2ನೇ ಹಂತದ ನಗರಗಳತ್ತ ಹೂಡಿಕೆದಾರರನ್ನು ಸೆಳೆಯಲು ಯತ್ನ
ಅಗಸ್ತ್ಯ
‘ಇನ್ವೆಸ್ಟ್ ಕರ್ನಾಟಕ 2016’ಕ್ಕೆ ದಿನಗಣನೆ ಆರಂಭವಾಗಿದೆ. ದೇಶ-ವಿದೇಶಿ ಬಂಡವಾಳ ಹೂಡಿಕೆದಾರರಿಗೆ ರೆಡ್‍ಕಾರ್ಪೆಟ್ ಸ್ವಾಗತ ಕೋರಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಪ್ರಮುಖವಾಗಿ ಸಮಾವೇಶ ನಡೆಯಲಿರುವ ಬೆಂಗಳೂರಿನಲ್ಲಿ ಹೂಡಿಕೆದಾರರಿಗೆ ಯಾವುದೇ ಕೊರತೆ ಕಾಣಿಸಿಕೊಳ್ಳದಂತೆ ಮಾಡಲು ಎಲ್ಲವನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಹಾಗೆಯೇ, ಸಮಾವೇಶದಲ್ಲಿ ಯಾವೆಲ್ಲಾ ಯೋಜನೆಗಳಿಗೆ ಬಂಡವಾಳ ಹೂಡಿಸಬೇಕು ಎಂಬ ಬಗ್ಗೆಯೂ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಂತೆ ಅದನ್ನು ಹೂಡಿಕೆದಾರರ ಮುಂದಿಡಲು ನಿರ್ಧರಿಸಿದ್ದು, ಯೋಜನೆಗಳ ವಿವರ ಯೋಜನಾ ವರದಿ ಸಿದ್ಧಪಡಿಸಿಕೊಳ್ಳಲಾಗಿದೆ.
4 ವರ್ಷಗಳ ನಂತರ ನಡೆಸಲಾಗುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ರೂಪಿಸಿರುವ ಪ್ರಮುಖ ಮತ್ತು ಬೃಹತ್ ಯೋಜನೆಗಳ ಬಗ್ಗೆ ಹೂಡಿಕೆದಾರರು ಒಲವು ತೋರುವಂತೆ ಮಾಡಲು ನಿರ್ಧರಿಸಲಾಗಿದೆ. ಒಟ್ಟು 145 ಪ್ರಮುಖ ಯೋಜನೆಗಳ ಪಟ್ಟಿ ಸಿದ್ಧಡಿಸಲಾಗಿದ್ದು, ಅವುಗಳಿಗೆ ಬಂಡವಾಳ ಹೂಡುವಂತೆ ಹೂಡಿಕೆದಾರರಲ್ಲಿ ಕೋರಲಾಗುತ್ತದೆ. ಹಾಗೆಯೇ, ಬಂಡವಾಳ ಹೂಡಿದರೆ ಹೂಡಿಕೆದಾರರಿಗೆ ಏನು ಪ್ರಯೋಜನ ಎಂಬುದನ್ನು ಮನವರಿಕೆ ಮಾಡಲು ಅಧಿಕಾರಿಗಳು ಸಿದ್ಧರಾಗಿದ್ದಾರೆ. ಪ್ರಮುಖವಾಗಿ ಬೆಂಗಳೂರಿಗಿಂತ 2ನೇ ಹಂತದ ನಗರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿಸುವ ಯೋಚನೆಯೂ ರಾಜ್ಯ ಸರ್ಕಾರದ್ದಾಗಿದೆ.
2ನೇ ಹಂತದ ನಗರಗಳಲ್ಲಿ ಎಲ್ಲಾ ವ್ಯವಸ್ಥೆ
ಸರ್ಕಾರ ಈಗಾಗಲೆ ರಾಜ್ಯದ ಎರಡನೇ ಹಂತದ ನಗರಗಳ ಪಟ್ಟಿಯನ್ನು ಮಾಡಿದೆ. ಅದರಂತೆ ವಿಮಾನ, ರೈಲು ಮತ್ತು ರಸ್ತೆ ಸಂಪರ್ಕ ಸುಸಜ್ಜಿತವಾಗಿರುವ ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿರುವ ಕಲಬುರಗಿ ಮತ್ತು ಶಿವಮೊಗ್ಗ ನಗರಗಳನ್ನು ಆ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೆಯೇ, ಈ ನಗರಗಳಲ್ಲಿ ಏನೆಲ್ಲಾ ಯೋಜನೆ ಕೈಗೊಳ್ಳಬಹುದು, ಭೂಮಿ, ಮಾನವ ಸಂಪನ್ಮೂಲ, ಕೈಗಾರಿಕೆ ಸ್ಥಾಪನೆಗಿರುವ ಪೂರಕ ವಾತಾವರಣದ ಬಗ್ಗೆ ಸಮಾವೇಶದಲ್ಲಿ ಆಸಕ್ತ ಹೂಡಿಕೆದಾರರಿಗೆ ವಿವರಿಸಲು ನಿರ್ಧರಿಸಲಾಗಿದೆ. ಸಮಾವೇಶದಿಂದ ನಿರೀಕ್ಷಿಸಲಾಗುತ್ತಿರುವ ಬಂಡವಾಳದಲ್ಲಿ ಶೇ. 75ರಿಂದ 80ರಷ್ಟು ಬಂಡವಾಳ ಈ ನಗರಗಳಲ್ಲಿ ಹೂಡಿಕೆಯಾಗುವ ವಿಶ್ವಾಸ ಸರ್ಕಾರದಲ್ಲಿದೆ.
ಬೆಂಗಳೂರಿನ ಯೋಜನೆಗಳೂ ಸಿದ್ಧ
ಇನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವ ಯೋಜನೆಗಳ ಪಟ್ಟಿಯನ್ನು ಮಾಡಲಾಗಿದ್ದು, ಅದಕ್ಕೆ ಎಷ್ಟು ಬಂಡವಾಳ ಹೂಡಬೇಕು, ಅದರಿಂದ ಆದಾಯ ಹೇಗೆ ಗಳಿಸಬಹುದು ಎಂಬುದನ್ನು ವರದಿ ಮಾಡಲಾಗಿದೆ. ಅದರಂತೆ ಬಿಡದಿ ಟೌನ್‍ಶಿಪ್, ಎಲವೇಟೆಡ್ ಕಾರಿಡಾರ್ ನಿರ್ಮಾಣ, ಅಮ್ಯೂಸ್‍ಮೆಂಟ್ ಪಾರ್ಕ್, ಬೃಹತ್ ಕನ್ವೆನ್ಷನ್ ಸೆಂಟರ್ ನಿರ್ಮಾಣ ಸೇರಿದಂತೆ ಮತ್ತಿತರ 20ಕ್ಕೂ ಹೆಚ್ಚಿನ ಯೋಜನೆಗಳಿಗೆ ಬಂಡವಾಳ ಹೂಡಿಸುವ ಯತ್ನ ಸರ್ಕಾರದ ಕಡೆಯಿಂದ ನಡೆಯಲಿದೆ.
ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲು ಕ್ರಮ
ಬಂಡವಾಳ ಹೂಡಿಕೆ ಮಾಡಿಸುವುದರೊಂದಿಗೆ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡುವುದು ಮತ್ತು ಅವರ ಅಭಿವೃದ್ಧಿಗೆ ಗಮನ ಹರಿಸುವುದು ರಾಜ್ಯ ಸರ್ಕಾರದ ಉದ್ದೇಶಗಳಲ್ಲೊಂದಾಗಿದೆ. ಅದಕ್ಕಾಗಿಯೇ ಸಮಾವೇಶದ ಎರಡನೇ ದಿನವಾದ ಫೆಬ್ರವರಿ 4ರಂದು ‘ಕರ್ನಾಟಕದಲ್ಲಿ ಮಹಿಳಾ ಉದ್ಯಮಿಗಳು’ದ ಕುರಿತು ವಿಚಾರಸಂಕಿರಣ ನಡೆಸಲಾಗುತ್ತಿದೆ.
ಕೈಗಾರಿಕೋದ್ಯಮಿಗಳಿಗೆ ಪೂರಕ ವಾತಾವರಣ ಸೃಷ್ಟಿ
ಈಗಾಗಲೇ ಬಂಡವಾಳ ಹೂಡಿಕೆದಾರರಿಗಾಗಿಯೇ 30 ಸಾವಿರ ಎಕರೆಯಷ್ಟು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಹಾಗೆಯೇ, 2014ರಿಂದ 19ರವರೆಗಿನ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿದೆ. ಇನ್ನು ಇರುವ ಪ್ರಮುಖ ಸಮಸ್ಯೆಯಾದ ವಿದ್ಯುತ್ ಸಮಸ್ಯೆ ನಿವಾರಣೆಗೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಾಗಿ ಜಲ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದೀಗ ಅದರೊಂದಿಗೆ ಪವನ ವಿದ್ಯುತ್, ಸೋಲಾರ್ ವಿದ್ಯುತ್ ಉತ್ಪಾದನೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಎಲ್ಲದರಿಂದ 2016ರ ಜುಲೈ ವೇಳೆಗೆ 2,500 ಮೆಗಾವ್ಯಾಟ್‍ನಿಂದ 3 ಸಾವಿರ ಮೆಗಾವ್ಯಾಟ್‍ವರೆಗಿನ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗಲಿದೆ. ಅದರಿಂದ ವಿದ್ಯುತ್ ಸಮಸ್ಯೆಯೂ ನಿವಾರಣೆಯಾಗಲಿದೆ.
ಹೂಡಿಕೆದಾರರನ್ನು ಬರಮಾಡಿಕೊಳ್ಳಲು ಎಲ್ಲಾ ಸಿದ್ಧತೆ
ಬಂಡವಾಳ ಹೂಡಿಕೆದಾರರು ಬೆಂಗಳೂರಿನಲ್ಲಿ ಇರುವಷ್ಟು ದಿನ ಯಾವುದೇ ಕುಂದುಂಟಾಗದಂತೆ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ. ಪ್ರಮುಖವಾಗಿ ಹೂಡಿಕೆದಾರರು ಸಂಚರಿಸುವ ರಸ್ತೆಗಳನ್ನು ಗುರುತಿಸಲಾಗಿದೆ. ಅದರಂತೆ ಒಟ್ಟು 36 ರಸ್ತೆಗಳನ್ನು ಗುರುತಿಸಿ ಡಾಂಬರೀಕರಣ, ಪಾದಾಚಾರಿ ಮಾರ್ಗ ದುರಸ್ಥಿ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ 3.50 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಇನ್ನು ಮೂರು ದಿನಗಳಲ್ಲಿ ಆ ಕೆಲಸಗಳೆಲ್ಲವೂ ಮುಗಿಯಲಿದ್ದು, ಹೂಡಿಕೆದಾರರ ನಿರೀಕ್ಷೆಯಲ್ಲಿರಬಹುದಾಗಿದೆ.