾಗಿ”....... "ಪೂವು" ಕವನವನ್ನು ಈಗ ನೋಡಿದರೆ ಕನಿಕರ ಪಡುವಂತಿದೆ! ಅಷ್ಟು ಬಡಕು ಅಷ್ಟು ಸೊಂಟ ಮುರುಕ! ಕನ್ನಡ ಭಾಷೆಯೂ ಅದುವರೆಗಿನ ನನ್ನ ಇಂಗ್ಲಿಷ್ ಕವನಗಳ ಭಾಷೆಯ ಪ್ರಯೋಗದ ಮುಂದೆ ಬರಿಯ ಅಂಬೆಗಾಲು, ತಿಪ್ಪತಿಪ್ಪದಂತಿದೆ! ವಿದೇಶೀ ಭಾಷೆಯನ್ನೇ ಅಷ್ಟಾದರೂ ಸಮರ್ಥವಾಗಿ ಬಳಸಬಲ್ಲ ಕವಿಗೆ ತನ್ನ ನುಡಿಯನ್ನೇ ಸಾಧಾರಣವಾಗಿಯಾದರೂ ಬಳಸಲಾರದಷ್ಟು ದಾರಿದ್ರ್ಯವಿದ್ದುದನ್ನು ನೋಡಿದರೆ ನಮ್ಮವಿಧ್ಯಾಭ್ಯಾಸ ಪದ್ಧತಿ ಎಂತಹ ಗುಲಾಮಗಿರಿಯಲ್ಲಿತ್ತು ಎಂಬುದು ಗೊತ್ತಾಗಿತ್ತದೆ”
೩೦-೦೪-೧೯೩೭ರಲ್ಲಿ ದೇವಂಗಿಯ ಹೇಮಾವತಿಯವರೊಡನೆ ವಿವಾಹ ಮಹೋತ್ಸವ ಜರುಗಿತು. ಕುವೆಂಪುರವರು ತಮ್ಮ ಪತ್ನಿಗೆ ಬರೆದ ಕವಿತೆಗಳು ‘ಪ್ರಿಯಸತಿಗೆ’, ‘’ನನ್ನವಳಿಗೆ’, ‘ಗೃಹದೇವತೆಗೆ’, ‘ಹೇಮಾ ರೂಪಸಿಗೆ’,’ಸೌಭಾಗ್ಯವತಿಗೆ’, ‘ಯಾವ ಜನ್ಮದ ಮೈತ್ರಿ’. ೧೫-೦೯-೧೯೮೨ರಲ್ಲಿ ಕಾಲವಾದ ನಂತರ ಅವರ ಚಿತ್ರವನ್ನು ನೋಡುವಾಗ “ನನಗಾಗಿ ಕಣ್ಣೀರು ಹಾಕೋದನ್ನ ನಿಲ್ಲಿಸಿ, ನಾನೆಲ್ಲೂ ಹೋಗಿಲ್ಲ, ಇಲ್ಲೇ ನಿಮ್ಮ ಜೊತೆಯಲ್ಲೇ ಇದ್ದೇನೆ” ಎಂಬ ಅಂತರ್ವಾಣಿಯನ್ನು ಕೇಳಿಸಿಕೊಂಡರಂತೆ!!!
೮-೯-೧೯೩೮ ರಲ್ಲಿ, ಮೊದಲನೆಯ ಮಗು ಕೆ.ಪಿ.ಪೂರಣಚಂದ್ರ ತೇಜಸ್ವಿಯವರು ಹುಟ್ಟಿದಾಗ, ಅವರಿಗಾಗಿ ಬರೆದ ಕವನ ‘ತನುಜಾತನಹುಹಾತ್ಮಜಾತನುಂ’ ತೇಜಸ್ವಿಯವರಿಗೆ ಹೇಳಿ ಮಾಡಿಸಿದ ಹಾಗಿತ್ತು. “ಕುವೆಂಪುರವರು ರಚಿಸಿದ ಶ್ರೇಷ್ಠ ಕೃತಿ ತೇಜಸ್ವಿ” ಎಂದು ಬೇಂದ್ರೆಯವರು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ! ೨-೫-೧೯೪೧ ರಲ್ಲಿ ದ್ವಿತೀಯ ಪುತ್ರ ಕೋಕಿಲೋದಯ ಚೈತ್ರ, ೩-೫-೧೯೪೧ರಲ್ಲಿ ಪ್ರಥಮ ಪುತ್ರಿ ಇಂದುಕಲಾ, ೬-೨-೧೯೪೫ರಲ್ಲಿ ದ್ವಿತೀಯ ಪುತ್ರಿ ತಾರಿಣಿಯವರ ಜನನ. ಕುವೆಂಪುರವರ ‘ಮಂತ್ರ ಮಾಂಗಲ್ಯ’ ವಿಧಾನದಲ್ಲಿ ಜರುಗಿದ ಮೊದಲ ವಿವಾಹದ ಜೋಡಿ ಕುವೆಂಪುರವರ ಪುತ್ರ ಕೆ.ಪಿ.ಪೂರಣಚಂದ್ರ ತೇಜಸ್ವಿ ಮತ್ತು ರಾಜೇಶ್ವರಿಯವರದ್ದು (೧೭-೧೧-೧೯೬೬). ಮುಂದೆ ಕುವೆಂಪುರವರ ಎಲ್ಲಾ ಮಕ್ಕಳೂ ಮಂತ್ರಮಾಂಗಲ್ಯ ವಿಧಾನದಲ್ಲಿಯೇ ಮದುವೆಯಾದರು ಎನ್ನುವುದು ವಿಶೇಷ
ತೇಜಸ್ವಿಯವರೇ ಹೇಳಿದಂತೆ ಕುವೆಂಪು ಫೋಟೋಗ್ರಾಫರಿಗೆ ಹೇಳಿ ಮಾಡಿಸಿದ ಮಾಡೆಲಿನಂತಿದ್ದರು “ಕಣ್ಣು ಬರೀ ಇಂದ್ರೀಯವಲ್ಲೋ, ಸಾಕ್ಷಾತ್ಕಾರದ ಅಪರೋಕ್ಷದ ಅನುಭೂತಿಯ ಒಂದಂಗ!” ಕ್ಯಾಮರಾದ ಬಗ್ಗೆ ಕುವೆಂಪುರವರು ವಿವರಿಸಿದ ಬಗೆ.
೧೯೨೨ ರಲ್ಲಿ ಮೊದಲ ಇಂಗ್ಲಿಷ್ ಕವನ ಸಂಕಲನ "ದಿ ಬಿಗಿನರ್ಸ್ ಮ್ಯೂಸ್", ೧೯೨೪ ರಲ್ಲಿ ಕನ್ನಡದ ಮೊದಲ ಕೃತಿ "ಅಮಲನ ಕಥೆ" ಪ್ರಕಟವಾದವು. ೧೯೨೮ ರಲ್ಲಿ ನಡೆದ ವಿದ್ಯಾರ್ಥಿ ಕವಿಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು, ೧೯೩೦ರಲ್ಲಿ ಮೊಟ್ಟಮೊದಲನೆಯ ಕವನ ಸಂಕಲನ "ಕೊಳಲು" ಪ್ರಕಟವಾಯಿತು, ೧೯೩೩ ರಲ್ಲಿ ಹುಬ್ಬಳ್ಳಿಯಲ್ಲಿ ನೆಡೆದ ೧೯ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು, ೧೯೩೬ ರಲ್ಲಿ ಪ್ರಥಮ ಮಹಾಕಾದಂಬರಿ "ಕಾನೂರು ಹೆಗ್ಗಡತಿ" ಮತ್ತು ಚಿತ್ರಾಂಗದಾ ಖಂಡಕಾವ್ಯ ಪ್ರಕಟಣೆಗೊಂಡವು, ೧೯೪೯- ೧೯೫೧ ರಲ್ಲಿ ಮಹಾಕಾವ್ಯ "ಶ್ರೀ ರಾಮಾಯಣ ದರ್ಶನಂ"ನ ಮೊದಲ ಮತ್ತು ಎರಡನೆಯ ಮಹಾಸಂಪುಟಗಳು ಬಿಡುಗಡೆಗೊಂಡವು ಈ ಮಹಾಕಾವ್ಯಕ್ಕೆ ೧೯೫೫ ರಲ್ಲಿ ಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೬೮ ರಲ್ಲಿ ಕನ್ನಡದಲ್ಲಿ ಮೊದಲನೆಯ "ಜ್ಙಾನಪೀಠ ಪ್ರಶಸ್ತಿ" ದೊರೆಯಿತು, ೧೯೫೬ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿಲಿಟ್ ಸ್ವೀಕರಿಸಿದರು. ಇದೇ ವರ್ಷದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನೇಮಕ ಮತ್ತು ಮೈಸೂರಿನಲ್ಲಿ ನಡೆದ ೩೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು, ೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೩೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು, ೧೯೫೮ ರಲ್ಲಿ ರಾಷ್ಟ್ರಪತಿಗಳಿಂದ "ಪದ್ಮಭೂಷಣ" ಪ್ರಶಸ್ತಿ ಹಾಗೂ ೧೯೬೭ ರಲ್ಲಿ ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಸ್ವೀಕರಿಸಿದ್ದು ಒಂದು ಮೈಲಿಗಲ್ಲು. ೧೯೭೯ ರಲ್ಲಿ ಕನ್ನಡದ ಭಾಷೆ ಸಾಹಿತ್ಯಗಳಿಗೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ಸಾಹಿತ್ಯಕಾಡಮಿ ಪ್ರಶಸ್ತಿ, ೧೯೮೫ ರಲ್ಲಿ ಮೈಸೂರಿನಲ್ಲಿ ಮೊದಲ ವಿಶ್ವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು, ೧೯೮೮ ರಲ್ಲಿ ರಾಷ್ಟ್ರಪತಿಗಳಿಂದ "ಪದ್ಮವಿಭೂಷಣ" ಹಾಗೂ ಕರ್ನಾಟಕ ಸರ್ಕಾರದಿಂದ "ಪಂಪ" ಪ್ರಶಸ್ತಿ ಸ್ವೀಕಾರ, ೧೯೯೨ ರಲ್ಲಿ "ಕರ್ನಾಟಕ ರತ್ನ" ಪರಶಸ್ತಿ ಪ್ರದಾನ, ೧೯೯೫ ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ "ನಾಡೋಜ" ಪ್ರಶಸ್ತಿ ಪ್ರದಾನ.
ಅವರು ಜ್ಞಾನಪೀಠ ಪ್ರಶಸ್ತಿ ಪಡೆದು, ಅವರ ಮನೆಗೆ ಹಿಂದಿರುಗಿದಾಗ ಒಂದಷ್ಟು ಹೆಂಗಸರು ಅವರಿಗೆ ಆರತಿ ಎತ್ತಿದರು. ಅಲ್ಲೇ ಇದ್ದ ಅವರ ತಾಯಿ ಅವರಿಗೆ ಕೈ ಮುಗಿಯುತ್ತಾರೆ. ಆಗ ಕುವೆಂಪು "ಅಮ್ಮಾ ನಾನು ಎಷ್ಟೇ ಬೆಳೆದರು ನಿನ್ನ ಮಗನೇ. ಕೈ ಮುಗಿಯಬೇಡ. ಅದು ಶ್ರೇಯಸ್ಕರವಲ್ಲ." ಎನ್ನುತ್ತಾರೆ. ಅದಕ್ಕೆ ಅವರ ತಾಯಿ "ಕೈ ಮುಗಿದದ್ದು ನಿನಗಲ್ಲ. ನಿನ್ನೊಳಗೆ ಅವತರಿಸಿರುವ ಶಾರದಾಂಬೆಗೆ" ಎನ್ನುತ್ತಾರೆ. ಆಗ ಕುವೆಂಪುರವರ ಕಣ್ಣು ಒದ್ದೆಯಾಗುತ್ತದೆ.
೧೧-೧೧-೧೯೯೪ ರಂದು ಯುಗದ ಕವಿ "ವಿಷ್ವ ಮಾನವತ್ವದ ಕಿರುದೋಣಿ" ಮುಳುಗಿತು...... ಅಂದು ಕುಪ್ಪಳ್ಳಿಯ ಕವಿಶೈಲದ ನೀರವತೆಯಲ್ಲಿ "ಭಸ್ಮಶ್ರೀಯಾಗುಳಿದ ಧನ್ಯಶ್ರೀ!!!"
"ಅಮ್ಮನ ಮಡಿಲೊಳು ಮಲಗಿರುವೆನಗೆ
ಗುಮ್ಮನ ಭಯಬಿಹುದೇನಣ್ಣಾ
ಅಮೃತದ ಹೊಳೆಯೊಳು ತೇಲುವ ನನಗೆ
ಮೃತ್ಯುವ ಭಯವಿಹುದೇನಣ್ಣಾ?"
ಕುವೆಂಪು ಅವರ ಮುಗ್ಧತನ, ಆದರ್ಶಪ್ರಾಯ ವ್ಯಕ್ತಿತ್ವ, ಸಮಾನತೆಯ ಸಮಾಜಕ್ಕಾಗಿ ಅವರು ನೆಡೆಸಿದ ಚಿಂತನೆ, ಯುವ ಜನಾಂಗವನ್ನು ಜಾಗೃತಗೊಳಿಸಿದ ರೀತಿ ಈ ಜಗತ್ತು ಕಂಡ ಅತ್ಯದ್ಭುತ ಕವಿ.
"ವಿಚಾರ ಕ್ರಾಂತಿ ಚಿರಾಯುವಾಗಲಿ!
ಯುವ ಜನಾಂಗಕ್ಕೆ ಇದು ಮಾರ್ಗದರ್ಶಿಯಾಗಲಿ!
ವಿಜ್ಞಾನ ಸುಜ್ಞಾನಗಳಿಗೆ ಜಯವಾಗಲಿ!!"
"ಎಲ್ಲಾದರು ಇರು, ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು......."
~*~*~*~*~*~* ಗಗನಚುಕ್ಕಿ* ~*~*~*~