ಆವೃತ್ತಿಗಳು
Kannada

ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

ವಿಸ್ಮಯ

YourStory Kannada
12th May 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಘಟನೆ 01:

ಯಾವುದೋ ಕಾರಣಕ್ಕೆ, ಯಾರೋದೊ ತಪ್ಪಿಗೆ ಮೂಕರಾಗಿ, ಕಿವುಡರಾಗಿ ಹುಟ್ಟುವ ಜೀವಗಳಿಗೆ ಕೊನೆಯವರೆಗೂ ದುಖ: ತಪ್ಪಿದ್ದಲ್ಲ. ಹುಟ್ಟುವಾಗ ನೋಡಲು ಎಲ್ಲರ ಮಗನಂತಿದ್ದ ಮಗ. ಆದರೆ ಆತನಿಗೆ ಕಿವಿ ಕೇಳುವುದಿಲ್ಲ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಿತು. ಕಿವಿ ಕೇಳದವರಿಗೆ ಮಾತು ಬಾರದು ಎಂಬ ಅನುಮಾನವಿತ್ತು. ಅದು ನಿಜವಾಯಿತು. ಮುದ್ದಿನ ಮಗನನ್ನು ಸಾಕಿ ದೊಡ್ಡವನಾಗಿ ಮಾಡಿದೆವು. ಶಾಲೆಗೆ ಸೇರಿಸಲೂ ದೊಡ್ಡ ಸಮಸ್ಯೆಯಾಯಿತು. ಏನೋ, ಹೇಗೋ ಮಾಡಿ ಒಂದಷ್ಟು ಓದಿಸಿದೆವು. ಆನಂತರ ಆತನಿಗೊಂಡು ಮದುವೆ ಮಾಡಬೇಕು ಎಂದು ತೀರ್ಮಾನಿಸಿದೆವು. ಆದರೆ ಅದು ಶಾಲೆಗೆ ಸೇರಿಸಿದ್ದಕ್ಕಿಂತ ದೊಡ್ಡ ಸವಾಲಾಗಿತ್ತು. ಇವನಿಗೆ ಯಾರು ಹೆಣ್ಣು ಕೊಡುತ್ತಾರೆ ಎಂಬ ಪ್ರಶ್ನೆಯೂ ಕಾಡುತ್ತಿರುತ್ತದೆ.

***

ಘಟನೆ 02: 

ಇದು ವಿವಾಹ ಮಾಡಲು ಮುಂದಾಗುವ ಯುವಕನೊಬ್ಬನ ತಂದೆ ತಾಯಿಯರ ಅಳಲು. ಸಾಮಾನ್ಯರಂತಿದ್ದರೆ ಪೋಷಕರು ಆತಂಕಪಡುತ್ತಿರಲಿಲ್ಲ. ಆದರೆ ಯುವಕ ಕಿವುಡ ಮತ್ತು ಮೂಗನಾಗಿದ್ದ. ನಮಗೆ ವಿವಾಹವಾಗಿ ಎಷ್ಟೋ ವರ್ಷಗಳಾಗಿದ್ದರೂ ಮಕ್ಕಳೇ ಹುಟ್ಟಿರಲಿಲ್ಲ. ನಾವು ಶ್ರೀಮಂತರು. ಆದರೆ ಮಕ್ಕಳು ಇಲ್ಲ ಎಂಬ ಕೊರಗು. ಅಂತೂ ಇಂತೂ ಏಳು ವರ್ಷದ ನಂತರ ಮಗಳು ಹುಟ್ಟಿದಳು. ಆಗ ನಮಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಈ ಸಂತೋಷ ಕೆಲವೇ ತಿಂಗಳಲ್ಲಿ ಮರೆಯಾಯಿತು. ಆಕೆ ಕಿವುಡ ಮತ್ತು ಮೂಗಿ ಎಂದು ತಿಳಿಯಿತು. ಅಂತೂ ದೊಡ್ಡವಳಾದಳು. ಆಕೆ ತಿಳಿಯುವಷ್ಟು ಶಾಲೆಗೆ ಕಳಿಸಿದೆವು. ಬೆಳೆದ ಮಗಳನ್ನು ಎಷ್ಟು ದಿನ ಮನೆಯಲ್ಲಿ ಉಳಿಸಿಕೊಳ್ಳುವುದು. ಮದುವೆ ಮಾಡಲೇಬೇಕು ಎಂದು ನಿರ್ಧರಿಸಿದೆವು. ಆದರೆ ಇವಳಿಗೆ ಯಾರು ಗಂಡು ಕೊಡುತ್ತಾರೆ.

***

image


ಇದು ಮೂಗ ಮತ್ತು ಕಿವುಡ ಹೆಣ್ಣು ಮಗಳ ತಂದೆ ತಾಯಿ ನೋವು.

ಇಂತಹ ದುಃಖಹೊತ್ತು ಬಂದ ಪೋಷಕರಿಗೆ ಹೊಸ ದಾರಿ ತೋರಿದೆ, ಬೆಂಗಳೂರಿನ ಹಲಸೂರಿನಲ್ಲಿರುವ ‘ಸ್ವಯಂವರ ಟ್ರಸ್ಟ್’. ವಾಕ್ ಮತ್ತು ಶ್ರವಣ ತೊಂದರೆ ಇರುವ ಜೋಡಿಗಳಿಗೆಂದೇ ವರ್ಷಕ್ಕೆ ಒಂದು ಬಾರಿ ವಿವಾಹ ಆಯೋಜಿಸಿ ಮೌನ ಜೀವಿಗಳಿಗೆ ಹೊಸ ಬಾಳಿನ ದಾರಿ ತೋರಿದೆ. ಕಿವುಡರು ಮತ್ತು ಮೂಗರು ಎಂದು ಮೂಗು ಮುರಿಯುತ್ತಿದ್ದವರು ಇಂದು ಇವರ ಸಹಬಾಳ್ವೆಯ ಜೀವನ ನೋಡಿ ಆನಂದ ಪಟ್ಟಿದ್ದಾರೆ.

ಇದನ್ನು ಓದಿ: ಮಹಿಳಾ ಕ್ರಿಕೆಟ್ ನ ಮಿರಾಕಲ್ ಮಿಥಾಲಿ ರಾಜ್

ಎರಡು ದಿನಗಳ ಸ್ವಯಂವರ ನಡೆಯುತ್ತೆ..!

ಇಲ್ಲಿ ಮೂಗ ಮತ್ತು ಕಿವುಡ ಜೋಡಿಗೆ ಸ್ವಯಂವರ ನಡೆಯುತ್ತೆ. ಆದರೆ ಇದು ಎರಡು ದಿನಗಳ ಸಮಾರಂಭ. ವಿವಾಹ ನಡೆಯುವ ಸ್ಥಳಕ್ಕೆ ವಿವಾಹಾಕಾಂಕ್ಷಿಗಳು ತಮ್ಮ ಪೋಷಕರ ಜತೆ ಬಂದು ಸೇರುತ್ತಾರೆ. ಮೊದಲ ದಿನ ಕಿವುಡ ಹಾಗೂ ಮೂಗ ಯುವಕ/ಯುವತಿ ತನಗಿಷ್ಟವಾಗುವ ಕಿವುಡ ಮತ್ತು ಮೂಗ ಯುವತಿ/ಯುವಕರನ್ನು ಪೋಷಕರ ಸಮ್ಮುಖದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಎಲ್ಲಾ ಮಾತು ಕತೆ ನಂತರ ಅವರು ವಿವಾಹಕ್ಕೆ ಒಪ್ಪಬೇಕು. ಮಾರನೇ ದಿನ ಈ ಜೋಡಿಗಳಿಗ ವಿವಾಹ ಮಾಡಿಸಲಾಗುತ್ತೆ.

ಏಕ ವ್ಯಕ್ತಿಯ ಪರಿಶ್ರಮ

ಈ ಸ್ವಯಂವರದ ರೂವಾರಿ ಸಿ.ಎನ್.ವಿಜಯರಾಜ್ ಎಂಬುವರು. ಯಾವುದೇ ಸಂಘ ಸಂಸ್ಥೆ,ವ್ಯಕ್ತಿಗಳು ಮತ್ತು ಸರ್ಕಾರದ ನೆರವು ಇಲ್ಲದೆ ಕಳೆದ 15 ವರ್ಷಗಳಿಂದ ಸ್ವಯಂವರ ನಡೆಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ವಾಕ್ ಶ್ರವಣ ದೋಷದ ಜೋಡಿಗಳಿಗೆ ಹೊಸ ಜೀವನ ಕಲ್ಪಿಸುತ್ತಲೇ ಬದುಕಿನ ಸಾರ್ಥಕತೆ ಕಂಡುಕೊಂಡಿದ್ದಾರೆ.

image


ಪ್ರತಿ ವರ್ಷ ಸ್ವಯಂವರ ಏರ್ಪಡಿಸಲು ಏನಿಲ್ಲವೆಂದರೂ 5ರಿಂದ 6 ಲಕ್ಷ ವೆಚ್ಚವಾಗುತ್ತದೆ. ಇಷ್ಟೊಂದು ಹಣವನ್ನು ವಿಜಯರಾಜ್ ಅವರು ಭರಿಸುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರು ತಮ್ಮ ಕಾರು, ಒಂದು ಮನೆಯನ್ನೂ ಮಾರಿದ್ದಾರೆ. ಸ್ವಯಂವರ ಟ್ರಸ್ಟ್ ಕೇವಲ ವಿವಾಹ ಆಯೋಜಿಸುವುದರ ಜತೆಗೆ ವಧು ವರರಿಗೆ ಬಟ್ಟೆ, ತಾಳಿ, ಕಾಲುಂಗುರ, ಮನೆಗೆ ಬೇಕಾದ ಪಾತ್ರೆಗಳು, ವಧು ವರರ ಕಡೆಯವರಿಗೆ ವಿವಾಹದ ದಿನ ಊಟದ ವ್ಯವಸ್ಥೆ ಮಾಡಲಾಗುತ್ತದೆ.

image


ಮಹಿಳಾ ದಿನವೇ ಪ್ರೇರಣೆಯಂತೆ..!

ಈ ರೀತಿ ವಿವಾಹ ಆಯೋಜಿಸಲು ಮಹಿಳಾ ದಿನವೊಂದು ಪ್ರೇರಣೆ ನೀಡಿತು ಎನ್ನುತ್ತಾರೆ ವಿಜಯರಾಜ್. 2000ರಲ್ಲಿ ಶ್ರವಣದೋಷ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 45 ರಿಂದ 50 ವರ್ಷದ ವಾಕ್ ಮತ್ತು ಶ್ರವಣ ದೋಷ ಹೊಂದಿದ ಯುವಕ ಮತ್ತು ಯುವತಿಯರು ಅವಿವಾಹಿತರಾಗಿ ಉಳಿದಿದ್ದು ವಿಜಯರಾಜ್ ಅವರ ಗಮನಕ್ಕೆ ಬಂತು. ಅಂದೇ ಇವರಿಗಾಗಿ ಯಾಕೆ ವಿವಾಹ ಆಯೋಜಿಸಬಾರದು ಎಂದುಕೊಂಡರು. ಅದೇ ವರ್ಷ ಸ್ವಯಂವರ ಕಾರ್ಯಕ್ರಮ ಆರಂಭವಾಯಿತು.

ಬದುಕು ಪರಿಪೂರ್ಣವಾಗಬೇಕು ಅಂತಾರೆ ವಿಜಯರಾಜ್..

ಮೂಗ ಮತ್ತು ಕಿವುಡ ಆಗುವುದು ಅವರ ಆಯ್ಕೆಯಲ್ಲ. ಅವರದಲ್ಲದ ತಪ್ಪಿಗೆ ಅವರು ಜೀವನ ಪರ್ಯಂತ ಪರಿತಪಿಸುತ್ತಾರೆ. ಆದರೆ ಅದೇ ಕಾರಣಕ್ಕೆ ಅವರು ಜೀವನದ ಆನಂದವನ್ನು ಕಳೆದುಕೊಳ್ಳಬಾರದು. ಅವರ ಬದುಕೂ ಪರಿಪೂರ್ಣವಾಗಬೇಕು. ಅವರಿಗೂ ಒಂದು ಹೊಸ ಬದುಕು ಸಿಗಬೇಕು. ಜೀವನದ ಒಬ್ಬಂಟಿ ಪಯಣದಲ್ಲಿ ಜೊತೆಗಾರರು ಸಿಗಬೇಕು. ಕಿವುಡ ಮತ್ತು ಮೂಗರೆಂದರೆ ಅವರಿಗೂ ಭಾವನೆಗಳಿರುತ್ತವೆ. ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಂತಾರೆ ಅವ್ರು..

ಈ ಕಾಲದಲ್ಲೂ ಇಂತಹ ಅಪರೂಪದ ವ್ಯಕ್ತಿಗಳು ಇರುತ್ತಾರೆ ಅಂದ್ರೆ ನಿಜಕ್ಕೂ ಸಂತಸ ವಿಷಯ.. ಬೇರೆಯವರ ಬದುಕಿನ ಬಗ್ಗೆ ತಲೆ ಕೇಡಿಸಿಕೊಳ್ಳದ ವ್ಯಕ್ತಿಗಳ ಮಧ್ಯೆ ಇವರು ನಕ್ಷತ್ರದಂತೆ ಮಿಂಚುತ್ತಿದ್ದಾರೆ.

ಇದನ್ನು ಓದಿ:

1. ಕ್ರೀಡಾಪಟುಗಳ ಫಿಟ್ನೆಸ್ ಗುರು ರಾಜಮಣಿ

2. ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್​​ಗಳಿಗೇ ಟೀಚರ್....

3. ನಾವು ಯಾರಿಗೂ ಕಮ್ಮಿ ಇಲ್ಲಿ – ಚಿಕ್ಕವರೆಲ್ಲಾ ಜಾಣರಲ್ಲ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories