ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ಅಭಿವೃದ್ಧಿ ಪಡಿಸಿದ ಫಾರ್ಮುಸ್ಯುಟಿಕಲ್ ಕಂಪನಿ
ಉಷಾ ಹರೀಶ್
ಬೆಂಗಳೂರಿನ ರಸ್ತೆಗಳಲ್ಲಿ ಏನಿಲ್ಲವೆಂದರೂ ಗುಂಡಿಗಳಿಗೆ ಬರವಿಲ್ಲ.ಯಾವ ರಸ್ತೆ ನೋಡಿದರೂ ಗುಂಡಿಗಳಿಂದ ತುಂಬಿ ತುಳುಕುತ್ತಿವೆ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ನಿವೃತ್ತರ ಸ್ವರ್ಗ ಅಂತೆಲ್ಲಾ ಬಿರುದು ಗಳಿಸಿರುವ ಬೆಂಗಳೂರು ತನ್ನ ಕೆಟ್ಟ ರಸ್ತೆ ನಿರ್ವಹಣೆಯಿಂದಾಗಿ ಎಲ್ಲರ ಮುಂದೆ ತಲೆ ತಗ್ಗಿಸುವಂತಾಗಿದೆ. ಬೆಂಗಳೂರಿನ ರಸ್ತೆಯ ಗುಂಡಿಗಳಿಂದ ಬೇಸತ್ತ ಖಾಸಗಿ ಕಂಪನಿಯೊಂದರ ಉದ್ಯೋಗಿಗಳು ಸರಕಾರಿ ಶಾಲೆಯ ಮಕ್ಕಳನ್ನು ಬಳಸಿಕೊಂಡು ತಾವೇ ಸುಮಾರು ಅರ್ಧ ಕಿಲೊಮೀಟರ್ ರಸ್ತೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಅದೂ ಕೂಡ ಪ್ಲಾಸ್ಟಿಕ್ ಬಳಸಿ.
ಹೌದು ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಕಿವಾನಿ ಸೈಂಟಿಫಿಕ್ ಕಾರ್ಪೋರೇಷನ್ ಕಂಪೆನಿಯು ನೌಕರರು ಈ ಕೆಲಸ ಮಾಡಿದ್ದಾರೆ. ಈ ಕಂಪನಿಗೆ ಹತ್ತಿರದಲ್ಲೇ ಇದ್ದ ಎಪಿಸಿ ವೃತ್ತದಲ್ಲಿ ಹದಗೆಟ್ಟಿದ್ದ ಅರ್ಧ ಕಿಲೋಮೀಟರ್ ರಸ್ತೆ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಕಂಪನಿ ನೌಕರರು ಹತ್ತಿರದ ಸರಕಾರಿ ಶಾಲಾ ಮಕ್ಕಳೊಂದಿಗೆ ಮಾತನಾಡಿ ಸುತ್ತಮುತ್ತಲ ಪ್ರದೇಶಗಳಿಂದ ಪ್ಲಾಸ್ಟಿಕ್ ಸಂಗ್ರಹಿಸತೊಡಗಿದರು.
ಫಾರ್ಮಸ್ಯುಟಿಕಲ್ ಲ್ಯಾಬ್ ನಿರ್ಮಾಣದ ಈ ಕಂಪನಿ, ಮಧುರೈ ಮೂಲದ ತಜ್ಞ ಡಾ. ವಾಸುದೇವನ್ ಅವರಿಂದ ತಾಂತ್ರಿಕ ನೆರವು ಪಡೆದು ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅದನ್ನು ಡಾಂಬರಿನೊಂದಿಗೆ ಮಿಶ್ರಣಮಾಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದೆ.
ಅರ್ಧ ಕಿಲೋಮೀಟರ್ ಉದ್ದದ ರಸ್ತೆಯಲ್ಲಿ 35- 40 ಗುಂಡಿಗಳಿದ್ದವು. ಮಧುರೈ ಮೂಲದ ತಜ್ಞ ಡಾ.ವಾಸುದೇವನ್ ಅವರಿಂದ ತಾಂತ್ರಿಕ ನೆರವು ಪಡೆದು ಪ್ಲಾಸ್ಟಿಕ್ ಮಿಶ್ರಿತ ಡಾಂಬರಿನಿಂದ ರಸ್ತೆ ಗುಂಡಿ ದುರಸ್ತಿ ಮಾಡಿಸಲಾಗಿದೆ. ಇದೇ ರೀತಿ ಇನ್ನು ಹಲವು ರಸ್ತೆಗಳನ್ನು ಕಂಪನಿ ವತಿಯಿಂದ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದೇವೆ.
-ಹರಿಕೃಷ್ಣ ರಾವ್, ಕಂಪೆನಿಯ ಪ್ರಧಾನ ವ್ಯವಸ್ಥಾಪಕ
ಅರ್ಧ ಕಿಲೋಮೀಟರ್ ರಸ್ತೆಯಲ್ಲಿ ಸುಮಾರು 40 ಕ್ಕೂ ಹೆಚ್ಚು ಗುಂಡಿಗಳಿದ್ದವು, ಅವುಗಳನ್ನು ಮುಚ್ಚಲು ಸರಕಾರಿ ಶಾಲೆಯ ವಿದ್ಯಾರ್ಥಿಗಳು ಒಂದು ತಿಂಗಳ ಅವಧಿಯಲ್ಲಿ 200 ಕೆ ಜಿಗಿಂತಲೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹ ಮಾಡಿದ್ದರು. ಬಳಿಕ ಆ ಪ್ಲಾಸ್ಟಿಕ್ನ್ನು ನಿಗದಿತ ಅಳತೆಗೆ ತುಂಡರಿಸಿ ಕನಕಪುರ ರಸ್ತೆಯಲ್ಲಿನ ಪ್ಲಾಸ್ಟಿಕ್ ಕಂಪೆನಿಯಲ್ಲಿ ನಿಗದಿತ ಉಷ್ಣಾಂಶದಲ್ಲಿ ಕರಗಿಸಿ ನಂತರ ಬಿ-ಟುಮಿನ್ನೊಂದಿಗೆ ಮಿಶ್ರ ಮಾಡಿದ ಬಳಿಕ ಅರ್ಧ ಕಿಲೋಮೀಟರ್ ಉದ್ದದ ರಸ್ತೆಗೆ ಪ್ಲಾಸ್ಟಿಕ್ ಮಿಶ್ರಿತ ಡಾಂಬರು ಹಾಕಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಕಂಪನಿಯ 140 ಉದ್ಯೋಗಿಗಳು ಶಾಲೆಯ ವಿದ್ಯಾರ್ಥಿಗಳೊಂದಿಗೆ ಶ್ರಮಿಸಿದ್ದಾರೆ.
ಎಂಟು ಲಕ್ಷ ರೂಪಾಯಿ ವೆಚ್ಚ..!
ಈ ರಸ್ತೆಗೆ ಕಂಪನಿಯು ಒಟ್ಟು ಎಂಟು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದೆ. ಪ್ಲಾಸ್ಟಿಕ್ ಮಿಶ್ರಿತ ಡಾಂಬರು ಬಳಸಿರುವುದರಿಂದ ನೀರು ನಿಲ್ಲುವುದಿಲ್ಲ. ಇದರಿಂದ ರಸ್ತೆಯ ಬಾಳಿಕೆ ಹೆಚ್ಚಾಗಿರುತ್ತದೆ. ಅಲ್ಲದೇ ವೆಚ್ಚ ಕೂಡ ಶೇ.10ರಷ್ಟು ಉಳಿತಾಯವಾಗಲಿದೆ. ಸದ್ಯದಲ್ಲೇ ರಸ್ತೆಯ ಇನ್ನೊಂದು ಬದಿಯನ್ನೂ ಇದೇ ರೀತಿ ಅಭಿವೃದ್ಧಿಪಡಿಸುವ ಚಿಂತನೆ ಕಂಪನಿಗೆ ಇದೆ. ಸಧ್ಯ ಅರ್ಧ ಕಿಲೋಮೀಟರ್ ರಸ್ತೆಗೆ ಪ್ಲಾಸ್ಟಿಕ್ ಮಿಶ್ರಿತ ಡಾಂಬರು ಲೇಪಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ನೆರವು ನೀಡಿರುವ ಕಿವಾನಿ ಸೈಂಟಿಫಿಕ್ ಕಾರ್ಪೋರೇಷನ್ ಕಂಪೆನಿ ಮುಂದಿನ ದಿನಗಳಲ್ಲಿ ಬೇರೆ ರಸ್ತೆಯನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಆಲೋಚನೆಯಲ್ಲಿದೆ.
ನಾನಾ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಂಪೆನಿಯು ದೊಡ್ಡ ಗುಂಡಿಗಳಿಂದ ವಾಹನ ಸವಾರರು ನಿತ್ಯ ಅನುಭವಿಸುತ್ತಿದ್ದ ನರಕಯಾತನೆಗೆ ರೀಲಿಫ್ ನೀಡಿದೆ.